ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ: ಮತದಾನ ಇಂದು

Last Updated 17 ಏಪ್ರಿಲ್ 2014, 9:18 IST
ಅಕ್ಷರ ಗಾತ್ರ

ಮೈಸೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ (ಇವಿಎಂ) ಮತ್ತು ಇತರೆ ಸಲಕರಣೆಗಳೊಂದಿಗೆ ಬುಧವಾರ ಮತಗಟ್ಟೆಗಳಿಗೆ ತಲುಪಿದರು.

ನಗರದ ಮಹಾರಾಜ ಜೂನಿಯರ್ ಕಾಲೇಜು (ಚಾಮರಾಜ ಕ್ಷೇತ್ರ), ಬೇಡನ್‌ ಪೊವೆಲ್‌ ಶಾಲೆ (ಎನ್.ಆರ್‌. ಕ್ಷೇತ್ರ), ಸರಸ್ವತಿಪುರಂ ಮಹಿಳಾ ಕಾಲೇಜು (ಕೆ.ಆರ್‌. ಕ್ಷೇತ್ರ) ಮತ್ತು ನಜರ್‌ಬಾದ್‌ನ ಪೀಪಲ್ಸ್‌ ಪಾರ್ಕ್‌ ಕಾಲೇಜಿ (ಚಾಮುಂಡೇಶ್ವರಿ ಕ್ಷೇತ್ರ)ನಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು.

ಚಾಮರಾಜ ಕ್ಷೇತ್ರದಲ್ಲಿ 213 ಮತಗಟ್ಟೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 308 ಮತಗಟ್ಟೆ, ಕೆ.ಆರ್‌. ಕ್ಷೇತ್ರದಲ್ಲಿ 223 ಮತಗಟ್ಟೆ ಹಾಗೂ ಎನ್‌.ಆರ್‌. ಕ್ಷೇತ್ರದಲ್ಲಿ 220 ಮತಗಟ್ಟೆಗೆ ಸಂಬಂಧಿಸಿದ ಪರಿಕರಗಳನ್ನು ಸಿಬ್ಬಂದಿಗೆ ಸರಬರಾಜು ಮಾಡಲಾಯಿತು. ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸರದಿಗಾಗಿ ಕಾದು ನಿಂತಿದ್ದರು. ಮೈಕ್‌ನಲ್ಲಿ ಕೂಗಿ ಸಿಬ್ಬಂದಿಯನ್ನು ಕರೆದು ಪರಿಕರಗಳನ್ನು ನೀಡಲಾಗುತ್ತಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುದರ ಕುರಿತು ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಜಿಲ್ಲೆಯಲ್ಲಿ ಒಟ್ಟು 331 ಬಸ್‌, 329 ಮಿನಿಬಸ್‌ಗಳು, 68 ವ್ಯಾನ್‌ಗಳು ಚುನಾವಣಾ ಸಿಬ್ಬಂದಿಯನ್ನು ಆಯಾ ಮತಗಟ್ಟೆಗಳಿಗೆ ಕರೆದೊಯ್ದವು. ಸಂಜೆ ವೇಳೆಗೆ ಮತಗಟ್ಟೆಗಳನ್ನು ತಲುಪಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಬಂಧಪಟ್ಟ ಮತಗಟ್ಟೆಗಳಲ್ಲಿಯೇ ರಾತ್ರಿ ತಂಗಿದರು. ತುರ್ತು ಚಿಕಿತ್ಸೆಗಾಗಿ ವೈದ್ಯರ ನಾಲ್ಕು ತಂಡಗಳನ್ನು ರಚಿಸಿ, ಕ್ಷೇತ್ರಗಳಿಗೆ ತಂಡಗಳನ್ನು ಕಳುಹಿಸಲಾಯಿತು.

ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಿ. ಶಿಖಾ ಮಸ್ಟರಿಂಗ್‌ ಪ್ರಕ್ರಿಯೆಯ ಉಸ್ತುವಾರಿ ವಹಿಸಿ, ಅಗತ್ಯ ಮಾರ್ಗದರ್ಶನ ನೀಡಿದ್ದರು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 1,973 ಮತಗಟ್ಟೆಗಳಿಗೆ ಒಟ್ಟು 2,367 ಮತಗಟ್ಟೆ ಅಧಿಕಾರಿಗಳು, 2,367 ಸಹಾಯಕ ಮತಗಟ್ಟೆ ಅಧಿಕಾರಿಗಳು, 2,734 ಮತದಾನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರು ಮತಗಟ್ಟೆ ಅಧಿಕಾರಿ, ಒಬ್ಬರು ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಇವರೊಂದಿಗೆ ಸ್ಥಳೀಯವಾಗಿ ಇಬ್ಬರು ಗ್ರೂಪ್‌ ‘ಡಿ’ ನೌಕರರು ಮತ್ತು ಮತದಾರರನ್ನು ಗುರುತಿಸಲು ಪ್ರತಿ ಮತಗಟ್ಟೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT