ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತಾ ಮತ್ತು ‘ಗೊಲ್ಲ ಕಲಾಪ’

Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ರಾಜಮಂಡ್ರಿಯ ಲಲಿತಾ ಸಿಂಧೂರಿ ಅವರದ್ದು ‘ಗೊಲ್ಲ ಕಲಾಪ’ ನೃತ್ಯಪ್ರಕಾರದೊಂದಿಗೆ ತಳಕು ಹಾಕಿಕೊಂಡಿರುವ ಹೆಸರು. ಅಂದಹಾಗೆ, ಏನಿದು ಗೊಲ್ಲ ಕಲಾಪ? ಆ ಕಲಾಪದ ಹಿಂದೊಂದು ಕಥೆಯಿದೆ.

ಕರ್ಮಠ ಬ್ರಾಹ್ಮಣನೊಬ್ಬ ದಾರಿ ಮೇಲೆ ಸಾಗುತ್ತಿರುವಾಗ, ಗೊಲ್ಲರ ಹುಡುಗಿಯೊಬ್ಬಳು ಆತನನ್ನು ತಡೆದು ನಿಲ್ಲಿಸಿ ಮಾತನಾಡಿಸುತ್ತಾಳೆ. ಅವರಿಬ್ಬರ ಮಾತುಕತೆ ಜೀವಾತ್ಮ ಮತ್ತು ಪರಮಾತ್ಮನ ಸಂಬಂಧವನ್ನು ವಿವರಿಸುವ ಸಂಕೀರ್ಣ ಆಧ್ಯಾತ್ಮಿಕ ವಿಷಯಕ್ಕೆ ಸಂಬಂಧಿಸಿದ್ದರೂ ಅದು ಸರಳವಾಗಿರುತ್ತದೆ.

ಕೇವಲ ಹುಟ್ಟಿನ ಕಾರಣಕ್ಕೆ ಮೇಲ್ಜಾತಿಯೆಂಬ ಪಟ್ಟವನ್ನು ಕಟ್ಟಿಕೊಳ್ಳುವ ಬ್ರಾಹ್ಮಣನ ಜೀವನನುಭವ ಮತ್ತು  ಜ್ಞಾನ ಸಂಪತ್ತಿಗೆ ಸವಾಲೊಡ್ಡುವ ಗೊಲ್ಲ ತರುಣಿಯ ಜೀವನಪ್ರೀತಿಯ ಸಂಭಾಷಣೆ ಅದು. ಆ ಗೊಲ್ಲ ಭಾಮೆಯು ತನ್ನ ಮಾತಿನಲ್ಲಿ ತಮಾಷೆಯ ಎಳೆಯನ್ನೂ, ಭಾಷಾ ಚಮತ್ಕಾರವನ್ನೂ ಸೇರಿಸುತ್ತಾಳೆ. ಸಂಭಾಷಣೆ ಆಧಾರಿತವಾದ ಈ ಪ್ರಸ್ತುತಿಗೆ ‘ಗೊಲ್ಲಕಲಾಪ’ ಎಂದು ಹೆಸರು. ಇದು ಕೂಚಿಪುಡಿ ಶಾಸ್ತ್ರೀಯ ನೃತ್ಯದಡಿ ಬರುವ ಒಂದು ಪ್ರಕಾರ.

‘ಗೊಲ್ಲ ಕಲಾಪ’ ಮರೆಯಾಗುತ್ತಿರುವ ಒಂದು ನೃತ್ಯ ಪ್ರಕಾರ. ಇದರ ಜೊತೆಗೆ ‘ಭಾಮಾ ಕಲಾಪ’ ಎನ್ನುವ ಮತ್ತೊಂದು ಪ್ರಕಾರವೂ ಇದೆ. ಅದು ಸತ್ಯಭಾಮೆಯ ಕಥೆಯನ್ನು ಆಧರಿಸಿರುವುದರಿಂದ, ಕೃಷ್ಣಲೀಲೆಗಳನ್ನು ಪೂರಕವಾಗಿ ಸೇರಿಸಿಕೊಂಡು, ಅಲ್ಲಲ್ಲಿ ಯಕ್ಷಗಾನದ ಅಂಶಗಳನ್ನೂ ಸೇರಿಸಿಕೊಂಡು ‘ಭಾಮಾ ಕಲಾಪ’ ಬೆಳೆದು ಬಂದಿದೆ. ಜೀವಾತ್ಮ ಮತ್ತು ಪರಮಾತ್ಮನ ಸಂಬಂಧವನ್ನು ವಿವರಿಸುವ ‘ಗೊಲ್ಲ ಕಲಾಪ’ ಅಷ್ಟೇನೂ ಜನಪ್ರಿಯವಲ್ಲ.

ಗ್ರಾಮ್ಯ ಹಿನ್ನೆಲೆಯ ಗೊಲ್ಲತಿಯೊಬ್ಬಳ ಜೀವನಪ್ರೀತಿಯೇ ಜ್ಞಾನಸಂಪತ್ತಾಗಿ ರೂಪುಗೊಂಡು, ಶುಷ್ಕ ಬೋಧನೆಯಾಧಾರಿತ ಜ್ಞಾನಕ್ಕೆ ಸವಾಲು ಎಸೆಯುತ್ತದೆ. ಸಾಂದರ್ಭಿಕವಾದ ಕಥೆ, ಉಪ ಕಥೆ, ಹಾಡುಗಳನ್ನು ಬಳಸಿಕೊಂಡು ಸಾಗುವ ‘ಗೊಲ್ಲ ಕಲಾಪ’ವನ್ನು ಪ್ರಸ್ತುತ ಬೆರಳೆಣಿಕೆಯ ಗುರುಗಳಷ್ಟೇ ಕಲಿಸುತ್ತಾರೆ. ಅವರಲ್ಲೊಬ್ಬರು ರಾಜಮಂಡ್ರಿಯ ಯುವಕಲಾವಿದೆ ಲಲಿತಾ ಸಿಂಧೂರಿ. 

ಇತ್ತೀಚೆಗೆ ಮಂಗಳೂರಿನಲ್ಲಿ ವಿಶೇಷ ನೃತ್ಯಕಾರ್ಯಕ್ರಮ ನೀಡಲು ಬಂದಿದ್ದ ಲಲಿತಾ, ಆಂಧ್ರಪ್ರದೇಶದ ಕೂಚಿಪುಡಿ ಎಂಬ ಹಳ್ಳಿಯಿಂದ ನೃತ್ಯಪ್ರಕಾರವು ಬೆಳೆದುಬಂದ ಬಗೆ, ಪ್ರಸ್ತುತ ಅದು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಛಾಪಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಕಲಿಕೆಯಲ್ಲಿ ಪ್ರತಿಭಾನ್ವಿತೆಯಾಗಿದ್ದ ಲಲಿತಾ ಓದಿದ್ದು ಎಂಜಿನಿಯರಿಂಗ್‌. ಕಂಪ್ಯೂಟರ್‌ ಸೈನ್ಸ್‌ ಓದಿದ್ದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಕೆಯನ್ನು ಕೈ ಬೀಸಿ ಕರೆಯುತ್ತಿತ್ತು. ಆದರೆ ಅವರು ಆರಿಸಿಕೊಂಡಿದ್ದು ಮನಸ್ಸಿಗೆ ತೃಪ್ತಿಕೊಡುವ ಕೂಚಿಪುಡಿ ನೃತ್ಯವನ್ನು. ಇದೀಗ ಸಾಧನೆಯೊಂದೇ ಅವರ ಮಂತ್ರ. ‘‘ಇತ್ತೀಚೆಗಿನ ದಿನಗಳಲ್ಲಿ ‘ಗೊಲ್ಲ ಕಲಾಪ’ ನೋಡಲು ಸಿಗುವುದೇ ಅಪರೂಪ. ಅಂತಹ ಪ್ರಕಾರವನ್ನು ಸಾಂಪ್ರದಾಯಿಕತೆಯೊಂದಿಗೆ ಮತ್ತೆ ಮುನ್ನೆಲೆಗೆ ತರಬೇಕು’’ ಎನ್ನುವುದು ಅವರ ಆಸೆ. ಅದಕ್ಕಾಗಿ ‘ಗೊಲ್ಲ ಕಲಾಪ’ದ ಬಗ್ಗೆ ಲಲಿತಾ ಸಂಶೋಧನೆ ಶುರು ಮಾಡಿದ್ದಾರೆ.

ಲಲಿತಾ ಸಿಂಧೂರಿ ಕೂಚಿಪುಡಿ ನೃತ್ಯದ ತ್ರಿಮೂರ್ತಿಗಳ ಪೈಕಿ ಒಬ್ಬರಾದ ವೇಂಪತಿ ವೆಂಕಟನಾರಾಯಣ ಅವರ ಮೊಮ್ಮಗಳು. ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅವರು ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗ ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಪಡೆದು ‘ಸಾತ್ವಿಕ ಅಭಿನಯ’ ಎಂಬ ವಿಷಯವನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ನಡೆಸುತ್ತಿದ್ದಾರೆ.

‘‘ನನ್ನ ಸಂಶೋಧನಾ ವಿಷಯಕ್ಕೂ, ನಾನು ಇಷ್ಪಪಟ್ಟು ಅಭ್ಯಾಸ ಮಾಡುತ್ತಿರವ ‘ಗೊಲ್ಲ ಕಲಾಪ’ ಪ್ರಕಾರಕ್ಕೂ ಸಂಬಂಧವಿದೆ. ಮೌಖಿಕ ಅಭಿವ್ಯಕ್ತಿ ಮತ್ತು ಆಂಗಿಕ ಅಭಿನಯಕ್ಕೆ ಸಂಬಂಧಿಸಿದಂತೆ ನನ್ನ ಸಂಶೋಧನೆಯು ಮುಂದುವರೆಯುತ್ತಿದೆ’’ ಎನ್ನುತ್ತಾರೆ ಲಲಿತಾ. ಕೂಚಿಪುಡಿಯ ಹಿರಿಯ ನೃತ್ಯ ಕಲಾವಿದೆ ಶೋಭಾ ನಾಯ್ಡು ನೃತ್ಯ ಶೈಲಿ ಅವರಿಗಿಷ್ಟ.  ಲಲಿತಾ ಅವರ ಗುರುಗಳು ವೇದಾಂತಂ ಸತ್ಯನರಸಿಂಹ ಶಾಸ್ತ್ರಿ ಮತ್ತು ವೇದಾಂತಂ ವೆಂಕಟಾಚಲಪತಿ.

ಬಾಲಕಲಾವಿದೆಯಾಗಿ ಗುರುತಿಸಿಕೊಂಡಿದ್ದ ಲಲಿತಾ ಅವರಿಗೆ ಆರಂಭದಲ್ಲಿ ನೃತ್ಯ ಒಂದು ಹವ್ಯಾಸವಾಗಿತ್ತು ಅಷ್ಟೇ. ಆದರೆ ಈಗ ನೃತ್ಯವೇ ಉಸಿರಾಗಿದೆ. ಮಗಳ ಈ ಆಸೆಯನ್ನು ಪೋಷಿಸಿದವರು ಅಮ್ಮ ವರಲಕ್ಷ್ಮಿ ಮತ್ತು ಅಪ್ಪ ವೇಣುಗೋಪಾಲ ಕೃಷ್ಣ ಪ್ರಸಾದ್‌ . ‘‘ಗೊಲ್ಲ ಕಲಾಪವನ್ನು ನಿರ್ವಹಿಸುವ ಭಾಮೆಯು ಸಂಸ್ಕೃತದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿರಬೇಕು. ಬ್ರಾಹ್ಮಣ ಪಾತ್ರಧಾರಿಯ ವಾಕ್ಚಾತುರ್ಯವನ್ನು ಮೀರಿಸಿ, ಪ್ರೌಢವಾಗಿ ಆಕೆ ಮಾತನಾಡಿದರೂ, ಅದು ಸಾಮಾನ್ಯ ಸಭಿಕನಿಗೂ ಅರ್ಥವಾಗುವಂತಿರಬೇಕು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಅರಿವೂ ಕಲಾವಿದರಿಗೆ ಇರಬೇಕಾಗುತ್ತದೆ. ಅಭಿನಯದ ಆಳ ವಿಸ್ತಾರವನ್ನು ಅರಿತಿರಬೇಕು. ಒಳ್ಳೆಯ ಶಬ್ದಭಂಡಾರವೂ, ವಾಕ್ಚಾತುರ್ಯವೂ ಇದ್ದಾಗ ಗೊಲ್ಲಕಲಾಪ ಯಶಸ್ವಿಯಾಗುತ್ತದೆ. ಇದು ಆಂಧ್ರಪ್ರದೇಶದ ಪ್ರಾತಿನಿಧಿಕ ಕಲೆಯಾಗಿದ್ದು, ಇನ್ನಷ್ಟು ಬೆಳೆಯಬೇಕು ಎಂಬುದು ನನ್ನ ಆಸೆ’’ ಎನ್ನುವ ಲಲಿತಾ ಸಿಂಧೂರಿ ‘ಗೊಲ್ಲ ಕಲಾಪ’ದ ರಾಯಭಾರಿಯಂತೆ ಕಾಣಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT