ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಲ್ ಕಾಲ್‌!

Last Updated 21 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಬಾಲಿವುಡ್‌ ನಟ, ನಟಿಯರು ಲೋಕಲ್ ಸಿನಿಮಾಗಳಲ್ಲಿ ನಟಿಸಲು ತುಂಬಾ ಆಸಕ್ತಿ ತೋರುತ್ತಿದ್ದಾರೆ. ಪ್ರಯೋಗ, ಬದಲಾವಣೆ ಬಯಸುವ ಬಾಲಿವುಡ್ ಮಂದಿಗೆ ಈಗೀಗ ಪ್ರಾದೇಶಿಕ ಸಿನಿಮಾಗಳು ಒಂದೊಳ್ಳೆ ವೇದಿಕೆಯಾಗಿ ಕಾಣಿಸುತ್ತಿದೆ.

ಬಾಲಿವುಡ್‌ನ ಅರ್ಧದಷ್ಟು ನಟ–ನಟಿಯರು ಪ್ರಾದೇಶಿಕ ಸಿನಿಮಾಗಳಲ್ಲಿ ಮುಖ ತೋರುತ್ತಿರಲು ಹಿನ್ನೆಲೆ ಏನು ಎನ್ನುವುದು ಸ್ಪಷ್ಟವಾಗಿ ಗೊತ್ತಾಗದೇ ಇದ್ದರೂ ಹಲವು ವಿಮರ್ಶಕರು ಈ ಬೆಳವಳಿಗೆಯ ಕಾರಣವನ್ನು ಅಂದಾಜು ಮಾಡಿದ್ದಾರೆ. ಹಣ, ಹೆಸರು ಮಾಡುವ ಕಾರಣಕ್ಕೆ ಕೆಲವರು ಬಂದರೆ, ಇನ್ನು ಕೆಲವರು ಸ್ನೇಹದ ಕಾರಣಕ್ಕೆ ಪ್ರಾದೇಶಿಕ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡುತ್ತಿದ್ದಾರೆ. ಕಾರಣ ಏನೇ ಇದ್ದರೂ ಈ ಎಲ್ಲ ನಟ–ನಟಿಯರು ಹೊಸ ಪ್ರಯೋಗಗಳಿಗೆ ತೆರೆದುಕೊಂಡು, ತಮ್ಮನ್ನು ತಾವೇ ಸಾಣೆಗೆ ಒಡ್ಡಿಕೊಳ್ಳಲು ಪ್ರಾದೇಶಿಕ ಸಿನಿಮಾಗಳು ಅವಕಾಶ ಕಲ್ಪಿಸಿಕೊಡುತ್ತಿವೆಯಂತೆ.

ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಐಶ್ವರ್ಯಾ ರೈ ಅವರಂಥ ಬಾಲಿವುಡ್‌ನ ಹೆಚ್ಚು ಬೇಡಿಕೆಯ ನಟ– ನಟಿಯರೂ ತಮಿಳು, ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಂದಿ ಸಿನಿಮಾಗಳಿಂದ ಒಂದಷ್ಟು ಸಮಯ ಹೊರಬಂದು, ಮತ್ತೆ ಹೊಸ ಹುರುಪು ಪಡೆಯಲು ಪ್ರಾದೇಶಿಕ ಸಿನಿಮಾಗಳು ಇವರಿಗೆ ಸಹಾಯ ಮಾಡುತ್ತಿವೆಯಂತೆ.

ದಕ್ಷಿಣದ ಸೂಪರ್‌ಸ್ಟಾರ್‌ ರಜನಿಕಾಂತ್ ಅವರ ‘ಚಾಲೆಂಜ್’ ಸಿನಿಮಾದಲ್ಲಿ ನಟಿ ಸೋನಾಕ್ಷಿ ಸಿನ್ಹಾ ಕಾಣಿಸಿಕೊಳ್ಳುತ್ತಿದ್ದರೆ, ಇತ್ತ ನಟಿ ಐಶ್ವರ್ಯಾ ರೈ ಮಗು ಹೆತ್ತ ನಂತರ ಬೆಳ್ಳಿತೆರೆಗೆ ಮರಳುತ್ತಿರುವುದು ನಿರ್ದೇಶಕ ಮಣಿರತ್ನಂ ಅವರ ದ್ವಿಭಾಷಾ ಚಿತ್ರವೊಂದರ ಮೂಲಕ. ಅಂದಹಾಗೆ, ಐಶ್‌ ಈ ಚಿತ್ರದಲ್ಲಿ ನಟಿಸುವ ಭರವಸೆ ನೀಡಿದ್ದಾರೆ. ಸ್ಟಾರ್‌ ಡೈರೆಕ್ಟರ್‌ ಮಣಿರತ್ನಂ ನಿರ್ದೇಶನವಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಮತ್ತು ನಾಗಾರ್ಜುನ ನಟಿಸುತ್ತಿದ್ದು, ಈ ಸಿನಿಮಾ ಬೇಹುಗಾರಿಕೆಯ ಥ್ರಿಲ್ಲರ್ ಕತೆ ಹೊಂದಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ, ಈ ಚಿತ್ರ ಜುಲೈ ಅಥವಾ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ.

ಇದೇ ಸಮಯದಲ್ಲಿ ದೀಪಿಕಾ ಪಡುಕೋಣೆ ಕೂಡ ನಟ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್‌ ನಿರ್ದೇಶನದ ಥ್ರೀಡಿ ಚಿತ್ರ ‘ಕೊಚ್ಚಾಡಿಯಾನ್‌’ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಸೂಪರ್‌ ಮಾಡೆಲ್‌, ನಟಿ ಸುಷ್ಮಿತಾ ಸೇನ್ ಅವರು ಬಸು ಚಟರ್ಜಿ ಮಗಳಾದ ರೂಪಾಲಿ ಗುಹಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಜೋಡಿ ಎಮೊನ್ ಹೋಟೊ’ ಎಂಬ ಬೆಂಗಾಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಪ್ರೇಮ ಮುರಿದುಬಿದ್ದ ನಂತರ ಕತ್ರಿನಾ ತರಹವೇ ಮುಖಚರ್ಯೆ ಹೊಂದಿದ್ದ ಝರೀನ್‌ ಖಾನ್‌ ಎಂಬ ಮತ್ತೊಂದು ಚಿಟ್ಟೆಯನ್ನು ಬಾಲಿವುಡ್‌ಗೆ ಕರೆತಂದರು ಸಲ್ಲು. ಈಕೆ ಬಾಲಿವುಡ್‌ನಲ್ಲಿ ಮಿಂಚು ಹರಿಸದಿದ್ದರೂ ಅಲ್ಪಸ್ವಲ್ಪ ಬೇಡಿಕೆ ಉಳಿಸಿಕೊಂಡಿದ್ದಾರೆ. ಝರೀನ್ ಖಾನ್ ಈಗ ರೋಹಿತ್ ಜುಗ್ರಾತ್ ನಿರ್ದೇಶನದ ಪಂಜಾಬಿ ಚಿತ್ರ ‘ಜತ್ ಜೇಮ್ಸ್‌ ಬಾಂಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, ಸಲ್ಮಾನ್ ಖಾನ್ ಮತ್ತು ರಿತೀಶ್ ದೇಶಮುಖ್ ಆತ್ಮೀಯ ಗೆಳೆಯರು. ಗೆಳೆಯನ ಮೇಲಿನ ಪ್ರೀತಿಯಿಂದಾಗಿ ಸಲ್ಲು, ರಿತೇಶ್‌ ಮರಾಠಿ ಭಾಷೆಯಲ್ಲಿ ತಯಾರಿಸುತ್ತಿರುವ ಎರಡನೇ ಚಿತ್ರ ‘ಲಾಯ್‌ ಭಾರಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

‘ಪ್ರಾದೇಶಿಕ ಚಿತ್ರಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿರುವ ಬಾಲಿವುಡ್ ನಟರು ಭಾಷೆ ಹೊರತಾಗಿಯೂ ಏನೋ ಉತ್ಸುಕತೆ ಬಯಸುತ್ತಿದ್ದಾರೆ’ ಎಂದು ಅಂದಾಜಿಸಿದ್ದಾರೆ ಬಾಲಿವುಡ್‌ ಉದ್ಯಮ ವಿಶ್ಲೇಷಕ ತರುಣ್ ಆದರ್ಶ್, ಮತ್ತೊಬ್ಬ ವಿಶ್ಲೇಷಕ ಅದ್ಮಾನ್ ಪ್ರಹ್ಲಾದ್ ಕಕ್ಕರ್ ಪ್ರಕಾರ, ‘ಬಾಲಿವುಡ್‌ ನಟ–ನಟಿಯರ ಈ ಆಸಕ್ತಿ ಹಲವು ರೀತಿಯಲ್ಲಿ ಪ್ರಾದೇಶಿಕ ಸಿನಿಮಾಗಳ ಬದಲಾವಣೆಗೆ ಕಾರಣವಾಗಿದೆ’.
‘ಈ ರೀತಿಯ ಬೆಳವಣಿಗೆ ಆರಂಭಗೊಂಡಿದ್ದು ಪ್ರಾದೇಶಿಕ ಸಿನಿಮಾಗಳಲ್ಲಿ ಒಳ್ಳೆ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕರಿಂದ. ಪ್ರಾದೇಶಿಕ ಸಿನಿಮಾಗಳನ್ನು ಈಗ ಮೊದಲಿನಂತೆ ಕಾಣಲಾಗುತ್ತಿಲ್ಲ. ಅವುಗಳೂ ಬದಲಾಗುತ್ತಿವೆ. ಮಲ್ಟಿಪ್ಲೆಕ್ಸ್‌ಗಳು ಇದಕ್ಕೆ ಪರೋಕ್ಷವಾಗಿ ಸಹಾಯ ಮಾಡಿವೆ, ಹಣ ಗಳಿಸುವ ದಾರಿಯಾಗಿವೆ’ ಎಂದಿದ್ದಾರೆ.

ಸಿನಿಮಾ ನಿರ್ಮಾಪಕ ಸಂಜಯ್ ಗುಪ್ತಾ, ನಟರು ತಮ್ಮ ವೈಯಕ್ತಿಕ ಲೆಕ್ಕಾಚಾರಗಳಿಂದ ಪ್ರಾದೇಶಿಕ ಸಿನಿಮಾಗಳತ್ತ ಮುಖ ಮಾಡಿದ್ದಾರೆ ಎನ್ನುತ್ತಾರೆ. ‘ಸಲ್ಮಾನ್ ಯಾವತ್ತೂ ರಿತೇಶ್ ಮಾತಿಗೆ ಇಲ್ಲ ಎನ್ನುವುದಿಲ್ಲ. ಸೋನಾಕ್ಷಿ ಮತ್ತು ಐಶ್ವರ್ಯಾ ಕೂಡ ರಜನಿಕಾಂತ್ ಮತ್ತು ಮಣಿರತ್ನಂ ಅವರೊಂದಿಗೆ ಕೆಲಸ ಮಾಡಲು ಒಲ್ಲೆ ಎನ್ನಲು ಸಾಧ್ಯವಿಲ್ಲ’ ಎಂದು ತಮ್ಮ ವಾದ ಮಂಡಿಸಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT