ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಜೀತ:- ಅಪರಾಧಿ ಯಾರು?

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

‘ವೇಶ್ಯಾವಾಟಿಕೆ, ಕಾನೂನು ಪ್ರಕಾರ ತಪ್ಪಿಲ್ಲದಂಗೆ ಮಾಡಾರಂತೆ! ಹಂಗಾದ್ರೆ ದೊಡ್ಡವರ ಮನೆ ಹೆಣ್ಣು­­ಮಕ್ಕಳನ್ನೂ ಇದಕ್ಕೆ ಕಳಸ್ತಾರಂತಾ? ನಾವ್ ಇದೇ ಕೆಲ್ಸ ಮಾಡ್ಕಂಡೇ ಸಾಯಾದಾ?’  ಎಂದು ಅವಳು ಕೇಳುತ್ತಿದ್ದಳು. ಬಡ­ತನ­ದಿಂದಾಗಿ ಚಿಕ್ಕವಯಸ್ಸಿಗೇ ಅಪ್ಪ ವೇಶ್ಯಾವಾಟಿಕೆಗೆ ನೂಕಿದ್ದ. ವಿದ್ಯಾಭ್ಯಾಸವಿಲ್ಲದೇ, ಸಾಧ್ಯವಾಗುವಂತಹ ಕೆಲಸವೂ ಸಿಗದೆ ಅನಿವಾರ್ಯವಾಗಿ ಲೈಂಗಿಕ ಜೀತದಲ್ಲೇ ಮುಂದುವರಿ­ಯುತ್ತಿ­ದ್ದಾಳೆ. ಅವಳ ಇಂತಹ ಸ್ಥಿತಿಗೆ ಯಾರು ಹೊಣೆ?

‘ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಅದು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ! ಮನಸ್ಸನ್ನು ಕೊಂದು­ಕೊಂಡು ದುಡ್ಡು ಕೊಟ್ಟವರೊಂದಿಗೆ, ಅವರ ಮರ್ಜಿಯಂತೆ ದಿನವೂ ಸುಖ ನೀಡಬೇಕೆಂದರೆ ಸಂತೋಷನಾ? ನಾವೇನು ಯಂತ್ರಗಳಾ? ಹೊಟ್ಟೆ ತುಂಬುವಷ್ಟು ದುಡಿದು ಸಂಪಾದಿಸಲು ಬೇರೆ ವ್ಯವಸ್ಥೆ­ಯಾದರೆ, ಬಡತನದಿಂದ ಇಲ್ಲಿಗೆ ಬಂದಿರುವ ಅರ್ಧ­ದಷ್ಟು ಹುಡುಗಿ­ಯರು  ವೇಶ್ಯಾವಾಟಿಕೆ ಬಿಡುತ್ತಾರೆ’ ಎನ್ನುತ್ತಾಳೆ ಈ ಜಾಲಕ್ಕೆ ಬಿದ್ದಿರುವ ಮತ್ತೊಬ್ಬಳು. ಅವಳು ತನ್ನಂಥವರ ಹಾಗೂ  ಅವರ ಮಕ್ಕಳ ಒಳಿತಿಗಾಗಿ ಕೈಲಾದ­ಮಟ್ಟಿಗೆ ಆಸರೆಯಾಗಿ­ದ್ದಾಳೆ. 

ನಮ್ಮ  ನ್ಯಾಯವ್ಯವಸ್ಥೆ ವೇಶ್ಯಾವಾಟಿಕೆಯನ್ನು ವೃತ್ತಿ ಎಂದು ಪರಿಗಣಿಸಿಲ್ಲ. ಬದಲಿಗೆ ‘ಲೈಂಗಿಕಜೀತ’ವೆಂದು ಪ್ರತಿಪಾದಿಸಿದೆ.  ಅನಿವಾರ್ಯವಾಗಿ ಇದರಲ್ಲಿ ಬೀಳುವ ಹೆಣ್ಣುಮಕ್ಕಳ ಪರ­ವಾ­ಗಿಯೇ ಕಾನೂನುಗಳು ರೂಪಿತವಾಗಿವೆ. ಆದರೆ ಇದನ್ನು ವಾಣಿ­ಜ್ಯೀಕರಣಗೊಳಿಸುವ ಚಟುವಟಿಕೆಯಲ್ಲಿರುವ ಪುರುಷ- ಮತ್ತು ಮಹಿಳೆ ಇಬ್ಬರನ್ನೂ ಅಪರಾಧಿಗಳೆಂದು  ಪರಿಗಣಿಸಿದೆ. ಹಾಗಿ­ದ್ದರೆ ದಾರಿ ತಪ್ಪಿರುವುದೆಲ್ಲಿ? ಅದನ್ನು ಪರಿಣಾಮಕಾರಿಯಾಗಿ, ಸರಿಯಾಗಿ ಹಾಗೂ ಕಠಿಣವಾಗಿ ಅನುಷ್ಠಾನಗೊಳಿಸುವಲ್ಲಿ. ಇದಾ­ಗದೇ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ ಮೂಲರೋಗವನ್ನು ಹಾಗೇ ಬಿಟ್ಟು ಕೇವಲ ಜ್ವರಕ್ಕೆ ಚಿಕಿತ್ಸೆ ನೀಡಿದಂತಾಗುತ್ತದೆ.

ವ್ಯಾಪಕವಾಗಿ ಹಬ್ಬುತ್ತಿರುವ ಎಚ್‌ಐವಿ/ಏಡ್ಸ್‌ನಂತಹ ಮಾರಕ ರೋಗಗಳು ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಬಹು­ದೊಡ್ಡ ಬಳುವಳಿ. ಇದನ್ನು ಮೂಲದಲ್ಲಿ ಚಿವುಟಿ ಹಾಕದೆ ಸರ್ಕಾ­ರವೇ ತನ್ನ ಅಂಗಸಂಸ್ಥೆಯಾದ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮೂಲಕ  ಹಾಗೂ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಹಕಾರ­ದೊಂದಿಗೆ ಸಮುದಾಯ ಆಧಾರಿತ ಸಂಘಟನೆ, ಸಹಭಾಗಿ ಲೈಂಗಿಕ ಜೀತಗಾರರ ಮೂಲಕ ವೇಶ್ಯಾವಾಟಿಕೆಯಲ್ಲಿ ತೊಡಗಿ ರು­ವವರನ್ನು ನೋಂದಣಿ ಮಾಡಿಸುತ್ತಿದೆ. ಅವರಿಗೆ ಕಾಂಡೊಮ್ ವಿತರಣೆ, ರಕ್ತ ಮತ್ತು ನಿಯಮಿತ ಆರೋಗ್ಯ ತಪಾ­ಸಣೆ,  ಎಚ್‌ಐವಿ/ ಏಡ್ಸ್ ಇನ್ನಿತರ ಗುಪ್ತರೋಗಗಳ ನಿರ್ವ­ಹ­ಣೆಯ ತರಬೇತಿ ಮತ್ತು ಚಿಕಿತ್ಸೆಯ ಮೂಲಕ ಯಥಾ-­ಸ್ಥಿತಿ­ಕಾಯ್ದು­ಕೊಳ್ಳುತ್ತಾ ಸುರಕ್ಷಿತ ಲೈಂಗಿಕತೆಗೆ ಸಹಕಾರಿಯಾಗಿದೆ.

ಇದಕ್ಕಾಗಿಯೇ ಬಜೆಟ್‌ನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನೂ  ತೆಗೆದಿರಿಸಿ, ರೋಗ­ಗಳ ನಿಯಂತ್ರಣದ ಹೆಸರಿನಲ್ಲಿ ಬೇಡಿಕೆ ಮತ್ತು ಪೂರೈಕೆಗಳನ್ನೂ ನಿರ್ವಹಿಸ­ಲಾಗುತ್ತಿದೆ. ಹೀಗೆಂದೇ ವೇಶ್ಯಾವಾಟಿಕೆಗೆ ಬೀಳು­ವವರ ಸಂಖ್ಯೆಯೂ ಹೆಚ್ಚು­ತ್ತಿದೆ. ರೋಗ ನಿಯಂತ್ರಣದ ಹೆಸರಿನ ಜಾಲವೂ ಹಬ್ಬುತ್ತಿದೆ.

ಕರ್ನಾಟಕದಲ್ಲಿ ಸದ್ಯ ೨.೫೦ ಲಕ್ಷಕ್ಕೂ ಅಧಿಕ ಎಚ್‌ಐವಿ ಪೀಡಿತರಿದ್ದಾರೆ. ೧೯೯೮–-೨೦೧೩ರ ವರೆಗೆ ೨೯,೦೦೦ ರೋಗಿಗಳು ಮೃತಪಟ್ಟಿ­ದ್ದಾರೆ. ಸೋಂಕಿನ ವ್ಯಾಪಕತೆ, ಪೀಡಿತರು ಮತ್ತು ಜನಸಂಖ್ಯೆಯ ದೃಷ್ಟಿಯಿಂದ ದೇಶದಲ್ಲೇ ಕರ್ನಾ­ಟಕ ಮೂರನೆಯ ಸ್ಥಾನದಲ್ಲಿದೆ! ನವೆಂಬರ್ ೨೦೧೨­ರವರೆಗೆ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆಯಲ್ಲಿ ತೀವ್ರ ಅಪಾ­ಯದ ಗುಂಪಿನಲ್ಲಿ ನೋಂದಣಿಯಾದ ಲೈಂಗಿಕ ಜೀತಗಾರ್ತಿ­ಯರ ಸಂಖ್ಯೆ ೭೯,೧೬೯. ಇವರಲ್ಲಿ ಸಲಿಂಗಕಾಮಿ ಪುರುಷ ಲೈಂಗಿಕ ಜೀತಗಾರರ ಸಂಖ್ಯೆ  ೨೫,೨೪೪. ಇದಲ್ಲದೇ ಲಕ್ಷಾಂತರ ಮಂದಿ ರೋಗವಾಹಕರಿದ್ದಾರೆ.

ಈ ಲೈಂಗಿಕ ಜೀತಗಾರ್ತಿ­ಯರಲ್ಲಿ ಹೆಚ್ಚಿನವರು ತಳ ಸಮುದಾಯ ಇಲ್ಲವೇ ಹಿಂದುಳಿದ ವರ್ಗದವರು ಎಂಬುದು ಅಧ್ಯಯನದಿಂದ ತಿಳಿ­ಯುತ್ತದೆ. ಉದಾಹರಣೆಯಾಗಿ ಒಂದು ಜಿಲ್ಲೆಯನ್ನು ನೋಡು­ವುದಾ­ದರೆ, ೨,೭೯೧ ಲೈಂಗಿಕ ಜೀತಗಾರ್ತಿಯರಲ್ಲಿ ೫೯೯- ಮಂದಿ ಪರಿಶಿಷ್ಟ ಜಾತಿ, ೬೯೮- ಮಂದಿ ಪರಿಶಿಷ್ಟ ಪಂಗಡ, ೭೯೯ ಮಂದಿ -ಹಿಂದು­ಳಿದ ಜಾತಿ, ೬೯೬- ಮಂದಿ ಇತರ ಸಮು­ದಾಯಗಳಿಗೆ ಸೇರಿ­ದ­ವರು. ಇದರಲ್ಲಿ ಅಲ್ಪಸಂಖ್ಯಾತ ಸಮುದಾ­ಯದವರ ಸಂಖ್ಯೆಯೂ ಅಧಿಕ.  ಬೇರೆ ಜಿಲ್ಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.  ಆರ್ಥಿಕ-ವಾಗಿ, ಸಾಮಾಜಿಕವಾಗಿ ಅಂಚಿಗೆ ನೂಕಿಸಿ­ಕೊಂಡ ಹೆಣ್ಣು ಮಕ್ಕಳು ಈ ಪ್ರಮಾಣದಲ್ಲಿ ಲೈಂಗಿಕ ಜೀತಕ್ಕೆ ಬಿದ್ದಿರುವುದಕ್ಕೆ ಕಾರಣ ನಮ್ಮ ಸರ್ಕಾರಗಳು ಇವರಿಗೆ ಆರ್ಥಿಕ ಭದ್ರತೆ ಇರುವ ಸೂಕ್ತ ಉದ್ಯೋಗವನ್ನು ಇದುವರೆಗೆ ಕೊಟ್ಟೇ ಇಲ್ಲದಿರುವುದು. ಅಪರಾಧಗಳ ಕುರಿತು ಸರ್ಕಾರದ ಬಳಿ ಇಷ್ಟೆಲ್ಲಾ ದಾಖಲೆಗಳಿದ್ದಾಗಲೂ ನಿಯಂತ್ರಣ ಏಕೆ ಸಾಧ್ಯ­ವಾಗುತ್ತಿಲ್ಲ?

ನೋಂದಣಿಯಾಗುವ ಹೆಚ್ಚಿನವರು ಸುರಕ್ಷಿತ ಲೈಂಗಿಕತೆಗೆ ಅನುಕೂಲ ಮತ್ತು ಅರಿವು ಇಲ್ಲದೇ, ಬಡತನದ ಕಾರಣಕ್ಕಾ­ಗಿಯೇ ಇಲ್ಲಿಗೆ ಬಂದವರು. ನಮ್ಮ ಕಾಳಜಿಯು ಬಡ­ತನ, ಅನಕ್ಷರತೆ, ನಿರುದ್ಯೋಗ, ಪ್ರೀತಿ-, ಕೆಲಸದ ಆಕರ್ಷಣೆ­ಯಿಂದ ಮೋಸಗೊಂಡು, ಕೌಟುಂಬಿಕ--, ಸಾಮಾಜಿಕ ಕಾರಣ­ಗಳಿಗೆ ವೇಶ್ಯಾ­ವಾಟಿಕೆ ಎಂಬ ಜಾಲದೊಳಗೆ ಬಿದ್ದಿರುವ, ಬೀಳುತ್ತಿ­ರುವ ಮಕ್ಕಳು ಮತ್ತು ಮಹಿಳೆ­ಯರ ಕುರಿತಾದದ್ದು ಮಾತ್ರವೇ ಆಗಿದ್ದಾಗ ಸಮಸ್ಯೆಯನ್ನು ಆಳವಾಗಿ ಅಭ್ಯಸಿಸಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ­ವಾಗುತ್ತದೆ. ಅದಿ­ಲ್ಲದೇ ವೇಶ್ಯಾವಾಟಿಕೆ­ಯನ್ನು ಕಾನೂನುಬದ್ಧ­ಗೊಳಿ­ಸಿದರೆ ಇವರನ್ನೆಲ್ಲ  ಶಾಶ್ವತವಾಗಿ ಲೈಂಗಿಕ­ಜೀತದ ನರಕಕ್ಕೆ ದೂಡಿದಂತಾಗು­ತ್ತದೆ.

ಯಾವ ನೋಂದಣಿ ಪ್ರಕ್ರಿಯೆಯ ಒಳಗೂ ದಾಖಲಾಗದೇ ಹೊರಗುಳಿದವರ ಸಂಖ್ಯೆ ಇದರ ದುಪ್ಪಟ್ಟು ಇದೆ. ಜತೆಗೆ, ಇದ­ರಲ್ಲಿ ಹೈಟೆಕ್ ವೇಶ್ಯಾವಾಟಿಕೆ, ಕಾಲ್‌ಗರ್ಲ್‌ಗಳು, ದಂಧೆಯ ಲೇಬಲ್ ಇಲ್ಲದ ಸಭ್ಯ-ನಾಗರಿಕ ವ್ಯಭಿಚಾರವೂ ಸೇರಿದೆ. ಮೋಜಿ­ಗಾಗಿ, ವೈಭವೋಪೇತ ಜೀವನದ ಆಕರ್ಷಣೆ­ಗಾಗಿ, ಸುಲಭದ ಹಣ ಗಳಿಕೆಗಾಗಿ ಇವರು ತಾವಾಗಿಯೇ ಇದನ್ನು ಆಯ್ದು­ಕೊಳ್ಳು­ತ್ತಿ­ದ್ದಾರೆ. ವೇಶ್ಯಾವಾಟಿಕೆ ವ್ಯಾಪಕವಾಗಿ ಹಬ್ಬು­ತ್ತಿದೆ. ಜಾಗತೀಕರಣವೆಂಬ ಮಾರುಕಟ್ಟೆ ಕೇಂದ್ರಿತ ಅಭಿವೃದ್ಧಿ, ಹೆಣ್ಣಿನ ದೇಹವನ್ನು ಮಾಧ್ಯಮದ ಮೂಲಕ ಸರಕಾಗಿ ವಿಜೃಂಭಿ­ಸುತ್ತಾ, ಲೈಂಗಿಕತೆಯನ್ನು ವಿಕೃತವಾಗಿ ಪ್ರಚೋ­ದಿಸ­ಲಾ­ರಂಭಿಸಿದ ನಂತರ ಈ ಜಾಲಕ್ಕೆ ನೂಕಿಸಿಕೊಳ್ಳುವವರು ಮತ್ತು ತಾವಾಗಿಯೇ ವೇಶ್ಯಾ­ವಾಟಿಕೆ­ಯನ್ನು ಆಯ್ದು­ಕೊಳ್ಳುವ­ವರ ಪ್ರಮಾಣ ಶೇ ೫0ರಷ್ಟು ಹೆಚ್ಚಿದೆ. ವಾಣಿಜ್ಯೀಕೃತ ವೇಶ್ಯಾ­ವಾಟಿಕೆ ಮತ್ತು ಕಾಮಪ್ರಚೋದಕಗಳ ದೊಡ್ಡ ಮಾಫಿಯಾ, ಅಂಕೆಯೇ ಇಲ್ಲದೆ ಬೆಳೆದಿರುವಾಗ ಕಡಿವಾಣ ಹಾಕಬೇಕಾ­ದುದು ಯಾರು?

ವಿಶ್ವಸಂಸ್ಥೆಯ ಹ್ಯೂಮನ್‌ ರೈಟ್ಸ್‌ ವಾಚ್‌ ವರದಿಯ ಪ್ರಕಾರ, ಇದುವರೆಗೆ ಭಾರತದ  ಒಂದೂವರೆ ಕೋಟಿಗೂ ಹೆಚ್ಚು ಹೆಣ್ಣು­­ಮಕ್ಕಳನ್ನು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡ­ಲಾಗಿದೆ. ಇವರಲ್ಲಿ ಶೇ ೪0ರಷ್ಟು ಮಂದಿ ಬಾಲಕಿ­ಯರು. ಮಾನ­ವ­­ಹಕ್ಕುಗಳ ಬಗೆಗೆ ಗಂಟಲು ಹರಿಯುವಂತೆ ಬೊಬ್ಬೆ ಹೊಡೆ­ಯಲಾಗುತ್ತಿದೆ, ಆದರೆ ಹೆಣ್ಣು ಈ ಹಕ್ಕುಗಳ ವ್ಯಾಪ್ತಿ­ಯಲ್ಲಿ ಬರುವುದೇ ಇಲ್ಲವೇ?- ಸಂಕಟದಿಂದ ಕೇಳ­ಬೇಕಾಗಿದೆ.

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದೆಂದರೆ ಅದನ್ನು ಪ್ರೋತ್ಸಾಹಿಸಿದಂತಲ್ಲವೆಂದು ನಾವೆಷ್ಟೇ ಹೇಳಿದರೂ ಜಾಗತೀಕ­ರ­ಣದ ವಿಕೃತಿಗಳು, ಸೆಕ್ಸ್‌ ಟೂರಿಸಂ ಇಂದು ಬಹ­ಳಷ್ಟು ದೇಶಗಳ ಹೆಚ್ಚಿನ ಆದಾಯ ಮೂಲವಾಗಿರುವುದರಿಂದ ಹೆಣ್ಣನ್ನೂ ಸರ­ಕೆಂದು ಪರಿಗಣಿಸಿ ಅವಳಿಗೆ ಸಂಬಂಧಿಸಿದ ಅಪಾಯಗಳನ್ನು ನಿರ್ಲ­ಕ್ಷಿಸಿ ಸರ್ಕಾರಗಳೇ ನಡೆಸುವ ವೇಶ್ಯಾ­ವಾಟಿಕೆಯಾಗಿ­ಬಿಡು­ತ್ತದೆ! ಇದನ್ನು ವಿಸ್ತೃತವಾಗಿ ಬೆಳೆಸುವ, ಮಧ್ಯಸ್ಥಿಕೆ ಮಾಡುವ ಉದ್ದೇಶದಿಂದಲೇ ಹುಟ್ಟಿಕೊಂಡಿರುವ ಕೆಲ ಸಾಂಸ್ಥಿಕ ವ್ಯವಸ್ಥೆ­ಗಳು, ಲೈಂಗಿಕಜೀತವನ್ನೇ ವೃತ್ತಿ ಎಂದೂ, ಇವರನ್ನು ಲೈಂಗಿಕ ಕಾರ್ಮಿಕರೆಂದೂ ಬಿಂಬಿಸುತ್ತಿವೆ.

ಇದೇ ಸಂಸ್ಥೆಯವರೋ, ಲೈಂಗಿಕ ಜೀತಗಾರರೋ, ಮಧ್ಯವರ್ತಿಗಳೋ ತಮ್ಮ ಮಕ್ಕಳಿಗೆ ಮಾತ್ರ ಈ ಘನವಾದ ವೃತ್ತಿ ಬೇಡವೆನ್ನುತ್ತಾರೆ. ಹಾಗಿದ್ದರೆ ಲೈಂಗಿಕ ಜೀತವೆಂಬುದು ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವುದಲ್ಲವೇ? ಇದನ್ನು ಕಾನೂನು­ಬದ್ಧಗೊಳಿಸಲು ಯೋಚಿಸುತ್ತಿರುವವರು ಲೈಂಗಿಕಜೀತಗಾರ್ತಿ­ಯರ ಆರ್ಥಿಕ-, ಸಾಮಾಜಿಕ ಜೀವನ ಸುಧಾರಣೆಗೇಕೆ  ಯೋಚಿ­ಸುತ್ತಿಲ್ಲ? ದೇವದಾಸಿ, ಜೋಗಿಣಿ, ಬಸವಿ ಪದ್ಧತಿಗಳು ಮಾನವ­ಹಕ್ಕುಗಳ ಉಲ್ಲಂಘನೆಯೆಂದು ನಿರ್ಬಂಧಿಸಿ ಪುನರ್ವಸತಿ ಮಾಡ­ಲಾಗು­ತ್ತಿದೆ. ಅದೇ ನೀತಿ ಇಲ್ಲಿಗೂ ಅನ್ವಯಿಸಬೇಕು.

ದಶಕಗಳಿಂದ ವೇಶ್ಯಾವಾಟಿಕೆ ಕುರಿತು ನಮ್ಮ ನ್ಯಾಯಾಲಯ­ಗಳಿಂದ ಬಂದ ತೀರ್ಪುಗಳೆಲ್ಲವೂ ಹೆಣ್ಣುಮಕ್ಕಳನ್ನು ಈ ಜೀತಕ್ಕೆ ಬಲವಂತದಿಂದಲೋ, ಪ್ರಚೋದಿಸಿಯೋ, ಆರ್ಥಿಕ ಸಂಕಷ್ಟದ ಕಾರಣಕ್ಕೋ ತಳ್ಳುವ ಮೂಲಕ ಅವರನ್ನು ನಿರಂತರ ಅತ್ಯಾ­ಚಾರಕ್ಕೆ ಗುರಿಪಡಿಸಲಾಗಿದೆ ಎಂದು ಖಂಡಿಸಿ, ಮಾರ್ಗ­ದರ್ಶಿ ಸೂತ್ರಗಳನ್ನೂ ಕೊಟ್ಟಿತ್ತು. ಅವುಗಳಲ್ಲಿ ಮುಖ್ಯವಾದವು:
* ಬಡತನದ ಕಾರಣಕ್ಕೆ ವೇಶ್ಯಾವಾಟಿಕೆಗೆ ಇಳಿಯುತ್ತಿರು­ವವ­ರಿಗಾಗಿ ಪರಿಣಾಮಕಾರಿ ಪುನರ್ವಸತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿ, ಆರ್ಥಿಕವಾಗಿ ಸ್ವಾವಲಂಬಿ­ಗಳ­ನ್ನಾಗಿಸುವ ಯೋಜನೆಗಳನ್ನು ಜಾರಿಗೊಳಿಸಬೇಕು.
* ವಾಣಿಜ್ಯೀಕೃತ ವೇಶ್ಯಾವಾಟಿಕೆಯ ಅಪರಾಧದ ನಿಗ್ರಹಕ್ಕೆ, ತಲೆಹಿಡುಕರ, ವೇಶ್ಯಾಗೃಹಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಅನುಷ್ಠಾನಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳ­ಬೇಕು.
*ಚಿಕ್ಕ ವಯಸ್ಸಿನವರನ್ನು  ಬಳಸಿಕೊಳ್ಳುವ ವೇಶ್ಯಾವಾ­ಟಿಕೆ ಸಂಪೂರ್ಣ ನಿರ್ಮೂಲನೆಯಾಗಬೇಕು. ವೇಶ್ಯಾ ವೃತ್ತಿಯಲ್ಲಿ­ಇರುವವರ ಮಕ್ಕಳ ರಕ್ಷಣೆ, ಪೋಷಣೆ, ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಬೇಕು. ಆದರೆ, ಇವು ದಶಕ­ಗಳಿಂದ ಅನುಷ್ಠಾನಗೊಳ್ಳದೆ ಕಡತಗಳಲ್ಲೇ ಕುಳಿತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT