ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕ ಅದಾಲತ್ ರದ್ದುಪಡಿಸಿ

Last Updated 27 ಏಪ್ರಿಲ್ 2015, 9:07 IST
ಅಕ್ಷರ ಗಾತ್ರ

ಮಡಿಕೇರಿ: ಲೋಕ ಅದಾಲತ್‌ ವ್ಯವಸ್ಥೆಯಿಂದಾಗಿ ನ್ಯಾಯಾಧೀಶರಿಗೆ ನ್ಯಾಯಾಲಯದ ಕಲಾಪಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಕಷ್ಟವಾಗುತ್ತಿದ್ದು, ಲೋಕ ಅದಾಲತ್‌ ಅನ್ನು ರದ್ದುಪಡಿಸಬೇಕಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿ ಎಸ್.ಎನ್. ಸತ್ಯನಾರಾಯಣ ಅವರು ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಭಾನು ವಾರ ನಡೆದ ನ್ಯಾಯಾಂಗ ಇಲಾಖಾ ನೌಕರರ 3ನೇ ಜಿಲ್ಲಾ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಅನಗತ್ಯ ಕೆಲಸಗಳನ್ನು ಹೇರುವು ದರಿಂದ ನ್ಯಾಯಾಲಯದ ಕಾರ್ಯ ಕಲಾಪಗಳನ್ನು ಸುಗಮವಾಗಿ ನಡೆಸಿ ಕೊಂಡು ಹೋಗಲು ನ್ಯಾಯಾಧೀಶರಿಗೆ ಸಾಧ್ಯವಾಗುತ್ತಿಲ್ಲ. ಇದಲ್ಲದೇ, ಲೋಕ ಅದಾಲತ್‌ ಕಾರ್ಯಕ್ರಮದಿಂದಾಗಿ ಅಧಿಕಾರಿಗಳ ಜತೆ ಸಂಬಂಧ ಏರ್ಪಡುತ್ತದೆ. ಇದರ ಅಗತ್ಯವಿದೆಯೇ? ಎಂದು ಅವರು ಪ್ರಶ್ನಿಸಿದರು.

ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ 5 ಎಕರೆ ಜಾಗದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇಲಾಖಾ ನೌಕರರಿಗಾಗಿ ವಸತಿಗೃಹ ಕಲ್ಪಿಸಲು ಪ್ರಯತ್ನಿಸಲಾಯಿತು. ಆದರೆ ಎಲ್ಲಿಗೆ ಬಂದು ತಲುಪಿದೆಯೋ ತಿಳಿದಿಲ್ಲ, ಆದ್ದರಿಂದ ನೌಕರರು ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣವರ್ ಮಾತನಾಡಿ, ನ್ಯಾಯಾಲಯಕ್ಕೆ ಆಗಮಿಸುವವರು ನಗುತ್ತಾ ಬರುವುದಿಲ್ಲ, ತೊಂದರೆಗೆ ಸಿಲುಕಿದವರು ನ್ಯಾಯಾಲಯಕ್ಕೆ ಬರುತ್ತಾರೆ. ಆದ್ದರಿಂದ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಘರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್‌ಕುಮಾರ್ ಮಾತನಾಡಿ, ನ್ಯಾಯಾಲಯ ಇಲಾಖೆ ನೌಕರರ ವಸತಿ ಗೃಹ ನಿರ್ಮಾಣಕ್ಕೆ ಅಗತ್ಯ ಭೂಮಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ ಅವರು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷರಾದ ಸಿ.ಟಿ. ಜೋಸೆಫ್, ನ್ಯಾಯಾಂಗ ಇಲಾಖಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ. ಜಯರಾಮ್ ಉಪಸ್ಥಿತರಿದ್ದರು.

ಸಂಘದ ಪ್ರತಿನಿಧಿಗಳಾದ ಲಕ್ಷ್ಮಣ ಮತ್ತು ಸಿ.ಜಿ. ಪೆಮ್ಮಯ್ಯ ಅವರು ನೌಕರರ ಅಹವಾಲುಗಳನ್ನು ಸಭೆಯ ಗಮನಕ್ಕೆ ತಂದರು. ನಿವೃತ್ತ ನೌಕರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಗೋಖಲೆ ಕೆ. ಘಾಳಪ್ಪ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಸಿ. ಶ್ರೀಕಾಂತ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT