ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾವೋಸ್: ಜೀವಂತ ಬಾಂಬ್‌ಗಳ ನಾಡು!

ನಾಲ್ಕು ದಶಕಗಳ ಹಿಂದೆ ವಿಯೆಟ್ನಾಂ ವಿರುದ್ಧ ನಡೆದ ಯುದ್ಧದ ಸಂದರ್ಭದಲ್ಲಿ ಅಮೆರಿಕ ಹಾಕಿದ ಲಕ್ಷಾಂತರ ಬಾಂಬ್‌ಗಳನ್ನು ಇನ್ನೂ ತನ್ನ ಒಡಲಲ್ಲಿ ಇಟ್ಟು­ಕೊಂಡು ದಿನನಿತ್ಯ ಆತಂಕದಲ್ಲಿ ಬದುಕುತ್ತಿರುವ ಪುಟ್ಟ ರಾಷ್ಟ್ರ  ಲಾವೋಸ್‌.

ಅಮೆರಿಕ ಅಂದು ಹಾಕಿದ ಲಕ್ಷಾಂತರ ಜೀವಂತ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳು ಇಂದಿಗೂ ಈ ಪುಟ್ಟ ರಾಷ್ಟ್ರದ ಎಲ್ಲೆಂದರಲ್ಲಿ ಸ್ಫೋಟಿಸುತ್ತಲೇ ಇವೆ. ವಿಯೆಟ್ನಾಂ, ಥಾಯ್ಲೆಂಡ್‌, ಚೀನಾ ಹಾಗೂ ಕಾಂಬೋಡಿಯ ನಡುವೆ ಸಿಲುಕಿರುವ ಲಾವೋಸ್‌ ಮೇಲೆ 1964ರಿಂದ 1973ರ ಅವಧಿಯಲ್ಲಿ ಅಮೆರಿಕ ಅಕ್ಷರಶಃ ಬಾಂಬ್‌ಗಳ ಮಳೆಗರೆದಿತ್ತು. ಒಂದು ಅಂದಾಜಿನ ಪ್ರಕಾರ, ಒಟ್ಟು 5.80 ಲಕ್ಷ   ಬಾರಿ ಬಾಂಬ್‌ ದಾಳಿ ನಡೆಸಲಾಗಿದ್ದು, ಆ ಪೈಕಿ ಸಿಡಿಯದೇ ಉಳಿದ ಬಾಂಬ್‌ಗಳ ಸಂಖ್ಯೆಯೇ  ಹೆಚ್ಚು. 

ಲಾವೋಸ್‌ನಲ್ಲಿ ಮರಳು ಮಿಶ್ರಿತ ಮೆತ್ತನೆಯ ಮಣ್ಣು  ಹೆಚ್ಚಾಗಿರುವ ಕಾರಣ ಶೇ 30ರಷ್ಟು ಬಾಂಬ್‌ಗಳು  ಸ್ಫೋಟಗೊಳ್ಳದೇ ಅದರಲ್ಲಿ ಹುದುಗಿಕೊಂಡಿವೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಈ ರಾಷ್ಟ್ರವನ್ನು ‘ಜೀವಂತ ಬಾಂಬ್‌ಗಳ ನಾಡು’ ಎಂದು ಕರೆಯಲಾಗುತ್ತದೆ.  ಇಷ್ಟೊಂದು ಬಾರಿ ಬಾಂಬ್ ದಾಳಿಗೆ ತುತ್ತಾದ ರಾಷ್ಟ್ರ ಮತ್ತೊಂದಿಲ್ಲ.

ವಿಯೆಟ್ನಾಂ ಮೇಲಿನ ಅಮೆರಿಕ ದಾಳಿ ಕೊನೆಗೊಂಡಾಗ ಎಂಟು ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾದರು. ಲಿಮೋಸ್‌ ಒಂದರಲ್ಲಿಯೇ 12 ಸಾವಿರಕ್ಕೂ ಹೆಚ್ಚು ಜನರು ಊನರಾದರು. ಆದರೆ ಯುದ್ಧ ಮುಗಿದ ನಂತರವೂ ಸಿಡಿಯದೇ ಉಳಿದ ಬಾಂಬ್‌ಗಳು ಲಾವೋಸ್‌ ಜನರಿಗೆ ಪ್ರಾಣ ಕಂಟಕವಾಗಿ ಪರಿಣಮಿಸುತ್ತಲೇ ಇವೆ.  ಈವರೆಗೆ ಎಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು, ಯುವಕರು ಶಾಶ್ವತವಾಗಿ  ಕೈ, ಕಾಲು ಕಳೆದುಕೊಂಡಿದ್ದಾರೆ.

ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತಿರುವ ಇಂತಹ ಜೀವಂತ ಬಾಂಬ್‌ಗಳಿಂದ ತಾಯ್ನಾಡಿಗೆ ಮುಕ್ತಿ ನೀಡಲು ಇದೀಗ ಚನ್ನಪ್ಫಾ ಖಾಮ್ವೊಂಗ್ಸಾ ಎಂಬ ಧೀರ ಮಹಿಳೆ ದಿಟ್ಟ ಹೋರಾಟ ನಡೆಸಿದ್ದಾಳೆ. 

ಎಲ್ಲೆಂದರಲ್ಲಿ ಹುದುಗಿಕೊಂಡಿರುವ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲು 42 ವರ್ಷದ ಲಾವೋ–ಅಮೆರಿಕನ್‌ ಮಹಿಳೆ ಚನ್ನಪ್ಫಾ ಆರಂಭಿಸಿದ ಏಕಾಂಗಿ ಹೋರಾಟಕ್ಕೆ ಲಾವೋಸ್‌ ಮತ್ತು ಅಮೆರಿಕದ ಜನ ಸಹ ಕೈಜೋಡಿಸಿ ದ್ದಾರೆ. ಸರ್ಕಾರಗಳು ಎಚ್ಚೆತ್ತುಕೊಂಡು ಸಾಥ್‌ ನೀಡುತ್ತಿವೆ.

ಅಮೆರಿಕದ ವರ್ಜಿನೀಯಾದಲ್ಲಿ ಹುಟ್ಟಿ ಬೆಳೆದ ಚನ್ನಪ್ಫಾಗೆ ಬಾಲ್ಯದಲ್ಲಿ ತನ್ನ ತಾಯ್ನಾಡಿನ ಈ ಸ್ಥಿತಿ ತಿಳಿದಿರಲಿಲ್ಲ. ತಾಯ್ನಾಡಿಗೆ ಮರಳಿದ ಆಕೆಗೆ ಹೆಜ್ಜೆ ಹೆಜ್ಜೆಗೂ ಯುದ್ಧದ ಭೀಕರತೆ ಪರಿಣಾಮ ಗೋಚರಿಸ ತೊಡಗಿತು. ಅದನ್ನು ಕಂಡು ಆಕೆಯ ಮನ ಕಲಕಿತು.

ಮನ ಬದಲಿಸಿದ  ಚಿತ್ರಗಳು
ಯುದ್ಧ ನಿರಾಶ್ರಿತರು ಬಿಡಿಸಿದ ಯುದ್ಧದ ಭೀಕರತೆಯನ್ನು ಬಿಂಬಿಸುವ ಶಸ್ತ್ರಾಸ್ತ್ರ ಹಾಗೂ ಬಾಂಬ್‌ ದಾಳಿ ಚಿತ್ರಗಳು ಚನ್ನಪ್ಫಾ ಮೇಲೆ ಅಗಾಧ ಪರಿಣಾಮ ಬೀರಿದವು.  2004ರಲ್ಲಿ ಸ್ವಯಂಸೇವಾ ಸಂಸ್ಥೆಯೊಂದನ್ನು ಹುಟ್ಟು ಹಾಕಿದ ಆಕೆ ಜನಜಾಗೃತಿಗೆ ಮುಂದಾದಳು.
 
ಆರಂಭದಲ್ಲಿ ತನ್ನ ಹೋರಾಟಕ್ಕೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲವಾದರೂ ಆಕೆ ವಿಚಲಿತಳಾಗಲಿಲ್ಲ. ತನ್ನ ಪಟ್ಟನ್ನು ಸಡಿಲಿಸಲಿಲ್ಲ. ಆದರೆ, ಹೋರಾಟದ ಮಾರ್ಗ ಬದಲಿಸಬೇಕಾಯಿತು. ಯುದ್ಧದ ಘೋರ ದುಷ್ಪರಿಣಾಮ ಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಶಸ್ತ್ರಾಸ್ತ್ರ ಮತ್ತು ಬಾಂಬ್‌ಗಳಿಂದ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದ ಯುವಕರನ್ನು ಆಕೆ ಮುಂಚೂಣಿಗೆ ತಂದಳು.

‘ಲಾವೋಸ್ ಮೇಲೆ ಅಮೆರಿಕದ ರಹಸ್ಯ ಯುದ್ಧದ ಪರಿಣಾಮಗಳು’ ಎಂಬ ಕಾರ್ಯಕ್ರಮದ ಹೆಸರನ್ನು ಬದಲಿಸಿ ‘ಲಾವೋಸ್‌ ಇತಿಹಾಸ ಮತ್ತು ನಾಳೆ’ ಎಂಬ ಆಕರ್ಷಕ ಹೆಸರು ನೀಡಿದಳು. ಅಮೆರಿಕದಲ್ಲಿರುವ ಲಾವೋಸ್‌ ಜನರ ಮನಪರಿವರ್ತಿಸಿ ಹೋರಾಟಕ್ಕೆ ಕರೆತಂದಳು. 

ಅಮೆರಿಕ ಬಿಟ್ಟುಹೋದ ಬಾಂಬ್‌, ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಲು ಚನ್ನಪ್ಫಾ ನಡೆಸಿದ ಹೋರಾಟದ ಪರಿಣಾಮವಾಗಿ ಅಮೆರಿಕ ಈ ಕಾರ್ಯಕ್ಕಾಗಿ ನೀಡುತ್ತಿದ್ದ ಆರ್ಥಿಕ ನೆರವನ್ನು 2.5 ದಶಲಕ್ಷ  ಡಾಲರ್‌ನಿಂದ (₹1,500 ಕೋಟಿ) 12 ದಶಲಕ್ಷ ಡಾಲರ್‌ಗೆ (₹7,200 ಕೋಟಿ) ಹೆಚ್ಚಿಸಿತು.

ಬದ್ಧತೆಯೇ ಆಕೆಯ ಬಂಡವಾಳ
ವಾಷಿಂಗ್ಟನ್‌ನ ಪುಟ್ಟ ಗೂಡಿನಂತಹ ಮನೆಯಲ್ಲಿ ಇದ್ದುಕೊಂಡು ಹೋರಾಟ ಮುಂದುವರಿಸಿದ  ಚನ್ನಪ್ಫಾಗೆ ಅದಮ್ಯ ಉತ್ಸಾಹ, ಮಾನ­ವೀಯ ಕಳಕಳಿ ಮತ್ತು ಬದ್ಧತೆಗಳೇ ಬಂಡವಾಳ. ಇವನ್ನು ಹೊರತುಪಡಿಸಿದರೆ ಬೇರ್ಯಾವ ಬಂಡವಾಳವೂ ಆಕೆಯ ಬಳಿ ಇಲ್ಲ. ಇಂದು ಅನೇಕರು ಆಕೆಯ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಅಮೆರಿಕದ ಅನೇಕರಿಗೆ ವಿಯೆಟ್ನಾಂ ಯುದ್ಧದ ಭೀಕರತೆಯ ಅರಿವಿಲ್ಲ. ಇಲ್ಲಿಗೆ ಬರುವ  ಅಮೆರಿಕನ್ನರಿಗೆ ತಮ್ಮ ದೇಶ ಮಾಡಿದ ತಪ್ಪಿನ ಅರಿವಾಗುತ್ತಿದೆ. ‘ಅರೇ ಅಮೆರಿಕ ಎಷ್ಟೊಂದು ಬಾಂಬ್‌ಗಳನ್ನು ಬಿಸಾಡಿದೆಯಲ್ಲ’ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿನವರ ದಯನೀಯ ಪರಿಸ್ಥಿತಿಯನ್ನು ಕಂಡು ಕನಿಕರ ವ್ಯಕ್ತಪಡಿಸುತ್ತಿದ್ದಾರೆ.

ಚನ್ನಪ್ಫಾ  ಹೋರಾಟದ ಜತೆಯಲ್ಲಿಯೇ ಲಾವೋಸ್‌ನ ಹೊಲ, ಗದ್ದೆ, ನದಿ ದಂಡೆ, ಗ್ರಾಮಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿರುವ ಜೀವಂತ ಬಾಂಬ್‌ಗಳ ನಿಷ್ಕ್ರಿಯ ಕಾರ್ಯ ಆರಂಭವಾಗಿದೆ. ಕಳೆದ ವರ್ಷವೊಂದರಲ್ಲಿಯೇ 56,400 ಷೆಲ್‌ಗಳನ್ನು ನಾಶಗೊಳಿಸ­ಲಾಗಿದೆ. ಇನ್ನೂ ಲಕ್ಷಾಂತರ ಸಿಡಿಮದ್ದುಗಳು ಬಾಕಿ ಉಳಿದುಕೊಂಡಿವೆ.

ಆಫ್ಘನ್‌ಗಿಂತ ಘೋರ ಸ್ಥಿತಿ!
‘ಪ್ರತಿ ಬಾರಿ ನಾನು ಇಲ್ಲಿಗೆ ಬಂದಾಗಲೂ ನನ್ನ ಮನಸ್ಸು ಘಾಸಿಗೊಳ್ಳುತ್ತದೆ. ಈ ನೆಲ  ಜೀವಂತ ಬಾಂಬ್, ಷೆಲ್‌ಗಳಿಂದ ತುಂಬಿಹೋಗಿದೆ’ ಎಂದು ಮರುಗುತ್ತಾರೆ ಬ್ರಿಟನ್‌ ಸೇನೆಯ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ ಟಿಮ್‌ ಲಾರ್ಡ್‌ನರ್‌. ಕಳೆದ 25 ವರ್ಷಗಳಿಂದ ಲಾವೋಸ್‌ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿಯ ಲಕ್ಷಾಂತರ ಜೀವಂತ ಬಾಂಬ್‌, ಕ್ಷಿಪಣಿ, ಷೆಲ್‌ಗಳನ್ನು ನಿಷ್ಕ್ರಿಯಗೊಳಿಸಿದ ಅನುಭವ ಅವರ ಬೆನ್ನಿಗಿದೆ.

ಆಫ್ಘಾನಿಸ್ತಾನ, ಕಾಂಬೋಡಿಯ, ಅಂಗೋಲಾ, ಮೊಜಾಂಬಿಕ್‌ ಸೇರಿದಂತೆ ಹಲವು ಯುದ್ಧಪೀಡಿತ ರಾಷ್ಟ್ರಗಳಿಗಿಂತ ಲಾವೋಸ್‌ ಪರಿಸ್ಥಿತಿ ಭೀಕರವಾಗಿದೆ ಎಂದು ಅವರು ಅಲ್ಲಿಯ ವಸ್ತುಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ.

ಲಾವೋಸ್‌ನಲ್ಲಿಯೇ ಅತಿ ಹೆಚ್ಚು ಷೆಲ್‌ ದಾಳಿಗೆ ಒಳಗಾಗಿದ್ದು ಕ್ಸಿಯಾಂಗ್‌ ಖೌಯಾಂಗ್‌ ಪ್ರಾಂತ್ಯ. ಇಲ್ಲಿಯ ನದಿ ದಂಡೆ, ಮರಗಳ ಪೊಟರೆ, ಗೆದ್ದಿಲುಗಳ ಹುತ್ತ ಹೀಗೆ ಎಲ್ಲೆಂದರಲ್ಲಿ  ಬಾಂಬ್‌ಗಳು ಬಿದ್ದಿವೆ ಎನ್ನುವುದು ಕಿಂಗ್‌ಫೆತ್‌ ಫಿಮ್ವಾಂಗ್ ಅವರ ಪ್ರತ್ಯಕ್ಷ ಅನುಭವ.

ಅವರು ಲಾವೋ ಸರ್ಕಾರದ ಬಾಂಬ್ ನಿಷ್ಕ್ರಿಯ ಕಾರ್ಯಾಚರಣೆ ಪಡೆಯ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದಾರೆ. 1976ರಲ್ಲಿ ಅವರ ತಾಯಿ ಹಾಗೂ ಸಹೋದರ ಕೂಡ ಗದ್ದೆಯಲ್ಲಿದ್ದ ಷೆಲ್‌ಗೆ ಬಲಿಯಾಗಿದ್ದಾರೆ.

ಮನೆಯ ಮುಂದೆ ಅಂಗಳದಲ್ಲಿ ಆಟವಾಡುವ ಮಕ್ಕಳು ವಿವಿಧ ಆಕಾರ, ವಿನ್ಯಾಸದ ಷೆಲ್‌ಗಳನ್ನು ಚೆಂಡು, ಆಟಿಕೆ ಎಂದು ಭಾವಿಸಿ ಹೆಕ್ಕಲು ಹೋದಾಗ ಅವು ಸಿಡಿದು ಪ್ರಾಣ ಕಳೆದುಕೊಂಡಿವೆ. ಮರ ಕತ್ತರಿಸುವ ವೇಳೆ ಅದರ ಕಾಂಡ­ದಲ್ಲಿದ್ದ ಬಾಂಬ್ ಸ್ಫೋಟಿಸಿ ವ್ಯಕ್ತಿಯೊಬ್ಬ ಕಣ್ಣು ಕಳೆದುಕೊಂಡ.  ನಂತರ ಆತ ಅದೇ ಕೊರಗಿನಲ್ಲಿ ನೇಣು ಹಾಕಿಕೊಂಡ.

ಇಂದಿಗೂ ಕಾರ್ಯಾಚರಣೆ ತಂಡಗಳು ಲೋಹ ಪರಿಶೋಧಕ ಯಂತ್ರಗಳೊಂದಿಗೆ ಲಾವೋಸ್‌ನ ಹಳ್ಳಿ, ಹಳ್ಳಿಗಳಲ್ಲಿ ಅಲೆಯುತ್ತಿವೆ. ಬಾಂಬ್‌ ಮತ್ತು ಶಸ್ತ್ರಾಸ್ತ್ರಗಳಿಗಾಗಿ ನೆಲವನ್ನು ಅಗೆಯುವ ಕೆಲಸದಲ್ಲಿ ತೊಡಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT