ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ವರ್ಚಸ್ಸಿಗೆ ಬಲಿಯಾದ ಆರೋಪಿ

Last Updated 13 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಭೂಮಿರೆಡ್ಡಿಯ ಕೊಲೆಯಾಗಿ ಇಂದಿಗೆ ಮೂರು ದಶಕಗಳಾಗಿವೆ. ಅದು ನಡೆದದ್ದು ನಾಗರಿಕತೆಯ ಸದ್ದುಗದ್ದಲ ಹಾಗೂ ಕಿರಿಕಿರಿಯಿಂದ ದೂರವಿದ್ದ, ಕನಕಪುರ ಮತ್ತು ತಮಿಳುನಾಡು ಗಡಿಯಲ್ಲಿರುವ ಪುಟ್ಟ ಗ್ರಾಮದಲ್ಲಿ. ಭೂಮಿರೆಡ್ಡಿ– ದುಗ್ಗಯ್ಯರೆಡ್ಡಿ  ಸಹೋದರರು. ಶ್ರೀಮಂತ ಕುಳಗಳು. ಆದರೆ ಇವರ ಬಳಿ ಇದ್ದ ಹತ್ತು ವರ್ಷಗಳಷ್ಟು ಹಳೆಯದಾದ ಮೂವತ್ತು ಎಕರೆ ಜಮೀನಿನ ವಿವಾದದಿಂದಾಗಿ ಇಡೀ ಗ್ರಾಮವೇ ಇಬ್ಭಾಗವಾಗಿತ್ತು.

ಪರಸ್ಪರ ಹೊಡೆದಾಟ ಬಡಿದಾಟಗಳು ನಡೆಯುತ್ತಲೇ ಇದ್ದವು. ಆದರೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ಯಾವಾಗಲೂ ಕೈ ಆಡಿಸುವ ಚಾಳಿ ಇದ್ದ ದುಗ್ಗಯ್ಯನ ಗುಂಪಿನವರೇ ಮೇಲುಗೈ ಸಾಧಿಸುತ್ತಿದ್ದರು. ಸುತ್ತಮುತ್ತಲ ಹತ್ತಾರು ಗ್ರಾಮಗಳಲ್ಲಿ ದುಗ್ಗಯ್ಯ ಹೆಸರು ಕೆಡಿಸಿಕೊಂಡಿದ್ದರೆ, ಭೂಮಿರೆಡ್ಡಿ ಮತ್ತು ಅವನ ಗುಂಪಿನವರ ಬಗ್ಗೆ ಜನರಲ್ಲಿ ಅಪಾರ ಗೌರವ ಮತ್ತು ಅನುಕಂಪವಿತ್ತು. ಭೂಮಿರೆಡ್ಡಿಯವರಿಗೆ ಸರ್ಕಾರಿ ವಲಯದಲ್ಲಿ ಸಾಕಷ್ಟು ಪ್ರಭಾವ ಇತ್ತು. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳದೇ ಧರ್ಮವಂತ ಎನಿಸಿಕೊಂಡಿದ್ದರೆ, ದುಗ್ಗಯ್ಯ, ಅಣ್ಣನ ಕೊಲೆಗೆ ಹೊಂಚು ಹಾಕುತ್ತಿದ್ದ.

ಜಮೀನು ವಿವಾದದಲ್ಲೂ ಸಿವಿಲ್ ಕೋರ್ಟ್ ಭೂಮಿರೆಡ್ಡಿ ಪರವಾಗಿ ಆದೇಶ ಹೊರಡಿಸಿತು. ದುಗ್ಗಯ್ಯರೆಡ್ಡಿ ತನ್ನ ಸಮಚಿತ್ತ ಕಳೆದುಕೊಂಡು ಕೊಲೆಯ ಕಲ್ಪನೆಯಲ್ಲೇ ಸುಖಿಸತೊಡಗಿದ. ತನ್ನ ಹಿಂಬಾಲಕರ ಜೊತೆ ಮಸಲತ್ತು ನಡೆಸಿ ಅಣ್ಣನ ಕೊಲೆಯ ನೀಲಿ ನಕ್ಷೆ ತಯಾರಿಸಿದ.

ಒಂದು ಮುಂಜಾನೆ ಗ್ರಾಮದಿಂದ ಸ್ವಲ್ಪ ದೂರದಲ್ಲಿದ್ದ ಬಾಣಗೌಡನ ಕೆರೆಯ ಏರಿಯ ಹಿಂದೆ ಬಹಿರ್ದೆಸೆಗೆ ಕುಳಿತಿದ್ದ ಭೂಮಿರೆಡ್ಡಿಯ ಹೊಟ್ಟೆಯೊಳಗೆ ಹಠಾತ್ತನೆ ಎರಡು ಕಠಾರಿಗಳು ಇಳಿದವು. ಭೂಮಿರೆಡ್ಡಿ ಎರಡೂ ಕಠಾರಿಗಳನ್ನು ತಬ್ಬಿಕೊಂಡೇ ಕತ್ತಲಾವರಿಸಿದ ಕಣ್ಣುಗಳನ್ನು ಮುಚ್ಚಿ ಕೊನೆಯುಸಿರೆಳೆದ. ಕೊಲೆಯ ಸುದ್ದಿ ಕ್ಷಿಪ್ರವಾಗಿ ಎಲ್ಲೆಲ್ಲೂ ಹರಡಿತು. ಪೊಲೀಸರು, ರಾಜಕಾರಣಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಅಂತಿಮ ದರ್ಶನಕ್ಕೆ ಬಂದರು. ‘ಶರಣರ ಗುಣವನ್ನು ಮರಣದಲ್ಲಿ ಕಾಣು’ ಎಂಬ ಶರಣೋಕ್ತಿಗೆ ಭೂಮಿರೆಡ್ಡಿಯ ಸಾವು ಸಾಕ್ಷಿಯಾಯಿತು.

ಭೂಮಿರೆಡ್ಡಿಯ ಕೊಲೆಯನ್ನು  ಗಂಭೀರವಾಗಿ ಪರಿಗಣಿಸಿದ ಸರ್ಕಾರ ಎರಡೇ ದಿನಗಳಲ್ಲಿ ವೈ.ಆರ್.ಜಗದೀಶ್‌ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ, ಓ.ಪಿ. ಮಾರ್ಟಿನ್‌ ಅವರನ್ನು ವಿಶೇಷ ತನಿಖಾಧಿಕಾರಿಯನ್ನಾಗಿ ನೇಮಿಸಿತು. ಕುಶಲಮತಿ ಮಾರ್ಟಿನ್ ನಾಲ್ಕೇ ದಿನಗಳಲ್ಲಿ ಆರೋಪಿಗಳ ಅಡಗುತಾಣ ಭೇದಿಸಿ, ಅವರ ಹೆಡೆಮುರಿ ಕಟ್ಟಿ, ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದರು. ದುಗ್ಗಯ್ಯನ ಪರವಾಗಿ ವಕೀಲ ಕೋದಂಡಯ್ಯ (ಹೆಸರು ಬದಲಿಸಲಾಗಿದೆ) ವಕಾಲತ್ತು ವಹಿಸಿದರೆ ಪೌಜಪ್ಪ ಮತ್ತು ಬಾಬುಸಾಬ್ ಪರ ನಾನು ಹಾಜರಾದೆ.

ಇದಾದ ಕೆಲವೇ ದಿನಗಳಲ್ಲಿ ದುಗ್ಗಯ್ಯ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ. ಪ್ರಕರಣ ನ್ಯಾಯಾಧೀಶ ನಜರತ್‌ ಅವರ ಮುಂದೆ ಬಂತು. ವಿಚಾರಣೆ ದಿನ ಕೋದಂಡಯ್ಯನವರು ಸಮಯಕ್ಕೆ ಸರಿಯಾಗಿ ಹಾಜರಾದದ್ದು ಅಲ್ಲಿದ್ದ ವಕೀಲರಿಗೆಲ್ಲ ಆಶ್ಚರ್ಯ! ಜ್ಯೋತಿಷಿಗಳನ್ನು ಕಂಡೇ ಕೋರ್ಟಿಗೆ ಬರುತ್ತಿದ್ದ ಅವರು ನಿಗದಿತ ಸಮಯಕ್ಕೆ ಬಂದ ಉದಾಹರಣೆಯೇ ಇರಲಿಲ್ಲ. ಈಗ ಅದೆಲ್ಲಾ ತಿರುವುಮುರುವಾಗಿ ಹಾಜರಾದದ್ದು ಅಂದಿನ ಅವರ ಕಾರ್ಯವೈಖರಿಯ ಮುನ್ಸೂಚನೆಯಾಗಿತ್ತು. ಜಾಮೀನು ಅರ್ಜಿಯ ಕುರಿತು ವಾದ ಮಾಡುವಾಗ ಎಂದಿಗಿಂತಲೂ ಹೆಚ್ಚಾಗಿ ಭಾವಾವೇಶಕ್ಕೆ ಒಳಗಾಗಿದ್ದರು. ವರ್ಚಸ್ಸಿನ ಭ್ರಮೆಗೆ ಬಿದ್ದವರಂತೆ ಕಾಣುತ್ತಿದ್ದರು.  ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ವಾದ ಮಾಡಿದರು.

ಆದರೆ ಈ ಪರಿಯ ಭಾವ-ಬುದ್ಧಿ ಪ್ರದರ್ಶನ ಪರಿಹಾರ ತಂದುಕೊಡಲಿಲ್ಲ. ಜಾಮೀನು ಅರ್ಜಿ ತಿರಸ್ಕೃತಗೊಂಡಿತು. ಕೆಲವೇ ದಿನಗಳಲ್ಲಿ ಮಾರ್ಟಿನ್‌ ಅವರು ಚುರುಕು ತನಿಖೆ ಮುಗಿಸಿ ಮೂವರ ವಿರುದ್ಧವೂ ಕೊಲೆ ಆರೋಪದಡಿ ದೋಷಾರೋಪಣ ವರದಿ ಸಲ್ಲಿಸಿದರು. ಇದಾಗುತ್ತಿದ್ದಂತೆಯೇ ಕೋದಂಡಯ್ಯನವರು ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ದಾಖಲಿಸುವ ಮುನ್ನ ನನ್ನೊಂದಿಗೆ ಮಾತನಾಡಿದರು. ನಾನು ಅದನ್ನು ಬೆಂಬಲಿಸಲಿಲ್ಲ. ಅದು ಸಕಾಲಿಕವಲ್ಲವೆಂದು ಪರಿಪರಿಯಾಗಿ ಹೇಳಿದೆ. ಈ ಹಂತ­ದಲ್ಲಿ ಮಾಡುವ ಯಾವ ಪ್ರಯತ್ನವೂ ಉಚಿತ ಪರಿಹಾರ ಕೊಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ನನ್ನ ಮಾತಿಗೆ ಪೂರಕವಾಗಿ ನಾಲ್ಕಾರು ವಿಷಯಗಳನ್ನೂ ತಿಳಿಸಿದೆ. ನನ್ನ ವಿವರಣೆ ಅವರ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅವರ ನಿಲುವಿನಂತೆ ಜಾಮೀನು ಅರ್ಜಿಯನ್ನು ಮುಂದುವರಿಸಿದರು.

ಹೈಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿ, ವಿಚಾರಣೆಯನ್ನು ನಾಲ್ಕು ತಿಂಗಳಲ್ಲಿ ಮುಗಿಸಬೇಕೆಂದು ಸೆಷನ್ಸ್ ಕೋರ್ಟಿಗೆ ನಿರ್ದೇಶಿಸಿತು.
ವಿಳಂಬವಾದ ವಿಚಾರಣೆ : ಸೆಷನ್ಸ್ ಕೋರ್ಟಿನಲ್ಲಿ ವಿಚಾರಣೆ ಪ್ರಾರಂಭವಾಗುವ ವೇಳೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಎರಡು ತಿಂಗಳು ಕಳೆದುಹೋಯಿತು. ಒಂದು ನಿಗದಿತ ದಿನ ವಿಚಾರಣೆ ಪ್ರಾರಂಭವಾಯಿತು. ಆ ದಿನ, ಕೊಲೆಯನ್ನು ಕಣ್ಣಾರೆ ಕಂಡಿದ್ದ ನಾಲ್ಕು ಸಾಕ್ಷಿದಾರರು ಹಾಜರಿದ್ದರು. ಸುತ್ತಮುತ್ತಲ ಹಳ್ಳಿಯವರಿಂದ ಕೋರ್ಟ್ ತುಂಬಿ ಹೋಗಿತ್ತು. ಎಲ್ಲರ ಗಮನವೂ ಸಾಕ್ಷಿದಾರರ ಮೇಲಿತ್ತು.

ಇದ್ದವರಲ್ಲಿ ಕೆಲವರ ದೃಷ್ಟಿ ಮತ್ತು ಚಿತ್ತವಂತೂ ಆರೋಪಿಗಳ ಕಡೆಗೇ ನೆಟ್ಟಿತ್ತು. ಅವರ ವಿಲಕ್ಷಣ ನೋಟ ದುಗ್ಗಯ್ಯನ ವಕೀಲರಿಗೆ ಹತ್ತಾರು ಅರ್ಥಗಳನ್ನು ಕಟ್ಟಿಕೊಡುತ್ತಿತ್ತು. ದುಗ್ಗಯ್ಯರೆಡ್ಡಿ ಹೊರಗೆ ಬಂದರೆ ಜಗತ್ತಿನ ಯಾವ ಶಕ್ತಿಯೂ ಅವನನ್ನು ಉಳಿಸಿಕೊಳ್ಳಲಾರದು ಎಂದು ಮತ್ತೆ ಮತ್ತೆ ಅವರಿಗೆ ಅನಿಸುತ್ತಿತ್ತು- ಸಾವರಿಸಿಕೊಂಡರು.

ಸಾಕ್ಷಿದಾರರಲ್ಲಿ ಒಬ್ಬನಾದ ಮಾಸ್ತಯ್ಯರೆಡ್ಡಿ ಒಳಗೆ ಬಂದು ಸಾಕ್ಷಿಕಟ್ಟೆಯಲ್ಲಿ ನಿಂತಾಗ ಸಂಪೂರ್ಣ ನಿಶ್ಶಬ್ದ. ಎಲ್ಲರಿಗೂ ಕೇಳಿಸುತ್ತಿದ್ದುದ್ದು ಒಂದೇ ಒಂದು ಅದು, ಟೈಪ್‌ರೈಟರ್‌ನ ಸದ್ದು. 

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಾಕ್ಷಿದಾರರ ಮುಖ್ಯ ವಿಚಾರಣೆ ಆರಂಭಿಸಿದರು.  ಅವರ ವಿಚಾರಣೆ ಮುಗಿಯುತ್ತಿದ್ದಂತೆಯೇ ನ್ಯಾಯಾಧೀಶರು ದುಗ್ಗಯ್ಯರೆಡ್ಡಿಯ ವಕೀಲರನ್ನು ಕುರಿತು ‘ಮಿಸ್ಟರ್ ಕೋದಂಡಯ್ಯ, ಎಲ್ಲಿ ನೋಡ್ತಿದ್ದೀರಿ, ಪಾಟಿಸವಾಲು ಪ್ರಾರಂಭಿಸಿ’ ಎಂದರು.
‘ಯುವರ್ ಆನರ್, ಬಂಧುಗಳ ಮನೆಯಲ್ಲಿ ಒಂದು ಕಾರ್ಯ ಇದೆ. ನಾನು ಹೋಗಬೇಕಾದ ಅನಿವಾರ್ಯತೆ ಇದೆ. ದಯಮಾಡಿ ನಾಲ್ಕು ದಿನಗಳ ಕಾಲಾವಕಾಶ ಕೊಡಿ’ ಎಂದು ದುಂಬಾಲು ಬಿದ್ದರು.

ಅದಕ್ಕೆ ನ್ಯಾಯಾಧೀಶರು, ‘ಹೈಕೋರ್ಟ್ ಆದೇಶ ಏನು ಅಂತ ನಿಮಗೆ ಗೊತ್ತಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ರವರ ಕಾಯಿಲೆಯಿಂದ ಎರಡು ತಿಂಗಳು ಈಗಾಗಲೇ ಕಡಿತ ಆಗಿದೆ, ಇವತ್ತಿಗೆ ಇಪ್ಪತ್ತು ದಿನಗಳು ಕಳೆದಿವೆ. ವಿಚಾರಣೆಯಲ್ಲಿ ಸಾಕಷ್ಟು ಪ್ರಗತಿಯಾಗಿಲ್ಲ. ಗಡುವಿನ ದಿನ ವೇಗವಾಗಿ ಹತ್ತಿರ ಬರ್ತಿದೆ. ಅದರೊಳಗೆ ವಿಚಾರಣೆ ಮುಗಿಸದಿದ್ದರೆ ಹೈಕೋರ್ಟ್ ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಅದು ನನಗೆ ಆಗಬೇಕು ಅಂತ ನೀವು ಬಯಸ್ತೀರೇನು?’ ಎಂದು ಪ್ರಶ್ನಿಸಿದರು. ಏನೋ ಸಮಜಾಯಿಷಿ ನೀಡಲು ವಕೀಲರು ಮುಂದಾದಾಗ ನ್ಯಾಯಾಧೀಶರು ‘ಹನುಮಂತರಾಯರೇ, ಪಾಟಿಸವಾಲಿಗೆ ನೀವು ಸಿದ್ಧನಾ?’ ಎಂದು ಪ್ರಶ್ನಿಸಿದರು. ‘ಯುವರ್ ಆನರ್, ಐ ಆಮ್ ಮೋರ್ ದ್ಯಾನ್ ರೆಡಿ’ ಅಂದೆ.

‘ಯುವರ್ ಆನರ್, ನನ್ನ ಪಾಟಿ ಸವಾಲಾದ ನಂತರ ಹನುಮಂತರಾಯರ ಪಾಟಿಸವಾಲು ಆಗಲಿ. ದಯವಿಟ್ಟು ಈ ಚಿಕ್ಕ ಅನುಕೂಲ ನನಗೆ ಮಾಡಿಕೊಡಿ’  ಎಂದು ಮೆಲುದನಿಯಲ್ಲಿ ಅಂಗಲಾಚಿದರು ಕೋದಂಡಯ್ಯನವರು. ಸಾಮಾನ್ಯವಾಗಿ ಹಾಗೆ ತಗ್ಗಿದ ದನಿಯಲ್ಲಿ ಬೇಡಿಕೆ ಸಲ್ಲಿಸುವುದಿಲ್ಲವಾದ ಕಾರಣಕ್ಕೋ ಏನೋ ನ್ಯಾಯಾಧೀಶರು ಒಪ್ಪಿ ವಿಚಾರಣೆಯನ್ನು ಮುಂದೂಡಿದರು.

ಮಾಸ್ತಯ್ಯರೆಡ್ಡಿಯ ಪಾಟಿಸವಾಲಿನ ದಿನವೂ ಕೋರ್ಟ್ ಕಿಕ್ಕಿರಿದು ತುಂಬಿತ್ತು. ನ್ಯಾಯಾಧೀಶರು ಬರುವುದನ್ನೇ ಎಲ್ಲರೂ ನಿರೀಕ್ಷಿಸುತ್ತಿದ್ದೆವು. ಇದ್ದಕ್ಕಿದ್ದಂತೆ ಹೊರಗಿದ್ದ ಅರಳಿಮರದ ಕಡೆಯಿಂದ ಜನರು ಅರಚಾಡುವ ಸದ್ದು ಕೇಳಿಸಿತು. ಒಳಗಿದ್ದವರು ಹೊರಗೆ ಹೋಗಲು ಬಾಗಿಲಿಗೆ ಬರುತ್ತಿದ್ದಂತೆ ಹೆಜ್ಜೇನಿನ ದಂಡು ಬಾಗಿಲು ಕಿಟಕಿಗಳಿಂದ ಒಮ್ಮೆಲೆ ನುಗ್ಗಿ ಬರಲಾರಂಭಿಸಿತು. ಒಳಗಿದ್ದವರು ತಕ್ಷಣ ಕಿಟಕಿ, ಬಾಗಿಲುಗಳನ್ನು ಮುಚ್ಚಿದರು. ಅಷ್ಟರಲ್ಲಾಗಲೇ ಒಳಗೆ ಬಂದಿದ್ದ ಹೆಜ್ಜೇನು ಕೆಲವರಿಗೆ ಕಚ್ಚಿ ಅವರು ಬಾಯಿ ಬಡಿದುಕೊಳ್ಳುತ್ತಿದ್ದರು.

ಇತ್ತ, ಆರೋಪಿಗಳನ್ನು ಜೀಪಿನಲ್ಲಿ ಕರೆದುಕೊಂಡು ಬಂದಿದ್ದ ಪೊಲೀಸರು ಮೂವರು ಆರೋಪಿಗಳಿಗೂ ಕೈಕೋಳ ತೊಡಿಸಿ ಜೀಪಿನ ಕಂಬಿಗಳಿಗೆ ಬಂಧಿಸಿದ್ದರು. ಅಲ್ಲಿದ್ದವರೆಲ್ಲ ಎದ್ದೆನೋ ಬಿದ್ದೆನೋ ಎಂದು ಓಡಿ ಹೋದರೂ ಅವರನ್ನು ಹೆಜ್ಜೇನು ಬಿಡಲಿಲ್ಲ. ಆರೋಪಿಗಳು ಮಾತ್ರ ಓಡಿ ಹೋಗಲಾಗದ ಕಾರಣ ಹೆಜ್ಜೇನು ಅವರನ್ನು ಮುತ್ತಿತು. ಯಾರೂ ಬಂದು ಬಿಡಿಸಲಾಗದ ಅಯೋಮಯ ಸ್ಥಿತಿ ಅವರದ್ದಾಯಿತು! ಅವುಗಳೊಂದಿಗೆ ಸೆಣಸಲಾಗದೆ ಆರೋಪಿಗಳು ನಿತ್ರಾಣದಿಂದ ನೇತಾಡುವಂತಾಯಿತು. ಎಲ್ಲಾ ಹುಳುಗಳು ಕಚ್ಚಿ ಸಾವನ್ನಪ್ಪಿದ ನಂತರವೇ ಪೊಲೀಸರು ಅವರ ಹತ್ತಿರ ಹೋಗಲು ಸಾಧ್ಯವಾದದ್ದು.

ಒಬ್ಬೊಬ್ಬ ಆರೋಪಿಯನ್ನು 40–50 ಹುಳುಗಳು ಕಚ್ಚಿದ್ದವು. ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇದೇ ಕಾರಣಕ್ಕೆ ವಿಚಾರಣೆ 20 ದಿನ ಮುಂದಕ್ಕೆ ಹೋಯಿತು. ಹೆಜ್ಜೇನು ತಂದಿಟ್ಟ ಅವಘಡದಿಂದ ಭೂಮಿರೆಡ್ಡಿ ಬೆಂಬಲಿಗರು ಪಟ್ಟ ಸಂಭ್ರಮ ದುಗ್ಗಯ್ಯರೆಡ್ಡಿಯ ವಕೀಲರಲ್ಲಿ ಮತ್ತೆ ಆತಂಕ ಮೂಡಿಸಿತು. ಆದರೂ ಅವರ ಮನಸ್ಸು ವಿವೇಚನೆಗೆ ಒಳಪಡಲಿಲ್ಲ. ಹೈಕೋರ್ಟಿನ ಆದೇಶದಂತೆ ನಾಲ್ಕು ತಿಂಗಳ ಗಡುವು ಮುಗಿದು ಹೋಗಿದ್ದರಿಂದ ಅದರ ಆಧಾರದ ಮೇಲೆ ಪುನಃ ಹೈಕೋರ್ಟ್‌ಗೆ ಜಾಮೀನು ಅರ್ಜಿಯನ್ನು ಸಲ್ಲಿಸಲು ಮುಂದಾದರು. ನನ್ನ ನಿರ್ಧಾರ ಕೇಳಿದರು.

ನನಗೆ ಇದು ಇಷ್ಟವಿರಲಿಲ್ಲ. ಆದ್ದರಿಂದ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ಸಾಕ್ಷಿ ವಿಚಾರಣೆಯ ಸಂದರ್ಭದಲ್ಲಿ ಭೂಮಿರೆಡ್ಡಿಯ ಬೆಂಬಲಿಗರು ಆರೋಪಿಗಳನ್ನು ನೋಡುತ್ತಾ ವ್ಯಕ್ತಪಡಿಸುತ್ತಿದ್ದ ಪ್ರತಿಕ್ರಿಯೆ, ಹೆಜ್ಜೇನು ದಾಳಿ ದಿನ ಸಂಭ್ರಮಿಸಿದ ರೀತಿ, ಕೆಟ್ಟ ಸೂಚನೆಯಂತೆ ನನಗೆ ಕಾಣುತ್ತಿದೆ ಎಂದು ಹೇಳಲು ಪ್ರಯತ್ನಿಸಿದೆ.

‘ಕೊಲೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಊರಿನಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಕೆಲವರು ದುಗ್ಗಯ್ಯರೆಡ್ಡಿಯನ್ನು ಮುಗಿಸಿದರೆ ಭೂಮಿರೆಡ್ಡಿಯ ಆತ್ಮಕ್ಕೆ ಶಾಂತಿ ಸಿಗುವುದೆಂದು ಸಂಕಲ್ಪಿಸಿರುವ ಸುದ್ದಿಯನ್ನೂ ನಾನು ಕೇಳಿಸಿಕೊಂಡಿದ್ದೇನೆ. ಈಗ ಆತುರಪಟ್ಟು ಇನ್ನೊಂದು ದುರಂತಕ್ಕೆ ನಾವೇ ಕಾರಣರಾಗುವುದು ಬೇಡ. ವಾತಾವರಣ ಸ್ವಲ್ಪ ತಿಳಿಯಾಗಲಿ, ಆಮೇಲೆ ಜಾಮೀನಿನ ವಿಚಾರ ಮುನ್ನೆಲೆಗೆ ತರುವುದು ಇದ್ದೇ ಇದೆ’ ಎಂದು ತಿಳಿಹೇಳಲು ಪ್ರಯತ್ನಿಸಿದೆ. ಆದರೆ ಅವರು, ‘ಯಾರ್‍್ಯಾರ ಹಣೆಬರಹ ಹೇಗೆ ಇರುತ್ತದೋ ಹಾಗೇ ಆಗುವುದು’ ಎಂಬ ಹಾರಿಕೆ ಉತ್ತರ ಕೊಟ್ಟು ನನ್ನ ಬಾಯಿ ಮುಚ್ಚಿಸಿದರು. ಅವರ ಮನಸ್ಸು ನಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದುದನ್ನು  ಅರ್ಥಮಾಡಿಕೊಂಡ ನಾನು ಇನ್ನು ಮುಂದುವರೆಸಿ ಪ್ರಯೋಜನವಿಲ್ಲವೆಂದು ಸುಮ್ಮನಾದೆ.

ತಾವು ಅಂದುಕೊಂಡಂತೆ ಅವರು ಜಾಮೀನು ಅರ್ಜಿಯನ್ನು ಸಲ್ಲಿಸಿಯೇಬಿಟ್ಟರು. ಸೆಷನ್ಸ್‌ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ ಆದೇಶದಂತೆ ನಾಲ್ಕು ತಿಂಗಳಿನಲ್ಲಿ ಮುಗಿಸಲು ಏಕೆ ಸಾಧ್ಯವಾಗಲಿಲ್ಲ ಎಂಬ ಕಾರಣವನ್ನು ಸರ್ಕಾರದ ಪರ ವಕೀಲರು ನೀಡಿದರು. ಇದಕ್ಕೆ ತಮ್ಮ ಕಕ್ಷಿದಾರ ಕಾರಣನಲ್ಲ ಎಂದು ಕೋದಂಡಯ್ಯನವರು ಸಮರ್ಥಿಸಿಕೊಂಡರು. ಆದರೆ ಇದಾವ ಕಾರಣಗಳೂ ಹೈಕೋರ್ಟಿಗೆ ಮುಖ್ಯವೆನಿಸಲಿಲ್ಲ. ತನ್ನ ಹಿಂದಿನ ಆದೇಶದ ಉದ್ದೇಶ ಈಡೇರಿಲ್ಲ ಎಂಬ ಒಂದೇ ಕಾರಣವನ್ನು ಮುಂದು ಮಾಡಿ ದುಗ್ಗಯ್ಯನಿಗೆ ಜಾಮೀನು ನೀಡಿಬಿಟ್ಟಿತು.

ಆದೇಶ ಹೊರಬರುತ್ತಿದ್ದಂತೆ ಹೈಕೋರ್ಟಿನ ಹೊರಗೆ ಜಮಾಯಿಸಿದ್ದ ಭೂಮಿರೆಡ್ಡಿ ಮತ್ತು ದುಗ್ಗಯ್ಯರೆಡ್ದಿ ಬೆಂಬಲಿಗರು ಅಲ್ಲಿಯೇ ಕೈಕೈ ಮಿಲಾಯಿಸಲು ಮುಂದಾದರು. ಸದ್ಯ! ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹೆಚ್ಚಿನ ಅನಾಹುತ ತಪ್ಪಿತು.

ಹೈಕೋರ್ಟಿನ ಆದೇಶವಾದ ನಾಲ್ಕನೇ ದಿನ ದುಗ್ಗಯ್ಯರೆಡ್ಡಿ ಜೈಲಿನಿಂದ ಹೊರಬಂದ. ರಕ್ಷಣೆಗಾಗಿ ಹತ್ತಾರು ಜನರನ್ನು ಬೆನ್ನಿಗೆ ಕಟ್ಟಿಕೊಂಡೇ ಓಡಾಡುತ್ತಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು. ಜೈಲಿನಿಂದ ಹೊರಬಂದ ಹತ್ತನೇ ದಿನಕ್ಕೆ ಅವನ ತೋಟದಲ್ಲೇ ಅಮಾನುಷವಾಗಿ ಹತ್ಯೆಯಾಗಿ ಹೋದ. ದುಗ್ಗಯ್ಯರೆಡ್ಡಿಯ ಕೊಲೆಯಾದ ಮೇಲೆ ಭೂಮಿರೆಡ್ಡಿಯ  ಹತ್ಯೆಯ ಕಿಚ್ಚು  ಆತನ ಬೆಂಬಲಿಗರಲ್ಲಿ ಆರಿತು. ಈ ಹತ್ಯೆಯ ನಂತರ ಉಳಿದ ಆರೋಪಿಗಳ ಪರ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನನಗೆ ಕಷ್ಟವಾಗಲಿಲ್ಲ. ಪ್ರಮುಖ ಸಾಕ್ಷಿಗಳೆಲ್ಲ ದುಗ್ಗಯ್ಯನ ಕೊಲೆಯ ನಂತರ ಕೇಸಿನಲ್ಲಿ ಆಸ್ಥೆ ವಹಿಸದೆ ಹೋದದ್ದು ನಾನು ಕೇಸಿನಲ್ಲಿ ಗೆಲುವು ಸಾಧಿಸಲು ದಾರಿ ಮಾಡಿಕೊಟ್ಟಿತು.

ಅಂತಹ ಗೆಲುವಿನಿಂದ ನನಗೆ ಸಂತೋಷವೇನೂ ಆಗಲಿಲ್ಲ. ಆದರೆ ದುಗ್ಗಯ್ಯನಿಗೆ ಜಾಮೀನು ಕೊಡಿಸಲು ವಕೀಲರು ಇಷ್ಟೆಲ್ಲಾ ಉತ್ಸುಕತೆ ತೋರದೇ ಇದ್ದಿದ್ದರೆ ಆತ ಜೈಲಿನಲ್ಲೇ ಇದ್ದು ಪ್ರಾಣವನ್ನಾದರೂ ಉಳಿಸಿಕೊಳ್ಳುತ್ತಿದ್ದ ಎನ್ನಿಸಿತು. ವಕೀಲರ ಅತಿ ಉಮೇದಿನಿಂದ ಕಕ್ಷಿದಾರರಿಗೆ ಹೀಗೂ ಆಗಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಯಿತು.

ಲೇಖಕ ಹೈಕೋರ್ಟ್‌ ವಕೀಲ
ಮುಂದಿನ ವಾರ: ಪೊಲೀಸರಿಗೇ ಕೈಕೊಟ್ಟ ವಿಚಿತ್ರ ಸತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT