ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್ ಬಾಕ್ಸ್‌ನಲ್ಲಿ ತಿರುಪತಿ ಲಡ್ಡು!

ಟೆಕ್ಕಿಗೆ ₹ 60 ಸಾವಿರ ವಂಚನೆ
Last Updated 12 ಫೆಬ್ರುವರಿ 2016, 20:03 IST
ಅಕ್ಷರ ಗಾತ್ರ

ಬೆಂಗಳೂರು: ರಿಯಾಯಿತಿ ದರದಲ್ಲಿ ಲ್ಯಾಪ್‌ಟಾಪ್‌ ಹಾಗೂ ಐ–ಫೋನ್‌ಗಳನ್ನು ಮಾರಾಟ ಮಾಡುವುದಾಗಿ ಬಂದ ದುಷ್ಕರ್ಮಿಗಳ ಮಾತನ್ನು ನಂಬಿ ₹ 60 ಸಾವಿರ ಡ್ರಾ ಮಾಡಿಕೊಟ್ಟ ಸಾಫ್ಟ್‌ವೇರ್ ಕಂಪೆನಿ ಉದ್ಯೋಗಿಗೆ ಸಿಕ್ಕಿದ್ದು ಒಂದು ಇಟ್ಟಿಗೆ ಹಾಗೂ ತಿರುಪತಿ ತಿಮ್ಮಪ್ಪನ ಪ್ರಸಾದ!

ಇಂಥದ್ದೊಂದು ಪ್ರಕರಣ ಮಡಿವಾಳ ಸಮೀಪದ ವೆಂಕಟಾಪುರ ರಸ್ತೆಯಲ್ಲಿ ಗುರುವಾರ ವರದಿಯಾಗಿದೆ. ಎಚ್‌ಎಸ್‌ಆರ್‌ ಲೇಔಟ್‌ ನಿವಾಸಿ ವೆಂಕಟ್‌ ನಾರಾಯಣ್, ಹಣ ಕಳೆದುಕೊಂಡ ಸಾಫ್ಟ್‌ವೇರ್ ಎಂಜಿನಿಯರ್.

ಮಧ್ಯಾಹ್ನ 2.30ರ ಸುಮಾರಿಗೆ ಮನೆಗೆ ನಡೆದು ಹೋಗುತ್ತಿದ್ದ ವೆಂಕಟ್ ಅವರನ್ನು ತಡೆದ ಇಬ್ಬರು ಅಪರಿಚಿತರು, ‘ನಮ್ಮ ಬಳಿ ದುಬಾರಿ ಮೌಲ್ಯದ ಐ–ಫೋನ್ ಹಾಗೂ ಲ್ಯಾಪ್‌ಟಾಪ್‌ಗಳಿವೆ.  ಶೇ 60 ರಷ್ಟು ರಿಯಾಯಿತಿ ದರದಲ್ಲಿ ಮಾರಲು ನಿರ್ಧರಿಸಿದ್ದೇವೆ. ಅಂದರೆ, ಒಂದೂವರೆ ಲಕ್ಷ ಮೌಲ್ಯದ ಉಪಕರಣಗಳನ್ನು ನಿಮಗೆ ₹ 60 ಸಾವಿರಕ್ಕೆ ಕೊಡುತ್ತೇವೆ’ ಎಂದು ಹೇಳಿದ್ದರು.

ಆರಂಭದಲ್ಲಿ ಅವರ ಮಾತನ್ನು ನಂಬದ ವೆಂಕಟ್, ಕಡಿಮೆ ಬೆಲೆಗೆ ಮಾರುತ್ತಿರುವ ಬಗ್ಗೆ ವಿವರಣೆ ಕೇಳಿದ್ದಾರೆ. ಆಗ ಚೋರರು, ‘ಸಂಬಂಧಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ತುರ್ತಾಗಿ ಹಣ ಬೇಕಿದೆ’ ಎಂದು ‘ಲ್ಯಾಪ್‌ಟಾಪ್‌–ಐಫೋನ್’ ಎಂದು ರಟ್ಟಿನ ಎರಡು ಬಾಕ್ಸ್‌ಗಳನ್ನು ತೋರಿಸಿದ್ದಾರೆ. ಆಗ ಚೋರರ ಬಲೆಗೆ ಬಿದ್ದ ವೆಂಕಟ್, ಹತ್ತಿರದ ಎಟಿಎಂ ಘಟಕಕ್ಕೆ ಹೋಗಿ ಎರಡು ಕಾರ್ಡ್‌ಗಳಿಂದ ₹ 60 ಸಾವಿರ ಡ್ರಾ ಮಾಡಿದ್ದಾರೆ.  ಆ ಹಣವನ್ನು  ಕೊಟ್ಟು, ಬಾಕ್ಸ್‌ಗಳನ್ನು ಪಡೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಹಣ ಕೈಸೇರಿದ ಕ್ಷಣಾರ್ಧದಲ್ಲೇ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ವೆಂಕಟ್ ಮನೆಗೆ ಹೋಗಿ ಬಾಕ್ಸ್‌ಗಳನ್ನು ತೆಗೆದು ನೋಡಿದಾಗ ಅವರಿಗೆ ಆಘಾತ ಎದುರಾಯಿತು. ಕಾರಣ ಬಾಕ್ಸ್‌ನಲ್ಲಿ ಲ್ಯಾಪ್‌ಟಾಪ್–ಐಫೋನ್‌ಗಳ ಬದಲಾಗಿ ಇಟ್ಟಿಗೆ ಹಾಗೂ ತಿರುಪತಿ ತಿಮ್ಮಪ್ಪನ ಪ್ರಸಾದ ಸಿಕ್ಕಿದೆ. ತನಗೆ ವಂಚನೆಯಾಗಿರುವುದನ್ನು ಅರಿತ ವೆಂಕಟ್, ಕೂಡಲೇ ಮಡಿವಾಳ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ.

ಇದೇ ಮೊದಲಲ್ಲ
‘ದುಷ್ಕರ್ಮಿಗಳು ಸಾಫ್ಟ್‌ವೇರ್ ಉದ್ಯೋಗಿಗಳ ಗಮನ ಬೇರೆಡೆ ಸೆಳೆದು ಈ ರೀತಿ ವಂಚಿಸುತ್ತಿರುವುದು ಇದೇ ಮೊದಲಲ್ಲ. ಐಟಿ–ಬಿಟಿ ಉದ್ಯೋಗಿಗಳು ಹೆಚ್ಚಿರುವ ಎಚ್‌ಎಸ್‌ಆರ್ ಲೇಔಟ್, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್‌ಸಿಟಿ ಹಾಗೂ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಆಗಾಗ ಇಂಥ  ಪ್ರಕರಣಗಳು ವರದಿಯಾಗುತ್ತಲೇ ಇವೆ.

ಹೀಗೆ ವಂಚಿಸುತ್ತಿದ್ದ ಉತ್ತರ ಭಾರತ ಮೂಲದ ಮೂವರು ಆರೋಪಿಗಳು ಡಿಸೆಂಬರ್‌ನಲ್ಲಿ ಎಚ್‍ಎಸ್‍ಆರ್ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದರು. ಈ ಜಾಲದ ಬಗ್ಗೆ ಉದ್ಯೋಗಿಗಳು ಎಚ್ಚರ ವಹಿಸಬೇಕು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT