ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಡನ್‌ನಲ್ಲೂ ಕಸದ ಸಮಸ್ಯೆ

ಇಂಗ್ಲೆಂಡ್‌ ರಾಜಧಾನಿಯಿಂದ ಬಂದ ಅಧಿಕಾರಿ ಸ್ಮಿತ್‌ ಹೇಳಿಕೆ
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ ನಿರ್ವಹಣೆಯ ಸಮಸ್ಯೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಕಾಡುತ್ತಿರುವಂತೆ ಗ್ರೇಟರ್‌ ಲಂಡನ್ ಪ್ರಾಧಿಕಾರವನ್ನೂ ಕಾಡದೆ ಬಿಟ್ಟಿಲ್ಲ. ಆದರೆ, ಅಲ್ಲಿನ ಆಡಳಿತ ಹೊಸ ಹೊಸ ಪ್ರಯೋಗಗಳ ಮೂಲಕ ತ್ಯಾಜ್ಯದ ಬಿಸಿಯನ್ನು ಕಡಿಮೆ ಮಾಡಿಕೊಂಡಿದೆ’ 

– ಹೀಗೆ ಎರಡೂ ನಗರಗಳ ಕಸದ ಸಮಸ್ಯೆಯನ್ನು ತುಲನೆಮಾಡಿ ನೋಡಿದವರು ಲಂಡನ್‌ ಮೇಯರ್‌ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕಿ ಫಿಯೊನಾ ಫ್ಲೆಚರ್‌ ಸ್ಮಿತ್‌. ನಗರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಕಸ ವಿಲೇವಾರಿಗೆ ಹೊಸ ಹೊಸ ತಂತ್ರಜ್ಞಾನ ಆವಿಷ್ಕರಿಸಲು ನಾವು ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡುತ್ತೇವೆ; ಧನಸಹಾಯವನ್ನೂ ಕೊಡುತ್ತೇವೆ’ ಎಂದು ಅವರು ಹೇಳುತ್ತಾರೆ.

‘ತ್ಯಾಜ್ಯದಿಂದ ಉತ್ಪಾದಿಸಲಾದ ಜೈವಿಕ ಇಂಧನದಿಂದ ನಾವೀಗ 20 ಬಸ್‌ಗಳನ್ನು ಓಡಿಸುತ್ತಿದ್ದೇವೆ. ಇಂತಹ ಸಣ್ಣ ಉಪಾಯಗಳು ನಮಗೆ ಸಾಕಷ್ಟು ನೆರವಾಗಿವೆ’ ಎನ್ನುತ್ತಾರೆ. ‘ತ್ಯಾಜ್ಯ ವಿಂಗಡಣೆ ಕುರಿತಂತೆ ಮಕ್ಕಳಲ್ಲಿ ಜಾಗೃತಿ ಉಂಟು ಮಾಡಿದರೆ ಬಹಳಷ್ಟು ಬದಲಾವಣೆ ತರಲು ಸಾಧ್ಯವಿದೆ. ನನ್ನ ಮನೆಯ ಉದಾಹರಣೆಯನ್ನೇ ಹೇಳುವುದಾದರೆ ಕಸವನ್ನು ಸರಿಯಾದ ಬಕೆಟ್‌ಗೆ ಹಾಕುವಂತೆ ನನ್ನ ಮಗ ಆಗಾಗ ಜ್ಞಾಪಿಸುತ್ತಾನೆ’ ಎಂದು ವಿವರಿಸುತ್ತಾರೆ.

‘ನಮ್ಮಲ್ಲೂ ತ್ಯಾಜ್ಯವನ್ನು ಸುಟ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ತ್ಯಾಜ್ಯದ ದಹನಕ್ಕೆ ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಚಳಿಗಾಲದಲ್ಲಿ ವಿದ್ಯುತ್‌ ಬಳಕೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಮಾಲಿನ್ಯದ ಪ್ರಮಾಣವೂ ಅದಕ್ಕೆ ತಕ್ಕಂತೆ ಏರಿಕೆ ಆಗುತ್ತದೆ. ಪ್ಲಾಸ್ಟಿಕ್‌ ಸಹ ನಮ್ಮ ಪರಿಸರಕ್ಕೆ ಮಾರಕವಾಗಿದೆ’ ಎನ್ನುತ್ತಾರೆ ಸ್ಮಿತ್‌.

‘ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಅತ್ಯುತ್ತಮ ತಂತ್ರಜ್ಞಾನವನ್ನು ಬೆಂಗಳೂರು ಬಳಕೆ ಮಾಡಿಕೊಳ್ಳಬಹುದು’ ಎಂದು ಸಲಹೆ ನೀಡುತ್ತಾರೆ. 

‘ಲಂಡನ್‌ನಲ್ಲಿ ಸಮುದಾಯ ಗುಂಪುಗಳ ಸಹಕಾರವನ್ನು ಪಡೆಯಲಾಗುತ್ತಿದೆ. ಯಾವುದಾದರೂ ಸಂಘಟನೆ ತ್ಯಾಜ್ಯ ನಿರ್ವಹಣೆಯಲ್ಲಿ ತನ್ನಪಾಲು ನೀಡಲು ಮುಂದೆ ಬಂದರೆ ಅದಕ್ಕೆ ಅಗತ್ಯವಾದ ಬಾಕಿ ಹಣವನ್ನು ನಮ್ಮ ಪ್ರಾಧಿಕಾರ ಭರಿಸುತ್ತದೆ’ ಎಂದು ವಿವರಿಸುತ್ತಾರೆ.

‘ಕೊಳಚೆ ನೀರು ನಮ್ಮ ಥೇಮ್ಸ್‌ ನದಿಯನ್ನೂ ಕಲುಷಿತಗೊಳಿಸಲು ಆರಂಭಿಸಿದೆ. ಬಹುತೇಕ ಚರಂಡಿ ಜಾಲವನ್ನು ವಿಕ್ಟೋರಿಯಾ ರಾಣಿ ಅವರ ಅವಧಿಯಲ್ಲಿ (1880ರ ದಶಕ) ಅಳವಡಿಸಲಾಗಿತ್ತು. ಈಗ ಆ ಚರಂಡಿ ಜಾಲದ ಕೊಳವೆಗಳನ್ನು ಬದಲಾವಣೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ 170 ಕೋಟಿ ಪೌಂಡ್‌ ಖರ್ಚು ಮಾಡಲಾಗುತ್ತಿದೆ’ ಎಂದು ಸಮಸ್ಯೆಗಳ ಮೇಲೆ ಒಳನೋಟ ಬೀರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT