ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕ್ಫ್ ಆಸ್ತಿಯ ಕಡತಗಳೇ ನಾಪತ್ತೆ

Last Updated 30 ಜೂನ್ 2016, 4:11 IST
ಅಕ್ಷರ ಗಾತ್ರ

ಬೆಂಗಳೂರು:  ವಕ್ಫ್‌ ಮಂಡಳಿಯ ಕಬಳಿಕೆಗೆ ಒಳಗಾದ ಆಸ್ತಿಗಳಿಗೆ ಸಂಬಂಧಿಸಿದ 238ಕ್ಕೂ ಹೆಚ್ಚು ಕಡತಗಳು ನಾಪತ್ತೆಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಎರಡು ದಿನ ನಡೆದ ಪ್ರಗತಿ ಪರಿಶೀಲನೆ ಸಭೆಗೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸಲ್ಲಿಸಿದ  ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವಕ್ಫ್‌ ಆಸ್ತಿ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ದಾಖಲೆಯಲ್ಲಿ ದಾವಣಗೆರೆ, ತುಮಕೂರು, ರಾಯಚೂರು ಜಿಲ್ಲೆಯಲ್ಲಿ ಕಡತಗಳು ಕಾಣೆಯಾಗಿವೆ ಎಂದು ಉಲ್ಲೇಖಿಸಲಾಗಿದೆ.

ವಕ್ಫ್‌ ಮಂಡಳಿಗೆ ಸೇರಿದ ₹ 2ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಸಚಿವರು, ಶಾಸಕರು, ರಾಜಕಾರಣಿಗಳು, ಪ್ರಭಾವಿ ಸಂಸ್ಥೆಗಳು ಕಬಳಿಸಿವೆ ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್‌ ಮಾಣಿಪ್ಪಾಡಿ ವರದಿ ಸಲ್ಲಿಸಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ರಾಜಕೀಯ ದುರುದ್ದೇಶದಿಂದ ಸಿದ್ಧಪಡಿಸಲಾದ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ವರದಿಯ ಶಿಫಾರಸುಗಳನ್ನು ತಿರಸ್ಕರಿಸಿತ್ತು. ಮುಂಗಡಪತ್ರ ಮಂಡನೆಯ ಅಧಿವೇಶನದ ವೇಳೆ ವಿಧಾನಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಧಾನವಾಗಿ ಪ್ರಸ್ತಾಪಿಸಿದ್ದ ಬಿಜೆಪಿ ಗದ್ದಲ ಎಬ್ಬಿಸಿತ್ತು. ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ನೀಡಿದ್ದರು.

ಅಧಿವೇಶನದಲ್ಲಿ ಬಿಜೆಪಿ ನಡೆಸಿದ ಧರಣಿಯಿಂದಾಗಿ  ಕೊನೆಯ ಎರಡು ದಿನಗಳ ನಿಗದಿತ ಕಲಾಪ ಮೊಟಕುಗೊಂಡಿತ್ತು. ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರದ ವಿರುದ್ಧ ದೂರು ನೀಡಿದ್ದರು. ಈ ಬೆಳವಣಿಗೆಗಳ ಮಧ್ಯೆಯೇ, ವಕ್ಫ್‌ ಆಸ್ತಿಗೆ ಸಂಬಂಧಿಸಿದ ಕಡತಗಳು ಕಣ್ಮರೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ನಡೆಯದ ಸಭೆ: ಒತ್ತುವರಿಗೆ ಒಳಗಾಗಿರುವ ವಕ್ಫ್‌ ಆಸ್ತಿಗಳನ್ನು ಸರ್ವೆ ಮಾಡಿ, ಮರು ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂಬ ಸರ್ಕಾರಿ ಆದೇಶದ  ಅನುಸಾರ ಜಿಲ್ಲಾಮಟ್ಟದ ಕಾರ್ಯಪಡೆ ರಚಿಸಲಾಗಿತ್ತು. ನಿಯಮಿತವಾಗಿ ಸಭೆ ನಡೆಸಬೇಕು ಎಂದು ಕಟ್ಟಪ್ಪಣೆ ವಿಧಿಸಲಾಗಿತ್ತು. ಬಹುಕೋಟಿ ಬೆಲೆಯ 221 ಎಕರೆ ಆಸ್ತಿ ಕಬಳಿಕೆಯಾಗಿರುವ ಬೆಂಗಳೂರು ನಗರ  ಜಿಲ್ಲೆಯಲ್ಲಿ ಈವರೆಗೆ ಯಾವುದೇ ಸಭೆ ನಡೆದಿಲ್ಲ. ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದರೂ ದಿನಾಂಕ ನಿಗದಿ ಮಾಡಿರುವುದಿಲ್ಲ ಎಂದು ವಕ್ಫ್‌ ಮಂಡಳಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರು, ಬಾಗಲಕೋಟೆ, ವಿಜಯಪುರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಈವರೆಗೆ ಸಭೆ ನಡೆದಿಲ್ಲ.

3,855 ಎಕರೆ ಒತ್ತುವರಿ ಪತ್ತೆ: ರಾಜ್ಯದ 30 ಜಿಲ್ಲೆಗಳಲ್ಲಿ 3,855 ಎಕರೆ  ವಕ್ಫ್‌ ಜಮೀನು ಒತ್ತುವರಿಗೆ ಒಳಗಾಗಿದೆ ಎಂದು ಜಿಲ್ಲಾಮಟ್ಟದ ಕಾರ್ಯಪಡೆ ಗುರುತಿಸಿದೆ. 1,225 ಆಸ್ತಿಗಳು ಹೀಗೆ ಒತ್ತುವರಿಗೆ ಒಳಗಾಗಿದ್ದು, ಈ ಪೈಕಿ 1,986 ಎಕರೆ ಒತ್ತುವರಿ ತೆರವು ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ಕಡತ ಸಲ್ಲಿಸಲಾಗಿದೆ.

295 ಎಕರೆ ಪ್ರದೇಶವನ್ನು ಒತ್ತುವರಿ ತೆರವು ಮಾಡಿದ್ದು, ವಕ್ಫ್‌ ಮಂಡಳಿಗೆ ಹಸ್ತಾಂತರಿಸಲಾಗಿದೆ. ಇನ್ನೂ 1,690 ಎಕರೆ ಒತ್ತುವರಿ ತೆರವಿಗೆ ಬಾಕಿ ಇದೆ ಎಂದು ವಕ್ಫ್‌ ಮಂಡಳಿ ದಾಖಲೆ ವಿವರಿಸಿದೆ. ಒತ್ತುವರಿಯಾಗಿದೆ ಎಂದು ಹೊಸದಾಗಿ 11,211 ಪ್ರಕರಣ ದಾಖಲಿಸಲಾಗಿದ್ದು, ಎರಡನೇ ಹಂತದಲ್ಲಿ ಸರ್ವೆ ನಡೆಸಲು ಜಿಲ್ಲಾ ಮಟ್ಟದ ಕಾರ್ಯಪಡೆಗೆ ಸೂಚಿಸಲಾಗಿತ್ತು. ಈವರೆಗೆ 7,028 ಪ್ರಕರಣಗಳ ಸರ್ವೆ ಕಾರ್ಯ ನಡೆದಿದ್ದು, 3,556 ಪ್ರಕರಣ ಬಾಕಿ ಇದೆ.

ಎರಡನೇ ಹಂತದ ಸರ್ವೆ ಕಾರ್ಯ ನಡೆಯುತ್ತಿರುವಾಗಲೇ ಮೂರು ಜಿಲ್ಲೆಗಳ ನಾಲ್ಕು ತಾಲ್ಲೂಕುಗಳಲ್ಲಿ ಕಡತ ಕಣ್ಮರೆಯಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು ನಗರದಲ್ಲಿ 390 ಪ್ರಕರಣಗಳ ಪೈಕಿ 330 ಪ್ರಕರಣಗಳು ಸರ್ವೆಗೆ ಬಾಕಿ ಇದ್ದರೆ, ಹೆಚ್ಚು ಪ್ರಕರಣಗಳಿರುವ ಧಾರವಾಡ, ಕಲಬುರಗಿ, ಉತ್ತರಕನ್ನಡ, ಮಂಡ್ಯ, ಶಿವಮೊಗ್ಗದಲ್ಲಿ ಯಾವುದೇ ಪ್ರಗತಿಯಾಗಿಲ್ಲ.

ತುಮಕೂರು ಜಿಲ್ಲೆ ಮಧುಗಿರಿ ತಹಶೀಲ್ದಾರ್‌ ಸರ್ವೆ ಪ್ರಕ್ರಿಯೆ ಕಡತಕ್ಕೆ ಸಹಿ ಮಾಡಲು ನಿರಾಕರಿಸುತ್ತಿರುವುದಾಗಿ ವಕ್ಫ್‌ ಮಂಡಳಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ.

ಅಕ್ರಮ ಮಾರಾಟ: ಕಾನೂನು ಬಾಹಿರವಾಗಿ ಮಾರಾಟ ಮಾಡಿದ ವಕ್ಫ್‌ ಆಸ್ತಿಗಳನ್ನು ಗುರುತಿಸಿ, ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. 323 ಎಕರೆ ವಕ್ಫ್‌ ಆಸ್ತಿ ಕಾನೂನುಬಾಹಿರವಾಗಿ ಮಾರಾಟವಾ ಗಿದೆ ಎಂದು ಗುರುತಿಸಿದ್ದು, ಇಲ್ಲಿಯ ವರೆಗೆ 59 ಎಕರೆ ಮಾತ್ರ ಮರು ಸ್ವಾಧೀನ ಪಡಿಸಿಕೊಳ್ಳಲಾಗಿದೆ. 107 ಎಕರೆ ಸ್ವಾಧೀನಕ್ಕೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT