ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜುಭಾಯಿ ವಾಲಾ ಪ್ರಮಾಣವಚನ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ ವಿಧಾನಸಭೆಯ ಮಾಜಿ ಸ್ಪೀಕರ್‌ ವಜುಭಾಯಿ ರುಡಾಭಾಯಿ ವಾಲಾ ಅವರು ರಾಜ್ಯದ 34ನೆ ರಾಜ್ಯಪಾಲರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನಮನೆಯಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರು ವಜು­ಭಾಯಿ ವಾಲಾ ಅವರಿಗೆ ಪ್ರಮಾಣವಚನ ಬೋಧಿ­ಸಿ­ದರು.

ಪ್ರಮಾಣವಚನ ಸ್ವೀಕರಿಸಿದ ನಂತರ ನ್ಯಾ.ವಘೇಲಾ ಮತ್ತು ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ವಾಲಾ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ವಾಲಾ ಅವರನ್ನು ರಾಜ್ಯದ ನೂತನ ರಾಜ್ಯಪಾಲ­ರ­ನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾ­ರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರು ಆರಂಭದಲ್ಲಿ ಓದಿದರು. ನಂತರ ನ್ಯಾ.ವಘೇಲಾ ಅವರು ನೂತನ ರಾಜ್ಯಪಾ­ಲ­ರಿಗೆ ಹಿಂದಿಯಲ್ಲಿ ಪ್ರಮಾಣ­ವಚನ ಬೋಧಿಸಿದರು. ಹತ್ತು ನಿಮಿಷಗಳ ಅವಧಿಯಲ್ಲಿ ಕಾರ್ಯಕ್ರಮಕ್ಕೆ ತೆರೆಬಿತ್ತು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಅನಂತಕುಮಾರ್‌, ರಾಜ್ಯದ ಸಚಿವರಾದ ಆರ್‌.ವಿ.­ದೇಶ­ಪಾಂಡೆ, ಕೆ.ಜೆ.ಜಾರ್ಜ್‌, ಆರ್‌.ರೋಷನ್‌ ಬೇಗ್, ಎಚ್‌.ಆಂಜನೇಯ, ವಿನಯಕುಮಾರ್‌ ಸೊರಕೆ, ದಿನೇಶ್ ಗುಂಡೂರಾವ್, ಕೆ.ಅಭಯ­ಚಂದ್ರ ಜೈನ್‌, ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರ್‌ ರಾವ್‌, ವಿಧಾನಸಭೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ, ಉಪಾಧ್ಯಕ್ಷ ಎನ್‌.ಎಚ್‌.ಶಿವ­ಶಂಕರ ರೆಡ್ಡಿ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

ಬಿಜೆಪಿ ಮುಖಂಡರ ದಂಡು: ನೂತನ ರಾಜ್ಯ­ಪಾಲರ ಪ್ರಮಾಣ ವಚನ ಸ್ವೀಕಾರ ಸಮಾರಂಭ­ದಲ್ಲಿ ಬಿಜೆಪಿ ನಾಯಕರು ಮತ್ತು ಮುಖಂಡರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಸಂಸದ­ರಾದ ಬಿ.ಎಸ್‌.­ಯ­ಡಿಯೂರಪ್ಪ, ಪಿ.ಸಿ.ಮೋಹನ್‌, ಶೋಭಾ ಕರಂ­ದ್ಲಾಜೆ, ಶಾಸಕರಾದ ಆರ್‌.ಅಶೋಕ, ಲೇಹರ್‌ ಸಿಂಗ್‌, ಕ್ಯಾಪ್ಟನ್‌ ಗಣೇಶ್ ಕಾರ್ಣಿಕ್, ಡಿ.ಎಸ್‌.­ವೀರಯ್ಯ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌ ಬಿ.ಎಸ್‌.ಸತ್ಯನಾರಾಯಣ ಮತ್ತಿತ­ರ­ರು ಸಮಾರಂಭದಲ್ಲಿ ಹಾಜರಿದ್ದರು.

ಬಿಜೆಪಿಯ ಮಾಜಿ ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿ­ ಮತ್ತು ಕಾರ್ಯಕರ್ತರು ಹೆಚ್ಚು ಸಂಖ್ಯೆಯಲ್ಲಿ ರಾಜ­ಭವ­ನಕ್ಕೆ ಬಂದಿದ್ದರು. ಕಾಂಗ್ರೆಸ್‌ನ ಕೆಲವು ಶಾಸ­ಕ­ರು ಮತ್ತು ಮುಖಂಡರು ಕೂಡ ಕಾರ್ಯ­ಕ್ರಮ­ದಲ್ಲಿ ಪಾಲ್ಗೊಂಡಿ­ದ್ದರು. ಆದರೆ, ಜೆಡಿಎಸ್‌ನ ಯಾರೊ­ಬ್ಬರೂ ಕಾರ್ಯ­ಕ್ರಮದಲ್ಲಿ ಕಂಡು­ಬರಲಿಲ್ಲ.

ಗುಜರಾತ್‌ ಪ್ರತಿನಿಧಿಗಳು: ಗುಜರಾತ್‌ನ ಶಿಕ್ಷಣ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಭೂಪೇಂದ್ರ ಸಿನ್ಹ ಮನುಭಾ ಚೂಡಾಸ್ಮ ನೇತೃತ್ವದಲ್ಲಿ ಅಲ್ಲಿನ ಕೆಲವು ಶಾಸಕರು ಮತ್ತು ಬಿಜೆಪಿ ಮುಖಂಡರು ವಜುಭಾಯಿ ವಾಲಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೀಕ್ಷಣೆಗೆ ಬಂದಿದ್ದರು.

ವಾಲಾ ಅವರ ಸ್ವಕ್ಷೇತ್ರ ರಾಜ್‌ಕೋಟ್‌ನಿಂದ ಹತ್ತು ಜನರು ಸಮಾರಂಭಕ್ಕೆ ಬಂದಿದ್ದರು. ರಾಜ್ಯ­ಪಾಲರ ಕುಟುಂ­ಬದ ಸದಸ್ಯರು ಕೂಡ ಸಭೆಯಲ್ಲಿ ಹಾಜರಿದ್ದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌ ರೋಕುಮಾ ಪಚಾವೊ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ, ಭೂಸೇನೆ ಮತ್ತು ವಾಯುಪಡೆಯ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪರಿಚಯದೊಂದಿಗೆ ಉಪಾಹಾರ
ರಾಜ್ಯಪಾಲರ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ ರಾಜಭವನದ ಪ್ರಾಂಗಣದಲ್ಲಿ ಗಣ್ಯರಿಗೆ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕೇಂದ್ರ ಸಚಿವರು, ರಾಜ್ಯದ ಸಚಿವರು, ಸಂಸದರು, ಸರ್ಕಾರದ ಹಿರಿಯ ಅಧಿಕಾರಿಗಳನ್ನು ವಾಲಾ ಅವರು ಪರಿಚಯ ಮಾಡಿಕೊಂಡರು. ಪೊಲೀಸ್‌ ವಾದ್ಯವೃಂದದವರು ರಾಜ್ಯಪಾಲರ ಗೌರವಾರ್ಥ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗುಜರಾತ್‌ನ ಅಕ್ಷರಧಾಮ ದೇವಾಲಯದ ಅರ್ಚಕರು ಮಂತ್ರಘೋಷಗಳೊಂದಿಗೆ ಶಾಲು ಹೊದೆಸಿ ವಾಲಾ ಅವರನ್ನು ಸನ್ಮಾನಿಸಿ, ರಾಜಾಶೀರ್ವಾದ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT