ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾವಣಿ ಹರಿಸಿದ ಗೀಯ, ಗೀಯ...

ಧಾರವಾಡ ಸಾಹಿತ್ಯ ಸಂಭ್ರಮ 2016
Last Updated 23 ಜನವರಿ 2016, 20:21 IST
ಅಕ್ಷರ ಗಾತ್ರ

ಹೆಣ್‌ಸರಜಾತ ಪದ್ಮಿನಿ
ಸುರತ ಚಂದ್ರಣಿ ಒಂಟಿ ನಾಗಿಣಿ
ನೋಡೆ ತಿರುಗಿ
ಮರಿಗುದಿರಿ ಕುಣಿಸಿದಾಂಗ
ನಾಜೂಕು ನಿನ್ನ ನಡಿಗಿ
ಆದಿವಿಷ್ಣು ಅರ್ಧಾಂಗಿ ತೆಗಿ, ಅಲ್ಲ
ಈಕೆಯೇ ಸರಿ
ಈಕೆಯ ನಡ ನೋಡಿ ಸಿಂಹ ನಾಚಿ
ತಿರಗೀತ ಮಾರಿ
ಗೀಯ ಗೀಯ... ಗಾಗಿಯ ಗೀಯ...
ಹಲಸಂಗಿ ಖಾಜಾಸಾಬ ಅವರ ಶೃಂಗಾರ ಕಾವ್ಯವು ಸಾಹಿತ್ಯ ಗೋಷ್ಠಿಯ ಮಧ್ಯಾಹ್ನದ ಪುಷ್ಕಳ ಭೋಜನದ ನಂತರ ಲಘು ನಿದ್ರೆಯನ್ನು ಕದ್ದಿತು.

ಎರಡನೇ ದಿನದ ಮಧ್ಯಾಹ್ನ ಭೋಜನದ ನಂತರ ಆರಂಭವಾದ ಗೋಷ್ಠಿ ‘ಲಾವಣಿಯ ಲಾವಣ್ಯ’ದ ನಿರ್ದೇಶಕ ಅನಿಲ ದೇಸಾಯಿ ಅವರು ಎರಡು ಲಾವಣಿಯ ತಂಡಗಳನ್ನು ಬಳಸಿಕೊಂಡು ಲಾವಣಿಯ ವಿವಿಧ ವೈವಿಧ್ಯವನ್ನು ತಮ್ಮದೇ ರೀತಿಯಲ್ಲಿ ನಿರೂಪಿಸಿದರು.

ದೇಸಾಯಿ ಅವರ ನಿರ್ದೇಶನದಂತೆ ಬಸವರಾಜ ನೀಲಪ್ಪ ಹಡಗಲಿ ತಂಡ ಹಾಗೂ ಯಲ್ಲವ್ವ ಬಸಪ್ಪ ಮಾದರ  ತಂಡ ಬಗೆಬಗೆಯ ಲಾವಣಿ ಹಾಡಿ ಸಾಹಿತ್ಯಾಭಿಮಾನಿಗಳಿಗೆ ರಸದೌತಣ ಬಡಿಸಿತು.

ಲಾವಣಿ ಕುರಿತ ಗೋಷ್ಠಿಯಲ್ಲೂ ಕಲಬುರ್ಗಿವರ ನೆನಪು ಮತ್ತೆ ಕಾಡಿತು.

ಲಾವಣಿ ಪದಕ್ಕೆ ಮರಾಠಿ ಹಾಗೂ ಸಂಸ್ಕೃತ ಪದಗಳ ಅರ್ಥವನ್ನು ನೀಡುವುದರ ಜತೆಗೆ, ಕನ್ನಡದಲ್ಲಿ ಮೊದಲ ಬಾರಿಗೆ ಲಾವಣಿ ಕುರಿತು ಕೆಲಸ ಮಾಡಿದ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಅನಿಲ ದೇಸಾಯಿ ನೆನಪಿಸಿಕೊಂಡರು.

1972ರಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ. ಕಲಬುರ್ಗಿಯವರು ಮೊಟ್ಟ ಮೊದಲ ಬಾರಿಗೆ ಸಿಂಪಿ ಲಿಂಗಣ್ಣ ಅವರನ್ನು ಕರೆಸಿ ಲಾವಣಿ ಕುರಿತು ಸುದೀರ್ಘವಾದ ಭಾಷಣ ಮಾಡಿ ಪುಸ್ತಕವನ್ನು ಹೊರ ತಂದಿದ್ದನ್ನು ಸಭೆಗೆ ನೆನಪಿಸಿದರು. ಕನ್ನಡದಲ್ಲಿ ಗುಣಚಂದನ ಛಂದಸಾರದಲ್ಲಿ ಲಾವಣಿ ಕುರಿತು ವಿವರ ಇಂದಿಗೂ ಬದಲಾಗಿಲ್ಲ. ಅದರ ರೂಪ ಹಾಗೂ ವ್ಯಾಕರಣ ಹಾಗೇ ಇದೆ ಎಂದು ಹೇಳಿ, ಅದರ ಕುರಿತಾದ ವಿವರಣೆಯನ್ನು ಲಾವಣಿ ಶೈಲಿಯಲ್ಲಿಯೇ ಪ್ರಸ್ತುತಪಡಿಸಿದರು.

ಲಘುಗಳ ಮಿಳಿತವ ಮಾಡಿ
ಕೊನೆಯಲ್ಲಿ ಗುರುಗಳ ಹೂಡಿ
ಅರ್ಥದ ಸಾರವ ನೋಡಿ
ಪ್ರಾಸವ ಕೊನೆಯ ಕೂಡಿ
ಪಾದಮಿತಿಯನು ಬಿಸಾಡಿ
ಲಾವಣ ಕೃತಿಗಳ ಪಾಡಿ
ಎಂದು ಹೇಳುತ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆ ಸದ್ದು ಮೊಳಗಿತು.

ಶ್ರವಣ ಪರಂಪರೆಯಲ್ಲೇ ಬಂದಿರುವ ಲಾವಣಿಯಲ್ಲಿನ ಕಥಾ ಲಾವಣಿ ಎಂಬ ಪ್ರಕಾರವನ್ನು ವಿವರಿಸಿದ ದೇಸಾಯಿ, ರಾಮಾಯಣ ಹಾಗೂ ಮಹಾಭಾರತದ ಕಥೆಗಳನ್ನು ಲಾವಣಿ ಮೂಲಕ ವಿವರಿಸುವುದನ್ನು ಮಂಡಿಸಿದರು. ಇದಕ್ಕೆ ಪೂರಕವಾಗಿ ಬಸವರಾಜ ಹಡಗಲಿ ಅವರು ಅಭಿಮನ್ಯುವಿನ ಕಥಾ ಪ್ರಸಂಗವನ್ನು ವಿವರಿಸಿದರು.

ಇದಾದ ನಂತರ ಯಲ್ಲವ್ವ ಮಾದರ ಪ್ರಸ್ತುತಪಡಿಸಿದ ವೀರ ಲಾವಣಿಯಲ್ಲಿ ಕಿತ್ತೂರ ಚೆನ್ನಮ್ಮ ಪರವಾಗಿ ಬ್ರಿಟಿಷರಿಗೆ ಎಚ್ಚರಿಕೆ ನೀಡುವ ಲಾವಣಿ ಸಭಿಕರಿಂದ ಭಾರೀ ಚಪ್ಪಾಳೆ ಗಿಟ್ಟಿಸಿತು. ನಂತರ ಪ್ರಸ್ತುತ ಪಡಿಸಲಾದ ಶಾಸ್ತ್ರ ಅಥವಾ ನೀತಿ ಲಾವಣಿಯಲ್ಲಿ ಜಗತ್ತಿನ ಹುಟ್ಟು, ಮನುಷ್ಯನ ಹುಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿತು.

‘ತೊಗಲು ಸಂಗ’ ಎಂಬ ಬಸವ ರಾಜರ ಲಾವಣಿಯು ತೊಗಲಿಗೆ ಸಿಂಗಾರ ಮಾಡಿದರೆ ಏನು ಬಂತು ಎಂದು ಲೇವಡಿ ರೂಪದಲ್ಲಿ ರಸಗವಳ ಬಡಿಸಿದರು.

ಅಂತಿಮವಾಗಿ ಹರ್ದೇಶಿ ಮತ್ತು ನಾಗೇಶಿ ನಡುವಿನ ಸವಾಲ್‌ ಜವಾಬ್‌ಗೆ ಸಮಯಾವಕಾಶ ಕಡಿಮೆ ಇದ್ದರೂ ತಕ್ಕಮಟ್ಟಿನ ರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಹೆಣ್ಣು ಮೇಲೋ ಅಥವಾ ಗಂಡು ಮೇಲೋ ಎಂಬ ಸವಾಲ್ ಜವಾಬ್‌ಗೆ ಹರ್ದೇಶಿ ಪರವಾಗಿ ಯಲ್ಲವ್ವ ಲಾವಣಿಯಲ್ಲಿ ವಾದ ಮಂಡಿಸಿದರೆ, ಅದಕ್ಕೆ ಉತ್ತರ ರೂಪದಲ್ಲಿ ಬಸವರಾಜ್‌ ಪುರುಷರ ಪರವಾಗಿ ಉತ್ತರ ನೀಡಿದರು. ಅಂತಿಮವಾಗಿ ಎರಡೂ ಕಡೆಯವರು ಒಂದಾಗಿ ಗಂಡಿಲ್ಲದೆ, ಹೆಣ್ಣಿಲ್ಲ; ಹೆಣ್ಣಿಲ್ಲದೆ ಗಂಡಿಲ್ಲ ಎಂಬುದರ ಮೂಲಕ ‘ವಾಗ್ವಾದ’ಕ್ಕೆ ತೆರೆ ಎಳೆದರು.

ಆಕಾಶವಾಣಿಯಲ್ಲಿ ನಾಟಕ ಹಾಗೂ ಜಾನಪದ ಕಾರ್ಯಕ್ರಮಗಳನ್ನು ನಿರ್ದೇಶಿಸಿದ ಅನುಭವವಿರುವ ಅನಿಲ ದೇಸಾಯಿ,  ಲಾವಣಿಯ ಲಾವಣ್ಯವನ್ನೂ ಅಷ್ಟೇ ಸೊಗಸಾಗಿ ನಿರೂಪಿಸಿದ್ದು ಸಂಭ್ರಮದ ಎರಡನೇ ದಿನಕ್ಕೆ ಹೊಸ ಮೆರುಗು ನೀಡಿತು. ಸಭಿಕರೂ ಅಷ್ಟೇ ಉತ್ಸಾಹದಿಂದ ಕಲಾತಂಡಗಳಿಗೆ ಹಣ ನೀಡಿ ಪ್ರೋತ್ಸಾಹಿಸಿದರು.

ಮುಖ್ಯಾಂಶಗಳು
* ಕಳೆದ ಬಾರಿ ಮಂಟೆಸ್ವಾಮಿ ಈ ಬಾರಿ ಲಾವಣಿಯ ಲಾವಣ್ಯ

* ಎರಡು ಕಲಾ ತಂಡಗಳಿಂದ ಲಾವಣಿ ವೈವಿಧ್ಯ
* ಕಲೆ ಮರುಕಳಿಸಿದ್ದರಿಂದ ಉತ್ಸಾಹದ ಹೊನಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT