ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲೆಯ ಹತ್ಯೆ: ಅಪರಾಧಿಗೆ ಜೀವಾವಧಿ ಸಜೆ

Last Updated 7 ಜುಲೈ 2014, 13:57 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಗರದ ವಕೀಲೆ 25ರ ಹರೆಯದ ಪಲ್ಲವಿ ಪುರ್ಕಾಯಸ್ಥ ಅವರನ್ನು 2012ರಲ್ಲಿ ಕೊಲೆಗೈದ ಕೃತ್ಯಕ್ಕಾಗಿ ಅಪರಾಧಿ ಸಜ್ಜದ್ ಮುಗುಲ್ ಗೆ ಸ್ಥಳೀಯ ನ್ಯಾಯಾಲಯವೊಂದು ಸೋಮವಾರ ಜೀವಾವಧಿ ಸಜೆ ವಿಧಿಸಿತು.

'ಅಪರಾಧದ ಸಂದರ್ಭವನ್ನು ಗಣನೆಯಲ್ಲಿಟ್ಟುಕೊಂಡು ಪರಿಶೀಲಿಸಿದ ಬಳಿಕ ಈ ಪ್ರಕರಣವು ಅಪರೂಪಗಳಲ್ಲಿ ಅಪರೂಪದ ಪ್ರಕರಣ ವ್ಯಾಪ್ತಿಗೆ ಬರುವುದಿಲ್ಲ ಎಂಬ ಅಭಿಪ್ರಾಯಕ್ಕೆ ನಾನು ಬಂದಿದ್ದೇನೆ' ಎಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುತ್ತಾ ಸೆಷನ್ಸ್ ನ್ಯಾಯಾಧೀಶರಾದ ವೃಶಾಲಿ ಜೋಷಿ ಹೇಳಿದರು.

ಮಾನಹಾನಿ ಮತ್ತು ಕ್ರಿಮಿನಲ್ ಅತಿಕ್ರಮಣಕ್ಕಾಗಿ ಸಜ್ಜದ್ ಗೆ  ಪ್ರತ್ಯೇಕ ಶಿಕ್ಷೆಗಳನ್ನೂ ನ್ಯಾಯಾಲಯವು ವಿಧಿಸಿತು.

ನ್ಯಾಯಾಲಯವು ಶಿಕ್ಷೆಯನ್ನು ಘೋಷಿಸಿದಾಗ ಸಜ್ಜದ್ ಕಣ್ಣೀರಿಟ್ಟ. ಕನಿಷ್ಠ ಶಿಕ್ಷೆ ನೀಡುವಂತೆ ಆತ ನ್ಯಾಯಾಲಯಕ್ಕೆ ಮನವಿ ಮಾಡಿದ. ಈ ಮನವಿಗೆ ನ್ಯಾಯಾಧೀಶರು 'ಕಾಯ್ದೆಯ ವಿಧಿ ಪ್ರಕಾರ ಗರಿಷ್ಠ ಶಿಕ್ಷೆಯಾಗಿ ಮರಣದಂಡನೆ ನೀಡಬಹುದಾಗಿದ್ದರೂ ನಾನು ನಿನಗೆ ಕನಿಷ್ಠ ಶಿಕ್ಷೆ ನೀಡುತ್ತಿದ್ದೇನೆ' ಎಂದು ಉತ್ತರಿಸಿದರು.

ಏನಿದ್ದರೂ ಪಲ್ಲವಿಯ ತಂದೆ ಅತನು ಪುರ್ಕಾಯಸ್ಥ ಅವರು ಶಿಕ್ಷೆಯ ಪ್ರಮಾಣ ಬಗ್ಗೆ ಭ್ರಮನಿರಸನ ವ್ಯಕ್ತ ಪಡಿಸಿದರು.

'ನನ್ನ ಮಗಳು ಧೈರ್ಯವಂತೆ. ಆತ 16 ಬಾರಿ ಇರಿದರೂ ಆಕೆ ಪ್ರಬಲವಾಗಿ ಪ್ರತಿಭಟಿಸಿದ್ದಳು. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಅಲ್ಲವಾದರೆ ಬೇರೆ ಯಾವುದು ಅಂತಹ ಪ್ರಕರಣವಾಗುತ್ತದೆ?' ಎಂದು ಅವರು ಪ್ರಶ್ನಿಸಿದರು.

ಜಮ್ಮು ಕಾಶ್ಮೀರದವನಾದ ಮುಗುಲ್ 2012ರ ಆಗಸ್ಟ್ 9ರ ರಾತ್ರಿ ಫ್ಲಾಟ್ ನಲ್ಲಿ ಏಕಾಂಗಿಯಾಗಿದ್ದ ಪಲ್ಲವಿಯನ್ನು ಇರಿದು ಕೊಂದಿದ್ದ. ವಡಾಲದಲ್ಲಿ ಅಪಾರ್ಟ್ ಮೆಂಟಿನಲ್ಲಿ ಪಲ್ಲವಿ ಜೊತೆಗೆ  ವಾಸಿಸುತ್ತಿದ್ದ  ಆಕೆಯನ್ನು ಮದುವೆಯಾಗಬೇಕಾಗಿದ್ದ ವರ ಅವಿಕ್ ಸೇನ್ ಗುಪ್ತ ಬಂದಾಗ ಪಲ್ಲವಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೊಗುಲ್ ಕಟ್ಟಡದಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT