ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ನೇಮಕ: ನಿಯಮ ತಿದ್ದುಪಡಿ

ಶೋಧನಾ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಲು ಸರ್ಕಾರ ಚಿಂತನೆ
Last Updated 11 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಪಾಲ ಸಂಸ್ಥೆಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲು  ಮುಂದಾಗಿರುವ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಶೋಧನಾ ಸಮಿತಿಗೆ ಹೆಚ್ಚಿನ ಅಧಿಕಾರ ನೀಡುವ ಸಲುವಾಗಿ  ನಿಯಮಗಳನ್ನು ತಿದ್ದುಪಡಿ ಮಾಡಲು ಬಯಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ನಿಯಮಗಳ ಸುಧಾರಣೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಇದಾದನಂತರ ಅಧಿಸೂಚನೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ನಿಯಮಗಳ ಪ್ರಕಾರ ಲೋಕಪಾಲರು ಮತ್ತು ಅದರ ಸದಸ್ಯರ ನೇಮಕಕ್ಕೆ ಪ್ರಧಾನಿ ಅವರ ನೇತೃತ್ವದಲ್ಲಿ ಎಂಟು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿಗೆ ಡಿಒಪಿಟಿ ಸಂಭವನೀಯರ ಪಟ್ಟಿ ಸಲ್ಲಿಸುತ್ತದೆ. ಅದನ್ನು ಪರಿಶೀಲಿಸುವ  ಶೋಧನಾ ಸಮಿತಿಯು ನೇಮಕಾತಿಗೆ ಹೆಸರುಗಳನ್ನು ಶಿಫಾರಸು ಮಾಡುತ್ತದೆ.

ಆದರೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪಟ್ಟಿಯಲ್ಲಿ ಇರದವರ ಹೆಸರನ್ನೂ ಶೋಧನಾ ಸಮಿತಿ ಪರಿಶೀಲಿಸಲು ಅನುವಾಗುವಂತೆ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿದೆ.

ಇದರ ಹೊರತಾಗಿ ಶೋಧನಾ ಸಮಿತಿಯ ಇನ್ನೂ ಕೆಲವು ನಿಯಮಗಳಲ್ಲಿ ಬದಲಾವಣೆ ತರಲು ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಲೋಕಪಾಲ ವ್ಯಾಪ್ತಿಗೆ ‘ಬರುವ ಸರ್ಕಾರಿ ನೌಕರರ ಆಸ್ತಿ ತೆರಿಗೆ ಲೆಕ್ಕಪತ್ರ ಸಲ್ಲಿಕೆ ಕುರಿತ ನಿಯಮ
ಗಳನ್ನು ಪರಿಶೀಲಿಸುವಂತೆ ಕಾನೂನು ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದೂ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಶೋಧನಾ ಸಮಿತಿಯಲ್ಲಿ ಲೋಕಸಭಾ ಸ್ಪೀಕರ್‌, ಲೋಕಸಭೆಯ ಪ್ರತಿಪಕ್ಷದ ನಾಯಕ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ಸೂಚಿಸಿದ ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ಅವರು ನೇಮಿಸಿದ ಇಲ್ಲವೆ ಸಮಿತಿಯ ಇತರೇ ಸದಸ್ಯರು ಶಿಫಾರಸು ಮಾಡಿದ ವಿವಿಧ ಕ್ಷೇತ್ರಗಳ ನಾಲ್ವರು ತಜ್ಞರು ಇರುತ್ತಾರೆ.

ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಮನ್ನಣೆಗೆ ಅಗತ್ಯವಾದಷ್ಟು ಸ್ಥಾನಗಳನ್ನು ಯಾವೊಂದು ಪಕ್ಷವೂ ಪಡೆಯದ ಕಾರಣ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಹಾಗಾಗಿ ಲೋಕಪಾಲರು ಮತ್ತು ಅದರ ಸದಸ್ಯರ ನೇಮಕಾತಿ ಪ್ರಕ್ರಿಯೆ ವಿಳಂಬ ಆಗುವ ಸಾಧ್ಯತೆ ಇದೆ.

ಲೋಕಪಾಲ ಮಸೂದೆ ಹಿನ್ನೆಲೆ
ಯುಪಿಎ– 2 ಸರ್ಕಾರದ ಕಡೆಯ ಅವಧಿಯಲ್ಲಿ ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಕಳೆದ ಜನವರಿ 1ರಂದು ಅಂಕಿತ ಹಾಕಿದರು.

ನಂತರ ಲೋಕಪಾಲರು ಮತ್ತು ಸದಸ್ಯರನ್ನು ನೇಮಿಸಲು ಯುಪಿಎ ಸರ್ಕಾರ ಮುಂದಾದಾಗ ಪ್ರಮುಖ ಪ್ರತಿಪಕ್ಷ ಬಿಜೆಪಿ ಆಯ್ಕೆ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತು.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಅಳವಡಿಸಿಕೊಂಡಿರುವ ಆಯ್ಕೆ ಪ್ರಕ್ರಿಯೆಯು ಲೋಕಪಾಲ ಕಾಯ್ದೆಗೆ ವಿರುದ್ಧವಾಗಿದೆ. ಈ ಪ್ರಕ್ರಿಯೆ ಅನುಸರಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠರಾಗಿರುವವರೇ ಆಯ್ಕೆ ಆಗುತ್ತಾರೆ ಎಂದು ಆಕ್ಷೇಪಿಸಿ ಆಗ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಬಿಜೆಪಿಯ ಅರುಣ್‌ ಜೇಟ್ಲಿ ಅವರು ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಎರಡು ಪತ್ರ ಬರೆದಿದ್ದರು.

ಈ ಮಧ್ಯೆ, ಯುಪಿಎ ಸರ್ಕಾರ ತರಾತುರಿಯಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಟಿ. ಥಾಮಸ್‌ ಅವರ ನೇತೃತ್ವದಲ್ಲಿ ಏಳು ಸದಸ್ಯರ  ಶೋಧನಾ ಸಮಿತಿಯನ್ನು ರಚಿಸಿತ್ತು.

ಈ ಸಮಿತಿಯಲ್ಲಿ ಮಾಜಿ ಐಎಎಸ್‌ ಅಧಿಕಾರಿ ಕಾಕಿ ಮಾಧವ ರಾವ್‌, ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌, ಶಿಕ್ಷಣ ತಜ್ಞರಾದ ಪ್ರೊ. ಮೀನಾಕ್ಷಿ ಗೋಪಿನಾಥ್‌, ಗಡಿ ಭದ್ರತಾ ಪಡೆಯ ಮಾಜಿ ಮಹಾನಿರ್ದೇಶಕ ಎಂ.ಎಲ್‌.ಕುಮವತ್‌, ಹಿರಿಯ ಪತ್ರಕರ್ತ ಮತ್ತು ರಾಜ್ಯಸಭಾ ಸದಸ್ಯ ಎಚ್‌.ಕೆ.ದುವಾ, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ. ಖುರೇಷಿ ಹಾಗೂ ರಾಜ್ಯಸಭರಾದ ಮೃನಾಲ್‌ ಮಿರಿ ಅವರು ಇದ್ದರು.ಆದರೆ, ಥಾಮಸ್‌ ಮತ್ತು ನಾರಿಮನ್‌ ಅವರು ಶೋಧನಾ ಸಮಿತಿಯಲ್ಲಿ ಇರಲು ಒಪ್ಪಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT