ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಬೀದಿಕಾಳಗ

Last Updated 8 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈಲ್ವೆ ಬಜೆಟ್‌ ವಿರುದ್ಧ ಲೋಕಸಭೆಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ  ತೃಣಮೂಲ ಕಾಂಗ್ರೆಸ್‌ ಸದಸ್ಯರು ಮತ್ತು ಬಿಜೆಪಿ ಸದಸ್ಯರ ನಡುವೆ ನಡೆದ ಘರ್ಷಣೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ಅಸಭ್ಯ ಸನ್ನಿವೇಶ ಸೃಷ್ಟಿಯಾಯಿತು.

ರೈಲ್ವೆ ಬಜೆಟ್‌ ಚರ್ಚೆಗೆ ಮಧ್ಯಾಹ್ನ 3.30ರ ಸುಮಾರಿಗೆ ಕಲಾಪ ಆರಂಭ­ವಾಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಮತ್ತು ಎಎಪಿ ಸಂಸದರು ಬಜೆಟ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಟಿಎಂಸಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಡಿ.ವಿ. ಸದಾನಂದ ಗೌಡ ಅವರ ವಿರುದ್ಧ ಘೋಷಣೆಗಳನ್ನು ಕೂಗಿದಾಗ, ‘ಈ ಬಾರಿ ಮೋದಿ ಸರ್ಕಾರ’ ಎಂದು ಬಿಜೆಪಿ ಸದಸ್ಯರು ಪ್ರತಿ ಘೋಷಣೆ ಕೂಗಿದರು.

ಘೋಷಣೆ ಮತ್ತು ಪ್ರತಿಘೋಷಣೆಗಳ ನಡುವೆ ಸಭಾಧ್ಯಕ್ಷರ ಪೀಠದ ಸಮೀಪ ನುಗ್ಗಿದ ಇಬ್ಬರು ಬಿಜೆಪಿ ಸಂಸದರು, ಟಿಎಂಸಿ ಸಂಸದರು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಎರಡೂ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಮಾರ್ಷಲ್‌ಗಳು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.ಸಚಿವರಾದ ಪ್ರಕಾಶ್‌ ಜಾವಡೇಕರ್‌, ಎಂ. ವೆಂಕಯ್ಯ ನಾಯ್ಡು ಮತ್ತು ಕಲ್‌ರಾಜ್‌ ಮಿಶ್ರಾ ಸದಸ್ಯರನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಕಾಂಗ್ರೆಸ್‌ನ ಕೆಲವು ಸದಸ್ಯರೂ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಸ್ಪೀಕರ್‌ ಕುರ್ಚಿಯಲ್ಲಿದ್ದ ಹುಕ್ಮಾ ದೇವ್‌ ನರೈನ್‌ ಯಾದವ್‌ ಸದನವನ್ನು ಸಂಜೆ 4.30ಕ್ಕೆ ಮುಂದೂಡಿದರು.

ಟಿಎಂಸಿ ಮುಖಂಡ ಕಲ್ಯಾಣ್‌ ಬ್ಯಾನರ್ಜಿ, ಬಿಜೆಪಿ ಸಂಸದರು ಹಲ್ಲೆ ನಡೆಸುವ ಬೆದರಿಕೆ ಒಡ್ಡಿದರು ಮತ್ತು ಅಸಭ್ಯ ಪದಗಳನ್ನು  ಪ್ರಯೋಗಿಸಿದರು ಎಂದು ಆರೋಪಿಸಿ ತಮ್ಮ ಪಕ್ಷದ ಸದಸ್ಯರೊಂದಿಗೆ ಸಂಸತ್‌ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಸಂಸದೆ ಕಕೋಲಿ ಘೋಷ್‌,  ಬಜೆಟ್ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಕೆಲವು ಬಿಜೆಪಿ ಸಂಸದರು ತಮ್ಮ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದರು ಎಂದು  ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT