ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೂಜ್‌: ಬೆಳ್ಳಿ ಗೆದ್ದ ಶಿವಾ

Last Updated 21 ಡಿಸೆಂಬರ್ 2014, 19:48 IST
ಅಕ್ಷರ ಗಾತ್ರ

ನಗಾನೊ, ಜಪಾನ್‌ (ಐಎಎನ್‌ಎಸ್‌): ಭಾರತದ ಶಿವ ಕೇಶವನ್‌ ಇಲ್ಲಿ ನಡೆಯುತ್ತಿರುವ  17ನೇ ಏಷ್ಯನ್‌ ಲೂಜ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.

ಭಾನುವಾರ ಹಿಮದ ಮೇಲೆ ನಡೆದ ಪ್ರಬಲ ಸ್ಪರ್ಧೆಯಲ್ಲಿ  ಶಿವಾ 49.934 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.  ಜಪಾನ್‌ನ ಹಿದೆನಾರಿ ಕನಾಯಮ (49.791ಸೆ.) ಚಿನ್ನ ಗೆದ್ದರೆ, ದಕ್ಷಿಣ ಕೊರಿಯದ ಕಿಮ್‌ (50.178ಸೆ.) ಕಂಚಿಗೆ ತೃಪ್ತಿಪಟ್ಟರು.

ಚಾಂಪಿಯನ್ನರಿಗೆ ಅದ್ಧೂರಿ ಸ್ವಾಗತ
ಕೋಲ್ಕತ್ತ (ಐಎಎನ್‌ಎಸ್‌): 
ಶನಿವಾರ ಮುಕ್ತಾಯಗೊಂಡ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ  ತಂಡವನ್ನು ಮಣಿಸಿ  ಚೊಚ್ಚಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಅಥ್ಲೆಟಿಕೊ ಡಿ ಕೋಲ್ಕತ್ತ ತಂಡದ ಆಟಗಾರರು ಭಾನುವಾರ  ತವರಿಗೆ ವಾಪಸಾದರು. ಈ ವೇಳೆ ಅಭಿಮಾನಿಗಳು  ಅದ್ಧೂರಿ ಸ್ವಾಗತ ನೀಡಿದರು.

ತಂಡದ ಆಡಳಿತ ಮಂಡಳಿ ತಂಡದ ಸದಸ್ಯರಿಗೆ ತಲಾ ₨9.50 ಲಕ್ಷ ನಗದು ಬಹುಮಾನ ಘೋಷಿಸಿದೆ.

ಕ್ರಿಕೆಟ್‌: ಇಶಾಂತ್‌ , ಸ್ಮಿತ್‌ಗೆ ದಂಡ
ಬ್ರಿಸ್ಬೇನ್‌ (ಪಿಟಿಐ):
ಆಸ್ಟ್ರೇಲಿಯ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಭಾರತದ ವೇಗಿ ಇಶಾಂತ್‌ ಶರ್ಮ ಅವರ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ  ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಿದೆ.  ಆಸ್ಟ್ರೇಲಿಯ ತಂಡ ನಿಧಾನ ಗತಿಯ ಬೌಲಿಂಗ್‌ ದಾಳಿ ನಡೆಸಿದ್ದಕ್ಕೆ  ತಂಡದ ನಾಯಕ ಸ್ಟೀವನ್‌ ಸ್ಮಿತ್‌
ಮೇಲೆ ಪಂದ್ಯದ ಸಂಭಾವನೆಯ ಶೇ 60ರಷ್ಟು ದಂಡ ಹೇರಲಾಗಿದೆ.

ಪಂದ್ಯದ ಮೂರನೇ ದಿನವಾದ  ಶುಕ್ರವಾರದ ಆಟದ ವೇಳೆ ಸ್ಟೀವನ್‌ ಸ್ಮಿತ್‌ ಅವರ ವಿಕೆಟ್‌ ಪಡೆದ ಇಶಾಂತ್‌  , ನಂತರ ಅಸಭ್ಯ ಭಾಷೆ ಬಳಸಿ ಸ್ಮಿತ್‌ ಅವರನ್ನು ನಿಂದಿಸಿದ್ದರು.  

‘ತಂಡದ ಪಾಲಿನ ನಿರ್ದಿಷ್ಟ ಓವರ್‌ಗಳನ್ನು ಪೂರೈಸಲು  ನಿಗದಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡ ಕಾರಣ  ಆಸ್ಟ್ರೇಲಿಯ ತಂಡದ ನಾಯಕ ಸ್ಟೀವನ್‌ ಸ್ಮಿತ್‌ ಅವರಿಗೆ ಶೇ 60 ಮತ್ತು ತಂಡದ ಇತರ ಆಟಗಾರರ ಮೇಲೆ ಶೇ 30ರಷ್ಟು ದಂಡ ವಿಧಿಸಲಾಗಿದೆ’ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

ಹೋಲ್ಡರ್‌ಗೆ  ವಿಂಡೀಸ್‌ ನಾಯಕತ್ವ
ಸೆಂಚೂರಿಯನ್‌ (ಐಎಎನ್‌ಎಸ್‌/ ಸಿಎಂಸಿ):
ಹೋದ ವರ್ಷವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜಾಸನ್‌ ಹೋಲ್ಡರ್‌ ಅವರನ್ನು  ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿ ಶನಿವಾರ ಏಕದಿನ ತಂಡದ ನೂತನ ನಾಯಕನನ್ನಾಗಿ ನೇಮಿಸಿದೆ.
ಡ್ವೇನ್‌ ಬ್ರಾವೊ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಆ ಜವಾಬ್ದಾರಿಯನ್ನು  23 ವರ್ಷದ ಹೋಲ್ಡರ್‌ಗೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT