ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಆರೋಪ: ಗ್ರಾಹಕರ ಪ್ರತಿಭಟನೆ

ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆಗಳ ಸೃಷ್ಟಿಸಿ ಸಾಲ ಪಡೆದ ಆರೋಪ
Last Updated 27 ನವೆಂಬರ್ 2015, 11:30 IST
ಅಕ್ಷರ ಗಾತ್ರ

ವಿಜಯಪುರ: ‘ಇಲ್ಲಿನ ಜಯಚಾಮರಾಜೇಂದ್ರ ಉದ್ಯಾನದ ಬಳಿ ಇರುವ ಫ್ಯೂಚರ್ ಫೈನಾನ್ಸಿಯಲ್‌ ಸರ್ವಿಸ್‌ ಹೆಸರಿನ ಖಾಸಗಿ ಹಣಕಾಸು ಕಂಪೆನಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿದೆ’  ಎಂದು ಆರೋಪಿಸಿ ಗ್ರಾಹಕರು ಗುರುವಾರ ಪ್ರತಿಭಟನೆ ನಡೆಸಿದರು.

ಫ್ಯೂಚರ್ ಫೈನಾನ್ಸಿಯಲ್‌ ಸರ್ವಿಸ್‌ ಖಾಸಗಿ ಹಣಕಾಸು ಕಂಪೆನಿ ಮಹಿಳೆಯರಿಗೆ ವೈಯಕ್ತಿಕ ಮತ್ತು ಗುಂಪು ಸಾಲಗಳನ್ನು ನೀಡಿ ನಿರ್ದಿಷ್ಟ ಬಡ್ಡಿ ವಿಧಿಸಿ ಕಂತುಗಳಲ್ಲಿ ಸಾಲ ಮರುಪಾವತಿ ಮಾಡಿಕೊಳ್ಳುತ್ತಿತ್ತು. ಆದರೆ, ಕೆಲವು ಗ್ರಾಹಕರ ನಕಲಿ ಸಹಿ ಮಾಡಿ, ಭಾವಚಿತ್ರಗಳನ್ನು ಬಳಸಿ ಕಂಪೆನಿಯಿಂದ ಸಾಲ ಪಡೆದಿರುವಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ  ಸಾಲದ ಮೊತ್ತವನ್ನು ಗ್ರಾಹಕರಿಗೆ ನೀಡದೆ ಸ್ವಂತಕ್ಕೆ ಬಳಸಿಕೊಂಡು ಗ್ರಾಹಕರನ್ನು ಕಂತು ಕಟ್ಟುವಂತೆ ಹೇಳುತ್ತಿದ್ದಾರೆ ಎಂದು ಮೋಸ ಹೋದ ಗ್ರಾಹಕಿ ಸುಮಾ ಅವರ ಪತಿ ಮಂಜುನಾಥ ಹೇಳಿದರು.

‘ಯಲಿಯೂರು ಗ್ರಾಮದ ನಿವಾಸಿ ಸುಮಾ ಮಂಜುನಾಥ ಅವರು ಕಂಪೆನಿಯಿಂದ ಸಾಲ ಪಡೆದು ಅದನ್ನು ತೀರಿಸಿಯೂ ಆಗಿತ್ತು. ಆದರೆ ಈಗ ಅವರ ನಕಲಿ ಸಹಿ ಮಾಡಿ, ಬೇರೆಯವರ ಭಾವಚಿತ್ರ ಬಳಸಿ ₹30 ಸಾವಿರ ಸಾಲ ಪಡೆದಿರುವಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಈ ಬಗ್ಗೆ ಕೇಳಲು ಕಚೇರಿಗೆ ಹೋದರೆ  ದಾಂದಲೆ ಮಾಡಲು ಬಂದಿದ್ದಾರೆ ಎಂದು ಹೇಳಿ ಸಿಬ್ಬಂದಿಗಳು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ಅವರು ದೂರಿದರು.

‘ಕೇವಲ ಮಹಿಳೆಯರಿಗಷ್ಟೆ ಸಾಲ ನೀಡುವ ಫ್ಯೂಚರ್ ಫೈನಾನ್ಸಿಯಲ್‌ ಸರ್ವಿಸ್‌  ಹಣಕಾಸು ಕಂಪೆನಿ ಇದೇ ರೀತಿಯಲ್ಲಿ ಸಾಕಷ್ಟು ಮಹಿಳೆಯರಿಗೆ ಮೋಸ ಮಾಡಿರುವ ಸಾಧ್ಯತೆ ಇದೆ. ಮಹಿಳೆಯರಿಗಿರುವ ಮಾಹಿತಿ ಕೊರತೆಯನ್ನೇ ದಾಳವಾಗಿ  ಬಳಸಿಕೊಂಡು ವಿವಿಧ ದಾಖಲೆಗಳಿಗೆ ಸಹಿ ಮಾಡಿಸಿಕೊಳ್ಳುವ ಈ ಸಂಸ್ಥೆಯು ಬಡ್ಡಿಯ ಹೆಸರಿನಲ್ಲಿ ಬಡ ಮಹಿಳೆಯರ ಆದಾಯವನ್ನು ಲೂಟಿ ಹೊಡೆಯುತ್ತಿದೆ’ ಎಂದು ದೂರಿದರು.

‘ಕಂಪೆನಿಯ ಮೇಲೆ ಸೂಕ್ತ ತನಿಖೆ ನಡೆಸಿ ಇದೇ ರೀತಿ ಮೋಸ ಹೋಗಿರುವ ಎಲ್ಲ ಗ್ರಾಹಕರಿಗೂ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಇದೇ ಕಂಪೆನಿಯ ಮತ್ತೊಬ್ಬ ಗ್ರಾಹಕಿ ಚೆನ್ನಹಳ್ಳಿ ಗ್ರಾಮದ ವೃದ್ಧ ಮಹಿಳೆ ನರಸಮ್ಮ ಮಾತನಾಡಿ, ‘ಹಿಂದೆ, ಸಾಲ ಪಡೆಯಲು ಕೊಟ್ಟಿದ್ದ ನನ್ನ ಚುನಾವಣಾ ಗುರುತಿನ ಚೀಟಿಯನ್ನು ಬಳಸಿ, ಸಹಿಯನ್ನು ನಕಲು ಮಾಡಿ, ಬೇರೆಯರ ಹೆಬ್ಬಟ್ಟಿನ ಗುರುತು ಬಳಸಿ, ಬೇರೆಯವರ ಭಾವಚಿತ್ರ ಬಳಸಿ ನನ್ನ ಹೆಸರಿನಲ್ಲಿಯೆ ₹80ಸಾವಿರ ಸಾಲ ಪಡೆದಿರುವಂತೆ ದಾಖಲೆ ಸೃಷ್ಟಿಸಲಾಗಿದೆ. ಈ ಬಗ್ಗೆ ಕೇಳಿದಾಗ ನೀವೇ ಸಹಿ ಮಾಡಿದ್ದೀರ ಭಾವಚಿತ್ರವೂ ನಿಮ್ಮದೇ ನೀವು ಪಡೆದಿರುವ ಸಾಲವನ್ನು ಹಿಂದಿರುಗಿಸಿ ಎಂದು ಕೇಳುತ್ತಿದ್ದಾರೆ’ ಎಂದು  ಆರೋಪಿಸಿದರು.

ನಮ್ಮದು ಬಡ ಕುಟುಂಬವಾಗಿದ್ದು, ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದೇವೆ, ಏಕಾಏಕಿ ₹80 ಸಾವಿರ ಕೊಡಲು ನಮಗೆ ಶಕ್ತಿ ಇಲ್ಲ. ಮೋಸ ಹೋಗಿರುವ ನಮಗೆ ಸೂಕ್ತ ನ್ಯಾಯ ಒದಗಿಸಿಕೊಡಿ ಎಂದು ಅವರು ಅಂಗಲಾಚುತ್ತಾರೆ.

ಕಚೇರಿಗೆ ಬರಲು ನಿರಾಕರಿಸಿ ದೂರವಾಣಿಯ ಮೂಲಕವೇ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಫ್ಯೂಚರ್ ಫೈನಾನ್ಸಿಯಲ್‌ ಸರ್ವಿಸ್‌ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್, ಸಿಬ್ಬಂದಿಯೊಬ್ಬರ ತಪ್ಪಿನಿಂದಾಗಿ ಈ ರೀತಿಯ ಅಕ್ರಮ ನಡೆದಿದೆ.

ಅಕ್ರಮ ಎಸಗಿದ ಸಿಬ್ಬಂದಿ ಈಗಾಗಲೆ ಕೆಲಸ ಬಿಟ್ಟು ಹೋಗಿದ್ದಾನೆ, ಮೋಸ ಹೋದ ಗ್ರಾಹಕರಿಗೆ ಸೂಕ್ತ ಪರಿಹಾರವನ್ನು ಸಂಸ್ಥೆಯ ಪರವಾಗಿ ಒದಗಿಸಲಾಗುವುದು ಹಾಗೂ ಇನ್ನು ಮುಂದೆ ಈ ರೀತಿಯ ಅಕ್ರಮ ಆಗದಂತೆ ಎಚ್ಚರವಹಿಸಲಾಗುವುದು ಎಂದು ಅವರು ಹೇಳಿದರು.

ಅಕ್ರಮ ಎಸಗಿದ ಸಿಬ್ಬಂದಿ ಈಗಾಗಲೇ ಕೆಲಸ ಬಿಟ್ಟಿದ್ದಾರೆ. ಮೋಸ ಹೋದ ಗ್ರಾಹಕರಿಗೆ ಪರಿಹಾರವನ್ನು ಸಂಸ್ಥೆಯ ಪರವಾಗಿ ಒದಗಿಸಲಾಗುವುದು
ಚಂದ್ರಶೇಖರ್,
ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT