ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯ: ಭಾರತಕ್ಕೆ 114ನೇ ಸ್ಥಾನ

ವಿಶ್ವ ಆರ್ಥಿಕ ವೇದಿಕೆಯಿಂದ ಅಂಕಿ–ಅಂಶಗಳ ವರದಿ ಬಿಡುಗಡೆ
Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ): ಲಿಂಗ ತಾರ­ತಮ್ಯ ಹೋಗಲಾ­ಡಿ­ಸುವಲ್ಲಿ ಭಾರತ ಹಿಂದೆ ಬಿದ್ದಿದೆ. ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ವರದಿ ಪ್ರಕಾರ, ಜಗತ್ತಿನ 142 ರಾಷ್ಟ್ರ­ಗಳಲ್ಲಿ ಭಾರತ 114ನೇ ಸ್ಥಾನದಲ್ಲಿದೆ.

ಆರ್ಥಿಕ ಪಾಲ್ಗೊಳ್ಳುವಿಕೆ, ಶಿಕ್ಷಣ ಗಳಿಕೆ, ಆರೋಗ್ಯ ಹಾಗೂ ಆಯುಷ್ಯ ಮತ್ತಿತರ ಮಾನ­ದಂಡಗಳಲ್ಲಿ ಭಾರತದ ಸರಾಸರಿ ಪ್ರಮಾಣವು ಬಹಳ ಕಡಿಮೆ ಇರುವುದಾಗಿ ವರದಿ ತಿಳಿಸಿದೆ.ಕಳೆದ ವರ್ಷ 101ನೇ ಸ್ಥಾನದಲ್ಲಿದ್ದ ಭಾರತವು ಈ ವರ್ಷ 13 ಸ್ಥಾನಗಳಷ್ಟು ಕುಸಿದಿದೆ. ಕಾರ್ಮಿಕರ ಪಾಲ್ಗೊಳ್ಳುವಿಕೆ, ಅಂದಾಜು ಆದಾಯ ಗಳಿಕೆ, ಸಾಕ್ಷರತಾ ಪ್ರಮಾಣ ಹಾಗೂ ಜನ್ಮ ದಾಖಲೆ ಸೂಚ­ಕ­ಗಳಲ್ಲಿನ ಲಿಂಗ ಅನುಪಾತ ಇತ್ಯಾದಿ ವಿಚಾರಗಳಲ್ಲಿ ಭಾರತವು 20 ಅತ್ಯಂತ ಕಡಿಮೆ ಕಾರ್ಯಸಾಧಕ ರಾಷ್ಟ್ರ­ಗಳ ಸಾಲಿಗೆ ಸೇರಿದೆ. ಆದರೆ ಇನ್ನೊಂದೆಡೆ, ರಾಜಕೀಯ ಸಶಕ್ತೀ­ಕರಣದ ಅಂಕಿ–ಅಂಶ­ಗಳಲ್ಲಿ ಭಾರ­ತವು ಉನ್ನತವಾದ 20 ಅತ್ಯುತ್ತಮ ಕಾರ್ಯ­­ಸಾಧಕ ದೇಶ­ಗಳ ಪಟ್ಟಿಗೆ ಸೇರಿದೆ ಎಂದು ವರದಿ ಹೇಳಿದೆ.

ಲಿಂಗ ತಾರತಮ್ಯ ಮತ್ತು ಲಿಂಗ ಆಧಾ­ರ­ದಲ್ಲಿ ಅವರ (ಪುರುಷ ಮತ್ತು ಮಹಿಳೆ­ಯರ) ಪ್ರಗತಿಯ ಪ್ರಮಾಣ­ವನ್ನು ಗುರು­ತಿಸುವ ಮಾನದಂಡವಾಗಿ ವಿಶ್ವ ಆರ್ಥಿಕ ವೇದಿಕೆಯು 2006ರಲ್ಲಿ ಮೊದಲ ಬಾರಿಗೆ ಅಂಕಿ–ಅಂಶ­ಗಳನ್ನು ಬಿಡುಗಡೆ ಮಾಡಲು ಆರಂಭಿಸಿತು. ಆರ್ಥಿಕ, ರಾಜಕೀಯ, ಶಿಕ್ಷಣ, ಆರೋಗ್ಯ ಇನ್ನಿತರ ಮಾನದಂಡದ ಆಧಾರದಲ್ಲಿ ರಾಷ್ಟ್ರೀಯ ಲಿಂಗ ತಾರತಮ್ಯ ಅಂಕಿ–ಅಂಶ­­ಗಳನ್ನು ತಯಾರಿಸುತ್ತಿದೆ.

ಆರ್ಥಿಕ ಪಾಲ್ಗೊಳ್ಳುವಿಕೆ ಮತ್ತು ಅವ­ಕಾಶ ಗಳಿಕೆಯಲ್ಲಿ ಭಾರತ 134ನೇ ಸ್ಥಾನ­­ದಲ್ಲಿದೆ. ಕಾರ್ಮಿಕ ಪಡೆಯ ಪಾಲ್ಗೊ­­­ಳ್ಳು­ವಿಕೆಯಲ್ಲಿ ಪುರುಷ­ರಿಗೆ ಹೋಲಿ­ಸಿದರೆ  ದೇಶದ ಮಹಿಳಾ ಪ್ರಮಾ­ಣವು 0.36 ಆಗಿದೆ. ಆದಾಯ ಗಳಿಕೆ­ಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದು, ಅಂದಾಜು ಪುರುಷರ ಗಳಿಕೆ ₨496096.93 ಇದ್ದರೆ, ಮಹಿಳೆ­ಯರ ಗಳಿಕೆ ₨121463.08 ಇದೆ ಎಂದು ವರದಿ ತಿಳಿಸಿದೆ.

ಶಿಕ್ಷಣ ಗಳಿಕೆಯಲ್ಲಿ ಭಾರತ 126ನೇ ಸ್ಥಾನದ­ಲ್ಲಿದ್ದು, ಪುರುಷರಿಗೆ ಹೋಲಿಸಿ­ದರೆ ಮಹಿಳೆಯರ ಸಾಕ್ಷರತಾ ಪ್ರಮಾ­ಣವು 0.68 ಇದೆ. ಆರೋಗ್ಯ ಮತ್ತು ಆಯುಷ್ಯದ ವಿಚಾರದಲ್ಲಿ ಭಾರತವು 141ನೇ ಸ್ಥಾನದೊಂದಿಗೆ ಎರ­ಡನೇ ಕೆಳ­ಮಟ್ಟದ ಕಾರ್ಯಸಾಧಕ ರಾಷ್ಟ್ರ ಎನಿ­ಸಿದ್ದು, ಅಮೆರಿಕಕ್ಕಿಂತ ಸ್ವಲ್ಪ ಮುಂದಿದೆ ಎಂದು ವರದಿ ಹೇಳಿದೆ.

ಆದರೆ ರಾಜಕೀಯ ಸಶಕ್ತೀಕರಣ ವಿಷ­ಯದಲ್ಲಿ ಭಾರತವು ಅತ್ಯದ್ಭುತ 15ನೇ ಸ್ಥಾನವನ್ನು ಹೊಂದಿದೆ. ಕಳೆದ 50 ವರ್ಷ­ಗಳಲ್ಲಿ ಹೆಚ್ಚಿನ ಮಹಿಳಾ ಮುಖ್ಯಸ್ಥ­ರನ್ನು ಹೊಂದಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರ­ವಾಗಿದೆ. ದೇಶದಲ್ಲಿನ ಸ್ಥಳೀಯ ಆಡ­ಳಿತದ ಸಮು­ದಾಯ ಅಭಿವೃದ್ಧಿ ನಿರ್ಧಾರ­­ಗಳಲ್ಲಿ ಪುರು­ಷ­ರಿಗಿಂತ ಮಹಿಳೆ­ಯರೇ ಮೇಲುಗೈ ಸಾಧಿಸಿದ್ದಾರೆ. ಜತೆಗೆ ಕಡಿಮೆ ಶಿಕ್ಷಣ ಮತ್ತು ಮಾರುಕಟ್ಟೆ ಅನುಭವ ಹೊಂದಿದ್ದರೂ ತಮ್ಮ ಕ್ಷೇತ್ರ­ಗಳಿಗೆ ಸಂಪನ್ಮೂಲ ಕ್ರೋಡೀಕರಿಸು­ವಲ್ಲಿ ಪುರುಷ­ರಿಗಿಂತ ಮಹಿಳೆಯರೇ ಹೆಚ್ಚು ಸ್ಪರ್ಧಾತ್ಮಕವಾಗಿ ಕಾಣಿಸಿದ್ದಾರೆ ಎಂದು ವರದಿ ತಿಳಿಸಿದೆ.

ದಿನವೊಂದರ ಪಾವತಿರಹಿತ ಕಾರ್ಯ­ಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಮಯ ವ್ಯಯ ಮಾಡುವ ಮೂಲಕ ಸರಾಸರಿ ಪ್ರಮಾಣ­ದಲ್ಲಿ ಭಾರಿ ಅಂದರೆ, 300 ನಿಮಿಷಗಳ ವ್ಯತ್ಯಾಸ ಕಾಣಿಸಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಸಿಬ್ಬಂದಿಯ ಪ್ರಮಾಣದಲ್ಲೂ ಇಬ್ಬರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಸಂಸ್ಥೆಗಳ ಮಾಲೀಕತ್ವ ವಿಚಾರದಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಕಡಿಮೆ ಇದೆ ಎಂದು ವರದಿ ಹೇಳಿದೆ.

ಯುಎಇ, ಬಹ್ರೇನ್‌, ಸೌದಿ ಅರೇ­ಬಿಯಾ, ಪಾಕಿಸ್ತಾನ, ಜೋರ್ಡಾನ್‌ ತರ­ಹದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರ­ತದ ಕಾರ್ಯಸಾಧನೆ ಉತ್ತಮ­ವಾಗಿದೆ. ಕಳೆದ 50 ವರ್ಷಗಳಲ್ಲಿ 20 ಮಹಿಳಾ ಮುಖ್ಯಸ್ಥರನ್ನು ಹೊಂದಿರುವ ಐಸ್ಲೆಂಡ್‌ ಮೊದಲ ಸ್ಥಾನದಲ್ಲಿದ್ದು, 2009­ರಿಂ­ದಲೂ ಅಗ್ರಪಂಕ್ತಿ ಉಳಿಸಿಕೊಂಡಿದೆ. ಇದರ ನಾರ್ಡಿಕ್‌ ನೆರೆಯ ದೇಶಗಳಾದ ಫಿನ್ಲೆಂಡ್‌ 2ನೇ, ನಾರ್ವೆ 3ನೇ, ಸ್ವೀಡನ್‌ 4ನೇ, ಡೆನ್ಮಾರ್ಕ್‌ 5ನೇ ಸ್ಥಾನಗಳಲ್ಲಿವೆ. ಕೆನಡಾ, ದಕ್ಷಿಣ ಆಫ್ರಿಕಾ ಹಾಗೂ ಪ್ರಾನ್ಸ್‌ ನಂತರ 20ನೇ ಸ್ಥಾನದಲ್ಲಿರುವ ಅಮೆರಿಕವು, ಬ್ರಿಟನ್‌ ಮತ್ತು ಆಸ್ಟ್ರೇಲಿ­ಯಾದಂತಹ ರಾಷ್ಟ್ರಗಳಿಗಿಂತ ಮುಂದಿದೆ ಎಂದು ವರದಿ ತಿಳಿಸಿದೆ.

ಜಗತ್ತಿನಲ್ಲಿ ಯಾವ ರಾಷ್ಟ್ರವೂ ಲಿಂಗ ತಾರತಮ್ಯವನ್ನು ಪೂರ್ಣ ಪ್ರಮಾಣ­ದಲ್ಲಿ ನಿರ್ಮೂಲನೆ ಮಾಡಿಲ್ಲ. ಆದರೆ ಎಲ್ಲ ಐದು ನಾರ್ಡಿಕ್‌ ದೇಶಗಳು ಶೇ 80ಕ್ಕೂ ಹೆಚ್ಚಿನ ಪ್ರಮಾಣ­ದ ನಿರ್ಮೂ­ಲನೆ ಮಾಡಿವೆ. ಯೆಮೆನ್‌ ಕೇವಲ ಶೇ 50ರಷ್ಟು ಲಿಂತ ತಾರತಮ್ಯ ಹೋಗ­ಲಾಡಿಸುವ ಮೂಲಕ ಕೊನೆಯ ಸ್ಥಾನ ಪಡೆದಿದ್ದು, ಎಲ್ಲ ನಾಲ್ಕು ಮಾನದಂಡ­ಗಳಲ್ಲಿ ಕಡಿಮೆ ಕಾರ್ಯಸಾಧನೆ ಮಾಡಿ­ರುವ ಪಾಕಿಸ್ತಾನವು 141ನೇ ಸ್ಥಾನ­ದೊಂ­ದಿಗೆ ಕೊನೆಯಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಎಂದು ವರದಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT