ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕನೀತಿಯ ಬಲವರ್ಧನೆ...

Last Updated 1 ಮೇ 2015, 19:30 IST
ಅಕ್ಷರ ಗಾತ್ರ

‘ಬದನವಾಳು ಸತ್ಯಾಗ್ರಹ’ ಎಂಬ ಹೆಸರಿನಲ್ಲಿ ಸುಸ್ಥಿರ ಬದುಕಿನ ಅಗತ್ಯದ ಬಗ್ಗೆ ಸಮಸ್ತ ಸಮಾಜದ ಮತ್ತು ಸರ್ಕಾರದ ಗಮನ ಸೆಳೆಯಲು ನಂಜನಗೂಡು ತಾಲ್ಲೂಕಿನ ಬದನವಾಳುವಿನಲ್ಲಿ ಏಪ್ರಿಲ್‌ 19ರಂದು ರಾಷ್ಟ್ರೀಯ ಸಮಾವೇಶ ಏರ್ಪಾಟುಗೊಂಡಿತ್ತು. ಶ್ರಮಸಹಿತ ಸುಸ್ಥಿರ ಜೀವನ ಮಾರ್ಗಕ್ಕಾಗಿ ಜಗತ್ತಿನಾದ್ಯಂತ, ವಿಶೇಷವಾಗಿ ಭಾರತದಲ್ಲಿ ಬಹುದೊಡ್ಡ ಜನಾಂದೋಲನ  ನಡೆಯಬೇಕಿದೆ. ಇದು 21ನೇ ಶತಮಾನದ ಕರೆಯೂ ಆಗಿದೆ ಮತ್ತು ಧರ್ಮವೂ ಆಗಿದೆ.

ಬದನವಾಳು ರಾಷ್ಟ್ರೀಯ ಸಮಾವೇಶದ ಆಶಯ ನೆರವೇರಬೇಕಾದರೆ ರಾಜ್ಯಶಕ್ತಿಯ ಮೇಲೆ ಲೋಕಶಕ್ತಿಯ ಅಂಕುಶ ಇರಬೇಕಾದುದು ಬಲುಅಗತ್ಯ. ಜನರು ಸರಳ ಮತ್ತು ಸುಸ್ಥಿರ ಬದುಕನ್ನು ಬಹಳ ತೀವ್ರವಾಗಿ ಬಯಸುತ್ತಿರುವಾಗ ಸರ್ಕಾರ ಅದಕ್ಕೆ ವಿರುದ್ಧವಾದ ನೀತಿಯನ್ನು ಅನುಸರಿಸುತ್ತಿದ್ದರೆ, ಜನರು ಅನುಸರಿಸಲು ಬಯಸುವ ಸುಸ್ಥಿರ ಬದುಕನ್ನು ನಡೆಸಲು ಕಷ್ಟಸಾಧ್ಯವಾಗುತ್ತದೆ. ಜನರ ಮನದಿಚ್ಛೆ ಒಂದು ಬಗೆಯದಾಗಿದ್ದು, ಸರ್ಕಾರದ ಇಚ್ಛೆ ಇನ್ನೊಂದು ಬಗೆಯದಾದರೆ ಅಶಾಂತಿಗೆ ಕಾರಣವಾಗುತ್ತದೆ. ಆದ್ದರಿಂದ ಜನರ ಇಚ್ಛೆಗೆ ಪ್ರಭುತ್ವ ಪೂರಕವಾಗಿ ಕೆಲಸ ಮಾಡುವಂತೆ ಮಾಡಬೇಕಾದುದು ಈ ಸಮಾವೇಶವನ್ನು ಸಂಘಟಿಸಿದವರ ಮತ್ತು ಅದರಲ್ಲಿ ಭಾಗವಹಿಸಿದವರ  ಮುಂದಿರುವ ದೊಡ್ಡ ಸವಾಲೆಂದು ನಾನು ಭಾವಿಸುತ್ತೇನೆ. ಇಂದಿನ ಸರ್ಕಾರ ಯಂತ್ರ ನಾಗರಿಕತೆಗೆ ಹೆಚ್ಚು ಒತ್ತು ಕೊಡುತ್ತಿದೆ. ವಿದೇಶಗಳಲ್ಲಿಯ ಬೃಹತ್ ಕೈಗಾರಿಕಾ ಕಂಪೆನಿಗಳಿಗೆ ಭಾರತದಲ್ಲಿ ಬಂಡವಾಳ ಹೂಡಲು ಮತ್ತು ಇಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಕೆಂಪು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ.

‘ಭಾರತದಲ್ಲಿ ತಯಾರಿಸಿ’ ಎಂಬ ನೀತಿಯ ಮೇರೆಗೆ ಭಾರತಕ್ಕೆ ಬರಲಿರುವ ವಿದೇಶಿ ಕೈಗಾರಿಕಾ ಕಂಪೆನಿಗಳಿಗೆ ತೆರಿಗೆಯಲ್ಲಿ ವಿನಾಯಿತಿ, ಆಮದು-ರಫ್ತು ಸುಂಕಗಳಲ್ಲಿ ರಿಯಾಯಿತಿ, ವಿದ್ಯುತ್ ಪೂರೈಕೆಯಲ್ಲಿ ರಿಯಾಯಿತಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಿಯಾಯಿತಿಗಳನ್ನು ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ.  ಯುವಶಕ್ತಿಯನ್ನು ಗ್ರಾಮಗಳಿಂದ ನಗರಗಳಿಗೆ ಓಡಿಸುವ ಕ್ರಮ ಇದು. ಇದರಿಂದಾಗಿ, ಸುಸ್ಥಿರ ಬದುಕಿನ  ಸಮಾವೇಶದ ಪ್ರಮುಖ ಆಶಯಗಳಾದ ಕೈಮಗ್ಗ ವಸ್ತ್ರ ನಾಳಿನ ವಸ್ತ್ರ; ಪಾರಂಪರಿಕ ಕೃಷಿ ನಾಳಿನ ಕೃಷಿ; ಮಾತೃಭಾಷೆ ನಾಳಿನ ಭಾಷೆ; ವಿಕೇಂದ್ರೀಕರಣ ನಾಳಿನ ರಾಜಕಾರಣ ಮುಂತಾದವುಗಳು ನೆರವೇರುವುದು ದಿನಗಳು ಉರುಳಿದಂತೆ ಬಹು ಕಷ್ಟವಾಗಲಿದೆ. ಬದನವಾಳು  ಸಮಾವೇಶದ ಈ ಆಶಯಗಳ ಕ್ರೋಡೀಕೃತ ನೀತಿಯನ್ನು ಲೋಕನೀತಿ ಎಂದು ಕರೆಯಬಹುದಾಗಿದೆ.

ಲೋಕನೀತಿಯ ಬಲಸಂವರ್ಧನೆ ಕೆಲಸ ತುರ್ತಾಗಿ ಆಗಬೇಕಿದೆ. ಪ್ರಜ್ಞಾವಂತ ಮತದಾರರು ಸಹಮತದಾರರಲ್ಲಿ ಈ ವಿಷಯದ ಬಗ್ಗೆ ಜಾಗೃತಿ ಮೂಡಿಸಬೇಕು. ಜಾಗೃತಿ ಮೂಡಿಸುವ ಕಾರ್ಯ ಒಂದು ಚಳವಳಿಯ ರೂಪದಲ್ಲಿಯೇ ನಡೆಯಬೇಕು. ಜಾಗೃತಿ ಚಳವಳಿ ಎಷ್ಟು ಬಿರುಸಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಬೇಕೆಂದರೆ ಲೋಕನೀತಿಗೆ ವಿರುದ್ಧವಾದ ನಿಲುವು ತಳೆಯುವ ಸರ್ಕಾರವನ್ನು 2019ರಲ್ಲಿ ನಡೆಯಲಿರುವ ಮಹಾ ಚುನಾವಣೆಯಲ್ಲಿ ತೆಗೆದುಹಾಕಿ ಲೋಕನೀತಿ ಪರವಾದ ಸರ್ಕಾರವನ್ನು ಅಧಿಕಾರದಲ್ಲಿ ಪ್ರತಿಷ್ಠಾಪಿಸುವಂತಾಗಬೇಕು. ಆಗಮಾತ್ರ ಈ ರಾಷ್ಟ್ರೀಯ ಸಮಾವೇಶದ ಆಶಯಗಳಿಗೆ ಶಕ್ತಿ ಬರಲು ಮತ್ತು ಅದು ಕಾರ್ಯಸಾಧುವಾಗಲು ಸಾಧ್ಯವಾಗುತ್ತದೆ. ಅರ್ಥಾತ್ 1975ರ ತುರ್ತುಪರಿಸ್ಥಿತಿಯ ಕಾಲದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣರು ಹೂಡಿದ್ದ ಸಂಪೂರ್ಣ ಕ್ರಾಂತಿಯಲ್ಲಿಯ ವಿಚಾರಗಳನ್ನು ಮತ್ತೆ ಜನರಲ್ಲಿ ಬಿತ್ತುವ ಕೆಲಸವನ್ನು ಮಾಡಬೇಕಿದೆ.

ಬದನವಾಳು  ಸಮಾವೇಶದ ಗೊತ್ತುಗುರಿಗಳಿಗೆ ರಾಜಕೀಯ ಹಲ್ಲನ್ನು ಜೋಡಿಸಬೇಕಿದೆ. ಆದರೆ ಆ ರಾಜಕೀಯ ಶಕ್ತಿ ಪಕ್ಷಾತೀತವಾದುದೂ, ಎಲ್ಲರನ್ನೂ ಒಳಗೊಂಡುದುದೂ ಮತ್ತು ರಾಜ್ಯಶಕ್ತಿಯನ್ನು ಕಡಿಮೆಗೊಳಿಸಿ ಲೋಕಶಕ್ತಿ ಬಲಗೊಳಿಸುವಂತಹದ್ದೂ ಆಗಿರಬೇಕು. ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಯಾವ ವಿಚಾರಗಳನ್ನು ತಮ್ಮ ‘ಹಿಂದ್ ಸ್ವರಾಜ್’ ಪುಸ್ತಕದ ಮೂಲಕ ಜಗತ್ತಿನ ಮುಂದೆ ಇಟ್ಟಿದ್ದರೋ ಆ ವಿಚಾರಗಳನ್ನು ಸಾಕಾರಗೊಳಿಸುವ ಶಕ್ತಿ ಈ ಸುಸ್ಥಿರ ಬದುಕಿನ ಆಂದೋಲನಕ್ಕೆ  ಬರಬೇಕಿದೆ.

ಅಂತಹ ಶಕ್ತಿ ಬರಬೇಕಾದರೆ ಗಾಂಧೀಜಿ ಜನತಾಶಕ್ತಿಯ ಬಲಸಂವರ್ಧನೆಗಾಗಿ ಹೇಳಿದ್ದ ಮಾರ್ಗಗಳಾದ ಹರತಾಳ, ಅಸಹಕಾರ, ಬಹಿಷ್ಕಾರ, ಪಿಕೆಟಿಂಗ್, ಕರನಿರಾಕರಣೆ, ಸತ್ಯಾಗ್ರಹ ಹಾಗೂ ಆಮರಣ ಉಪವಾಸದಂತಹ ಅಹಿಂಸಕ ಹೋರಾಟದ ಮಾರ್ಗವನ್ನು ಅನುಸರಿಸಬೇಕು. ಇದೊಂದು ರಾಜಕೀಯ ಹೋರಾಟವಾಗದೆ ಜನರಿಂದಲೇ ಜನರಿಗೋಸ್ಕರವಾಗಿಯೇ ನಡೆಯುವ, ಸರ್ವರಿಗೆ ಸಮಬಾಳು– ಸರ್ವರಿಗೆ ಸಮಪಾಲು ಎಂಬ ಗುರಿಯೊಂದಿಗೆ ನಡೆವ ಚಳವಳಿಯಾಗಬೇಕು.

ಬಂಟ್‌ಲ್ಯಾಂಡ್ ವರದಿ ವ್ಯಾಖ್ಯಾನಿಸುವಂತೆ ಸುಸ್ಥಿರ ಅಭಿವೃದ್ಧಿ ಅಂದರೆ ಮುಂದಿನ ಜನಾಂಗ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಇಂದಿನ ಜನಾಂಗದವರು ತಮ್ಮ ಅಗತ್ಯಗಳನ್ನು  ಪೂರೈಸಿಕೊಳ್ಳಲು ಜನರನ್ನು ಸಮರ್ಥರನ್ನಾಗಿ ಮಾಡುವುದಾಗಿದೆ. ಈ ಚಳವಳಿಯ ಉದ್ದೇಶವೂ ಇದಾಗಬೇಕು.

ಸುಂದರಲಾಲ್ ಬಹುಗುಣ ಅವರ ‘ಚಿಪ್ಕೊ’ ಆಂದೋಲನದ ಕಾಲದಿಂದ ಪಶ್ಚಿಮಘಟ್ಟ ಉಳಿಸಿ ಹೋರಾಟ ಕಾಲದವರೆಗಿನ ಮತ್ತು ಯಂತ್ರಗಳನ್ನು ಕಟ್ಟೋಣ ಎಂಬ ವಿಚಾರದ ಕಾಲದಿಂದ ಯಂತ್ರಗಳನ್ನು ಕಳಚೋಣ ಬನ್ನಿ ಎಂಬ ವಿಚಾರದ ಕಾಲಘಟ್ಟದೊಳಗಿನ ರಾಷ್ಟ್ರೀಯ ಮಟ್ಟದ ಪರಿಸರ ಉಳಿಸಿ ಆಂದೋಲನಗಳಲ್ಲಿ ತೊಡಗಿರುವ ಎಲ್ಲ ಕಾರ್ಯಕರ್ತರು ಮತ್ತು ಗ್ರಾಮಭಾರತದ ಏಳಿಗೆ ಬಯಸುವವರೆಲ್ಲ ಲೋಕನೀತಿಯ ಈ ಚಳವಳಿಯಲ್ಲಿ ಭಾಗವಹಿಸಿ ಬದನವಾಳು ಸಮಾವೇಶದ ಆಶಯ ಪೂರ್ಣಗೊಳ್ಳುವಂತೆ ಸಂಕಲ್ಪಬದ್ಧರಾಗೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT