ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ್ವಿಸ್ಟಿಕ್ ಒಲಿಂಪಿಯಾಡ್‌ನಲ್ಲಿ ಬೆಂಗಳೂರು ಕಲಿಗಳು

Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

‘ಭಾಷೆ ನಿಂತ ನೀರಲ್ಲ. ಅದು ಸದಾ ಹರಿಯುವ ನದಿ ಇದ್ದಂತೆ’ ಎನ್ನುತ್ತಾರೆ ಭಾಷಾತಜ್ಞರು. ಪ್ರತಿ ಭಾಷೆಗೂ ಅದರದ್ದೇ ಆದ ಸೊಗಡಿದೆ, ಸೊಗಸಿದೆ. ಕೆಲ ಭಾಷೆಗಳು ಕೇಳುವುದಕ್ಕೆ ಇಂಪು ಎನಿಸಿದರೆ, ಮತ್ತೆ ಕೆಲ ಭಾಷೆಗಳ ಲಿಪಿಗಳು ನೋಡಲು ಅಂದ. ಇಂಥ ಅಂದ–ಚೆಂದವುಳ್ಳ ಭಾಷೆಯನ್ನು ಸೃಜನಶೀಲವಾಗಿ ಬಳಸಿಕೊಂಡವರ ಜೀವನ ನಿಜಕ್ಕೂ ಸೊಗಸು.

ಅಂಥ ಸೊಗಸಿನ ಅನುಭವ ಪಡೆಯಬೇಕೆಂದರೆ ‘ಲಿಂಗ್ವಿಸ್ಟಿಕ್ ಒಲಿಂಪಿಯಾಡ್‌’ಗೆ (ಕನ್ನಡದಲ್ಲಿ ಭಾಷಾ ಒಲಿಂಪಿಕ್ಸ್‌ ಎನ್ನಬಹುದು) ಬನ್ನಿ ಎನ್ನುತ್ತಾರೆ ಭಾಷಾ ವಿಜ್ಞಾನಿಗಳು.ಭಾಷೆಗೂ ವಿಜ್ಞಾನಕ್ಕೂ ಎತ್ತಣದಿಂತ್ತೆಣ ಸಂಬಂಧವಯ್ಯಾ? ಎಂದು ಹುಬ್ಬೇರಿಸದಿರಿ. ಬೆಟ್ಟದ ನೆಲ್ಲಿಕಾಯಿಗೂ– ಸಮುದ್ರದ ಉಪ್ಪಿಗೂ ಇರುವ ನಂಟಿನಷ್ಟೇ ಭಾಷೆಗೂ ವಿಜ್ಞಾನಕ್ಕೂ ಸಂಬಂಧವಿದೆ. ಅಂಥ ಸಂಬಂಧದ ಅನುಭೂತಿ ದೊರೆಯುವುದು ಭಾಷಾ ಒಲಿಂಪಿಯಾಡ್‌ನಲ್ಲಿ. ಅಂತರರಾಷ್ಟ್ರೀಯ ಮಟ್ಟದ ‘ಸ್ಪೆಲ್‌  ಬಿ’ ಸ್ಪರ್ಧೆ ಬಿಟ್ಟರೆ, ಭಾಷಾ ವಿಚಾರದಲ್ಲಿ ಮತ್ತೊಂದು ಜನಪ್ರಿಯ ಸ್ಪರ್ಧೆಯೆಂದರೆ ಅದು ಲಿಂಗ್ವಿಸ್ಟಿಕ್ ಒಲಿಂಪಿಯಾಡ್‌.

ಭಾರತದ ಆತಿಥ್ಯ
ಅಂತರರಾಷ್ಟ್ರೀಯ ಲಿಂಗ್ವಿಸ್ಟಿಕ್ ಒಲಿಂಪಿಯಾಡ್‌ ಸ್ಪರ್ಧೆಗೆ ಇದೇ ಮೊದಲ ಬಾರಿಗೆ ಭಾರತ ಆತಿಥ್ಯ ವಹಿಸಲಿದೆ. ಅಂಥ ಅಪರೂಪದ ಅವಕಾಶ ‘ಅರಮನೆ ನಗರಿ’ ಮೈಸೂರಿಗೆ ದೊರೆತಿರುವುದು ಕನ್ನಡಿಗರಿಗೆ ಮತ್ತೂ ಹೆಮ್ಮೆಯ ವಿಚಾರ. ಜುಲೈ 25ರಿಂದ 29ರವರೆಗೆ ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ 14ನೇ ಅಂತರರಾಷ್ಟ್ರೀಯ ಲಿಂಗ್ವಿಸ್ಟಿಕ್‌ ಒಲಿಂಪಿಯಾಡ್‌ ನಡೆಯಲಿದೆ. ವಿಶ್ವದ 30 ರಾಷ್ಟ್ರಗಳ ಒಟ್ಟು 160 ಸ್ಪರ್ಧಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಮೈಕ್ರೋಸಾಫ್ಟ್‌ ಕಂಪೆನಿ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಾಯೋಕತ್ವವನ್ನೂ ವಹಿಸಿದೆ.

ಸೌಜಸ್‌, ಶಶಾಂಕ್ ಸ್ಪರ್ಧೆ
ಈ ಸ್ಪರ್ಧೆಯಲ್ಲಿ ಭಾರತವನ್ನು ನಾಲ್ವರು ವಿದ್ಯಾರ್ಥಿಗಳು ಪ್ರತಿನಿಧಿಸುತ್ತಿದ್ದು, ಅದರಲ್ಲಿ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನವರು. ಬೆಂಗಳೂರಿನ  ಸ್ಟೋನ್‌ಹಿಲ್‌ ಇಂಟರ್‌ನ್ಯಾಷನಲ್ ಶಾಲೆಯ ಶಶಾಂಕ್‌ ರಾಮಮೂರ್ತಿ ಹಾಗೂ ದೆಹಲಿ ಪಬ್ಲಿಕ್ ಶಾಲೆಯ ಸೌಜಸ್ ಈ ಪ್ರತಿಭಾವಂತ ವಿದ್ಯಾರ್ಥಿಗಳು ‘ಭಾಷಾ ಒಲಿಂಪಿಯಾಡ್‌’ ಗಣಿತದಷ್ಟೇ ಮೋಜಿನ ಆಟ ಎನ್ನುತ್ತಾನೆ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಬೆಂಗಳೂರಿನ 10ನೇ ತರಗತಿ ವಿದ್ಯಾರ್ಥಿ ಸೌಜಸ್‌.

ಗಣಿತ ಇಷ್ಟವಾಗಿದ್ದವರಿಗೆ ಈ ಸ್ಪರ್ಧೆ ನಿಜಕ್ಕೂ ಖುಷಿ ಕೊಡುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮಾನಸಿಕ ಒತ್ತಡ ಕೊಡುವುದಿಲ್ಲ. ಬದಲಿಗೆ ಸೃಜನಾತ್ಮಕವಾಗಿ ಭಾಷೆಯ ಜೊತೆ ಒಡನಾಡುವುದನ್ನು ಕಲಿಸುತ್ತದೆ’ ಎನ್ನುತ್ತಾನೆ ಅವನು.

ಹೇಗೆ ಪ್ರವೇಶ?
‘ಈ ಸ್ಪರ್ಧೆಗೆ ಆನ್‌ಲೈನ್‌ನಲ್ಲೇ ಮೊದಲು ಮುಕ್ತ ಲಿಖಿತ ಪ್ರವೇಶಕ್ಕೆ ಆಹ್ವಾನಿಸುತ್ತಾರೆ. ಅದು ತುಂಬಾ ಸರಳವಾದ ಪ್ರವೇಶ. ಅಲ್ಲಿ ಯಶಸ್ವಿಯಾದವರನ್ನು ಎರಡನೇ ಹಂತಕ್ಕೆ ಅಂದರೆ ಭಾಷಾ ಶಿಬಿರಕ್ಕೆ ಆಯ್ಕೆ ಮಾಡುತ್ತಾರೆ. ಅಲ್ಲಿ ಉನ್ನತ ಶ್ರೇಣಿ ಗಳಿಸಿದವರನ್ನು ಭಾಷಾ ಒಲಿಂಪಿಯಾಡ್‌ಗೆ ಆಯ್ಕೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡುತ್ತಾನೆ
ಸೌಜಸ್‌.

‘ಈ ಸ್ಪರ್ಧೆಯಲ್ಲಿ ಸತತ ಮೂರು ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. 9ನೇ ತರಗತಿಯಲ್ಲಿದ್ದಾಗ ಅಂದರೆ 2015ರಲ್ಲಿ ಬಲ್ಗೇರಿಯಾದಲ್ಲಿ ಈ ಸ್ಪರ್ಧೆ ನಡೆದಿತ್ತು. ಅಲ್ಲಿ ಗೌರವದ ಸುತ್ತಿಗೆ ಆಯ್ಕೆಯಾಗಿದ್ದೆ. ಇದಕ್ಕೆಲ್ಲಾ ಮೈಕ್ರೋಸಾಫ್ಟ್‌ ಕಂಪೆನಿ ಪ್ರಾಯೋಜಕತ್ವ ನೀಡಿತ್ತಲ್ಲದೇ, ತರಬೇತಿಯನ್ನೂ ನೀಡಿತ್ತು’ ಎಂದು ನೆನಪಿಸಿಕೊಳ್ಳುತ್ತಾನೆ.

ಪದಕ ಮುಖ್ಯವಲ್ಲ
‘ಭಾಷಾ ಒಲಿಂಪಿಯಾಡ್‌ನಲ್ಲಿ ಪದಕ, ಪ್ರಶಸ್ತಿ ಗೆಲ್ಲುವುದು ಮುಖ್ಯವಲ್ಲ. ಅಲ್ಲಿ ಹೋಗಿ ಕಲಿತು ಬರುವುದೇ ಮುಖ್ಯ. ಇಂಥ ಅವಕಾಶ ಎಲ್ಲಾ ವಿದ್ಯಾರ್ಥಿಗಳಿಗೂ ಸಿಗದು. ಬೇರೆಬೇರೆ ದೇಶದ ಜನ, ಅವರ ಸಂಸ್ಕೃತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಭಾಷೆ, ಅದರ ವೈವಿಧ್ಯಮಯ ಸೊಗಡು ಇವೆಲ್ಲವನ್ನು ಅರಿಯಲು ಈ ಸ್ಪರ್ಧೆ ನಿಜಕ್ಕೂ ಸಹಕಾರಿ’ ಎಂದು ನುಡಿಯುತ್ತಾನೆ ಸೌಜಸ್‌.

ಸ್ಕ್ಯಾಷ್ ಕ್ರೀಡೆಯಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿರುವ 10ನೇ ತರಗತಿ ವಿದ್ಯಾರ್ಥಿ ಶಶಾಂಕ್‌ ರಾಮಮೂರ್ತಿ, ಸೌಜಸ್‌ ಜತೆಗೆ ಸಾಥ್ ನೀಡುತ್ತಿದ್ದಾನೆ. ಶಶಾಂಕ್‌ಗೆ ಭಾಷಾ ವಿಜ್ಞಾನದಲ್ಲಷ್ಟೇ ಅಲ್ಲ ಸಂಗೀತದಲ್ಲೂ ಒಲವಿದೆ. ಕ್ರೀಡೆ, ಸಂಗೀತದಲ್ಲಿನ ಏಕಾಗ್ರತೆ ಈ ಸ್ಪರ್ಧೆಯಲ್ಲಿ ಸಹಕಾರಿಯಾಗುತ್ತದೆ ಎಂಬುದು ಅವರ ಅನಿಸಿಕೆ.

ಸೌಜಸ್‌ ಮತ್ತು ಶಶಾಂಕ್ ಇಬ್ಬರೂ ಪಾಣಿನಿ ಲಿಂಗ್ವಿಸ್ಟಿಕ್‌ ಒಲಿಂಪಿಯಾಡ್‌ನಲ್ಲಿ ತರಬೇತಿ ಪಡೆದಿದ್ದು,  ಸೋಮವಾರದಿಂದ ಆರಂಭವಾಗಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. 

ಏನಿದು ಲಿಂಗ್ವಿಸ್ಟಿಕ್ ಒಲಿಂಪಿಯಾಡ್?
ವಿಶ್ವದ ವಿವಿಧ ಭಾಷೆಗಳಲ್ಲಿರುವ ಕಠಿಣ ಸಮಸ್ಯೆಗಳನ್ನು ಬಿಡಿಸುವುದೇ ಲಿಂಗ್ವಿಸ್ಟಿಕ್ ಒಲಿಂಪಿಯಾಡ್ ಸ್ಪರ್ಧೆಯ ನಿಯಮ. ಇದಕ್ಕಾಗಿ ನಿಮಗೆ ಯಾವುದೇ ಭಾಷೆಯ ಪರಿಚಯ ಇರಬೇಕಾಗಿಲ್ಲ. ತರ್ಕ ಸಾಮರ್ಥ್ಯ, ತಾಳ್ಮೆ ಮತ್ತು ಸೃಜನಾತ್ಮಕವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು ಎನ್ನುತ್ತಾರೆ ಆಯೋಜಕರು.

2003ರಲ್ಲಿ ಮೊದಲ ಬಾರಿಗೆ ಲಿಂಗ್ವಿಸ್ಟಿಕ್‌ ಒಲಿಂಪಿಯಾಡ್ ಆರಂಭವಾಯಿತು. 2009ರಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾರತ ಭಾಗವಹಿಸಿತ್ತು. ಈ ಸ್ಪರ್ಧೆಯಲ್ಲಿ ಇದುವರೆಗೆ ಭಾರತ 3 ಬೆಳ್ಳಿ, 4 ಕಂಚು ಪದಕ ಪಡೆದಿದ್ದು, ನಾಲ್ಕು ಬಾರಿ ಬೆಸ್ಟ್‌ ಸಲ್ಯೂಷನ್‌ ಅವಾರ್ಡ್‌ ಹಾಗೂ ಮೂರು ಬಾರಿ ಗೌರವಕ್ಕೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT