ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀ, ವಿಜಯ್‌ಗೆ ಶ್ರೇಷ್ಠ ನಟಿ, ನಟ ಗೌರವ

2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಕ್ಷ್ಮೀ ಗೋಪಾಲಸ್ವಾಮಿ ಅವರು 2014ನೇ ಸಾಲಿನ ‘ಅತ್ಯುತ್ತಮ ನಟಿ ಪ್ರಶಸ್ತಿ’ಗೆ (ಚಿತ್ರ: ವಿದಾಯ), ಸಂಚಾರಿ ವಿಜಯ್ ಅವರು ‘ಅತ್ಯುತ್ತಮ ನಟ ಪ್ರಶಸ್ತಿ’ಗೆ (ಚಿತ್ರ: ನಾನು ಅವನಲ್ಲ ಅವಳು) ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ನಟಿ ಮತ್ತು ನಟ ಪ್ರಶಸ್ತಿಗಳು ತಲಾ ₹ 20 ಸಾವಿರ ನಗದು, 100 ಗ್ರಾಂ ಬೆಳ್ಳಿ ಪದಕ ಒಳಗೊಂಡಿವೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಆರ್. ರೋಷನ್ ಬೇಗ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, 2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ವಿವರ ನೀಡಿದರು.

ಕನ್ನಡ ಚಿತ್ರರಂಗದ ಸಮಗ್ರ ಬೆಳವಣಿಗೆಗೆ ಅಪೂರ್ವ ಕೊಡುಗೆ ನೀಡಿದವರಿಗೆ ಪ್ರದಾನ ಮಾಡುವ ‘ಡಾ. ರಾಜ್‌ಕುಮಾರ್ ಪ್ರಶಸ್ತಿ’ಗೆ ಬಸಂತಕುಮಾರ ಪಾಟೀಲ ಮತ್ತು ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ನಿರ್ದೇಶಕರಿಗೆ ಪ್ರದಾನ ಮಾಡುವ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ಗೆ ಡಾ. ಬರಗೂರು ರಾಮಚಂದ್ರಪ್ಪ ಅವರು ಆಯ್ಕೆಯಾಗಿದ್ದಾರೆ.

ಚಿತ್ರರಂಗದ ವಿವಿಧ ವಲಯಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯರಿಗೆ ನೀಡುವ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ಗೆ ಸುರೇಶ್ ಅರಸ್ ಅವರು ಆಯ್ಕೆಯಾಗಿದ್ದಾರೆ. ಈ ಮೂರೂ ಪ್ರಶಸ್ತಿಗಳನ್ನು ಜೀವಮಾನದ ಸಾಧನೆಗೆ ನೀಡಲಾಗುತ್ತದೆ. ಇವು ತಲಾ ₹ 2 ಲಕ್ಷ ನಗದು, 50 ಗ್ರಾಂ ಚಿನ್ನದ ಪದಕ ಒಳಗೊಂಡಿವೆ.

‘73 ಚಲನಚಿತ್ರಗಳನ್ನು ಪರಿಗಣಿಸಲಾಗಿತ್ತು. ಇದೇ ಮೊದಲ ಬಾರಿಗೆ ಚಲನಚಿತ್ರಗಳನ್ನು ಎರಡು ಹಂತಗಳಲ್ಲಿ ವೀಕ್ಷಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಲ್ಲವೂ ಅವಿರೋಧ ಆಯ್ಕೆಗಳು’ ಎಂದು ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ, ನಿರ್ದೇಶಕ ಕೆ. ಶಿವರುದ್ರಯ್ಯ ಹೇಳಿದರು.

* ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿರುವ ರಾಜ್ಯದ ಮೂವರು ವೀರ ಯೋಧರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವೆ. ನನ್ನಂಥ ಹಲವು ಕಲಾವಿದರು ಸ್ಪರ್ಧೆಯಲ್ಲಿದ್ದರು. ಯಾರಿಗೇ ಪ್ರಶಸ್ತಿ ಬಂದಿದ್ದರೂ ಖುಷಿಪಡುತ್ತಿದ್ದೆ. ತೀರ್ಪುಗಾರರಿಗೆ, ಚಿತ್ರತಂಡದ ರವಿ ಗರಣಿ, ಬಿ.ಎಸ್. ಲಿಂಗದೇವರು ಮತ್ತು ಇತರ ತಂತ್ರಜ್ಞರಿಗೆ ಧನ್ಯವಾದಗಳು.
-ಸಂಚಾರಿ ವಿಜಯ್, 
ಅತ್ಯುತ್ತಮ ನಟ, (ಚಿತ್ರ: ನಾನು ಅವನಲ್ಲ ಅವಳು)

* ಪ್ರಶಸ್ತಿ ಬಂದಿರುವುದು ಹೆಮ್ಮೆ ಅನ್ನಿಸುತ್ತಿದೆ. ನನಗೆ ಚಿತ್ರದಲ್ಲಿ ನಟನೆಗೆ ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕರು, ನಿರ್ಮಾಪಕರಿಗೆ ಧನ್ಯವಾದಗಳು. ಇಂಥ ಪ್ರಶಸ್ತಿಗಳು, ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೇವೆ ಎಂಬ ಆಶ್ವಾಸನೆಯನ್ನು ನೀಡುತ್ತವೆ. ಸಿನಿಮಾದಲ್ಲಿ ನನ್ನ ಅಭಿನಯ ಚೆನ್ನಾಗಿದೆ ಎಂದು ಹಲವರು ಹೇಳಿದ್ದರೂ ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಜನ ನೀಡುವ ಪ್ರಶಂಸೆಯೇ ದೊಡ್ಡ ಪ್ರಶಸ್ತಿ.
-ಲಕ್ಷ್ಮೀ ಗೋಪಾಲಸ್ವಾಮಿ 
ಅತ್ಯುತ್ತಮ ನಟಿ

ಅನಿಸಿಕೆಗಳು
* ಈ ಹಿಂದಿನ ನನ್ನ ಚಿತ್ರಗಳಿಗೆ ರಾಷ್ಟ್ರ, ರಾಜ್ಯ ಪ್ರಶಸ್ತಿಗಳು ಸಿಕ್ಕಿವೆ. ಆದರೆ ಅವುಗಳಿಗಿಂತ ಡಾ. ರಾಜಕುಮಾರ್ ಅವರ ಹೆಸರಿನ ಪ್ರಶಸ್ತಿ ಹೆಚ್ಚು ಮೌಲ್ಯಯುತವಾದದ್ದು. ಚಿತ್ರರಂಗಕ್ಕೆ ನಾನು ಸಲ್ಲಿಸಿರುವ ಸಣ್ಣ ಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ನನಗೆ ನೀಡಿವುದಕ್ಕೆ ಧನ್ಯವಾದಗಳು.
-ಬಸಂತ ಕುಮಾರ ಪಾಟೀಲ

* ಪ್ರಶಸ್ತಿಗೆ ನಾನು ನಾಮನಿರ್ದೇಶನ ಆಗಿದ್ದೇ ಗೊತ್ತಿರಲಿಲ್ಲ. ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ. ನಮ್ಮನ್ನೆಲ್ಲ ಗುರುತಿಸುವುದು ದೊಡ್ಡ ವಿಷಯ. ಈ ಅಚ್ಚರಿಯನ್ನು ನಂಬುವುದು ಕಷ್ಟವಾಗುತ್ತಿದೆ. ನಾನು ಬರಗೂರು ರಾಮಚಂದ್ರಪ್ಪ ಅವರ ಶಿಷ್ಯ. ಗುರುಗಳಿಗೆ ಪ್ರಶಸ್ತಿ ಬಂದಾಗಲೇ ನನಗೂ ಬಂದಿರುವುದು ಖುಷಿ.
-ಸುರೇಶ್ ಅರಸ್

* ಸಿನಿಮಾ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ. ಸಾಹಿತ್ಯ ಕ್ಷೇತ್ರದಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರ ಬಗೆಗೆ ಅನಗತ್ಯ ಅನುಮಾನ ಇಟ್ಟುಕೊಂಡಿರುವ ವಲಯ ನಮ್ಮಲ್ಲಿದೆ. ಈ ಸಂದರ್ಭದಲ್ಲಿ ಪುಟ್ಟಣ್ಣ ಕಣಗಾಲ್ ಹೆಸರಿನಲ್ಲಿರುವ ಪ್ರಶಸ್ತಿ ಬಂದಿರುವುದು ಸಂತೋಷ. ನನ್ನ ಚಿತ್ರಗಳ ನಿರ್ಮಾಪಕರು, ಕಾರ್ಮಿಕರು, ಕಲಾವಿದರು, ತಂತ್ರಜ್ಞರನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುವೆ.
-ಬರಗೂರು ರಾಮಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT