ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ–ವೀರಶೈವ ಒಂದೇ ಅಲ್ಲ

ಮಾತೆ ಮಹಾದೇವಿ ಅಭಿಮತ
Last Updated 26 ಫೆಬ್ರುವರಿ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ‘ಆಗಮೋಕ್ತವಾದ ವೀರಶೈವ ಮತ್ತು ವಚನೋಕ್ತವಾದ ಲಿಂಗಾ­ಯತ–   ಎರಡೂ ಒಂದೇ ಧರ್ಮ ಅಲ್ಲ’ ಎಂದು ಲಿಂಗಾಯತ ಧರ್ಮ ಮಹಾ­ಸಭಾದ ಪೋಷಕ ಅಧ್ಯಕ್ಷೆ ಮಾತೆ ಮಹಾದೇವಿ ಪ್ರತಿಪಾದಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಶೋಧಕ­ರಾದ ಡಾ.ಎಂ.ಚಿದಾನಂದ ಮೂರ್ತಿ ಅವರು ಇತ್ತೀಚೆಗೆ ವಿಚಾರ ಸಂಕಿರಣ­ವೊಂದರಲ್ಲಿ ಲಿಂಗಾಯತ ಮತ್ತು ವೀರಶೈವ ಧರ್ಮಗಳು ಎರಡೂ ಒಂದೇ.  ಬ್ರಾಹ್ಮಣ ಜಾತಿ­ಯಲ್ಲಿ ಹುಟ್ಟಿದ ಬಸವಣ್ಣನವರು ವೀರಶೈವಕ್ಕೆ ಮನಸೋತು ಅದನ್ನು ಸ್ವೀಕರಿಸಿದರು ಎಂದು ಹೇಳಿದ್ದಾರೆ. ಇದನ್ನು ಒಪ್ಪಲಾಗದು’ ಎಂದು ತಿಳಿಸಿದರು.

‘ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎನ್ನುವ ಚಿದಾನಂದ ಮೂರ್ತಿ ಅವರ ವಾದಕ್ಕೆ ಯಾವುದೇ ದಾಖಲೆ ಇಲ್ಲ. ಬಸವಣ್ಣನವರು ತಮ್ಮ 21ನೇ ವಯಸ್ಸಿನಲ್ಲಿ ತನ್ನ ಕುಲ­ದಲ್ಲಿನ ಕಂದಾಚಾರಕ್ಕೆ ರೋಸಿ ಹೋಗಿ ಅದರಿಂದ ಹೊರ­ಬಂದು ಪರಮಾತ್ಮನನ್ನೇ ಗುರು­ವೆಂದು ಭಾವಿಸಿ, ಲಿಂಗಾಯತ ಧರ್ಮದ ಕೇಂದ್ರಬಿಂದುವಾದ ಇಷ್ಟಲಿಂಗದ ಪರಿ­ಕಲ್ಪನೆ ಪರಿಚಯಿಸಿದರು’ ಎಂದು ಹೇಳಿದರು.

‘ವೀರಶೈವ ಧರ್ಮ ವರ್ಣಾಶ್ರಮ ಆಧಾ­ರಿತ ಸಾಮಾಜಿಕ ವ್ಯವಸ್ಥೆ ಒಪ್ಪುತ್ತದೆ. ಲಿಂಗಾಯತ ಧರ್ಮ ಜಾತ್ಯತೀತವಾದ ಧೋರಣೆಯಿಂದ ಸಮಾನ ಸಮಾಜದ ಆಶಯ ಹೊಂದಿದೆ. ಆದ್ದರಿಂದ ಇವರೆಡನ್ನೂ ಒಂದುಗೂಡಿಸಲು ಬರುವುದಿಲ್ಲ. ಆದರೆ, ಚಿದಾನಂದಮೂರ್ತಿ ಅವರು ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯವಾಗಿಸುವ ಭ್ರಮೆಯಲ್ಲಿದ್ದಾರೆ’ ಎಂದರು.

‘ಈ ಎರಡೂ ಧರ್ಮಗಳು ಸಮಾನಾಂತ­­ರವಾದ ರೈಲು ಹಳಿಗಳಂತೆ ಎಂದಿಗೂ ಕೂಡುವುದಿಲ್ಲ. ವೀರಶೈವ ಬಸವ ಪೂರ್ವ ಪಂಥ. ಲಿಂಗಾಯತ ಬಸವಣ್ಣನವರಿಂದ ಸ್ಥಾಪಿತ­ಗೊಂಡ ಪ್ರಗತಿಪರವಾದ ಪರಿಪೂರ್ಣ ಧರ್ಮ­ವಾಗಿದೆ. ಆದ್ದರಿಂದ, ಇವು ಒಂದಾಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಆತ್ಮಾವಲೋಕನ ಮಾಡಿಕೊಳ್ಳಲಿ
‘ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರು ಇತ್ತೀಚೆಗೆ ಬಸವ ತತ್ವದಲ್ಲಿ ನಂಬಿಕೆ ಹೊಂದಿರುವ ಕರ್ನಾಟಕದ ಬಹುದೊಡ್ಡ ಸಮುದಾಯ (ಲಿಂಗಾಯತ) ಬಿಜೆಪಿ ಬೆನ್ನಿಗೆ ನಿಂತಿರುವುದು ದುರದೃಷ್ಟಕರ ಎಂಬ ಹೇಳಿಕೆ ನೀಡಿದ್ದಾರೆ’

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಇದ್ದ ಲಿಂಗಾಯತರ ಪಾತ್ರವನ್ನು ದಿಗ್ವಿಜಯ್‌ ಸಿಂಗ್‌ ಅವರು ಏಕೆ ಮರೆತರು? ಹಾವನೂರು ಆಯೋಗದ ವರದಿ­ಯಿಂದ ಹಿಡಿದು ವಿವಿಧ ಆಯೋಗಗಳ ಮೂಲಕ ಕಾಂಗ್ರೆಸ್‌ ಲಿಂಗಾಯತ ಸಮಾಜದ ಮೇಲೆ ಗದಾ ಪ್ರಹಾರ ಮಾಡುತ್ತ ಬಂದಿದೆ.

ಕಾಂಗ್ರೆಸ್ಸಿನ ಈ ಒಡೆದು ಆಳುವ ನೀತಿಯಿಂದಾಗಿಯೇ ಲಿಂಗಾಯತರು ಬಿಜೆಪಿ ಬೆಂಬಲಿಸಿರುವುದು ಕಟು ಸತ್ಯ. ಈ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ’ ಎಂದು ಹೇಳಿದರು.

ಪುರೋಹಿತಶಾಹಿ ಕೈಗೆ ಬೇಡ
‘ಸರ್ಕಾರ ಕೂಡಲ ಸಂಗಮದಲ್ಲಿ ಬಸವಣ್ಣನವರ ಐಕ್ಯಮಂಟಪವನ್ನು ಪುರೋಹಿತಶಾಹಿ ಅರ್ಚಕರ ಕೈಗೆ ಒಪ್ಪಿಸ­ಬಾರದು. ಈ ವಿಚಾರದಲ್ಲಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಅವರು ಸ್ಥಳೀಯ ಶಾಸಕ ವಿಜಯಾನಂದ ಕಾಶಪ್ಪನವರ ಒತ್ತಡಕ್ಕೆ ಮಣಿಯಬಾರದು’ ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT