ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಂಡ್ರಿಗೆ ಬಂತು ರೋಬೊ ದೋಬಿ!

Last Updated 24 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ವಿಜ್ಞಾನಿಗಳ ಸಂಶೋಧನೆಯಿಂದಾಗಿ ಇದೀಗ ಲಾಂಡ್ರಿಗೂ (ಬಟ್ಟೆ ತೊಳೆಯಲು) ಒಂದು ರೋಬೊ ಅವತರಿಸಿದೆ. ಇದು ಥೇಟ್‌ ಮನುಷ್ಯರಂತೆಯೇ ಬಟ್ಟೆಗಳನ್ನೆಲ್ಲ ಅಚ್ಚುಕಟ್ಟಾಗಿ ತೊಳೆಯುತ್ತದೆ!

ಮನೆಗೊಂದು ‘ರೋಬೊ ದೋಬಿ’ ಬಂದರೆ ಮಹಿಳೆಯರು (ಕೆಲವು ಮನೆಯಲ್ಲಿ ಗಂಡಂದಿರೂ) ಬಟ್ಟೆ ತೊಳೆಯುವ ಗೋಜಿನಿಂದ ಪಾರಾಗಬಹುದು.

ಹಲವು ವರ್ಷಗಳ ಹಿಂದೆಯೇ ಪಾತ್ರೆ ತೊಳೆಯುವ, ಅಡುಗೆಗೆ ಸಹಕಾರಿಯಾಗುವ ರೋಬೊಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ತಂತ್ರಜ್ಞರು, ಬಟ್ಟೆ ತೊಳೆಯುವ ರೋಬೊ (ಯಂತ್ರಮಾನವನನ್ನು)  ಅಭಿವೃದ್ಧಿಪಡಿಸಿದ್ದಾರೆ.

ಭಾರತ ಮೂಲದ ತಂತ್ರಜ್ಞರೂ ಇರುವ ತಂಡವೊಂದು ಬಟ್ಟೆ ತೊಳೆಯುವ ಯಂತ್ರಮಾನವನನ್ನು ಬಹಳ ಹಿಂದೆಯೇ ಅಭಿವೃದ್ಧಿಪಡಿಸಲು ಯತ್ನಿಸಿತ್ತು. ಆದರೆ, ಬಟ್ಟೆಯನ್ನು ಯಾವ ರೀತಿಯಲ್ಲಿ ಸ್ವಚ್ಚಗೊಳಿಸುತ್ತಾ ಹೋಗಬೇಕು ಎಂಬ ಬಗ್ಗೆ ಆ ಯಂತ್ರಕ್ಕೆ ನಿರ್ದಿಷ್ಟವಾದ ಮಾಹಿತಿ ಇರಲಿಲ್ಲ. ಹಾಗಾಗಿ ಮೊದಲ ಈ ಯತ್ನ ವಿಫಲವಾಗಿತ್ತು. ಆದರೂ ಇದರಿಂದ ವಿಚಲಿರಾಗದ ತಂತ್ರಜ್ಞರು, ಹೇಗಾದರೂ ಮಾಡಿ ಈ ರೋಬೊ, ಬಟ್ಟೆ ತೊಳೆಯುವುದಕ್ಕೆ ಉಪಯೋಗ ಆಗುವಂತೆ ಮಾಡಬೇಕು ಎಂದು ಹಟಕ್ಕೆ ಬಿದ್ದರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ನೆರವನ್ನು ಕೋರಿದರು.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿರುವ ಭಾರತ ಮೂಲದ ತಂತ್ರಜ್ಞರಾದ ಸಿದ್ದಾರ್ಥ ಶ್ರೀವಾಸ್ತವ, ಅಭಿಷೇಕ್ ಗುಪ್ತ ಹಾಗೂ ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದ ತಂತ್ರಜ್ಞರ ನೆರವಿನೊಂದಿಗೆ ಹೊಸದಾಗಿ ಪ್ರಯೋಗಕ್ಕೆ ಇಳಿದರು.

ಮನುಷ್ಯರಾದರೋ ಮಲಿನ ಬಟ್ಟೆಗಳನ್ನು ಸಾಬೂನು ಬಳಸಿ, ಬ್ರಷ್‌ನಿಂದ ಉಜ್ಜಿ, ಸಾಕಷ್ಟು ಬಾರಿ ಕಲ್ಲಿನ ಮೇಲೆ ಕುಕ್ಕಿ, ಮೇಲೆತ್ತಿ ಒಗೆಯುತ್ತಾರೆ. ಯಥಾವತ್‌ ಇದೇ ಬಗೆಯಲ್ಲಿ ಅಲ್ಲವಾದರೂ ಯಂತ್ರಮಾನವನೂ ಸ್ವಚ್ಚವಾಗಿ ಬಟ್ಟೆ ತೊಳೆಯಬೇಕು. ಅದಕ್ಕೆ ತಕ್ಕ ರೀತಿಯ, ಆದರೆ, ಯಂತ್ರವೊಂದು ಹೊಂದಿಕೊಳ್ಳ ರೀತಿಯಲ್ಲಿ ಬಟ್ಟೆ ಒಗೆಯಲು ಅವಕಾಶವಾಗವಂತೆ ಕೃತಕ ಬುದ್ಧಿಮತ್ತೆಯ ಸಾಧನವನ್ನು ಅಭಿವೃದ್ಧಿಪಡಿಸಿದರು. ಈ ಬಗೆಯಲ್ಲಿ ರೋಬೊದ ಪ್ರೊಗ್ರಾಮಿಂಗ್ ಅಭಿವೃದ್ಧಿಪಡಿಸುವುದು ತಂತ್ರಜ್ಞರ ತಂಡಕ್ಕೆ ಸವಾಲಿನ ಕೆಲಸವಾಗಿತ್ತಾದರೂ, ಕಡೆಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಎಷ್ಟು ಬಟ್ಟೆಗಳು ಇವೆ, ಎಷ್ಟನ್ನು ತೆಗೆದುಕೊಳ್ಳಲಾಗಿದೆ, ಎಷ್ಟು ಬಾಕಿ ಇವೆ ಎಂಬ ಬಗ್ಗೆ ರೋಬೊ ಲೆಕ್ಕಾಚಾರ ಮಾಡಿಕೊಳ್ಳುವಂತೆ ಅದರ ಸ್ಕ್ಯಾನಿಂಗ್‌ ಸಾಧನವನ್ನು ಅಭಿವೃದ್ಧಿಪಡಿಸಬೇಕಿತ್ತು. ಜನರೇನೋ ಈಗ ಈ ಯಂತ್ರವನ್ನು ಬಹಳ ಸುಲಭವಾಗಿ ಬಳಸಬಹುದು. ಆದರೆ, ತಂತ್ರಜ್ಞರು ಈ ವಿಧಾನವನ್ನು ಅಭಿವೃದ್ಧಿಪಡಿಸಲು ಹತ್ತು ವರ್ಷಗಳಷ್ಟು ದೀರ್ಘಕಾಲ ಶ್ರಮಪಟ್ಟಿದ್ದಾರೆ.

ಬಟ್ಟೆ ಒಗೆಯುವುದು, ಊಟದ ಟೇಬಲ್ ಮೇಲಿನ ವಸ್ತುಗಳನ್ನು ತೆಗೆದು ಪಕ್ಕಕ್ಕಿಡುವುದೂ ಸೇರಿದಂತೆ ದಿನನಿತ್ಯದ ಕೆಲಸಗಳನ್ನು ಈ ರೋಬೊ ಮಾಡುತ್ತದೆ.

ಆದರೆ, ಈ ಯಂತ್ರಮಾನವನನ್ನು ಅಭಿವೃದ್ಧಿಪಡಿಸಲು ಅಗತ್ಯವಾದ ಸಲಕರಣೆಗಳು ಇಲ್ಲದ ಕಾರಣ ತಂತ್ರಜ್ಞರ ತಂಡ ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಹಾಗಾಗಿ, ಹೊಸ ವಿನ್ಯಾಸದ ಮೊರೆ ಹೋದರು.

ಮನುಷ್ಯ ತನಗೆ ಅರಿವಿಲ್ಲದೆ ಮಾಡುವ ದಿನನಿತ್ಯದ ಕ್ರಿಯೆಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ಯಂತ್ರಮಾನವನನ್ನು ಅಭಿವೃದ್ಧಿಪಡಿಸಲಾಗಿದೆ. ಮನುಷ್ಯರಂತೆಯೇ ಮಲಿನ ಬಟ್ಟೆಗಳನ್ನು ಯಂತ್ರದಲ್ಲಿನ ಒಗೆಯುವ ಕೋಶದೊಳಕ್ಕೆ ತುಂಬುವುದು,  ಸ್ವಚ್ಚಗೊಂಡ ನಂತರ ಹೊರಕ್ಕೆ ತೆಗೆದಿರಿಸುವುದು ಮೊದಲಾದ ಕಾರ್ಯಗಳನ್ನು ಮಾಡುವುದರಲ್ಲಿ ರೋಬೊ ತೊಡಗಿತು.

ಮಾನವನ ಚಟುವಟಿಕೆಗಳನ್ನೇ ಅನುಕರಿಸಿಯೇ ಈ ರೋಬೊ ದೋಬಿಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ, ಬಟ್ಟೆ ಒಗೆಯುವ ಶ್ರಮದಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸಗಳು ಕಡಿಮೆಯಾದವು. ಕೃತಕ ಬುದ್ಧಿಮತ್ತೆ ಮೂಲಕ ಕಾರ್ಯನಿರ್ವಹಿಸುವಂತೆ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಲ್ಲಿ ಈ ರೋಬೊ ದೋಬಿ ಯಶಸ್ವಿಯಾಗಿದೆ ಎನ್ನುತ್ತಾರೆ ಸಂಶೋಧನಾ ಕಾರ್ಯದಲ್ಲಿ ತೊಡಗಿದ್ದ ತಂತ್ರಜ್ಞ ಶ್ರೀವಾಸ್ತವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT