ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀಶನ ಜೈಮಿನಿ ಭಾರತ

Last Updated 9 ಮಾರ್ಚ್ 2013, 19:59 IST
ಅಕ್ಷರ ಗಾತ್ರ

`ದೇವಪುರದ ಲಕ್ಷ್ಮೀಶ ಮಹಾಕವಿ ವಿರಚಿತ ಜೈಮಿನಿ ಭಾರತವು' 1932ರಲ್ಲಿ ಬೆಂಗಳೂರಿನ ಒಕ್ಕಲಿಗರ ಸಂಘದ ಪ್ರೆಸ್ಸಿನಲ್ಲಿ ಪ್ರಥಮವಾಗಿ ಮುದ್ರಣಗೊಂಡಿತು. ಇದರ ಅಂದಿನ ಬೆಲೆ 5 ರೂಪಾಯಿ. ಪ್ರಥಮ ಮುದ್ರಣದಲ್ಲಿ 2500 ಪ್ರತಿಗಳನ್ನು ಅಚ್ಚು ಮಾಡಲಾಗಿದೆ. ಶೀರ್ಷಿಕೆ ಪುಟದಲ್ಲಿ - `ದೇವಪುರದ ಲಕ್ಷ್ಮೀಶ ಮಹಾಕವಿ ವಿರಚಿತ ಕರ್ಣಾಟಕ ಜೈಮಿನಿ ಭಾರತವು ವೇ ಮೂರ್ತಿ, ಪಂಡಿತ ಕೆ. ನಂಜುಂಡ ಶಾಸ್ತ್ರಿಗಳಿಂದಲು ಬ್ರ  ಶ್ರೀ  ಹೆಡ್ಮಾಸ್ಟರ್ ಹೆಚ್.

ನಾಗಪ್ಪನವರಿಂದಲೂ ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ ವಿಶೇಷಗಳು, ವಿಶೇಷಾರ್ಥಗಳು ಇವುಗಳೊಡನೆ ಬರೆಯಲ್ಪಟ್ಟು, ಇದರ ಸರ್ವಾ‌ಧಿಕಾರವನ್ನು ಬೆಂಗಳೂರು ಸಿಟಿಯ ಚಿಕ್ಕಪೇಟೆ ಶ್ರೀ ಸರಸ್ವತಿ ರತ್ನಾಕರ ಬುಕ್ಕು ಡಿಪೋ ಸ‌ರ್ವಾಧಿಕಾರಿ ಟಿ.ಎನ್. ಶ್ರೀನಿವಾಸ ಶೆಟ್ಟರವರಿಗೆ ಕೊಡಲಾಗಿದೆ' ಎನ್ನುವ ಒಕ್ಕಣೆ ಇದೆ.

ಚತುಷ್ಕ ಡೆಮಿ ಆಕಾರದ ಈ ಕೃತಿಯಲ್ಲಿ 12+940 ಪುಟಗಳಿವೆ. ಇದರ ಲೇಖಕರಲ್ಲೊಬ್ಬರಾದ- ಇತಿ ಸಜ್ಜನ ವಿಧೇಯ, ಹೆಚ್. ನಾಗಪ್ಪನವರು, ಹೆಡ್ಮಾಸ್ಟರ್, ಪ್ರೈಮರಿ ಬಾಯ್ಸ ಸ್ಕೂಲ್, ವಿಶ್ವೇಶ್ವರಪುರ, ಬೆಂಗಳೂರು ಸಿಟಿ- ಇವರ 8 ಪುಟಗಳ ಉಪಯುಕ್ತ ಉಪೋದ್ಘಾತ ಹಾಗೂ ಸೂಚನೆಯಿದೆ.

ಒಳ ರಕ್ಷಾಪುಟಗಳಲ್ಲಿ ಆ ಕಾಲಕ್ಕೆ ಶ್ರೀ ಸರಸ್ವತೀ ರತ್ನಾಕರ ಬುಕ್ಕು ಡಿಪೋ ಪ್ರಕಟಿಸಿದ್ದ ಭಾರತಿ ಸಂಪಂಗಿರಾಮ ವಿರಚಿತ ಶ್ರೀಮದ್ವಾಲ್ಮೀಕಿ ರಾಮಾಯಣ ಕಥಾಸಂಗ್ರಹಂ, ಸಚಿತ್ರ ಶುಕಸಪ್ತತಿ 70 ಕಥೆಗಳು, ಭಟ್ಟಿ ವಿಕ್ರಮಾದಿತ್ಯರಾಯನ ಕಥೆಗಳು, ಶ್ರೀಮದ್ಭಗವದ್ಗೀತಾ ಹಾಗೂ ಸಚಿತ್ರ ಮಹಾಭಕ್ತಿ ವಿಜಯವು- ಈ ಐದು ಪುಸ್ತಕಗಳನ್ನು ಕುರಿತ ಜಾಹೀರಾತುಗಳಿವೆ.

ಲಕ್ಷ್ಮೀಶನ ಜೈಮಿನಿ ಭಾರತವು ಕನ್ನಡದಲ್ಲಿ ಕುಮಾರವ್ಯಾಸ ಭಾರತದ ನಂತರದ ಅತ್ಯಂತ ಜನಪ್ರಿಯ ಕಾವ್ಯ. ಈ ನಿಟ್ಟಿನಲ್ಲಿ ಮತ್ತೊಂದು ಕಾವ್ಯವೆಂದರೆ ರಾಘವಾಂಕನ ಹರಿಶ್ಚಂದ್ರ ಕಾವ್ಯ. ಟೀಕೆ ತಾರ್ತ್ಪಯಗಳೊಂದಿಗಿನ ಜೈಮಿನಿ ಭಾರತದ ಪ್ರಕಟಣೆಗೆ ಕನ್ನಡದಲ್ಲಿ ನಾಂದಿ ಹಾಡಿದವನು ಜರ್ಮನಿಯ ಹರ್ಮನ್ ಮೋಗ್ಲಿಂಗ್. 1848ರಲ್ಲಿ ಮೊದಲಬಾರಿಗೆ ಮಂಗಳೂರಿನಲ್ಲಿ ವ್ಯಾಖ್ಯಾನದೊಂದಿಗೆ ಮೋಗ್ಲಿಂಗ್ `ಜೈಮಿನಿ ಭಾರತ'ದ ಕೆಲವು ಸಂಧಿಗಳನ್ನು ಕಲ್ಲಚ್ಚು ಮುದ್ರಣದಲ್ಲಿ ಪ್ರಕಟಿಸಿದನು.

1852ರಲ್ಲಿ ಡೇನಿಯಲ್ ಸ್ಯಾಂಡರ್‌ಸನ್, 1873ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು, 1875ರಲ್ಲಿ ಹೊಳಕಲ್ಲು ಶ್ರೀನಿವಾಸ ಪಂಡಿತರು, 1875ರಲ್ಲಿ ಕಲ್ಲಚ್ಚಿನಲ್ಲಿಯೇ ವೆಂಕಟ ರಂಗೋ ಕಟ್ಟಿ, 1887ರಲ್ಲಿ ಮಿಸರ ಗೌರೀಶಂಕರ ರಾಮಪ್ರಸಾದ, 1888ರಲ್ಲಿ ಮೂರು ಭಾಗಗಳಲ್ಲಿ ದಕ್ಷಿಣಾಮೂರ್ತಿ ಶಾಸ್ತ್ರಿಗಳು, 1889ರಲ್ಲಿ ಎಂ.ಆರ್. ಅಣ್ಣಾಜಿ ರಾವ್,  1893ರಲ್ಲಿ ಕೃಷ್ಣರಾವ್ ಬಾಳಾಜಿ ರಾವ ಬೆಂಡಗೇರಿ, 1897ರಲ್ಲಿ ಬಿ.ಎಂ. ಸಿದ್ಧಲಿಂಗಶಾಸ್ತ್ರಿ- ಈ ಮುಂತಾದವರು ಜೈಮಿನಿ ಭಾರತವನ್ನು ಬಿಡಿಯಾಗಿ, ಇಡಿಯಾಗಿ ಟೀಕೆ, ಅರ್ಥಗಳೊಂದಿಗೆ ಪ್ರಕಟಿಸಿದ್ದಾರೆ.

ಇತ್ತೀಚೆಗೆ 2010ರಲ್ಲಿ ಜೈಮಿನಿ ಭಾರತವನ್ನು ಕುರಿತು ಮೂಲ-ತಾತ್ಪರ್ಯಗಳನ್ನು ಗಂಜೀಫಾ ಕಲೆಯೊಂದಿಗೆ ಸಚಿತ್ರವಾಗಿ ಅ.ರಾ.ಸೇತೂರಾಮ ರಾವ್ ಅವರ ಬೃಹತ್ ಕೃತಿಯನ್ನು ಬೆಂಗಳೂರಿನ `ಕಾಮಧೇನು ಪುಸ್ತಕ ಭವನ' ಪ್ರಕಟಿಸಿದೆ. ಇವಿಷ್ಟೇ ಅಲ್ಲದೆ ಟೀಕೆ ತಾರ್ತ್ಪಯಗಳಿಲ್ಲದೆ ಕೇವಲ ಲಕ್ಷ್ಮೀಶನ ಷಟ್ಪದೀಪದ್ಯರೂಪದ ಜೈಮಿನಿ ಭಾರತವನ್ನೇ ಸಾಕಷ್ಟು ಜನ ವಿದ್ವಾಂಸರು ಸಂಪಾದಿಸಿದ್ದಾರೆ. ಇವೆಲ್ಲಾ ಲಕ್ಷ್ಮೀಶನ ಪ್ರಸ್ತುತತೆಗೂ ಜನಪ್ರಿಯತೆಗೂ ಆಯಾ ವಿದ್ವಾಂಸರ ವಿದ್ವತ್ತಿಗೂ ನಿದರ್ಶನ.

ಪ್ರಸ್ತುತ ಪುಸ್ತಕದಲ್ಲಿ 34 ಸಂಧಿಗಳಲ್ಲಿ 1906 ವಾರ್ಧಕ ಷಟ್ಪದಿಗಳಿಗೆ ಪ್ರತಿಯೊಂದು ಪದ್ಯಕ್ಕೂ ಪ್ರತಿಪದಾರ್ಥ, ತಾರ್ತ್ಪಯ, ವ್ಯಾಕರಣ, ಅಲಂಕಾರಾದಿ ವಿಶೇಷಗಳು ಹಾಗೂ ವಿಶೇಷಾರ್ಥಗಳನ್ನು ನೀಡಲಾಗಿದೆ. ಕೃತಿಯ ಕೊನೆಯೊಳಗೆ ಒಂದು ಕಂದಪದ್ಯವಿದೆ:

ಕನ್ನಡಜೈಮಿನಿಭಾರತ                                                                         
ಕುನ್ನತತಾರ್ತ್ಪಯಟೀಕೆಸಕಲಾರ್ಥಗಳಿಂ                                                                       
ಚೆನ್ನೆನೆಮೆರೆದುದುಗುಣಸಂ                                                                                                                        
ಪನ್ನತೆಯಿಂದಾಂಗೀರಸದಶುಭವತ್ಸರದೊಳ್                                                                                                                                                                                                                               ಈ ಕೃತಿಯ ಮೊದಲ 18 ಸಂಧಿಗಳಿಗೆ ವೇದಮೂರ್ತಿ ಕಡಬದ ನಂಜುಂಡ ಶಾಸ್ತ್ರಿಗಳೂ ನಂತರದ 16 ಸಂಧಿಗಳಿಗೆ ಹೆಡ್ಮಾಸ್ಟರ್ ಹೆಚ್.ನಾಗಪ್ಪ ಅವರೂ ಟೀಕಾತಾರ್ತ್ಪಯ ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಎಚ್.ನಾಗಪ್ಪನವರ ಉಪೋದ್ಘಾತದಲ್ಲಿ: `ಮರಾಶ್ರೀ ಟಿ. ಯನ್. ಶ್ರೀನಿವಾಸಶೆಟ್ಟರವರು... ಕಡಬದ ನಂಜಂಡಶಾಸ್ತ್ರಿಗಳಿಂದಲೆ ಟೀಕಾ ತಾರ್ತ್ಪಯ ವಿಶೇಷ ವಿಷಯಗಳೊಡನೆ ಅಲಂಕಾರ ವಿವರಣೆ ಸಹಿತವಾಗಿ ಟೀಕೆಯನ್ನು ಬರೆಸಿ ಮುದ್ರಿಸುತ್ತಾ ಬಂದರು.

ಈ ಕಾರ್ಯವು ಅರ್ಧ ಭಾಗ ಕೈಗೂಡಿ ಹದಿನೆಂಟನೆಯ ಸಂಧಿಗೆ ಟೀಕೆ ಬರೆಯುತ್ತಿದ್ದಾಗ ದುರ್ದೈವಹತರಾಗಿ ನಂಜುಂಡಶಾಸ್ತ್ರಿಗಳು ಅಕಾಲ ಮರಣಕ್ಕೆ ಗುರಿಯಾಗಿ ಇದ್ದಕ್ಕಿದ್ದ ಹಾಗೆ ಸತ್ತು ಹೋದರು. ಹೀಗಾದ ಮೇಲೆ ಕಾಕತಾಳನ್ಯಾಯದಂತೆ ಕನ್ನಡಿಗರ ಸೇವೆ ಸತ್ಕಾರಗಳನ್ನು ಪರೋಕ್ಷದಲ್ಲಿ ಮಾಡುತ್ತಿದ್ದ ನನ್ನನ್ನು ಹುರಿದುಂಬಿಸಿ ಮುಂದಿನ ಟೀಕೆಯನ್ನು ಬರೆಯುವ ಭಾರವನ್ನು ನನ್ನ ಮೇಲೆ ಹೊರಿಸಿ, ಭಗವದಾಜ್ಞೆಯಂತೆ ಅಪ್ರಾರ್ಥಿತವಾಗಿ ಬಂದ ಈ ಸುಸಂಧಿಯನ್ನು ಬಿಡಬಾರದೆಂದು ನಾನು ಕಾರ್ಯವನ್ನು ಪ್ರಾರಂಭಿಸಿದೆನು....' ಹೀಗೆ ಹೇಳಿಕೆ.

ನಂಜುಂಡಶಾಸ್ತ್ರಿಗಳು ಮತ್ತು ತಾವು ಇಬ್ಬರು ಇದಕ್ಕೆ ಟೀಕೆ ತಾರ್ತ್ಪಯಗಳನ್ನು ಏಕೆ ಬರೆದೆವೆಂಬ ಸಂದರ್ಭವನ್ನು ವಿವರಿಸಿದ್ದಾರೆ. ಪಂಪ ಭಾರತವನ್ನು ಶಾಸ್ತ್ರೀಯವಾಗಿ ಗ್ರಂಥಸಂಪಾದನೆ ಮಾಡಲು 1931ರಷ್ಟು ಹಿಂದೆಯೇ ಬೆಳ್ಳಾವೆ ವೆಂಕಟನಾರಾಯಣಪ್ಪನವರಿಗೆ ಪ್ರಸ್ತುತ ಕೃತಿಯ ವ್ಯಾಖ್ಯಾನಕಾರರಾದ ಕಡಬದ ನಂಜುಂಡಶಾಸ್ತ್ರಿಗಳು ನೆರವು ನೀಡಿದ್ದರು.

ಮೊದಲು ಪದ್ಯ, ಆ ಮೇಲೆ ಪ್ರತಿಪದಾರ್ಥ, ನಂತರ ಭಾವಾರ್ಥ, ಅನಂತರ ವಿಶೇಷಾಂಶ-ಈ ಕ್ರಮದಲ್ಲಿ ಪ್ರತಿಯೊಂದು ಪದ್ಯಕ್ಕೂ ಟೀಕೆ ತಾತ್ಪರ‌್ಯಗಳಿವೆ. ಇದರಿಂದ ಕಾವ್ಯದ ವಾಚ್ಯ ಹಾಗೂ ಗೂಡಾರ್ಥಗಳನ್ನು ಸವಿಯಲು ಸಹಾಯಕವಾಗುತ್ತದೆ. ಪ್ರತಿಪದಾರ್ಥ ನೀಡುವಾಗ ಪದ್ಯದಲ್ಲಿ ಇರುವ ಒಟ್ಟು ಅರ್ಥಘಟಕಗಳನ್ನು ಸಂಖ್ಯೆಯನ್ನು ಸೂಚಿಸುವ ಮೂಲಕ ನಿರ್ದೇಶಿಸಿರುತ್ತಾರೆ. ನಿದರ್ಶನಕ್ಕಾಗಿ ಕಾವ್ಯಾರಂಭದ ಪ್ರಸಿದ್ಧ ಪದ್ಯವನ್ನೇ ಗಮನಿಸಬಹುದು:

ಪದ್ಯ:
ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ  ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ  ತೀ ವಲಯದಮಲ ಸೌಭಾಗ್ಯ ರತ್ನಾಕರಂ ಪೆರ್ಚಿನಿಂ ಮೇರೆವರಿಯೆ  ಆವಗಂ ಸರಸ ಕರುಣಾಮೃತದ ಕಲೆಗಳಿಂ  ತೀವಿದೆಳೆನಗೆಯ ಬೆಳ್ದಿಂಗಳಂ ಪಸರಿಸುವ  ದೇವಪುರನಿಲಯ ಲಕ್ಷ್ಮೀರಮಣನಾಸ್ಯಚಂದ್ರಾನಂದವೆಮಗೀಯಲಿ 1
ಪ್ರತಿಪದಾರ್ಥ:

1. ಶ್ರೀವಧುವಿನ-ಲಕ್ಷ್ಮೀದೇವಿಯ, ಅಂಬಕ-ಕಣ್ಣೆಂಬ, ಚಕೋರಕಂ-ಚಕೋರ ಪಕ್ಷಿಯು, ಪೊರೆಯೆ-ಆನಂದವನ್ನು ಪಡೆಯಲು, ಭಕ್ತಾವಳಿಯ-ಭಕ್ತ ಸಮೂಹದ, ಹೃತ್-ಮನಸ್ಸೆಂಬ, ಕುಮುದ-ಬಿಳಿಯ ನೆಯ್ದಿಲೆಯ, ಕೋರಕಂ-ಮೊಗ್ಗು, ಬಿರಿಯೆ-ಅರಳಲು (ವಿಕಾಸಗೊಳ್ಳಲು), 2. ಜಗತೀ ವಲಯದ-ಭೂಮಂಡಲದ, ಅಮಲ-ನಿರ್ಮಲವಾದ, 3. ಸೌಭಾಗ್ಯ-ಐಶ್ವರ್ಯವೆಂಬ, 4. ರತ್ನಾಕರಂ-ಸಮುದ್ರವು, ಪೆರ್ಚಿನಿಂ-ವೃದ್ಧಿಯಿಂದ, 5

. ಮೇರೆವರಿಯೆ-ದಡವನ್ನು ಮೀರಿ ಉಕ್ಕಲು, ಆವಗಂ-ಯಾವಾಗಲೂ, ಸರಸ-ರಸವತ್ತಾದ, ಕರುಣಾ-ದಯೆಯೆಂಬ, 6.ಅಮೃತದ, 7. ಕಲೆಗಳಿಂ-(ಅಂಶ) ಕಳೆಗಳಿಂದ, ತೀವಿದ-ತುಂಬಿದ, ಎಳನಗೆಯ-ಕಿರುನಗೆಯೆಂಬ, ಬೆಳ್ದಿಂಗಳಂ, ಪಸರಿಸುವ-ಹರಡುವ, ದೇವಪುರ-ದೇವನೂರಿನಲ್ಲಿ, ನಿಲಯ-ನೆಲೆಗೊಂಡಿರುವ, ಲಕ್ಷ್ಮೀರಮಣನ-ಲಕ್ಷ್ಮೀಕಾಂತಸ್ವಾಮಿಯ, 8. ಆಸ್ಯಚಂದ್ರ-ಮುಖವೆಂಬ ಚಂದ್ರನು, ಎಮಗೆ-ನಮಗೆ, ಆನಂದವ-ಹರ್ಷವನ್ನು, ಈಯಲಿ-ಕೊಟ್ಟು (ರಕ್ಷಿಸಲಿ).

ಭಾವಾರ್ಥ: ಲಕ್ಷ್ಮೀದೇವಿಯ ನೇತ್ರಗಳೆಂಬ ಚಕೋರ ಪಕ್ಷಿಗಳಿಗೆ ಹರ್ಷವನ್ನುಂಟುಮಾಡುತ್ತಲೂ, ಭಗವದ್ಭಕ್ತರ ಮನಸ್ಸೆಂಬ ನೈದಿಲೆಗಳನ್ನು ಅರಳಿಸಿ ವಿಸ್ತಾರಪಡಿಸುತ್ತಲೂ, ವಿಸ್ತಾರವಾದ ಈ ಭೂಮಂಡಲದ ಐಶ್ವರ್ಯವೆಂಬ ಸಮುದ್ರವು ಉಬ್ಬಿ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ, ಸರ್ವದಾ ರಸಯುಕ್ತವಾದ ಕರುಣೆಯೆಂಬ ಅಮೃತ ಕಳೆಗಳಿಂದ ತುಂಬಿಮುಗುಳ್ನಗೆಯೆಂಬ ಬೆಳ್ದಿಂಗಳನ್ನು ಎಲ್ಲೆಡೆಗಳಲ್ಲಿಯೂ ಹರಡಿ ಬೆಳಗುತ್ತಲೂ ಇರುವ, ದೇವನೂರಿನಲ್ಲಿ ನೆಲೆಸಿರುವ ಲಕ್ಷ್ಮೀರಮಣಸ್ವಾಮಿಯ ಮುಖವೆಂಬ ಚಂದ್ರನು ನಮಗೆ ಸಂತೋಷವನ್ನುಂಟು ಮಾಡಲಿ.

ಚಂದ್ರನು ಹೇಗೆ ಅಮೃತಮಯವಾದ ತನ್ನ ಹದಿನಾರು ಕಳೆಗಳನ್ನೂ ಬೆಳ್ದಿಂಗಳ ರೂಪದಲ್ಲಿ ಲೋಕದಲ್ಲ್ಲೆಲಾ ಹರಡಿ ಚಕೋರ ಪಕ್ಷಿಗೆ ನೇತ್ರಾನಂದವನ್ನುಂಟು ಮಾಡುತ್ತಲೂ, ಬಿಳಿಯ ನೆಯ್ದಿಲೆಗಳನ್ನು ಅರಳುವಂತೆ ಮಾಡುತ್ತಲೂ, ಸಮುದ್ರವು ಸಂತೋಷದಿಂದ ಮೇರೆದಪ್ಪಿ ಉಕ್ಕುವಂತೆ ಮಾಡುತ್ತಲೂ ಇರುವನೋ ಹಾಗೆ, ಲಕ್ಷ್ಮೀದೇವಿಯ ಕಣ್ಣುಗಳಿಗೆ ಹರ್ಷವನ್ನುಂಟು ಮಾಡುತ್ತಲೂ, ಭಕ್ತರ ಮನಸ್ಸು ಆನಂದದಿಂದ ವಿಸ್ತಾರಗೊಳ್ಳುವಂತೆ ಮಾಡುತ್ತಲೂ, ಪ್ರಪಂಚದ ಐಶ್ವರ್ಯವು ಅಭಿವೃದ್ಧಿ ಹೊಂದುವಂತೆ ಮಾಡುತ್ತಲೂ, ಮುಗುಳ್ನಗೆಯಿಂದ ಶೋಭಿಸುತ್ತಿರುವ ತನ್ನ ಕೃಪಾಕಟಾಕ್ಷವನ್ನು ಯಾವಾಗಲೂ ಪ್ರಸರಿಸುತ್ತಿರುವ ಶ್ರೀ ಲಕ್ಷ್ಮೀರಮಣಸ್ವಾಮಿಯ ದಿವ್ಯಮುಖವು, ನಮ್ಮೆಲ್ಲರಿಗೂ ಹರ್ಷವನ್ನುಂಟುಮಾಡಲಿ.

ಹೀಗೆ ಪ್ರತಿಯೊಂದು ಪದ್ಯದ ಅರ್ಥವನ್ನು ಸುಲಭವಾಗಿ ಗ್ರಹಿಸುವುದಕ್ಕೆ ಅನುಕೂಲವಾಗುವಂತಹ ವ್ಯತ್ಪತ್ತಿಗಳನ್ನು ವ್ಯಾಖ್ಯಾನಕಾರರು ಸಮಗ್ರವಾಗಿ ನೀಡಿರುವುದರಿಂದ ಕಾವ್ಯಾನುಭವದ ಸ್ವೋಪಜ್ಞತೆಯ ಸೌಂದರ್ಯದರ್ಶನವನ್ನು ಹೃದ್ಗತ ಮಾಡಿಕೊಳ್ಳಲು ಈ ಕ್ರಮವು ಅನುವು ನೀಡುತ್ತದೆ.

ಉನ್ನತ ಶಿಕ್ಷಣದ ಮಟ್ಟದಲ್ಲಿ ಪ್ರಾಚೀನ ಕಾವ್ಯಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಅನಾದರಣೆ ಕಾಣಿಸುತ್ತಿರುವ ಇಂದಿನ ಸಾಹಿತ್ಯದ ಸಂದರ್ಭದಲ್ಲಿ ಈ ರೀತಿಯ ಕೃತಿಗಳ ಅಧ್ಯಯನ ಕ್ರಮಗಳು ನಮ್ಮ ಯುವಜನತೆಯಲ್ಲಿ ಕಾವ್ಯಾಭಿರುಚಿಯನ್ನು ಮೂಡಿಸಲು ಸಹಾಯ ಮಾಡುತ್ತವೆ.

ಈ ಮಾದರಿಯ ಪುಸ್ತಕಗಳ ಪುನರ್ಮುದ್ರಣಗಳಿಂದ ಕನ್ನಡ ವಾಚಕ ಜಗತ್ತಿಗೆ ಮಹದೋಪಕಾರವಾಗುತ್ತದೆ. ಹಳೆಯ ಕಾವ್ಯಗಳ ವ್ಯಾಖ್ಯಾನಗ್ರಂಥಗಳ ಇತಿಹಾಸದಲ್ಲಿ ಈ ಕೃತಿ ಸದಭಿರುಚಿ ನಿರ್ಮಾಣ ಉಂಟುಮಾಡುವ ಒಂದು ಪುಸ್ತಕವಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT