ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಪುತ್ರನ ವಿರುದ್ಧ ಎಫ್‌ಐಆರ್‌

‘ಅಶ್ವಿನ್‌ರಾವ್‌ ಮತ್ತು ಕೃಷ್ಣರಾವ್’‌ ಇಬ್ಬರಲ್ಲ ಒಬ್ಬರೇ!
Last Updated 1 ಜುಲೈ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಾಯುಕ್ತರ ಕಚೇರಿ ಮತ್ತು ಅಧಿಕೃತ ನಿವಾಸದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ  ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್‌ ಅವರ ಮಗ ಅಶ್ವಿನ್‌ ರಾವ್‌ ವಿರುದ್ಧ ಬುಧವಾರ ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಏಕಮಾತ್ರ ಆರೋಪಿ, ‘ಅಶ್ವಿನ್‌ ರಾವ್‌  ಅಲಿಯಾಸ್‌ ಕೃಷ್ಣರಾವ್’ ಎಂದು ಹೆಸರಿಸಲಾಗಿದೆ. 

ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಕೃಷ್ಣಮೂರ್ತಿ ಅವರ ದೂರಿನ ಆಧಾರದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ. ರಾಜು ಅವರು, ಐಪಿಸಿ 384 (ಸುಲಿಗೆ), 419ಮತ್ತು 420 (ವಂಚನೆ),120(ಒಳಸಂಚು) ಅಡಿ ಪ್ರಕರಣ  ದಾಖಲಿಸಿಕೊಂಡಿದ್ದಾರೆ.

2015ರ ಮೇ 4ರ ನಂತರದ ದಿನಗಳಲ್ಲಿ ಲೋಕಾಯುಕ್ತ ಕಟ್ಟಡದ ಎರಡನೆಯ ಮಹಡಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆದಿವೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೇ 4ರಂದು ಅಶ್ವಿನ್‌ರಾವ್‌ ಅವರು ದೂರವಾಣಿ ಸಂಖ್ಯೆ 9066029213 ಯಿಂದ ಕೃಷ್ಣಮೂರ್ತಿ ಅವರಿಗೆ ‘ಹಾಯ್‌, ನಿಮ್ಮನ್ನು ಸಂಪರ್ಕಿಸಲು ಯತ್ನಿಸಿದೆ. ನಿಮಗೆ ಬಿಡುವಾಗಿದ್ದಾಗ ಕರೆ ಮಾಡಿ’ ಎಂದು ಸಂದೇಶ ಕಳುಹಿಸಿದ್ದರು. ಅದೇ ದಿನ ಕೃಷ್ಣಮೂರ್ತಿ ಅವರು ದೂರವಾಣಿ ಕರೆ ಮಾಡಿದಾಗ ಅಶ್ವಿನ್‌ರಾವ್‌  ತಮ್ಮನ್ನು ಕೃಷ್ಣರಾವ್‌ ಎಂದು ಪರಿಚಯಿಸಿಕೊಂಡಿದ್ದರು.  ಅಲ್ಲದೆ ಲೋಕಾಯುಕ್ತ ಜಂಟಿ ಆಯುಕ್ತ (ಪಿಆರ್‌ಒ) ಅವರನ್ನು ಲೋಕಾಯುಕ್ತ ಕಚೇರಿಯಲ್ಲಿ ಭೇಟಿ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ದಾಳಿ ನಡೆಸದೇ ಇರಲು ₹ 1 ಕೋಟಿ ಹಣ ನೀಡುವಂತೆಯೂ ಬೇಡಿಕೆ ಇಟ್ಟಿದ್ದರು ಎಂದು ಮೂಲಗಳು ಹೇಳಿವೆ.

ಲೋಕಾಯುಕ್ತ ಕಚೇರಿಯಲ್ಲಿ ತಮ್ಮಿಂದ ಹಣ ಕೇಳಿದ ವ್ಯಕ್ತಿ ಅಶ್ವಿನ್‌ರಾವ್‌ ಅವರೇ ಎಂದು ಕೃಷ್ಣಮೂರ್ತಿ ಗುರುತಿಸಿದ್ದಾರೆ.  ಅಶ್ವಿನ್‌ರಾವ್‌ ಅವರೇ ತಮ್ಮನ್ನು ಕೃಷ್ಣರಾವ್‌ ಎಂದು ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
*
ತನಿಖೆಗೆ ಹೈಕೋರ್ಟ್‌ ತಡೆ
‘ಲೋಕಾಯುಕ್ತ ಭಾಸ್ಕರರಾವ್‌  ಅವರ ಮಗ ಅಶ್ವಿನ್‌ ವಿರುದ್ಧದ ಆರೋಪಗಳ ಬಗ್ಗೆ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆ ನಡೆಸುತ್ತಿರುವಾಗ ಇದೇ ಪ್ರಕರಣದ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ನಿರ್ದೇಶಿಸಿರುವ ಕ್ರಮ ಸರಿಯಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಅಶ್ವಿನ್‌ ಸಲ್ಲಿಸಿದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎನ್‌.ಕುಮಾರ್‌  ಹಾಗೂ ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆಗೆ ಅಂಗೀಕರಿಸಿದೆ.

‘ಲೋಕಾಯುಕ್ತರ ಕೋರಿಕೆಯಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ.  ಹೀಗಿರುವಾಗ ಉಪ ಲೋಕಾಯುಕ್ತರೂ ಇದೇ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಅಧೀನ ಅಧಿಕಾರಿಗೆ ಸೂಚಿಸಿರುವ ಕ್ರಮ ಸರಿಯಲ್ಲ. ಎಸ್ಐಟಿ ವರದಿ ಬರಲಿ. ಅಲ್ಲಿಯವರೆಗೆ ಎರಡನೇ ತನಿಖೆಯ ಅಗತ್ಯವಿಲ್ಲ’ ಎಂದು ನ್ಯಾಯಪೀಠವು ಹೇಳಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಹಾಜರಾಗಿದ್ದರು.

ಅಶ್ವಿನ್‌ ವಿರುದ್ಧದ ಆರೋಪಗಳ ತನಿಖೆ ನಡೆಸುವಂತೆ ಉಪ ಲೋಕಾಯುಕ್ತ ಸುಭಾಷ್‌ ಅಡಿ ಅವರು ಜೂನ್‌ 23ರಂದು  ಲೋಕಾಯುಕ್ತ ಎಸ್‌ಪಿ ಸೋನಿಯಾ ನಾರಂಗ್‌ಗೆ ಸೂಚಿಸಿದ್ದರು.
*
ಮಗನ ವಿರುದ್ಧವೇ ಎಫ್‌ಐಆರ್‌ ದಾಖಲಾಗಿರುವುದರಿಂದ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್‌  ತಕ್ಷಣ ರಾಜೀನಾಮೆ ನೀಡಬೇಕು.
– ಸಂತೋಷ್‌ ಹೆಗ್ಡೆ
ನಿವೃತ್ತ ಲೋಕಾಯುಕ್ತ

*
ಮುಖ್ಯಾಂಶಗಳು
* ತಾನೇ ಕೃಷ್ಣರಾವ್ ಎಂದು ಹೇಳಿಕೊಂಡ ಅಶ್ವಿನ್
* ಅಶ್ವಿನ್‌ರಾವ್‌ ಮೊಬೈಲ್‌ನಿಂದ ಐಎಎಸ್‌ ಅಧಿಕಾರಿಗೆ ಕರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT