ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಆರೋಪ: ಅಧ್ಯಕ್ಷೆ ಸಭಾತ್ಯಾಗ

Last Updated 19 ಡಿಸೆಂಬರ್ 2014, 7:01 IST
ಅಕ್ಷರ ಗಾತ್ರ

ಕುಷ್ಟಗಿ: ಅತೃಪ್ತ ಸದಸ್ಯರು ಸಭಾತ್ಯಾಗ ಮಾಡುವುದು ಸಾಮಾನ್ಯ ಸಂಗತಿ ಆದರೆ ಸದಸ್ಯೆ ಒಬ್ಬರಿಂದ ಲಂಚದ ಆರೋಪ ಹೊತ್ತು ವೈಕ್ತಿಕ ನಿಂದನೆಗೆ ಒಳಗಾದ ಅಧ್ಯಕ್ಷೆ ಮಂಜುಳಾ ನಾಗರಾಳ ಇತರೆ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದ ಅಪರೂಪದ ಘಟನೆ ಗುರುವಾರ ಇಲ್ಲಿಯ ಪುರಸಭೆ ತುರ್ತು ಸಭೆಯಲ್ಲಿ ನಡೆಯಿತು.

ಸಭೆ ಗಂಭೀರವಾಗಿ ನಡೆಯುತ್ತಿದ್ದಾಗ ಎದ್ದು ನಿಂತ ನಾಮನಿರ್ದೇಶಿತ ಸದಸ್ಯೆ ಲಕ್ಷ್ಮಮ್ಮ ಟಕ್ಕಳಕಿ, ಸರ್ಕಾರಿ ಆಸ್ಪತ್ರೆ ಮುಂದಿನ ಗೂಡಂಗಡಿಗಳನ್ನು ತೆರವುಗೊಳಿಸುವುದನ್ನು ತಡೆಯುವುದಾಗಿ ಹೇಳಿ ಅಂಗಡಿ ಮಾಲೀಕರಿಂದ ಒಟ್ಟು ₨ 50 ಸಾವಿರ ಲಂಚ ಪಡೆದು ನಂತರ ಎತ್ತಂಗಡಿ ಮಾಡಿಸಿದಿರಿ ಎಂದು ಆರೋಪಿಸಿದರು. ಆದರೆ ಸದಸ್ಯೆಯ ಮಾತಿಗೆ ಅಧ್ಯಕ್ಷೆ ಮಂಜುಳಾ ನಾಗರಾಳ ತಲೆಕೆಡಿಸಿಕೊಳ್ಳಲಿಲ್ಲ.

ಸದಸ್ಯರಾದ ಅಮೀನುದ್ದೀನ್ ಮುಲ್ಲಾ, ಚನ್ನಪ್ಪ ನಾಲಗಾರ, ಸಂತೋಷ ಸರಗಣಾಚಾರ, ಅಕ್ಕಮ್ಮ ವಸ್ತ್ರದ ಇತರರು ಆಧಾರ ರಹಿತ ಆರೋಪ ಮಾಡುವುದು ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ನಾಮನಿರ್ದೇಶಿತ ಸದಸ್ಯೆಗೆ ಪಕ್ಷಭೇದ ಮರೆತು ತಿಳಿ ಹೇಳಲು ಯತ್ನಿಸಿದರು.

ಆದರೆ ಪಟ್ಟು ಬಿಡದ ಸದಸ್ಯೆ ಲಕ್ಷ್ಮವ್ವ, ಹೊರಗೆ ಇದ್ದ ಇಬ್ಬರು ಮಹಿಳೆಯರನ್ನು ಅಧಿಕಾರಿಗಳ ವಿರೋಧದ ನಡುವೆಯೂ ಸಭೆ ಒಳಗೆ ಕರೆತಂದು ಲಂಚ ಕೊಟ್ಟಿರುವುದಕ್ಕೆ ಸಾಕ್ಷಿ ಹೇಳಿಸುವುದಕ್ಕೆ ಮುಂದಾದರು. ಆಗ ಮೌನ ಮುರಿದ ಅಧ್ಯಕ್ಷೆ ಮಂಜುಳಾ, ಸಭೆಯಲ್ಲಿ ಗಂಭೀರವಾಗಿ ನಡೆದುಕೊಳ್ಳಬೇಕು, ಸಾರ್ವಜನಿಕರ ಸಮಸ್ಯೆಗಳ ಮೇಲೆ ಗಮನಹರಿಸಬೇಕು ಇಲ್ಲದಿದ್ದರೆ ಹೊರಗೆ ಹೋಗುವಂತೆ ಎಚ್ಚರಿಕೆ ನೀಡಿದರು.

ಇದರಿಂದ ಸದಸ್ಯೆ ಮತ್ತಷ್ಟು ಕೆರಳಿ, ಅಧ್ಯಕ್ಷೆ ವಿರುದ್ಧ ಹರಿಹಾಯ್ದು ‘ನಾನು ಸರ್ಕಾರದಿಂದ ನಾಮನಿರ್ದೇಶನಗೊಂಡಾಕೆ, ಹೊರಗೆ ಕಳಿಸುವ ಅಧಿಕಾರ ಯಾರಿಗೂ ಇಲ್ಲ ನೀನೇ ಹೊರಗೆ ಹೋಗು’ ಎಂದರು. ಅಲ್ಲದೇ ಅಧ್ಯಕ್ಷೆ, ಇತರೆ ಸದಸ್ಯರು ಮತ್ತು ಅಧಿಕಾರಿಗಳ ಮೇಲೆ ಸದಸ್ಯೆ ಹರಿಹಾಯ್ದರು. ಸಭೆ ಗೊಂದಲದಗೂಡಾಗಿತ್ತು. ಸದಸ್ಯೆ ರಂಪಾಟಕ್ಕೆ ಅವಮಾನಗೊಂಡವರಂತೆ ಕಂಡುಬಂದ ಅಧ್ಯಕ್ಷೆ ಮಂಜುಳಾ ಸಭಾತ್ಯಾಗ ಮಾಡಿದರೆ ಇತರೆ ಸದಸ್ಯರು ಅವರನ್ನು ಹಿಂಬಾಲಿಸಿದ್ದರಿಂದ ಸಭೆ ಅರ್ಧಕ್ಕೆ ಮೊಟಕುಗೊಂಡಿತು.

ನಿರಾಧಾರ: ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಅಧ್ಯಕ್ಷೆ, ಸದಸ್ಯೆ ಲಂಚದ ಆರೋಪದಲ್ಲಿ ಸತ್ಯಾಂಶ ಇಲ್ಲ, ಸಭೆಯಲ್ಲಿ ಅಗೌರವದಿಂದ ನಡೆದುಕೊಂಡ ಸದಸ್ಯೆ ಲಕ್ಷ್ಮವ್ವಳ ವಿರುದ್ಧ ಕ್ರಮ ಜರುಗಿಸಬೇಕೆ, ಬೇಡವೆ ಎಂಬುದರ ಬಗ್ಗೆ ಕಾನೂನು ಸಲಹೆಗಾರರೊಂದಿಗೆ ಚರ್ಚಿಸುವುದಾಗಿ ಸ್ಪಷ್ಟಪಡಿಸಿದರು. ಸದಸ್ಯರಾದ ಚಂದ್ರಶೇಖರ ಹಿರೇಮನಿ, ಅಮೀನುದ್ದಿನ್ ಮುಲ್ಲಾ, ಸಂತೋಷ ಸರಗಣಾಚಾರ, ರಾಮಣ್ಣ ಬಿನ್ನಾಳ ರಾಚಪ್ಪ ಮಾಟದಿನ್ನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT