ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಕಲಾಪಕ್ಕೆ ಬೆಲೆ ಏರಿಕೆ ಬಿಸಿ

Last Updated 7 ಜುಲೈ 2014, 9:31 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬೆಲೆ ಏರಿಕೆ ಹಾಗೂ ರೈಲ್ವೆ ಪ್ರಯಾಣ ದರ ಏರಿಕೆ ವಿಷಯಗಳು ಸಂಸತ್ತಿನ ಬಜೆಟ್‌ ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿಪಡಿಸಲು ಪ್ರತಿಪಕ್ಷಗಳಿಗೆ ಅಸ್ತ್ರಗಳಾದವು.

ಈ ವಿಷಯಗಳನ್ನು ನಿಲುವಳಿ ಸೂಚನೆ ಮೂಲಕ ಚರ್ಚೆಗೆ ಕೈಗೆತ್ತಿಕೊಳ್ಳಲು ಪ್ರತಿಪಕ್ಷಗಳು ಸೋಮವಾರ ಪಟ್ಟು ಹಿಡಿದ ಪರಿಣಾಮ ಲೋಕಸಭಾ ಕಲಾಪವನ್ನು ಮಧ್ಯಾಹ್ನ  2 ಗಂಟೆಯ ವರೆಗೂ ಮುಂದೂಡಲಾಯಿತು.

ನಿಲುವಳಿ ಸೂಚನೆಯ ನೋಟಿಸ್‌ಗಳನ್ನು ಸ್ಪೀಕರ್  ಸುಮಿತ್ರಾ ಮಹಾಜನ್‌ ತಿರಸ್ಕರಿಸಿದರು. ಆದರೆ ಇದೇ ವಿಷಯಗಳನ್ನು ಮತದಾನಕ್ಕೆ ಅವಕಾಶ ಇಲ್ಲದಿರುವ ನಿಮಯ 193ರ  ಅಡಿಯಲ್ಲಿ ವಿಶೇಷ ಚರ್ಚೆಗೆ ಅವಕಾಶ ನೀಡಲು ಸಿದ್ಧ ಎಂದು ಅವರು ತಿಳಿಸಿದರು.

ಪ್ರಶ್ನಾವಳಿ ಸಮಯ ಆರಂಭವಾಗುತ್ತಿದ್ದಂತೆ ಬೆಲೆ ಏರಿಕೆ ಹಾಗೂ ರೈಲ್ವೆ ಪ್ರಯಾಣ ದರ ಹೆಚ್ಚಳ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್‌, ಟಿಎಂಸಿ, ಆರ್‌ಜೆಡಿ, ಸಮಾಜವಾದಿ ಪಕ್ಷ, ಆಮ್‌ ಆದ್ಮಿ ಪಕ್ಷ ಹಾಗೂ  ಎಡಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಜಮಾಗೊಂಡರು.

ಸ್ಪೀಕರ್‌ ಮಹಾಜನ್‌ ಅವರ ಸತತ ಮನವಿಗಳಿಗೆ ಪ್ರತಿಪಕ್ಷ ಸದಸ್ಯರು ಕಿವಿಗೊಡಲಿಲ್ಲ. ಪರಿಣಾಮ ಕಲಾಪವನ್ನು ಸುಮಾರು 40 ನಿಮಿಷಗಳ ಕಾಲ ಮುಂದೂಡಲಾಯಿತು.

ಮತ್ತೆ ಕಲಾಪ ಆರಂಭಗೊಂಡರೂ ಪರಿಸ್ಥಿತಿ ಬದಲಾಗಲಿಲ್ಲ. ಶ್ರೀಸಾಮಾನ್ಯರಿಗೆ ತಲೆನೋವಾಗಿರುವ ದ್ವಿದಳ ಧಾನ್ಯಗಳು ಹಾಗೂ ತರಕಾರಿ ಸೇರಿದಂತೆ  ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ  ‘ವಿಫಲತೆ’ ಚರ್ಚಿಸಲು ತಮ್ಮ ಪಕ್ಷ ನಿಲುವಳಿ ಸೂಚನೆ ಒತ್ತಾಯಿಸುತ್ತದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಪನಾಯಕ ಅಮರಿಂದರ್‌ ಸಿಂಗ್‌ ತಿಳಿಸಿದರು.

ಅಲ್ಲದೇ, ‘ಪ್ರಶ್ನಾವಳಿ ಸಮಯವನ್ನು ಅಮಾನತುಗೊಳಿಸಿ ಚರ್ಚೆಯನ್ನು ಕೈಗೆತ್ತಿಕೊಂಡಿರುವ ರಾಜ್ಯಸಭೆಯಂತೆ ನಾವೇಕೆ ಮಾಡಬಾರದು’ ಎಂದೂ ಅವರು ಪ್ರಶ್ನಿಸಿದರು.

ಸರ್ಕಾರ ಏನನ್ನೂ ಬಚ್ಚಿಡುತ್ತಿಲ್ಲ. ನಿಯಮ 193ರ ಅಡಿಯಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಹೇಳಿದರು.

ಬೆಲೆ ಏರಿಕೆ ಇಲ್ಲವೇ ರೈಲ್ವೆ ಪ್ರಯಾಣ ದರ ಹೆಚ್ಚಳ ಸಂಬಂಧ ನಿಲುವಳಿ ಸೂಚನೆ ಅವಕಾಶ ನೀಡಲಾಗದು ಎಂದು ಅಭಿಪ್ರಾಯ ಪಟ್ಟ ಸ್ಪೀಕರ್‌, ನಿಯಮ 193ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವುದಾಗಿ ತಿಳಿಸಿದರು.

ಇದರಿಂದ ಪ್ರತಿಭಟನಾ ನಿರತ ಪ್ರತಿಪಕ್ಷಗಳ ಸದಸ್ಯರು ತೃಪ್ತರಾಗಲಿಲ್ಲವಾದ್ದರಿಂದ ಸ್ಪೀಕರ್‌ ಕಲಾಪವನ್ನು ಮಧ್ಯಾಹ್ನ 2 ಗಂಟೆಯ ವರೆಗೂ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT