ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತರ ಪದಚ್ಯುತಿಗೆ ಒತ್ತಾಯ

ಪರಿಷತ್‌ನಲ್ಲಿ ವಿಷಯ ಮಂಡನೆಗೆ ಆಡಳಿತ ಪಕ್ಷದ ಸದಸ್ಯರ ಅಡ್ಡಿ * ವಿರೋಧ ಪಕ್ಷ ಸಭಾತ್ಯಾಗ
Last Updated 2 ಜುಲೈ 2015, 19:51 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು, ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ಪದಚ್ಯುತಿಗೆ ಅವಕಾಶ ಕಲ್ಪಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಒತ್ತಾಯಿಸಿದರು.

ಗುರುವಾರ ಕಲಾಪ ಆರಂಭವಾದಾಗ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, 'ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ಕಲ್ಪಿಸಬೇಕು' ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾನಾಯಕರಾದ ಸಚಿವ ಎಸ್.ಆರ್. ಪಾಟೀಲ ಅವರು, ‘ವಾರದಲ್ಲಿ ಎರಡಕ್ಕಿಂತ ಹೆಚ್ಚು ನಿಲುವಳಿ ಸೂಚನೆಗೆ ಅವಕಾಶ ಕೊಡಬಾರದು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ವಾರದಲ್ಲಿ ಈಗಾಗಲೇ ಎರಡು ನಿಲುವಳಿ ಸೂಚನೆ ಮಂಡನೆಯಾಗಿರುವುದರಿಂದ ಇನ್ನೊಂದಕ್ಕೆ ಅವಕಾಶ ಬೇಡ’ ಎಂದು ಕೋರಿದರು.

‘ನಿಲುವಳಿ ಸೂಚನೆಯ ಬದಲು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಕಲ್ಪಿಸಿ’ ಎಂದು ಸಿ.ಎಂ ಹೇಳಿದರು.

ಪ್ರಶ್ನೋತ್ತರಕ್ಕೆ ಮುನ್ನ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ಬಗ್ಗೆ ಪೂರ್ವಭಾವಿಯಾಗಿ ವಿಷಯ ಮಂಡಿಸಲು  ಅವಕಾಶ ಕಲ್ಪಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು. ಚರ್ಚೆಗೆ ಅವಕಾಶ ನೀಡಲು ಸರ್ಕಾರ ಒಪ್ಪಿಕೊಂಡಿದೆ. ಹೀಗಾಗಿ ಪೂರ್ವಭಾವಿ ಮಾತಿನ ಅಗತ್ಯ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಯಾವುದೇ ಅಡ್ಡಿ ಇಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಉಪಲೋಕಾಯುಕ್ತ ಸುಭಾಷ್‌ ಬಿ. ಅಡಿ ಹೇಳಿದ್ದಾರೆ. ಲೋಕಾಯುಕ್ತರ ವಜಾಕ್ಕೆ ಆಗ್ರಹಿಸಿ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಮುಖ್ಯಮಂತ್ರಿಗಳು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸಾಧ್ಯವಿಲ್ಲ ಎನ್ನುತ್ತಿರುವುದು ಸಂದೇಹ ಮೂಡಿಸಿದೆ. ಸರ್ಕಾರ ಸಿಬಿಐಗೆ ಒಪ್ಪಿಸದಿದ್ದರೆ ಲೋಕಾಯುಕ್ತರ ವಿರುದ್ಧ ಸದನದಲ್ಲಿ ವಾಗ್ದಂಡನೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಬೇಕಾಗುತ್ತದೆ' ಎಂದು ಈಶ್ವರಪ್ಪ ಹೇಳಿದರು.

ಸಿ.ಎಂ ಸ್ಪಷ್ಟನೆ ಬಳಿಕವೂ ಈಶ್ವರಪ್ಪ ಮಾತನಾಡಲು ಮುಂದಾದಾಗ ಆಡಳಿತ ಪಕ್ಷದ ಸದಸ್ಯರು ಅಡ್ಡಿಪಡಿಸಿದರು. ಇದರಿಂದ ಕುಪಿತರಾದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಜೆಡಿಎಸ್ ಸದಸ್ಯರೂ ಅವರನ್ನು ಅನುಸರಿಸಿದರು.

ಮುಖ್ಯಮಂತ್ರಿ ಆಕ್ಷೇಪ
‘ಇಲ್ಲಿ ಸಭಾತ್ಯಾಗ ನಡೆಸುವ ಸನ್ನಿವೇಶ ನಿರ್ಮಾಣ ಆಗಿಲ್ಲ. ವಿರೋಧ ಪಕ್ಷದವರಿಗೆ ಸಂಸದೀಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯಲಾಗಿದೆ. ಬಜೆಟ್‌ಗೆ ಒಪ್ಪಿಗೆ ಪಡೆಯಬೇಕಿದೆ. ವಿರೋಧ ಪಕ್ಷಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿ ಅಲ್ಲ' ಎಂದು ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು.

ಪದಚ್ಯುತಿಗೆ ಇದೆ; ವಾಗ್ದಂಡನೆಗೆ ಇಲ್ಲ: ‘ಲೋಕಾಯುಕ್ತರ ವಿರುದ್ಧ ವಾಗ್ದಂಡನೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಅವರನ್ನು ಪದಚ್ಯುತಿಗೊಳಿಸುವುದಕ್ಕೆ ಅವಕಾಶ ಇದೆ. ಆದರೆ, ಅದಕ್ಕೆ ಅವರ ವಿರುದ್ಧ ಅಸಾಮರ್ಥ್ಯ ಅಥವಾ ದುರ್ನಡತೆಯ ಆರೋಪ ಇರಬೇಕು. ಸಾಕ್ಷ್ಯಾಧಾರಗಳು ಬೇಕು. ಈ ಪ್ರಕರಣದಲ್ಲಿ ಅದ್ಯಾವುದೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT