ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸೂಕ್ಷ್ಮತೆ ಮೂಡಲಿ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚುನಾವಣಾ ಆಯೋಗದ ಅರ್ಜಿ ನಮೂನೆಗಳು ಮಹಿಳೆಯ ಅಸ್ತಿತ್ವವನ್ನೇ ಕಡೆಗಣಿಸಿರುವುದು ಸೋಜಿಗದ ಸಂಗತಿ. ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಬೇಕಾದ ‘ನಮೂನೆ 2 ಎ’ ಅರ್ಜಿಯಲ್ಲಿ ಪುರುಷ ಅಭ್ಯ­ರ್ಥಿ­ಗಳನ್ನಷ್ಟೇ ಗುರಿಯಾಗಿಸಿಕೊಂಡಂತಹ ಭಾಷೆ ಬಳಕೆ ನಮ್ಮಲ್ಲಿ ಹಾಸು­ಹೊಕ್ಕಾಗಿರುವ ಪುರುಷ ಪ್ರಧಾನ ಮನೋಭಾವಗಳಿಗೆ ಕನ್ನಡಿ ಹಿಡಿಯುತ್ತದೆ.

ಜನಸಂಖ್ಯೆ­ಯಲ್ಲಿ ಮಹಿಳೆಯರು ಅರ್ಧದಷ್ಟಿದ್ದಾರೆ. ಆದರೆ ನಾವು ಬಳಸುವ ಭಾಷೆ­ಯಲ್ಲಿ ಮಾತ್ರ ಮಹಿಳೆ ಹೇಗೆ ಅಗೋಚರಳಾಗಿ ಬಿಡುತ್ತಾಳೆ ಎಂಬು­ದಕ್ಕೆ ಇದು ಮತ್ತೊಂದು ಸಾಕ್ಷಿ. ಇದು ಹೊಸ ವಿಚಾರವಲ್ಲ. ಆದರೆ ಪ್ರಶ್ನೆ ಏನೆಂದರೆ ಲಿಂಗ ಸೂಕ್ಷ್ಮತೆಯ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ­ಯಾಗುತ್ತಿದ್ದರೂ ಅವನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸು­ವುದು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು.

ಗಂಡು, ಹೆಣ್ಣು ಸಮಾನತೆಯನ್ನು ಪ್ರತಿಪಾದಿ­ಸುವ ಸಂವಿಧಾನದಡಿ ಕಾರ್ಯ ನಿರ್ವಹಿಸುವಾಗಲೂ ಈ ಲಿಂಗ ತಾರತಮ್ಯದ ಭಾಷೆ ಆಡಳಿತ ವ್ಯವಸ್ಥೆಯಲ್ಲಿ ಉಳಿದುಕೊಂಡೇ ಬಂದಿರು­ವುದು ವಿಪ­ರ್ಯಾಸ. ಶಾಸಕಾಂಗ ಹಾಗೂ ನ್ಯಾಯಾಂಗಗಳು ಲಿಂಗ ಸಂವೇ­ದನಾಶೀಲತೆ ಮೂಡಿಸುವಂತಹ ಅನೇಕ ನೀತಿಗಳು ಹಾಗೂ ತೀರ್ಪುಗಳನ್ನು ಪ್ರಕಟಿಸುತ್ತಲೇ ಬಂದಿವೆ. ಇವು ಆಡಳಿತದ ಭಾಷೆಯಲ್ಲೂ ಪ್ರತಿಬಿಂಬಿತ­ವಾಗಬೇಕಾಗಿರುವುದು ಸದ್ಯದ ಅಗತ್ಯ.

ಪುರುಷ ಪ್ರಾಧಾನ್ಯತೆಯ ಗ್ರಹಿಕೆಗಳನ್ನೇ ನಮ್ಮ ಭಾಷಾ ಪ್ರಯೋಗಗಳು ಧ್ವನಿಸುತ್ತವೆ. ಇದಕ್ಕೆ ಲಿಂಗ ಸಮಾನತೆ ಪ್ರತಿಪಾದಿಸುವ ನಮ್ಮ ಸಂವಿಧಾನವೂ ಹೊರತಾಗಿಲ್ಲದಿರುವುದು ದುರದೃಷ್ಟಕರ. ಸಂವಿಧಾನದಲ್ಲಿ  ಹಲವಾರು ವಿಧಿ­ಗಳಿವೆ. ಈ ವಿಧಿಗಳು ರಾಜ್ಯಪಾಲರು, ಶಾಸಕರು, ಸಂಸತ್ ಸದಸ್ಯರು, ಸಚಿ­ವರು, ಪ್ರಧಾನಿ ಮುಂತಾದವರ ಅಧಿಕಾರಗಳನ್ನು ಕುರಿತು ಹೇಳುವಾಗ ಎಲ್ಲೆಡೆ ‘ಹಿ’ (ಆತ) ಎನ್ನುವ ಪದಪ್ರಯೋಗವೇ ಇದೆ.

‘ಆಕೆ’ ಇಲ್ಲಿ ನಾಪತ್ತೆ. ಹೀಗಾಗಿ ಪುರುಷ ಕೇಂದ್ರಿತ ಅಥವಾ ಪುರುಷ ನಿರ್ದೇಶಿತ ಪದಗಳನ್ನು ಬಳಸಿ­ದಾಗ, ಮಹಿಳೆಯರು ಈ ಕ್ಷೇತ್ರಕ್ಕೆ ಸ್ವಾಗತಾರ್ಹರಲ್ಲ, ಸಶಕ್ತರಲ್ಲ, ಅವರಿಗೆ ಅವಕಾಶವಿಲ್ಲ ಎಂಬಂತಹ ಭಾವನೆಗಳನ್ನೇ ಬಿತ್ತುತ್ತಿರುತ್ತೇವೆ. ಬಿಸಿನೆಸ್ ಮೆನ್, ಪೋಸ್ಟ್ ಮೆನ್, ಪೊಲೀಸ್ ಮೆನ್ ಇತ್ಯಾದಿ ಭಾಷಾ ಪ್ರಯೋಗ­ಗಳಲ್ಲಿರುವ ಮೂಲ ಗ್ರಹಿಕೆ ಏನೆಂದರೆ ಪುರುಷರೇ ಈ ಹುದ್ದೆಗಳಲ್ಲಿ ಇರು­ವವರು ಎಂಬಂತಹ ಸ್ವೀಕೃತ ಧೋರಣೆ.

ಈ ಹುದ್ದೆಗಳನ್ನು ನಿರ್ವಹಿ­ಸಲು ಅಗತ್ಯ­ವಾದ ಕೌಶಲಗಳು ಪುರುಷರಿಗಷ್ಟೇ ಅಂತರ್ಗತವಾಗಿ ಬಂದದ್ದಲ್ಲ ಎಂಬುದನ್ನು ಈಗಿನ ಆಧುನಿಕ ಯುಗದಲ್ಲಿ ಹೇಳುವುದು ಕಷ್ಟ.ಈ ಕ್ಷೇತ್ರಗಳ­ಲ್ಲೆಲ್ಲಾ ಮಹಿಳೆಯರು ಈಗ ಕಾರ್ಯನಿರ್ವಹಿಸುತ್ತಲೇ ಇದ್ದಾರೆ. ಇದೇ ರೀತಿ ‘ನರ್ಸ್’ ಎಂದಾಕ್ಷಣವೇ ಮಹಿಳೆ ಎಂದುಕೊಳ್ಳುವುದೂ ಸರಿಯಲ್ಲ. ಭಾಷೆ­ಯಲ್ಲಿನ ಪೂರ್ವಗ್ರಹಗಳು ಒಟ್ಟು ಚಿಂತನೆಯ ಧಾಟಿಯ ಮೇಲೂ ಪರಿ­ಣಾಮ ಬೀರುತ್ತದೆ.

ಹೀಗಾಗಿ ಲಿಂಗ ತಾರತಮ್ಯ ಹಾಗೂ ಮಹಿಳೆ ವಿರುದ್ಧದ ಪೂರ್ವಗ್ರಹವನ್ನು ಬಿಂಬಿಸುವ ಭಾಷೆಯನ್ನು ದೋಷ ಎಂಬುದಾಗಿ ಗುರುತಿ­ಸುವ ಪ್ರಜ್ಞೆ ಈಗಾಗಲೇ ಮೂಡಿದೆ. ಅಮೆರಿಕದ ಹಲವು ರಾಜ್ಯಗಳಲ್ಲಿ, ಲಿಂಗಪೂರ್ವಗ್ರಹ ಬಿಂಬಿಸುವ ಪದಪ್ರಯೋಗಗಳನ್ನು ಕಾನೂನಿನ ಪುಸ್ತಕಗ­ಳಿಂದ ಕಿತ್ತುಹಾಕಲಾಗಿರುವುದನ್ನು  ನಾವು ಗಮನಿಸಬೇಕು. ಭಾಷೆ ಚಿಂತನೆ­ಯನ್ನು ಪ್ರತಿಬಿಂಬಿಸುವ ಜೊತೆಗೆ ಒಂದು ನಡಾವಳಿಯನ್ನೂ ರೂಪಿಸುತ್ತದೆ.ಹೀಗಾಗಿ ಈ ಬಗ್ಗೆ ಗಂಭೀರ ಪರಿಶೀಲನೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT