ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಹರಿ ಮಾದರಿಯ ಬೌದ್ಧಿಕ ಬರವಣಿಗೆ

Last Updated 22 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಯು.ಆರ್‌. ಅನಂತಮೂರ್ತಿಯವರ ಕೊಡುಗೆ ಅಪಾರ ಎನ್ನುವುದು ಕ್ಲೀಷೆಯಂತೆ ಕಂಡರೂ ಅದು ಹೇಳಲೇಬೇಕಾಗಿರುವ ಮಾತು. ಅವರ ಜೀವನದ ಕೊನೆಯ ಹಂತದಲ್ಲೂ ಕಾಟ ಕೊಟ್ಟ ಕೋಮುವಾದಿಗಳು ಮತ್ತು ಜಾತಿವಾದಿಗಳ ಕಾರಣಕ್ಕಾಗಿ ‘ಕ್ಲೀಷೆ’ ಮಾತಿನಿಂದಲೇ ಈ ಬರಹವನ್ನು ಆರಂಭಿಸಿದ್ದೇನೆ. ಅನಂತಮೂರ್ತಿಯವರ ಕೃತಿಗಳನ್ನೂ ಮೀರಿಸಿದ ಪ್ರಜಾಸತ್ತಾತ್ಮಕ ಮನೋಮೌಲ್ಯವು ಅವರ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸುತ್ತೇನೆ. ವ್ಯಕ್ತಿಯಾಗಿ ತಮ್ಮ ‘ಕೂಟ’ದಲ್ಲಿ ಕಟ್ಟಿಕೊಂಡ ಇತಿಮಿತಿಗಳ ಬಗ್ಗೆ ನನ್ನಲ್ಲಿ ಭಿನ್ನಾಭಿಪ್ರಾಯವಿದ್ದರೂ ಭಿನ್ನಾಭಿಪ್ರಾಯಗಳನ್ನು ಆದರದಿಂದ ಆಹ್ವಾನಿಸುವ, ಆಸ್ವಾದಿಸುವ ಮತ್ತು ಗೌರವಿಸುವ ಗುಣದಿಂದ ಅನಂತಮೂರ್ತಿಯವರು ಪ್ರಜಾಸತ್ತಾತ್ಮಕ ಮನೋವಲಯದ ಗೌರವಕ್ಕೆ ಪಾತ್ರರೆಂದು ಹೆಮ್ಮೆಪಡುತ್ತೇನೆ. ಪ್ರೀತಿ ಮತ್ತು ಪ್ರತಿರೋಧಗಳನ್ನು ಒಟ್ಟಿಗೇ ನಿಭಾಯಿಸುವ ಅವರ ನಡವಳಿಕೆಯಿಂದ ವಿಸ್ಮಿತನೂ ಆಗಿದ್ದೇನೆ. ಈಗ ವಿಶ್ಲೇಷಿಸಹೊರಟಿರುವ ಅವರ ‘ಹಿಂದುತ್ವ ಅಥವಾ ಹಿಂದ್‌ ಸ್ವರಾಜ್‌?’ ಎಂಬ ಕೃತಿಗೆ ಹಿನ್ನೆಲೆಯಾಗಿಯೂ ನನ್ನ ಈ ಮಾತುಗಳ ಅಗತ್ಯವಿತ್ತೆಂದು ಭಾವಿಸುತ್ತೇನೆ.

‘ಹಿಂದುತ್ವ ಅಥವಾ ಹಿಂದ್‌ ಸ್ವರಾಜ್‌?’ ಅನಂತಮೂರ್ತಿಯವರ ಕೊನೆಯ ಕೃತಿ. ಅವರ ನಿಧನಾನಂತರ ಪ್ರಕಟಗೊಂಡ ಕೃತಿ, ಅವರ ಸಮೀಪವರ್ತಿಗಳು ಸಾರುತ್ತಿದ್ದಂತೆ ಸಾಕಷ್ಟು ವಿವಾದವನ್ನು ಹುಟ್ಟುಹಾಕುವ ಕೃತಿ. ಅನಂತಮೂರ್ತಿಯವರಿಗೆ ವಿವಾದವೆನ್ನುವುದು ಹೊಸದಲ್ಲ. ಆದರೆ ಈ ಕೃತಿಯನ್ನು ವಿವಾದಾತ್ಮಕ ಕೃತಿಯೆಂದು ಭಾವಿಸಿಯೇ ಪ್ರವೇಶಿಸುವ ಪೂರ್ವಗ್ರಹ ಬೇಕಿಲ್ಲ. ಯಾಕೆಂದರೆ ಅನಂತಮೂರ್ತಿಯವರು ಇಲ್ಲಿಯವರೆಗೆ ಹೇಳಿಲ್ಲದ ವಿಷಯಗಳೇನೂ ಇದರಲ್ಲಿ ಇಲ್ಲ. ವಿವಿಧ ಸಂದರ್ಭಗಳಲ್ಲಿ ಹೇಳಿದ, ಬರೆದ ಅಭಿಪ್ರಾಯಗಳು ಸಾವರ್ಕರ್‌ ಅವರ ಹಿಂದುತ್ವ ಮತ್ತು ಗಾಂಧಿಯವರ ಹಿಂದ್‌ ಸ್ವರಾಜ್‌ಗಳಲ್ಲಿ ಯಾವುದು ಮುಖ್ಯವೆಂಬ ಪ್ರಶ್ನೆಗೆ ವಿಶ್ಲೇಷಣಾತ್ಮಕ ಉತ್ತರವಾಗಿ ಇಲ್ಲಿ ಬಿಡಿ ಬಿಡಿಯಾಗಿ ಕ್ರೋಡೀಕೃತಗೊಂಡಿವೆ.

ಅನಂತಮೂರ್ತಿಯವರ ಎದುರಿಗೆ ಸಾವರ್ಕರ್‌ ಅವರ ‘ಹಿಂದುತ್ವ’ ಮತ್ತು ಗಾಂಧಿಯವರ ‘ಹಿಂದ್‌ ಸ್ವರಾಜ್‌’– ಎರಡೂ ಇವೆ. ಎರಡರಲ್ಲಿ ಯಾವುದು ಸೂಕ್ತ ಎಂದು ಕೇಳುವಂತೆ ಶೀರ್ಷಿಕೆಯಲ್ಲಿ ಪ್ರಶ್ನಾರ್ಥಕ ಚಿಹ್ನೆಯಿದ್ದರೂ ಪುಸ್ತಕದಲ್ಲಿ ಇಂಥ ಪ್ರಶ್ನೆಗಳಿಗೆ ವಿಶೇಷ ಅವಕಾಶವೇನೂ ಇಲ್ಲ. ಯಾಕೆಂದರೆ ಲೇಖಕರಿಗೆ ಗಾಂಧಿಯವರ ‘ಹಿಂದ್ ಸ್ವರಾಜ್‌’ ಇಷ್ಟ ಮತ್ತು ಅದೇ ಆದರ್ಶ ಎಂಬುದು ಸ್ಪಷ್ಟ. ತಮ್ಮ ವಿಚಾರಗಳು ಸ್ಪಷ್ಟವೂ ಸಂವಹನಶೀಲವೂ ಆಗಿರಬೇಕೆಂದು ಬಯಸುವ ಅನಂತಮೂರ್ತಿಯವರು ‘ನನ್ನ ಅಭಿಪ್ರಾಯಗಳನ್ನು ಸೂತ್ರ ರೂಪದಲ್ಲಿ ಮಂಡಿಸುತ್ತಾ ಹೋಗುವುದು ಸಂವಹನದ ದೃಷ್ಟಿಯಿಂದ ಅನುಕೂಲ’ (ಪುಟ–10)ವೆಂದು ಭಾವಿಸಿಯೇ ಮೊದಲ ಅಧ್ಯಾಯವನ್ನು ಬರೆದಿದ್ದಾರೆ. ವಿಪರ್ಯಾಸವೆಂದರೆ ಈ ಸೂತ್ರಬದ್ಧ ವಿಷಯಗಳಿಂದ ಲೇಖಕರ ತಾತ್ವಿಕತೆ ಸ್ಪಷ್ಟವೂ ಸಂವಹನಶೀಲವೂ ಆಗುವಂತೆ ಕೋರುತ್ತಲೇ ಪ್ರಶ್ನೆಗಳಿಗೂ ಕಾರಣವಾಗುತ್ತದೆ. ಕೆಲವು ಕಡೆ ಪರಸ್ಪರ ಸಂಬಂಧ ಕಲ್ಪಿಸಲು ಕಷ್ಟಪಡುವ ವಿಷಯಗಳಿಂದ ಸಂವಹನೆಯ ಕಷ್ಟವನ್ನೂ ತಂದೊಡ್ಡುತ್ತದೆ; ಕಾರ್ಪೊರೇಟ್‌ ಮಾಲೀಕರನ್ನು ಕುರಿತ ಕಟು ಮಾತುಗಳಲ್ಲಿ ಸ್ಪಷ್ಟತೆ ಮತ್ತು ತಾತ್ವಿಕತೆ ಎರಡೂ ಇದ್ದರೆ (ಪು–13), ವರುಣನ ಕೃಪೆಯ ಆಹಾರದ ಉತ್ಪತ್ತಿ ಮತ್ತು ಮೂಲನಿವಾಸಿಗಳ ಬೇಟೆಗಾರಿಕೆಗಳನ್ನು ಹೆಮ್ಮೆಯಿಂದ ನೆನೆಯುತ್ತ ‘ವಿಮಾನ ಸಂಚಾರಿಗಳಾಗಿ ಬಿಟ್ಟ ಪಾಶ್ಚಾತ್ಯರು ಈಗ ಯಾವ ಪಾವಿತ್ರ್ಯದ ಭಾವನೆಯೂ ಇಲ್ಲದ ಕೇವಲ ವ್ಯಾಪಾರಿಗಳಾದ ನಿರ್ದಯಿ ಬೇಟೆಗಾರರಾಗಿದ್ದಾರೆ’ (ಪು–12) ಎಂಬ ಅಭಿಪ್ರಾಯ ಚರ್ಚಾಸ್ಪದವಾಗಿದೆ.

ಪಾಶ್ಚಾತ್ಯರು ಮತ್ತು ಪಾವಿತ್ರ್ಯದ ಪ್ರಶ್ನೆಯನ್ನು ಒಟ್ಟಿಗೇ ಎತ್ತಿದಾಗ ಒಳನೆಲೆಯಲ್ಲಿ ಸನಾತನತೆಯ ವಾಸನೆ ಹೊಡೆಯುವ ಅನುಮಾನ ಮೂಡುವ ಸಾಧ್ಯತೆಯಿರುತ್ತದೆ. ಪಾಶ್ಚಾತ್ಯ ಸಂಸ್ಕೃತಿಯನ್ನೂ ಹೀಗಳೆಯುವ ‘ಹಿಂದೂ ಪಾವಿತ್ರ್ಯ’ದ ಕಲ್ಪನೆಯೂ ನೆನಪಾಗುತ್ತದೆ. ಅನಂತಮೂರ್ತಿಯವರು ಹಿಂದುತ್ವವಾದಿ ಅಲ್ಲವಾದ್ದರಿಂದ ಈ ಅನುಮಾನವನ್ನು ದಾಟಿ ಮುಂದೆ ಬಂದರೆ, ‘ಪ್ರಕೃತಿಯನ್ನು ಕೆಣಕದೆ ಹೊಂದಿಕೊಂಡು ಬದುಕುವ ವಿನಯ ನಮ್ಮ ಪಿತೃಗಳಿಗೆ ಇತ್ತು’ ಎಂದು ಹೇಳುತ್ತ ಕೃಷಿಕರ ಋತುಚಕ್ರ ಜ್ಞಾನವನ್ನು ಹೊಗಳುತ್ತ ಪ್ರಕೃತಿಯ ಆರಾಧನೆಯಲ್ಲೇ ಅಂತಿಮ ಸತ್ಯವನ್ನು ಕಾಣುವ ರೀತಿ ಮತ್ತೆ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಆದರೆ ಮರುಕ್ಷಣದಲ್ಲೇ ಇವತ್ತಿನ ‘ಮುಕ್ತ ಮಾರುಕಟ್ಟೆ’ ನೀತಿಯ ‘ಡೆವಲಪ್‌ಮೆಂಟ್‌’ ಹಸಿದವರ ಪರವಾಗಿಲ್ಲ ಎಂಬ ಸರಿಯಾದ ಅಭಿಪ್ರಾಯವನ್ನು ಪ್ರತಿಪಾದಿಸುತ್ತಾ ಮೀಸಲಾತಿಯ ಮಹತ್ವವನ್ನು ಮಂಡಿಸುತ್ತ ಸಮಕಾಲೀನ ಪ್ರಗತಿಪ್ರಜ್ಞೆ ಮೆರೆಯುತ್ತಾರೆ. ಮುಂದಿನ ಪುಟದಲ್ಲೇ (ಪುಟ–15) ‘ಈವಿಲ್‌ ನಮ್ಮ ಕಾಲದಲ್ಲಿ ಗಣಿಗಳು, ಡ್ಯಾಮ್‌ಗಳು; ವಿದ್ಯುತ್‌ ಸ್ಥಾವರಗಳು, ನೂರಾರು ಸ್ಮಾರ್ಟ್‌ಸಿಟಿಗಳು, ಮರಗಳನ್ನು ನಾಶಮಾಡಿ ಅಗಲಮಾಡಿದ ನೆರಳಿಲ್ಲದ ರಸ್ತೆಗಳು...’ ಎಂದೆಲ್ಲ ಹೇಳುತ್ತ ಗುಡ್ಡಗಳನ್ನು ಗಿರಿಜನರ ದೇವಾಲಯಗಳೆಂದು ಕರೆಯುತ್ತಾರೆ. ನಗರೀಕರಣಕ್ಕೆ ವಿಷಾದಿಸುತ್ತಾರೆ. ಅವರು ಹೇಳುವ ಅಭಿಪ್ರಾಯಗಳಲ್ಲಿ ಪರಿಸರವಾದಿಯ ಪರಿಕಲ್ಪನೆ ಪ್ರಧಾನವಾಗಿದೆ. ಗಣಿಗಾರಿಕೆ, ಸ್ಮಾರ್ಟ್‌ಸಿಟಿಗಳ ವಿರೋಧಕ್ಕೂ ರಸ್ತೆಗಳ ಅಗಲೀಕರಣ ಹಾಗೂ ಅಣೆಕಟ್ಟುಗಳ ನಿರ್ಮಾಣಕ್ಕೂ ಇರುವ ವ್ಯತ್ಯಾಸದ ವಿಶ್ಲೇಷಣೆಯಿಂದ ವಾಸ್ತವದ ಒಳನೋಟ ಸ್ಪಷ್ಟವಾಗುತ್ತಿತ್ತು.

ರಸ್ತೆ ಅಗಲವಾಗುವುದು ಬೇಡವೆ, ಅಣೆಕಟ್ಟುಗಳು ಅಗತ್ಯವಿಲ್ಲವೆ ಎಂಬ ಪ್ರಶ್ನೆಗಳನ್ನು ಅವರು ಕೇಳಿಕೊಳ್ಳಬೇಕಿತ್ತು. ಲೇಖಕರು ತಮ್ಮ ಅಪಾರ ಚಿಂತನೆಯ ಫಲವಾಗಿ ನಿರ್ಣಯಾತ್ಮಕ ಮಾತುಗಳಿಗೆ ತಲುಪಿರಬಹುದಾದರೂ ಓದುಗರ ದೃಷ್ಟಿಯಿಂದ ಮತ್ತು ತಾವೇ ಬಯಸಿದ ‘ಸಂವಹನೆ’ಯ ಹಂಬಲದಿಂದ ಒಂದಷ್ಟು ವಿವರಣೆ ಕೊಡುವ ಅಗತ್ಯವಿತ್ತು. ವಿವರಣಾತ್ಮಕ ಪ್ರತಿಪಾದನೆಯಿಲ್ಲದ ಕಾರಣದಿಂದ ಇಂಥ ಮಾತುಗಳು ಕೆಲವು ಪರಿಸರವಾದಿಗಳ ಕಂಠಪಾಠದ ಮಾತುಗಳಂತೆ ಕೇಳಿಸಿದರೆ ಆಶ್ಚರ್ಯವೇನೂ ಇಲ್ಲ. ಈ ವಿಷಯ ಬಿಡಿ, ‘ಗಾಂಧಿಯ ವಿಶ್ವಭ್ರಾತೃತ್ವ ಬೇರೆ, ನೆಹರೂ ಅವರ Internationalism ಬೇರೆ’ (ಪುಟ–16) ಎಂದು ಒಂದೇ ವಾಕ್ಯದಲ್ಲಿ ತಿಳಿಸುವ ಬದಲು ಎರಡರ ವ್ಯತ್ಯಾಸವನ್ನು ವಿವರಿಸಿದ್ದರೆ ಸ್ಪಷ್ಟ ಚಿತ್ರಣ ದೊರಕುತ್ತಿತ್ತು. ಅಂತೆಯೇ ದೇಶ ಮತ್ತು ರಾಷ್ಟ್ರ ಬೇರೆ ಬೇರೆ ಎಂದು ಭಾವಿಸುವ ಲೇಖಕರು (ಪುಟ 32–33) ಎರಡರ ವ್ಯತ್ಯಾಸ ಏನೆಂದು ವಿವರಿಸುವುದಿಲ್ಲ. ರಾಷ್ಟ್ರ ಕಲ್ಪನೆಗೆ ಗಾಂಧಿ ಮತ್ತು ಟ್ಯಾಗೋರ್‌ ವಿರೋಧಿಯಾಗಿದ್ದರು (ಪು–18) ಎಂದು ನಿರ್ಣಯಿಸುವ ಮಾತು ಸಹ ಸ್ಪಷ್ಟನೆಯನ್ನು ಬಯಸುತ್ತದೆ. ಸಾಮಾನ್ಯವಾಗಿ ದೇಶ ಮತ್ತು ರಾಷ್ಟ್ರ– ಎರಡೂ ಪದಗಳು ಸಮಾನವೆಂದು ಭಾವಿಸುವವರಿಗೆ ಅವರೆಡು ಹೇಗೆ ಬೇರೆ ಬೇರೆ ಎಂದು ಪ್ರತಿಪಾದಿಸದಿದ್ದರೆ ಗೊಂದಲ ತಪ್ಪಿದ್ದಲ್ಲ. ನನ್ನಂಥ ಅಲ್ಪಮತಿಗೆ ಇಂದಿಗೂ ಈ ಗೊಂದಲವಿದೆಯೆಂದು ಹೇಳಲು ಹಿಂಜರಿಕೆಯಿಲ್ಲ. ಒಟ್ಟಾರೆ ನಾನು ಹೇಳ ಹೊರಟಿರುವುದು ಇಷ್ಟು: ಅನೇಕ ಚಿಂತನಶೀಲ ವಿಚಾರಗಳನ್ನು ಸೂತ್ರರೂಪದಲ್ಲಿ ಹೇಳುವ ಪ್ರಯತ್ನದಲ್ಲಿ ಸಂವಹನೆಯ ಕೊರತೆ ಕಾಣಿಸುತ್ತದೆ. ಆಶಯಕ್ಕನುಗುಣವಾಗಿ ಈ ಕೊರತೆಯನ್ನು ಮೀರಲು ಸಾಧ್ಯವಿತ್ತು. ಇಷ್ಟಾಗಿಯೂ ಮೊದಲ ಅಧ್ಯಾಯದಲ್ಲಿ ಜಾಗತೀಕರಣದ ಕೆಡುಕುಗಳ ವಿರುದ್ಧವಾಗಿರುವ ಲೇಖಕರ ದನಿ ಮಾತ್ರ ನಿಚ್ಚಳವಾಗಿ ಕೇಳಿಸುತ್ತದೆ. ಇದು ಮಹತ್ವದ ದನಿಯೂ ಹೌದು.

ಈ ಕೃತಿಯು ತನ್ನ ಮೊದಲೆರಡು ಅಧ್ಯಾಯಗಳ ‘ತಾತ್ವಿಕತೆ’ಯ ನಂತರ ಸಾವರ್ಕರ್‌ ಮತ್ತು ಗಾಂಧೀಜಿಯವರ ವಿಷಯಕ್ಕೆ ಬರುತ್ತದೆ. ಸುತ್ತಿ ಬಳಸಿ ಅಲ್ಲಲ್ಲೆ ಪ್ರಸ್ತಾಪವಾಗುವ ಇವರ ಹೆಸರುಗಳು ವಸ್ತು ವಿಷಯದ ಕೇಂದ್ರವಾಗಿ ಆನಂತರದ ಅಧ್ಯಾಯಗಳಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಆರನೇ ಅಧ್ಯಾಯದಲ್ಲಿ ‘ಸಾವರ್ಕರ್‌ ಪುಸ್ತಕದ ತಿರುಳಿನ ಸಂಗ್ರಹ ಇಲ್ಲಿದೆ’ (ಪುಟ–41) ಎಂದು ಲೇಖಕರು ಮಾತು ಪ್ರಾರಂಭಿಸುತ್ತಾರೆ. ಈ ತಿರುಳಿನ ಸಂಗ್ರಹ ಶೀಘ್ರ ಕೊನೆಗೊಂಡು ವಿಶ್ಲೇಷಣೆಯ ಹುರುಪು ಆವರಿಸಿಕೊಳ್ಳುತ್ತದೆ. ಸಾವರ್ಕರ್‌ ಅವರ ವಿಚಾರಧಾರೆಯನ್ನು ಒರೆಗಲ್ಲಿಗೆ ಹಚ್ಚುವ ಲೇಖಕರು ಅದು ಗೋಡ್ಸೆಯಾಗಿ, ಮೋದಿಯಾಗಿ ಬೆಳೆದುನಿಂತ ಬಗೆಯನ್ನು ಒಳನೋಟಗಳಲ್ಲಿ ಕಟ್ಟಿಕೊಡುತ್ತಾರೆ; ತಮ್ಮ ಪ್ರಬುದ್ಧ ವಿಶ್ಲೇಷಣೆಯಿಂದ ಪ್ರತಿಪಾದನಾ ಶೈಲಿಗೆ ಶಕ್ತಿ ತುಂಬುತ್ತಾರೆ. ಆದರೆ ಇದು ಸಾವರ್ಕರ್‌ ಪುಸ್ತಕದ ಸಂಗ್ರಹವಾಗದೆ ಹೋಗುವುದರಿಂದ ‘ಈವರೆಗಿನ ನನ್ನ ಸಾವರ್ಕರ ಪುಸ್ತಕದ ಸಂಗ್ರಹದ ಕ್ರಮ ಸಪ್ಪೆಯಾಗಿದೆ’ (ಪು–49) ಎಂದು ಒಪ್ಪಿಕೊಳ್ಳುತ್ತಾರೆ. ನಿಜವೆಂದರೆ ಸಾವರ್ಕರ್‌ ಪುಸ್ತಕದ ಸಂಗ್ರಹ ರೂಪ ಇಲ್ಲಿಲ್ಲ. ಆದರೆ ವಿಚಾರಪೂರ್ಣ ವಿಶ್ಲೇಷಣೆಯಿದೆ.

ಸಾವರ್ಕರ್‌ ವಿಚಾರವಿರಲಿ, ಗಾಂಧೀಜಿಯವರ ‘ಹಿಂದ್‌ ಸ್ವರಾಜ್‌’ ಕೃತಿಯ ಸಂಗ್ರಹರೂಪವೂ ಈ ಕೃತಿಯಲ್ಲಿಲ್ಲ. ಸುಮಾರು 275 ಪುಟಗಳಷ್ಟಿರುವ ‘ಹಿಂದ್‌ ಸ್ವರಾಜ್‌’ನ ಮುಖ್ಯ ಪ್ರತಿಪಾದನೆಗಳನ್ನು ಸಾದರಪಡಿಸಿದ್ದರೆ ಸಾವರ್ಕರ್‌ ಹಿಂದುತ್ವಕ್ಕೆ ಗಾಂಧೀಜಿಯವರ ವಿಚಾರಧಾರೆ ಹೇಗೆ ವಿರುದ್ಧವೆಂದೂ, ಭಿನ್ನವೆಂದೂ ಓದುಗರಿಗೆ ಸ್ಪಷ್ಟವಾಗುತ್ತಿತ್ತು. ಆದರೆ ಇಲ್ಲಿ ‘ಹಿಂದ್‌ ಸ್ವರಾಜ್‌’ ಅನ್ನು ಅರಗಿಸಿಕೊಂಡ ಲೇಖಕರ ಆಯ್ದ ಅಭಿಪ್ರಾಯಗಳ ಅಭಿವ್ಯಕ್ತಿ ರೂಪವಿದೆ. ಎರಡು ವಿಭಿನ್ನ ವಿಚಾರಧಾರೆಗಳಲ್ಲಿ ಯಾವುದು ಸರಿ, ಯಾವುದು ಮುಖ್ಯ ಎಂದು ಪ್ರಶ್ನಿಸಿಕೊಳ್ಳುವಾಗ ಎರಡು ವಿಚಾರಧಾರೆಗಳನ್ನು ಮುಖಾಮುಖಿಯಾಗಿಸುವ ಕ್ರಮ ಅಗತ್ಯವಾದುದು. ಹೀಗೆ ಮುಖಾಮುಖಿ ಆಗಿಸುವುದಕ್ಕೆ ಮೂಲ ಆಕರವಾಗಿ ಎರಡು ವಿಚಾರಧಾರೆಗಳ ಮುಖ್ಯಾಂಶಗಳನ್ನು ಸಾದರಪಡಿಸಿ ಕ್ರಮಬದ್ಧ ವಿಶ್ಲೇಷಣೆಯ ಮೂಲಕ ಲೇಖಕರು ತಮ್ಮ ಪ್ರತಿಪಾದನೆಯನ್ನು ಕಟ್ಟಿಕೊಟ್ಟಾಗ ಕೃತಿಗೊಂದು ಆಕೃತಿ ಲಭ್ಯವಾಗುತ್ತದೆ. ಆದರೆ ಅನಂತಮೂರ್ತಿಯವರು ಸಾವರ್ಕರ್‌ ಅವರ ವಿಚಾರಧಾರೆಯ ಸ್ವಲ್ಪ ವಿವರಗಳನ್ನು ಕೊಟ್ಟಷ್ಟೂ ‘ಹಿಂದ್‌ ಸ್ವರಾಜ್‌’ನ ವಿವರಗಳನ್ನು ಕೊಡುವುದಿಲ್ಲ. ವಿವರಗಳನ್ನು ಮೀರಿದ ವಿಶ್ಲೇಷಣಾ ವಿಧಾನದ ಹಾದಿಯಲ್ಲಿ ಇಡೀ ಪುಸ್ತಕ ಸಾಗುತ್ತದೆ. ಸಾವರ್ಕರ್‌ ಅವರ ವಿಚಾರಧಾರೆಯನ್ನು ಸ್ಪಷ್ಟರೂಪದಲ್ಲಿ ಹೇಳುತ್ತಲೇ ಅದು ಗೋಡ್ಸೆಯಲ್ಲಿ ‘ಕ್ರಿಯೆ’ಯಾಗಿ ಮೂಡಿದ ಅಪಾಯವನ್ನೂ ಈಗಿನ ಮೋದಿಯವರ ಅಜೆಂಡಾವನ್ನೂ ಅನಾವರಣಗೊಳಿಸುತ್ತದೆ. ಇದೆಲ್ಲ ಸರಿಯೇ. ಆದರೆ ‘ಹಿಂದ್‌ ಸ್ವರಾಜ್‌’ ಪುಸ್ತಕವು ಪರಿಶೀಲನೆಗೆ ಒಳಪಡದೆ ಗಾಂಧಿತತ್ವ ಪ್ರತಿಪಾದನೆಯ ತೀವ್ರತೆಯಲ್ಲಿ ಪವಿತ್ಮಾತ್ಮವಾಗಿಬಿಡುತ್ತದೆ! ‘ಹಿಂದ್‌ ಸ್ವರಾಜ್‌’ ಮತ್ತು ಗಾಂಧೀಜಿಯವರ ಪ್ರಾಮಾಣಿಕತೆ ಮತ್ತು ಮೌಲ್ಯ ನಿಷ್ಠೆ ಪ್ರಶ್ನಾತೀತವೆಂದು ನಂಬಿರುವ ನನಗೆ, ಇವತ್ತಿನ ಸವಾಲುಗಳಿಗೆ ಗಾಂಧಿ ವಿಚಾರಧಾರೆಯೊಂದೇ ಪರಿಹಾರವೂ ಪರ್ಯಾಯವೂ ಆಗಬಲ್ಲದೆ ಎಂಬ ಪ್ರಶ್ನೆಯನ್ನೂ ಎದುರಿಸಬೇಕು ಎನ್ನಿಸುತ್ತದೆ.

ಇವತ್ತು ಗಾಂಧೀಜಿ, ಅಂಬೇಡ್ಕರ್‌, ಲೋಹಿಯಾ, ಮಾರ್ಕ್‌್ಸ, ಮಾವೊ ಮುಂತಾದವರ ವಿಚಾರಧಾರೆಗಳು ಪರಸ್ಪರ ಸಂವಾದಿಸುತ್ತ ಸ್ನೇಹ ಸಿದ್ಧಾಂತದತ್ತ ಸಾಗಬೇಕಾದ ಅನಿವಾರ್ಯತೆಯಿದೆಯೆಂದೂ ಕೇವಲ ಒಬ್ಬರು ಅಥವಾ ಒಂದೇ ಒಂದು ವಿಚಾರಧಾರೆ ಇಡಿಯಾಗಿ ಪರ್ಯಾಯವಾಗುತ್ತದೆಯೆ? ಇದು ನನ್ನನ್ನು ಕಾಡುತ್ತಿರುವ ಪ್ರಶ್ನೆ.

ಅನಂತಮೂರ್ತಿಯವರು ‘ಇಪ್ಪತ್ತನೇ ಶತಮಾನದ ಇಬ್ಬರು ದೊಡ್ಡ ಕನಸುಗಾರರೆಂದರೆ ಗಾಂಧಿ ಮತ್ತು ಮಾರ್ಕ್‌್ಸ’ (ಪುಟ–79) ಎಂದು ಹೇಳುತ್ತಲೇ ಕಡೆಗೆ ಗಾಂಧಿಯಲ್ಲೇ ಪರಿಹಾರ ಕಾಣುತ್ತಾರೆ. ಅವರ ತಾತ್ವಿಕ ನಂಬಿಕೆಯನ್ನು ಗೌರವಿಸುತ್ತಲೇ ಗಾಂಧಿಯಷ್ಟೇ ಸಾಕೆ ಎಂದು ಹೇಳಬೇಕಾದ ಸನ್ನಿವೇಶವನ್ನು ನೆನಪಿಸಬೇಕಾಗುತ್ತದೆ. ‘ಡೆವಲಪ್‌ಮೆಂಟ್‌’ ಅನ್ನು ವಿರೋಧಿಸುವ ಅನಂತಮೂರ್ತಿಯವರು ಗಾಂಧಿ ಕಲ್ಪನೆಯ ಗ್ರಾಮೀಣ ಉತ್ಪಾದನಾ ವಿಧಾನದ ಪರವಾಗಿದ್ದಾರೆ ಎನ್ನಿಸಿದರೂ ಒಟ್ಟು ಪುಸ್ತಕವನ್ನು ಓದಿದಾಗ ಅವರದು ಪ್ರಧಾನವಾಗಿ ಪರಿಸರವಾದಿ ಪರಿಕಲ್ಪನೆ ಎಂದು ಮನವರಿಕೆಯಾಗುತ್ತದೆ. ಅವರು ಅಭಿವೃದ್ಧಿಯ ಅಪವ್ಯಾಖ್ಯಾನವನ್ನು ವಿರೋಧಿಸುವ ಪ್ರತಿತತ್ವವನ್ನು ಕಟ್ಟುವ ಬದಲು ಆಧುನಿಕವಾದ ಅಭಿವೃದ್ಧಿ ಮಾದರಿಗಳನ್ನೆಲ್ಲ ಅಲ್ಲಗಳೆಯುವ ಅನುಮಾನ ಮೂಡುತ್ತದೆ. ನಮಗೆ ಅಭಿವೃದ್ಧಿ (ಡೆವಲಪ್‌ಮೆಂಟ್‌) ಬೇಕು. ಆದರೆ ಅದು ಮನಮೋಹನ್‌ಸಿಂಗ್‌ ಬಿತ್ತಿ ಮೋದಿಯವರು ಬೆಳೆಯುತ್ತಿರುವ ಏಕಮುಖಿ ಅಭಿವೃದ್ಧಿ ಮಾದರಿಯಲ್ಲ ಮತ್ತು ಮುಕ್ತ ಆರ್ಥಿಕ ನೀತಿಯಲ್ಲ ಎಂದು ಸ್ಪಷ್ಟಪಡಿಸಬೇಕಾಗಿದೆ. ಈ ಸ್ಪಷ್ಟತೆಯತ್ತ ಲೇಖಕರು ಗಮನಹರಿಸಿಲ್ಲ. ಅಷ್ಟೇ ಅಲ್ಲ, ಹಳೆಯ ಉತ್ಪಾದನಾ ವಿಧಾನ ಮತ್ತು ಜೀವನ ವಿಧಾನವೇ ಅತ್ಯುತ್ತಮವೇನೊ ಎಂಬ ಅನುಮಾನ ಹುಟ್ಟಿಸುವುದರ ಜೊತೆಗೆ, ಅನಂತಮೂರ್ತಿಯವರಿಗೆ ಗಾಂಧಿವಾದ ಮತ್ತು ಪರಿಸರವಾದವೇ ಅಂತಿಮ ಪರ್ಯಾಯವೆಂಬಂತೆ ವೇದ್ಯವಾಗುತ್ತದೆ.

ಅನಂತಮೂರ್ತಿಯವರು ಮೋದಿಯವರ ಚಹರೆ ಕುರಿತು ಸರಿಯಾಗಿಯೇ ವಿಶ್ಲೇಷಿಸುತ್ತಾರೆ. ಸಮಕಾಲೀನ ಅಪಾಯದತ್ತ ಗಮನ ಸೆಳೆಯುತ್ತಾರೆ (ಪು–31). ಆದರೆ ‘ನೆಹರೂ ಹಿಂಬಾಲಕರು ಮಾಡಿದ್ದನ್ನೇ ಮೋದಿ ಹಿಂಬಾಲಕರೂ ಮಾಡಬಹುದು’ (ಪು–32) ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸುತ್ತಾರೆ. ಕೆಲ ಪ್ರಗತಿಪರರೂ ನೆಹರೂ ವಿರೋಧಿಗಳೆಂದು ನನಗೆ ತಿಳಿದಿದ್ದರೂ ನೆಹರೂ ಮತ್ತು ಮೋದಿಯನ್ನು ಅಥವಾ ಹಿಂಬಾಲಕರನ್ನು ಒಂದೇ ಮಾದರಿಯಡಿಯಲ್ಲಿ ನೋಡುವಾಗ –ನಾನದನ್ನು ಒಪ್ಪದಿದ್ದರೂ– ಒಪ್ಪುವವರಿಂದ ಹೆಚ್ಚಿನ ವಿವರಣೆ ಬೇಕೆಂದು ಬಯಸುತ್ತೇನೆ. ಯಾಕೆಂದರೆ ಇಂಥ ವಿಚಾರಗಳು ಸೂಕ್ತವಾಗಿ ಮನವರಿಕೆಯಾಗಬೇಕು. ಹೀಗೆ ಹೆಚ್ಚಿನ ವಿವರಣೆ ಮತ್ತು ಮನವರಿಕೆಯನ್ನು ಬಯಸುವ ಅಂಶಗಳು ಈ ಪುಸ್ತಕದಲ್ಲಿವೆ. ಉದಾಹರಣೆಗೆ, 1. ‘ನೋಡಿ, ಹೇಗೆ ಅಂಬೇಡ್ಕರ್‌ ವಾದಿಗಳ ಬಾಯಿಯನ್ನು ಮೋದಿ ಉತ್ತರಪ್ರದೇಶದಲ್ಲಿ ಮುಚ್ಚಿಸಿದ?’ (ಪುಟ–32) (ಹಾಗಾದರೆ ಉತ್ತರಪ್ರದೇಶದಲ್ಲಿ ಅಂಬೇಡ್ಕರ್‌ ವಾದಿಗಳು ಸಂಪೂರ್ಣ ಸುಮ್ಮನಿದ್ದರೆ? ಮೋದಿಗೆ ಶರಣಾದರೆ? ಇಲ್ಲ). 2. ‘ಸಾವರ್ಕರ್ ಕಲ್ಪನೆಯ ಇಂಡಿಯಾ ಇಂದಿರಾಗಾಂಧಿ ಮುಖೇನ ಬಲಿಷ್ಠವಾದಾಗಲೂ ನೀವೇಕೆ ಇಂದಿರಾಗಾಂಧಿಯನ್ನು ವಿರೋಧಿಸಬೇಕು?’ (ಪುಟ–66), ‘ಸಂಘ ಪರಿವಾರ ಮಾಡಲಾರದ್ದನ್ನು ಇಂದಿರಾಜಿ ಮಾಡಿದರು? (ಪುಟ–75). (ಅನಂತಮೂರ್ತಿಯವರ ಈ ಮಾತುಗಳು ಅರೆ ತಿಳಿವಳಿಕೆ ಅಥವಾ ತಪ್ಪು ತಿಳಿವಳಿಕೆಯ ಫಲ. ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ ಹೇರಿಕೆಯನ್ನು ಕಟುವಾಗಿ ವಿರೋಧಿಸೋಣ. ಅವರ ರಾಷ್ಟ್ರೀಕರಣದಂತಹ ನೀತಿಗಳನ್ನು ಮೆಚ್ಚೋಣ. ಈಗ ಇಂದಿರಾಗಾಂಧಿ ಮತ್ತು ಮೋದಿಯವರಲ್ಲಿ ಸಮಾನ ಅಂಶಗಳ ಹೋಲಿಕೆ ಮಾಡುತ್ತಿರುವುದೂ ಅರೆಗ್ರಹಿಕೆಯಾಗಿದೆ). 3. ‘ಮೋದಿಯವರು ಅಧಿಕಾರಕ್ಕೆ ಬಂದ ನಂತರ ಎಲ್ಲ ಎಡಪಂಥೀಯ ವಿಚಾರಗಳೂ ಮಣ್ಣು ಮುಕ್ಕಿದಂತೆ ಕಾಣುತ್ತದೆ. ಇದಕ್ಕೆ ಒಂದು ಕಾರಣ ಎಡಪಂಥೀಯತೆ ಕ್ರಮೇಣ ಬಾಯಿಮಾತಿನ ದೌರ್ಬಲ್ಯವಾಗಿ ಬೆಳೆಯುತ್ತ ಹೋದದ್ದು; ಸೆಕ್ಯುಲರಿಸಂ ಎನ್ನುವ ಶಬ್ದವಂತೂ ಅನುಕೂಲಕ್ಕಾಗಿ ಉಪಯೋಗಿಸುವ ಶಬ್ದವಾಗುತ್ತಾ ಹೋಯಿತು’ (ಪು–68). (ಎಡಪಕ್ಷಗಳಿಗೆ ಹಿನ್ನಡೆ ಆಗಿರುವುದು ನಿಜ. ಆದರೆ ಎಡಪಂಥೀಯತೆಯು ಮಣ್ಣುಮುಕ್ಕಿಲ್ಲ. ಸೆಕ್ಯುಲರಿಸಂ ಬಗೆಗಿನ/ಕಾಮೆಂಟ್‌, ಪ್ರತಿಗಾಮಿಗಳು ಮಾಡುವ ಟೀಕೆಯನ್ನು ಹೋಲುತ್ತದೆ).

ಈ ಪುಸ್ತಕದ ವಿಚಾರಗಳು ಓದುಗರಿಗೆ ಸಂವಹನೆಗೊಳ್ಳಬೇಕೆಂಬುದು ಲೇಖಕರ ಅಪೇಕ್ಷೆ. ಇದು ಸರಿಯಾದದ್ದೇ. ಆದರೆ ಕನ್ನಡ ಓದುಗರಿಗೆ ಅನಂತಮೂರ್ತಿಯವರು ತಮ್ಮ ವಿಶ್ಲೇಷಣೆಯಲ್ಲಿ ಉದಾಹರಿಸುವ ಬಹುಪಾಲು ಹೆಸರುಗಳು ಕನ್ನಡಕ್ಕೆ ಸಂಬಂಧಿಸಿಲ್ಲ. ಯೂಂಗ್‌, ಕಾನ್ರಾಡ್‌, ನೆಪೋಲಿಯನ್‌, ದಾಸ್ತೋವ್‌ಸ್ಕಿ, ಆಡೆನ್‌, ಯೇಟ್‌್ಸ, ರಾಸ್‌ಕಾಲ್ನಿಕೋಡ್‌, ಹೀಗೆ ಉದಾಹರಿಸಬಹುದು. ಜೊತೆಗೆ ತಾವೇ ಅನುವಾದಿಸಿದ ಅನ್ಯಭಾಷೆ ಕವಿತೆಗಳ ಉಲ್ಲೇಖ. ಕನ್ನಡದ್ದೆಂದರೆ ದೇವರದಾಸಿಮಯ್ಯ, ಬಸವಣ್ಣ, ವಿ.ಸೀ.ಯವರ ಒಂದೊಂದು ಉಲ್ಲೇಖ; ಅಡಿಗರ ಪದ್ಯಗಳ ಅನೇಕ ಪ್ರಸ್ತಾಪ! ಅನ್ಯಭಾಷಾ ಲೇಖಕರನ್ನು ಉಲ್ಲೇಖಿಸಬಾರದೆಂದಲ್ಲ. ಆದರೆ ನಮ್ಮ ಓದುಗರಿಗೆ ಸಮೀಪವಾದ ಸಾಹಿತ್ಯದ ಉಲ್ಲೇಖಗಳು ಸಂವಹನೆಯ ಸಂಬಂಧಕ್ಕೆ ಹೆಚ್ಚು ಪೂರಕ. ಕೆಡುಕುಗಳನ್ನು ಕುರಿತು ವಿವರಿಸುವಾಗಲೂ ಇವರು ಉಲ್ಲೇಖಿಸುವುದು ವಿದೇಶಿ ಭಾಷೆಯೆ ‘ಈವಿಲ್‌’ ಪ್ರಸಂಗ; ನಮ್ಮದನ್ನಲ್ಲ. ಸಂವಹನೆ ಎನ್ನುವುದು ಭಾಷೆಯ ಸರಳತೆ ಮಾತ್ರವಲ್ಲ. ಸಾಮಾಜಿಕ–ಸಾಂಸ್ಕೃತಿಕ ಸಾಮೀಪ್ಯವೂ ಹೌದು. ಈ ಪುಸ್ತಕದ ಒಟ್ಟು ಸ್ವರೂಪದ ಬಗ್ಗೆ ಹೇಳಬೇಕೆಂದರೆ ಸಾವರ್ಕರ್‌ ಮತ್ತು ಗಾಂಧೀಜಿಯಷ್ಟೇ ಇತರರ ವಿಚಾರಗಳೂ ಸಾಕಷ್ಟು ತುಂಬಿಕೊಂಡಿವೆ. ತೌಲನಿಕ ವಿಶ್ಲೇಷಣೆಯ ದೃಷ್ಟಿಯಿಂದ ಇದು ಸರಿಯಿರಬಹುದು. ಆದರೆ ಅದಕ್ಕೂ ಒಂದು ಕ್ರಮಬದ್ಧತೆಯಿರಬೇಕು. ಬಿಡಿ ಬಿಡಿ ಒಳನೋಟಗಳುಳ್ಳ ಭಾಗಗಳನ್ನು ಒಟ್ಟಿಗೆ ದಟ್ಟಯಿಸಿ ಕಟ್ಟು ಕಟ್ಟಿಕೊಟ್ಟ ಕೃತಿಯಿದು. ಅಂದರೆ ವೈಚಾರಿಕ ವಿಸ್ತರಣೆಯ ಕ್ರಮಬದ್ಧತೆಗೆ ಬದ್ಧವಾಗದ ಕೃತಿ. ಗಾಂಧಿ ಬಗ್ಗೆ ಮಾತಾಡುತ್ತಲೇ ಇದ್ದಕ್ಕಿದ್ದಂತೆ ನೆಹರೂ, ಲೋಹಿಯಾ, ಪಟೇಲ್‌, ದಾಸ್ತೊವಸ್ಕಿ, ಸಾವರ್ಕರ್‌, ಮೋದಿ ವಿಚಾರಗಳಿಗೆ ಒಟ್ಟಿಗೇ ಜಿಗಿಯುವ ಸಂಬಂಧರಹಿತ ರೀತಿಯನ್ನು ಇಲ್ಲಿ ಕಾಣಬಹುದು.

ಒಂದಕ್ಕೊಂದು ಸಂಬಂಧ ಕಲ್ಪಿಸುತ್ತ ವಿವಿಧ ವ್ಯಕ್ತಿಗಳ ವಿಚಾರವನ್ನು ಬೆಳೆಸುವುದು ಬೇರೆ, ನೆನಪು ಬಂದಂತೆ ನಮೂದಿಸುವುದು ಬೇರೆ. ಇಲ್ಲಿ ಕಾಣುವುದು ನೆನಪಿನ ನಿರೂಪಣೆ; ಪುನರುಕ್ತ ನೋಟಗಳ ನಿರೂಪಣೆ. ಬಿಡಿಬಿಡಿಯಾದ ಮೌಲಿಕ ನೋಟಗಳನ್ನು ಒಳಗೊಂಡಿದ್ದರೂ ಇದೊಂದು ಲಹರಿ ಮಾದರಿಯ ಬೌದ್ಧಿಕ ಬರವಣಿಗೆ. ಇಲ್ಲಿ ಎಂದಿನಂತೆ ಅನಂತಮೂರ್ತಿಯವರು ಗಂಭೀರ ಚರ್ಚೆಗೆ ಆಹಾರ ಮತ್ತು ಆಕರ– ಎರಡನ್ನೂ ಒದಗಿಸಿದ್ದಾರೆ ಎಂದು ಮೆಚ್ಚುತ್ತಲೇ ನಿಖರ ವೈಚಾರಿಕ ಆಕೃತಿಯ ಅಭಾವವನ್ನು ಕಾಣಬಹುದು.

ಹಿಂದುತ್ವ ಅಥವಾ ಹಿಂದ್ ಸ್ವರಾಜ್?
ಲೇ: ಯು.ಆರ್‌. ಅನಂತಮೂರ್ತಿ
ಪು: 88; ಬೆ: ರು. 100
ಪ್ರ: ಅಭಿನವ, ವಿಜಯನಗರ, ಬೆಂಗಳೂರು–10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT