ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಂಡ್‌ಸ್ಕೇಪ್‌ನಲ್ಲಿ ಹಿಮಗಿರಿ!

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಣ್ಣು ಹಾಯಿಸಿದಷ್ಟೂ ದೂರ ಹಿಮದ ರಾಶಿ ಹೊದ್ದ ಗಿರಿಶಿಖರಗಳು. ಕೊರೆವ ಚಳಿಗಾಳಿಯ ನಡುವೆ ಬೆಟ್ಟವನ್ನು ಏರುತ್ತಿದ್ದಂತೆ ಎದುರು ರಸ್ತೆಯೇ ಕಣ್ಮರೆ!.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಭೋಜ್‌ ಗ್ರಾಮದ ಕಲಾವಿದ ಸತ್ಪಾಲ್‌ ಕಡೋಳೆ ಅವರು ಗಂಗೋತ್ರಿಯ ಗಿರಿಶಿಖರವನ್ನು ಹತ್ತುವಾಗ ಆದ ಅನುಭವವಿದು. ಪ್ರವಾಸದ ವೇಳೆ ಗಂಗೋತ್ರಿಯಿಂದ ತಪೋವನದವರೆಗೂ ಕಂಡ ಬೆಟ್ಟಗುಡ್ಡಗಳನ್ನು ಇವರು ಚಿತ್ರಗಳನ್ನಾಗಿಸಿದ್ದಾರೆ. ಅಂದಹಾಗೆ, ಸತ್ಪಾಲ್‌ ಅವರ ‘ದಿ ಮ್ಯಾಮತ್‌ ಇನ್‌ ದಿ ಗ್ರೇನ್‌’ ಲ್ಯಾಂಡ್‌ಸ್ಕೇಪ್‌ ಚಿತ್ರಕಲಾ ಪ್ರದರ್ಶನ ಶನಿವಾರ ಆರಂಭವಾಗಿದ್ದು, ಶುಕ್ರವಾರದವರೆಗೆ (ಏ.19ರಿಂದ ಏ.25) ನಡೆಯಲಿದೆ.

2011ರ ಸೆಪ್ಟೆಂಬರ್‌ ತಿಂಗಳಲ್ಲಿ ಗಂಗೋತ್ರಿಗೆ ಪ್ರವಾಸ ಕೈಗೊಂಡಿದ್ದೆವು. ಹರಿದ್ವಾರ, ಉತ್ತರ ಕಾಶಿ ಮೂಲಕ ಗಂಗೋತ್ರಿ ತಲುಪಿದೆವು. ಗಂಗೋತ್ರಿಯಿಂದ ತಪೋವನದವರೆಗೂ ಸಿಗುವ ಹಿಮಶಿಖರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡಿದವು. ಕೆಲವು ಪ್ರದೇಶಗಳಲ್ಲಿ ಭೂಮಿ ಕುಸಿದು ರಸ್ತೆ ಮುಚ್ಚಿಹೋಗುತ್ತಿತ್ತು. ಆ ಅನುಭವ ಈಗಲೂ ಕಣ್ಣಮುಂದೆ ಬರುತ್ತದೆ. ಅಲ್ಲಿ ಕಂಡ ರಮಣೀಯ ಪ್ರಕೃತಿಯನ್ನು ಕ್ಯಾನ್ವಾಸ್‌ ಮೇಲೆ ಚಿತ್ರಿಸಿದ್ದೇನೆ. ತೈಲವರ್ಣ ನನ್ನ ಮಾಧ್ಯಮ. ಒಂದು ವರ್ಷದಲ್ಲಿ ಇಪ್ಪತ್ತು ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು ಬಿಡಿಸಿದ್ದೇನೆ. ಗಂಗೋತ್ರಿ ಅಲ್ಲದೇ ಹಂಪಿಯ ಬೆಟ್ಟಗಳ ಬಯಲು, ಕೋಲ್ಕತ್ತ ಹೊರವಲಯದ ಹಸಿರು ಪ್ರದೇಶಗಳನ್ನು ಕ್ಯಾನ್ವಾಸ್‌ನಲ್ಲಿ ಮೂಡಿಸಿದ್ದೇನೆ’ ಎನ್ನುತ್ತಾರೆ ಸತ್ಪಾಲ್‌.

ವೀಕ್ಷಕನನ್ನು ಕಾಲ ಮತ್ತು ಸ್ಥಳಕ್ಕೇ ಕರೆದೊಯ್ಯಬಲ್ಲ ಗುಣವನ್ನು ಲ್ಯಾಂಡ್‌ಸ್ಕೇಪ್ ಚಿತ್ರಗಳಲ್ಲಿ ಕಾಣಬಹುದು. ಇಲ್ಲಿನ ಕಲಾಕೃತಿಗಳಲ್ಲಿ ಮೇಲ್ನೋಟಕ್ಕೆ ಫೋಟೊಗ್ರಫಿಯ ಫ್ರೇಮಿಂಗ್ ಮನಸ್ಥಿತಿ ಕಂಡರೂ, ಪೇಂಟಿಂಗ್ ಹೆಚ್ಚು ಕಲಾತ್ಮಕವಾಗಿರುವುದರಿಂದ ಈ ಚಿತ್ರಗಳು ಭಿನ್ನವಾಗಿ ನಿಲ್ಲುತ್ತವೆ.

‘ಕೆಲವು ಕಲಾಕೃತಿಗಳಲ್ಲಿನ ಹಿಮ ನೋಡುಗನ ಸ್ಮೃತಿಪಟಲದಲ್ಲಿ ಕರಗುತ್ತಲೇ ಮತ್ತೆ ಹಿಮವಾಗುವಂಥ ಭಾವಾನುಭವ ನೀಡಲು ಸಾಧ್ಯವಿದೆ. ಹಿಮ ಕರಗಿ ನಮ್ಮೊಳಗೆ ಇಳಿಯ ಹೊರಟಂತೆ ಮತ್ತೆ ತನ್ನ ತಾ ಕಟ್ಟಿಕೊಂಡು ಶಿಖರವಾಗಿ ಅದರೆತ್ತರಕ್ಕೆ ನಮ್ಮನ್ನೆತ್ತಿಕೊಂಡು ಹೋದಂತೆ ಭಾಸವಾಗುತ್ತದೆ. ಅನುಭಾವದ ನೆಲೆಯಲ್ಲಿ ಇದೊಂದು ಅಪೂರ್ವ ಅನುಭೂತಿ’ ಎಂದು ವಿವರಣೆ ನೀಡುತ್ತಾರೆ ಸತ್ಪಾಲ್.
ಇವರ ಕಲಾಕೃತಿಗಳಲ್ಲಿ ಮನುಷ್ಯ ಮತ್ತು ನಿಸರ್ಗದ ನಡುವಿನ ಅನುಸಂಧಾನವಿದೆ. ಅಧ್ಯಾತ್ಮದ ನೆಲೆಯಲ್ಲೂ ಈ ಕಲಾಕೃತಿಗಳು ಕಾಡುತ್ತವೆ. ಅಷ್ಟು ಕಲಾತ್ಮಕ ಸ್ಪರ್ಶ ಪಡೆದ ಚಿತ್ರಗಳು ಇವಾಗಿವೆ.

‘ಆರ್ಟ್ ಮಾಸ್ಟರ್’ ಪದವಿ ಪಡೆದ ಸತ್ಪಾಲ್‌ ಅವರು ಪ್ರಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಗಿರಿಶಿಖರಗಳನ್ನು ಕಣ್ತುಂಬಿಕೊಳ್ಳುವ ಜೊತೆಗೆ ಚಾರಣ ಕೂಡ ಅವರ ಹವ್ಯಾಸ. ‘ಚಿತ್ರಸಂತೆ’ ಪ್ರದರ್ಶನದಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡವು. ಮುಂಬೈನ ಕ್ಯಾಮೆಲ್‌ ಆರ್ಟ್‌ ಫೌಂಡೇಷನ್‌ ಆಯೋಜಿಸಿದ್ದ ಚಿತ್ರಪ್ರದರ್ಶನಕ್ಕೆ ದಕ್ಷಿಣ ಭಾರತದಿಂದ ಇವರ ಚಿತ್ರಗಳು ಮಾತ್ರ ಆಯ್ಕೆಯಾಗಿದ್ದವಂತೆ. ಸ್ಥಳ: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಚಿತ್ರಕಲಾ ಪ್ರದರ್ಶನವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT