ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚಕರಿಗೆ ದಂಡನೆಯಾಗಲಿ

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಬಹುಕೋಟಿ ರೂಪಾಯಿ ಮೊತ್ತದ ಶಾರದಾ ಚಿಟ್‌ಫಂಡ್  ಹಗರಣ ಕುರಿತು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದು ಹಣ ತೊಡಗಿಸಿದ ಜನರಿಗೆ ನ್ಯಾಯ ದೊರೆ­ಯುವ ಮತ್ತು ಅವ್ಯವಹಾರ ನಡೆಸಿದವರಿಗೆ ಶಿಕ್ಷೆಯಾಗುವ ಆಶಾ­ಭಾವ ಮೂಡಿ­ಸಿದೆ. ಶಾರದಾ ಸಂಸ್ಥೆಯ ಎಲ್ಲ ವ್ಯವಹಾರಗಳ ತನಿಖೆಗೆ ಸಿಬಿಐ, ವಿಶೇಷ ತನಿಖಾ ತಂಡವನ್ನು ನೇಮಿಸಿದೆ.

ಹಗರಣ ಕುರಿತು ಈ ಹಿಂದೆ ನಡೆದ ರಾಜ್ಯ­ಮಟ್ಟದ ತನಿಖೆ ಫಲ ನೀಡಿರಲಿಲ್ಲ. ಶಾರದಾ  ಸಂಸ್ಥೆಗೆ ಸೇರಿದವರು ರಾಜಕೀ­ಯ­ವಾಗಿ ಶಕ್ತಿಶಾಲಿಯಾಗಿದ್ದು ಅವರನ್ನು ಮಣಿಸುವ ಕೆಲಸ ಕಷ್ಟಕರ ಎಂಬ ಪರಿಸ್ಥಿತಿ ಇದೆ. ಆದರೆ ಸುಪ್ರೀಂ ಕೋರ್ಟ್ ಕ್ರಮ ಜನರಲ್ಲಿ ಭರವಸೆ ಚಿಗುರಿ­ಸಿ­ದೆ.  ಹಣ ತೊಡಗಿಸಿದವರಿಗೆ ಈ ಹಿಂದೆ ರಾಜ್ಯ ಸರ್ಕಾರ ಪರಿಹಾರ ಕೊಡಲು ಮುಂದಾಗಿದ್ದರೂ ಚಿಟ್‌ಫಂಡ್‌ ಕಂಪೆನಿಯಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೂ ಪರಿಹಾರ ಮೊತ್ತಕ್ಕೂ ತಾಳೆಯಾಗುತ್ತಿರಲಿಲ್ಲ.

ಶಾರದಾ ಸಂಸ್ಥೆ  ಜನರಿಂದ ₨ 20,000 ಕೋಟಿ ಸಂಗ್ರಹಿಸಿದೆ. ಆದರೆ ರಾಜ್ಯ ಸರ್ಕಾರ ಪ್ರಕಟಿಸಿದ ಪರಿಹಾರದ ಮೊತ್ತ ಕೇವಲ ₨ 500  ಕೋಟಿ. ಈ ಹಗರಣ ಮುಚ್ಚಿಹಾಕಲು ರಾಜ್ಯ ಸರ್ಕಾರವೇ ಯತ್ನಿಸುತ್ತಿದೆ ಎಂಬ ಆರೋಪವೂ ಎದು­ರಾಗಿತ್ತು. ತಮ್ಮ ಹಣ ಮರಳಿಸಬೇಕು ಎಂದು 20.5 ಲಕ್ಷ ಜನ ಕೋರಿ­ದ್ದಾರೆ. ಇವರಲ್ಲಿ ಬಹುತೇಕ ಮಂದಿ ಬಡವರು. ವಂಚನೆಗೆ ಒಳಗಾದವರಲ್ಲಿ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ.

ಜನರು ಚಿಟ್‌ಫಂಡ್ ಸಂಸ್ಥೆಗಳಿಂದ ವಂಚನೆಗೆ ಒಳಗಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ತುಹಲವು ಸಂಸ್ಥೆಗಳು ಜನರ ಅಮಾಯಕತೆಯ ಲಾಭ ಪಡೆದು ಅವರನ್ನು ಸಂಕಷ್ಟದ ಪ್ರಪಾತಕ್ಕೆ ತಳ್ಳಿರುವ ನಿದರ್ಶನಗಳಿವೆ. ಆಕ­ರ್ಷಕ ಯೋಜನೆಗಳನ್ನು ಪ್ರಕಟಿಸಿ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಸೆಳೆದು ಕೋಟ್ಯಂತರ ರೂಪಾಯಿ ಬಾಚಿಕೊಂಡ ವಂಚಕರು ಪರಾರಿಯಾಗಿದ್ದಾರೆ.

ಇಂತಹ ಸಂಸ್ಥೆಗಳ ನಿಯಂತ್ರಣಕ್ಕೆ ಸೂಕ್ತ ಕಾನೂನು ಇಲ್ಲದಿರುವುದು ಅವು­ಗಳಿಗೆ ಹಣ ಸಂಗ್ರಹಿಸಿ ನಾಪತ್ತೆಯಾಗಲು ಸಹಾಯವಾಗಿದೆ. ‘ಸೆಬಿ’, ಕಂಪೆನಿ­ಗಳ ನೋಂದಣಿ ಇಲಾಖೆ ಮತ್ತು ರಿಸರ್ವ್ ಬ್ಯಾಂಕ್‌ ನಿರ್ಲಕ್ಷ್ಯ ಇಂತಹ ಘಟನೆ­­ಗಳು ಮರುಕಳಿಸಲು ಕಾರಣವಾಗುತ್ತದೆ. ಇಂತಹವೇ ಸುಮಾರು 1,500 ಚಿಟ್‌ಫಂಡ್ ಸಂಸ್ಥೆಗಳು ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶ­ದ­ಲ್ಲಿವೆ ಎನ್ನ­ಲಾ­ಗಿದೆ.

ಜನರು ಉಳಿತಾಯದ ಹಣಕ್ಕೆ ಸೂಕ್ತ ಬಡ್ಡಿ ನೀಡುವ ಹಣ­ಕಾಸು ಸಂಸ್ಥೆ­ಯನ್ನು ಹುಡುಕುವಾಗ ದುರದೃಷ್ಟದಿಂದ ವಂಚಕರ ಬಣ್ಣದ ಮಾತಿಗೆ ಬಲಿ­ಯಾಗಿ ಹಣ ತೊಡಗಿಸಿ ಕಳೆದುಕೊಳ್ಳುತ್ತಾರೆ. ಅನೇಕ ಸ್ಥಳ­ಗಳಲ್ಲಿ ಬ್ಯಾಂಕ್ ಗಳು ಅಥವಾ ನಿಯಮಾನುಸಾರ ಕಾರ್ಯನಿರ್ವಹಿಸುವ ಹಣಕಾಸು ಸಂಸ್ಥೆ­ಗಳಿಲ್ಲದಿರುವುದರಿಂದಲೂ ವಂಚಕ ಸಂಸ್ಥೆಗಳ ಬಲೆಗಳಿಗೆ ಸುಲಭವಾಗಿ ಬೀಳುತ್ತಿ­ದ್ದಾರೆ.

ಕೆಲವು ರಾಜ್ಯಗಳಲ್ಲಿ ಸರ್ಕಾರ ನಡೆಸುವ ಚಿಟ್ ಫಂಡ್‌ಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತಿವೆ. ಹಣ ತೊಡಗಿ­ಸಲು ಮುಂದಾ­ಗು­ವವರಿಗೆ ಅವರ ಹೂಡಿಕೆಹಣ ಜತನವಾಗಿರಿಸುವಂತಹ ಬಿಗಿ ನಿಯಂತ್ರಣ ಕ್ರಮ­ಗಳು  ಅತ್ಯಗತ್ಯ ಎನ್ನುವ ಪಾಠವನ್ನು  ಸಹಾರಾ ಮತ್ತು ಶಾರದಾ ಹಗರ­ಣ­ಗಳಿಂದ ಕಲಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT