ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಲಿತ ಸ್ಪರ್ಶದ ಉದ್ಯೋಗ ಪರ್ವ

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಲಲಿತ ಪ್ರಬಂಧಕಾರರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ ಮತ್ತು ಅನುವಾದಕರಾಗಿ ಶ್ರೀನಿವಾಸ ವೈದ್ಯರು ತಮ್ಮ ಇಳಿವಯಸ್ಸಿನಲ್ಲಿ ಹೆಸರು ಮಾಡಿದವರು. ಬ್ಯಾಂಕಿನ ದೊಡ್ಡ ಹುದ್ದೆಯೊಂದರಿಂದ 1996ರಲ್ಲಿ ನಿವೃತ್ತಿ ಪಡೆದ ನಂತರವೇ ಅವರ ಹೆಚ್ಚಿನ ಕೃತಿಗಳು ನಿರ್ಮಾಣವಾಗಿವೆ. ಬರವಣಿಗೆಗೆ ವಯಸ್ಸಿನ ನಿರ್ಬಂಧವಿಲ್ಲವೆಂದು ತೋರಿಸಿದ ಕೆಲವೇ ಕನ್ನಡ ಸಾಹಿತಿಗಳಲ್ಲಿ ವೈದ್ಯರೂ ಒಬ್ಬರು.

‘ಇನ್ನೊಂದು ಸಂತೆ’ ಪುಸ್ತಕವನ್ನು ವೈದ್ಯರ ‘ಉದ್ಯೋಗ ಪರ್ವ’ ವೆಂದು ಕರೆಯಬಹುದು. ಇದರಲ್ಲಿ ಆತ್ಮಚರಿತ್ರೆಯ ಅಂಶಗಳಿವೆ, ಆದರೆ ವೈಯಕ್ತಿಕ ಜೀವನದ ಮಾಹಿತಿಗಳಿಲ್ಲ. ತಮ್ಮ ನೆನಪಿನಿಂದ ಹೆಕ್ಕಿ ತೆಗೆದ ಕೆಲವು ಅನುಭವಗಳಿಗೆ, ನೆನಪುಗಳಿಗೆ ಮತ್ತು ಘಟನೆಗಳಿಗೆ ಪುಟ್ಟ ಪುಟ್ಟ ಭಾಗಗಳಲ್ಲಿ ಅಭಿವ್ಯಕ್ತಿಯನ್ನು ಕೊಟ್ಟಿದ್ದಾರೆ. ಲೇಖಕರು ಲಲಿತ ಪ್ರಬಂಧಕಾರರಾಗಿರುವುದರಿಂದ ಇಂಥ ಅಭಿವ್ಯಕ್ತಿಗಳಿಗೆ ಲಲಿತ ಸ್ಪರ್ಶವೂ ಲಭ್ಯವಾಗಿದೆ. ಹೀಗಾಗಿ ಪುಸ್ತಕವು ಒಂದು ಆಹ್ಲಾದಕರ ಓದನ್ನು ಒದಗಿಸುತ್ತದೆ.

ವೈದ್ಯರ ಅನುಭವಗಳಿಗಿಂತ ಹೆಚ್ಚಾಗಿ ಅವರು ಜೀವನವನ್ನು  ನೋಡುವ ದೃಷ್ಟಿಕೋನದಲ್ಲಿಯ ಆರೋಗ್ಯಕರ ಧೋರಣೆ ಸದ್ಯದ ಸಾಹಿತ್ಯ ಪರಿಸರದಲ್ಲಿ ಓದುಗನಿಗೆ ಹೊಸದೆನ್ನಿಸುತ್ತದೆ. ಈಗ ಒಳ್ಳೆಯ ಲಲಿತ ಪ್ರಬಂಧಗಳೇ ಮಾಯವಾಗಿವೆ. ಬೆರಳೆಣಿಕೆಯಷ್ಟಿರುವ ಲಲಿತ ಪ್ರಬಂಧಕಾರರಲ್ಲಿ ಚಿಂತನೆ ಮತ್ತು ನವಿರಾದ ಹಾಸ್ಯಗಳ ಯೋಗ್ಯ ಸಮ್ಮಿಲನದ ಅಭಾವ ಎದ್ದು ಕಾಣುತ್ತದೆ. ಲಲಿತ ಸಾಹಿತ್ಯಕ್ಕೂ ಆರೋಗ್ಯಕರ ಜೀವನ ಸೃಷ್ಟಿಗೂ ಅನ್ಯೋನ್ಯವಾದ ಸಂಬಂಧವಿದೆ. ಅಂಥ ಒಂದು ಸಂಬಂಧ ಈ ಪುಸ್ತಕದುದ್ದಕ್ಕೂ ಎದ್ದು ಕಾಣುತ್ತದೆ. ಮೂಲತಃ ಧಾರವಾಡದವರಾದ ವೈದ್ಯರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ಕೆಲ ತಿಂಗಳುಗಳ ಹಿಂದೆ ಉತ್ತರ ಭಾರತ ಮತ್ತು ದಕ್ಷಿಣ ಭಾರತಗಳನ್ನು ತುಲನಾತ್ಮಕ ದೃಷ್ಟಿಯಿಂದ  ನೋಡುತ್ತ ಇದೇ ಪತ್ರಿಕೆಯಲ್ಲಿ ಒಂದು ಲೇಖನವನ್ನು ಪ್ರಕಟಿಸಿದ್ದರು.

ಅದರಲ್ಲಿ ಅವರು ‘ಕರ್ನಾಟಕವು ಬೆಚ್ಚಗೆ ಹೊದ್ದು ಮಲಗಿದೆ’ ಎಂಬ  ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಮುಂಬಯಿಯಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಜೀವನದ ಹೆಚ್ಚಿನ ಭಾಗ ಕಳೆದಿರುವವರಿಗೆ ಹಾಗನ್ನಿಸುವುದು ಸಹಜ. ಇಡೀ ಭಾರತವನ್ನು  ನೋಡಿ ಬಂದವರಿಗೆ ದೇಶದ ಇಬ್ಭಾಗವಾದಾಗ ಅದಕ್ಕೆ ಒಳಗಾದವರಲ್ಲಿ ಎಂಥ ಮನಸ್ಥಿತಿಯನ್ನು  ತಂದಿತ್ತು ಎಂಬುದರ ವಿಹಂಗಮನೋಟ ಇಲ್ಲಿ ದೊರೆಯುತ್ತದೆ. ಆದರೆ ಇಂಥ ಸಂದರ್ಭಗಳಲ್ಲಿ ಲೇಖಕರು ತಮ್ಮ ಉದ್ಯೋಗ ಪರ್ವದಲ್ಲಿ ವ್ಯಾಖ್ಯಾನಗಳನ್ನು ನೀಡಲು ಹೋಗುವುದಿಲ್ಲ. ಓದುಗರನ್ನು ಒಳಗೊಂಡು ಸನ್ನಿವೇಶಗಳು ಓದುಗರ ಕಲ್ಪನೆಗೆ ಅವಕಾಶವನ್ನು ಒದಗಿಸುತ್ತವೆ.

ಕರ್ನಾಟಕ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ತೃತೀಯ ದರ್ಜೆಯಲ್ಲಿ ಪಾಸಾದುದರಿಂದ ಬ್ಯಾಂಕಿನ ಉದ್ಯೋಗಕ್ಕೆ ತೊಡಗಬೇಕಾಗುತ್ತದೆ. ಇಲ್ಲದಿದ್ದರೆ ಅವರಿಗೂ ತಮ್ಮ ಗುರುವೃಂದದಲ್ಲಿದ್ದ ಗೋಕಾಕ ಮತ್ತಿತರರಂತೆ ಕಾಲೇಜಿನ ಉಪನ್ಯಾಸಕರಾಗುವ ಆಸೆಯೇ ಇತ್ತು. ಅವರ ಪ್ರಥಮ ಪೋಸ್ಟಿಂಗ್‌ ಮುಂಬಯಿಗಾಗುತ್ತದೆ. ಧಾರವಾಡ ಬಿಟ್ಟು ಹೊರ ಜಗತ್ತನ್ನು ಹೆಚ್ಚಾಗಿ ನೋಡದಿದ್ದ ತರುಣ ಒಂದು ಮಹಾನಗರಕ್ಕೆ ಎಸೆಯಲ್ಪಡುತ್ತಾನೆ. ಜನರ ಆ ಗದ್ದಲ, ಬ್ಯಾಂಕಿನಿಂದ ದೊರೆಯುತ್ತಿದ್ದ ಅಲ್ಪ ಸಂಬಳ ಮತ್ತು ಅದರಿಂದಾಗಿ ಆಗ ಲೇಖಕರದು ಎದುರಿಸಿದ ಆರ್ಥಿಕ ಬಿಕ್ಕಟ್ಟುಗಳು ಈ ಪುಸ್ತಕದಲ್ಲಿ ಮನನೀಯವಾಗಿ ಮೂಡಿಬಂದಿವೆ.

ಬ್ಯಾಂಕುಗಳ ರಾಷ್ಟ್ರೀಕರಣ ಇನ್ನೂ ಆಗಿರದಿದ್ದ ಆ ಕಾಲದಲ್ಲಿ ಬ್ಯಾಂಕಿನ ಅಥವಾ ಮತ್ತಿತರ ನೌಕರಿಗಳಿಗಾಗಿ ‘ಮುಂಬಯಿ ಕರ್ನಾಟಕ’ ಭಾಗದಿಂದ ಮುಂಬಯಿಗೆ ಬರುತ್ತಿದ್ದ ಜನರ ಬವಣೆಗಳನ್ನೂ ಸೆರೆಹಿಡಿಯುತ್ತಾರೆ. ಅವರಿಗೆ ಆಗ ಕೊಂಕಣಿ ತರುಣರ ಶಿಸ್ತು ಬದ್ಧ ಜೀವನ ಒಂದು ಆದರ್ಶವಾಗುತ್ತದೆ. ಅಲ್ಪ ಸಂಬಳದಲ್ಲಿ ಜೀವನ ನಡೆಸಲಾಗದ ಅವರು ಬ್ಯಾಂಕಿನ ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸ ಮಾಡಿ ಹಣಗಳಿಸಿ, ರಾತ್ರಿ ಬ್ಯಾಂಕಿನಲ್ಲೇ ಮಲಗಿ, ಮನೆಗೆ ಅಲ್ಪ ಸ್ವಲ್ಪ ಹಣವನ್ನೂ ಗಳಿಸುವ ಆ ಕೊಂಕಣಿ ತರುಣರ ಜೀವನ ವೈದ್ಯರ ಮೇಲೆ ಬಹಳ ಪ್ರಭಾವ ಬೀರುತ್ತದೆ. ಅವರ ಸೋದರ ಮಾವನೂ ಇದೇ ಬೋಧನೆ ನೀಡುತ್ತಾರೆ.

ದೇಶದ ಇಬ್ಭಾಗದ ನಂತರ ಮುಂಬಯಿಗೆ ಬಂದು ನೆಲೆಸಿದ ಸಿಂಧಿ ಕುಟುಂಬಗಳು ತಮ್ಮ ಜೀವನವನ್ನು ಕಟ್ಟಿಕೊಳ್ಳುವ ರೀತಿಯು ಅಲ್ಲಿಯ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುವಾಗ ಲೇಖಕರಲ್ಲಿ ಮಾನವೀಯತೆಯನ್ನು ಹುಟ್ಟಿಸುವುದರೊಂದಿಗೆ ವಿಸ್ಮಯವನ್ನೂ ಹುಟ್ಟುಹಾಕುತ್ತವೆ. ಇಂಥವೇ ಸನ್ನಿವೇಶಗಳು ಅವರ ಜೀವನಕ್ಕೆ ಮಾರ್ಗದರ್ಶಿ ಸೂತ್ರಗಳಾಗುತ್ತವೆ. ಅತಿಯಾಗಿ ಅಧಃಪತನಗೊಂಡ ಸನ್ನಿವೇಶದಲ್ಲಿ ಕೂಡ ವೈದ್ಯರು ಒಳ್ಳೆಯ ಗುಣಗಳನ್ನೇ ಅರಸುತ್ತಾರೆ.

ಮುಂಬಯಿ ಜೀವನದಲ್ಲಿ ಅವರ ಬ್ಯಾಂಕಿನ ಶಾಖೆಯಲ್ಲಿ ಅವರಿಗೆ ಪ್ರಿಯವಾದ ಹಿಂದಿ ಸಿನಿಮಾದ ಹಿನ್ನೆಲೆ ಗಾಯಕ ಮುಕೇಶನ ಖಾತೆ ಇದ್ದದ್ದನ್ನು ಸ್ಮರಿಸಿಕೊಳ್ಳುತ್ತಾರೆ. ಹಾಗೆಯೇ ತಮ್ಮ ಬ್ಯಾಂಕಿನ ಮಹಡಿಯಲ್ಲಿದ್ದ ಲತಾ ಮಂಗೇಶಕರ್‌ ಮೆಟ್ಟಿಲಿಳಿದು ಬಂದು, ಹಣ್ಣು ಮಾರುವವನಿಗೆ ಅವನು ಕೇಳಿದಷ್ಟು ಹಣ ಕೊಟ್ಟು ಹಣ್ಣು ಖರೀದಿಸಿ ತನ್ನ ಕಾರಿನಲ್ಲಿ ಹೊರಟು ಹೋಗುತ್ತಾಳೆ. ಇದಕ್ಕೆ ಮೊದಲು ಲೇಖಕರು ದುಡ್ಡಿನ ಅಭಾವದಲ್ಲಿ ಎಂಟಾಣೆಯ ಹಣ್ಣನ್ನು ನಾಲ್ಕಾಣೆಗೆ ಒದಗಿಸಲು ಚೌಕಾಶಿ ನಡೆಸಿರುತ್ತಾರೆ! ಈ ಪ್ರಸಂಗದ ಬಗ್ಗೆ ವೈದ್ಯರು ಯಾವುದೇ ನಿರ್ಣಯ ನೀಡುವುದಿಲ್ಲ. ಹಾಗೆಯೇ ಬೆಂಗಳೂರಿನ ಸದಾಶಿವನಗರದ ಶಾಖೆಯಲ್ಲಿ ದಿವಂಗತ ಡಾ. ಪಾವಟೆಯವರ ಮಡದಿ ಬಂದು ಗೊಂದಲಕ್ಕೊಳಗಾಗುವುದನ್ನೂ ನಿರೂಪಿಸುತ್ತಾರೆ. ಇಂಥ ಅನೇಕ ಸಂದರ್ಭಗಳು ಲೇಖಕರ ನೆನಪಿನ ಸಂತೆಯಲ್ಲಿವೆ.

ವೈದ್ಯರು ತಮ್ಮ ನಿವೃತ್ತಿಗೆ ಸಮೀಪ ಬರುವಾಗ ನಡೆದ ಘಟನೆಯೊಂದನ್ನು ರಸವತ್ತಾಗಿ ವರ್ಣಿಸುತ್ತಾರೆ. ಅವರೊಡನೆ ಕಾಲೇಜಿನಲ್ಲಿ ನಾಟಕದಲ್ಲಿ  ಭಾಗವಹಿಸಿದ ಮಹಿಳೆಯೊಬ್ಬಳು ಫೋನು ಮಾಡುತ್ತಾಳೆ. ಅದೇ ಊರಿನಲ್ಲಿದ್ದರೂ ತನಗೆ ತಿಳಿಸಲಿಲ್ಲ ಎಂದು ಆಕ್ಷೇಪಣೆ ಎತ್ತಿ ಮರುದಿನ ಬ್ಯಾಂಕಿಗೆ ಬರುವುದಾಗಿ  ತಿಳಿಸುತ್ತಾಳೆ. ಅವಳಿಗೂ ಅಷ್ಟೊತ್ತಿಗೆ ವಯಸ್ಸಾಗಿರುತ್ತದೆಂಬ ವಿಷಯವನ್ನು ಮರೆತುಬಿಡುತ್ತಾರೆ. ಇದು ಎಲ್ಲರ ಜೀವನದಲ್ಲಿಯೂ ನಡೆಯುವ ಸಂಗತಿಯಾದರೂ ದಿನನಿತ್ಯದ ಜೀವನದಲ್ಲಿ ಅಷ್ಟಾಗಿ ಗಮನಿಸಿರುವುದಿಲ್ಲ.

ಕಾಲೇಜಿನಲ್ಲಿದ್ದಾಗ ಅವಳು ಸುಂದರಳಾಗಿದ್ದಾಳೆ. ತಮ್ಮ ಈ ಭೇಟಿಗಾಗಿ ಲೇಖಕರು ಹೊಸ ಸಫಾರಿ ಸೂಟ್‌ ಧರಿಸಿ ತಮಗೆ ಪ್ರಿಯವಾದ ಸೆಂಟ್‌ ಬೇರೆ ಸಿಂಪಡಿಸಿಕೊಳ್ಳುತ್ತಾರೆ. ಮರುದಿನ ಹಲ್ಲು ಬಿದ್ದ, ಬಿಳಿ ಕೂದಲಿನ ಮುದುಕಿಯೊಬ್ಬಳು ಲೇಖಕರನ್ನು ಏಕವಚನದಲ್ಲಿ ಸಂಬೋಧಿಸುತ್ತ ಇವರ ಆಫೀಸಿನ ಮ್ಯಾನೇಜರ್‌ ಚೇಂಬರನ್ನು ಪ್ರವೇಶಿಸುತ್ತಾಳೆ! ಒಂದು ಮಧುರ ಭಾವನೆ ಮುರಿಯುತ್ತದೇನೊ ನಿಜ, ಆದರೆ ಲೇಖಕರ ಮನದ ಮೂಲೆಯಲ್ಲೊಬ್ಬ ರಮ್ಯ ಮನಸ್ಸಿನ ತರುಣನೊಬ್ಬ ಅವಿತು ಕುಳಿತಿದ್ದಾನೆಂದು ತಿಳಿಯುತ್ತದೆ.

ಗೋಕಾಕದ ಬಳಿ ಇರುವ ಹಳ್ಳಿಯೊಂದರಲ್ಲಿ ಕೆಲಸ ಮಾಡುವಾಗ, ಗೋಕಾಕದ ಸೇತುವೆಯ ಮೇಲೆ ಮೋಟರ್‌ ಸೈಕಲ್‌ ಮೇಲೆ ಬರುವಾಗ ಸಂಜೆಯ ಆಕಾಶವನ್ನು ಕಂಡು ತಮಗುಂಟಾದ ಅವರ್ಣನೀಯ ಅನುಭವವೊಂದನ್ನು ವರ್ಣಿಸುತ್ತಾರೆ. ಬೇಂದ್ರೆಯವರ ಆಕಾಶಕ್ಕೆ ರಾಗರತಿಯ ನಂಜು ಏರಿದ್ದು ಅವರಿಗೆ ನೆನಪಾಗುತ್ತದೆ. ಇದೊಂದು ಪುಟ್ಟ ಸುಂದರ ಭಾವಗೀತೆ. ಪುಸ್ತಕದ ಕೊನೆಗೆ ಬರುವ ಘಟನೆ ವೈದ್ಯರ ಸದ್ಯದ ಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ. ಧಾರವಾಡದ ರೈಲ್ವೆ ಸ್ಟೇಷನ್‌ನಲ್ಲಿ ಅರೆಹುಚ್ಚನೊಬ್ಬ ಕಂಡಕಂಡವರನ್ನೆಲ್ಲಾ ಮರಾಠಿ ಭಾಷೆಯಲ್ಲಿ ಪಂಢರಪುರಕ್ಕೆ ಹೋಗುವ ರೈಲು ಯಾವಾಗ ಬರುತ್ತದೆಂದು ಕೇಳುತ್ತಾ ತಿರುಗುತ್ತಿದ್ದಾನೆ. ಲೇಖಕರು ಈಗ ಕಂಡ ಕಂಡ ಡಾಕ್ಟರರ ಬಳಿ ಹೋಗಿ ತಮ್ಮ ಅನಾರೋಗ್ಯದ ಬಗ್ಗೆ ವಿಚಾರಿಸುವುದನ್ನು ಆ ಘಟನೆಗೆ ಹೋಲಿಸುತ್ತಾರೆ. ಪಂಢರಪುರ ಅವನಿಗೆ ಮೋಕ್ಷ ಸಿಗುವ ಸ್ಥಳವಾದರೆ, ಲೇಖಕರು ವೈದ್ಯರ ಬಳಿ ಸಾಗಿ ಏನನ್ನು ಕೇಳುತ್ತಿರಬಹುದು!

ಮಿದುಳಿಗೆ ಅತಿಯಾದ ಕೆಲಸ ಕೊಡುವ ಕೃತಿಗಳೇ ಹೆಚ್ಚಾಗಿ ಬರುತ್ತಿರುವ ಈ ಕಾಲದಲ್ಲಿ ಹೃದಯಕ್ಕೆ ಕಚಗುಳಿ ಇಡುವ ವೈದ್ಯರ ‘ಮತ್ತೊಂದು ಸಂತೆ’ ಕೇವಲ ನೆನಪುಗಳ ದಾಖಲೆ ಮಾತ್ರವಾಗಿ ಉಳಿಯುವುದಿಲ್ಲ. ಇದೊಂದು ಆಹ್ಲಾದಕರ ಅನುಭವ.


ಇನ್ನೊಂದು ಸಂತೆ
ಲೇ: ಶ್ರೀನಿವಾಸ ವೈದ್ಯ

ಬೆ: ರೂ. 100; ಪು: 110
ಪ್ರ: ಮನೋಹರ ಗ್ರಂಥ ಮಾಲಾ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT