ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನಿತಾ ಉದ್ಯಮಿಗಳ ಯಶೋಗಾಥೆ

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವೆಂಬರ್‌ 19 ‘ವಿಶ್ವ ಮಹಿಳಾ ಉದ್ಯಮಿಗಳ ದಿನ’. ಇಂದು ಮತ್ತೊಮ್ಮೆ ಈ ವಿಶೇಷ ದಿನದ ಆಚರಣೆ ಸಂಭ್ರಮದಲ್ಲಿದ್ದೇವೆ. ಇತ್ತೀಚಿನ ದಿನಗಳಲ್ಲಿ ಉದ್ಯಮಶೀಲತೆಯತ್ತ ಮುಖ ಮಾಡುತ್ತಿರುವ ಮಹಿಳೆಯರ ಪ್ರಮಾಣ ಹೆಚ್ಚುತ್ತಿದೆ. ದೇಶದ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳ ಪಾಲು ಹೆಚ್ಚುತ್ತಿದೆ. ಅದರಲ್ಲೂ ಲಕ್ಷಾಂತರ ಯುವ ಮಹಿಳಾ ಉದ್ಯಮಿಗಳಿಗೆ ಅವಕಾಶಗಳ ಹೆಬ್ಬಾಗಿಲಾಗಿ ನಿಂತಿದೆ ಬೆಂಗಳೂರು. ಈ ಬೆಳವಣಿಗೆಗೆ ಕಾರಣವೇನು? ಅವರು ಎದುರಿಸುತ್ತಿರುವ ಸವಾಲುಗಳೇನು? ಸಾಧನೆಯ ಈ ಹಾದಿ ಹೇಗಿದೆ? ಇಲ್ಲಿಯೂ ಲಿಂಗ ತಾರತಮ್ಯ ಇದೆಯೇ? ಈ ಲೋಕದ ವಿಸ್ತಾರ, ಏಳು–ಬೀಳು ಕುರಿತ ಕಿರುನೋಟ ಇಲ್ಲಿದೆ....

ಮನೆಯ ಮಾತು ಹಾಗಿರಲಿ, ದೇಶದ ಆರ್ಥಿಕತೆಯಲ್ಲೂ ಸಿಂಹಪಾಲು ಪಡೆಯುತ್ತಿದ್ದಾರೆ ಈ ಸಾಹಸಿ ಮಹಿಳೆಯರು. ತೊಟ್ಟಿಲು ತೂಗುವ ಕೈ ಈಗ ಉದ್ಯಮ ವಲಯದಲ್ಲೂ ಮೇಲಾಗುತ್ತಿದೆ. ಇವತ್ತಿಗೆ ವಿಶ್ವದಾದ್ಯಂತ, ಅನೇಕ ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿ, ನಗರ-ಪಟ್ಟಣಗಳಲ್ಲಿ ಮಹಿಳಾ ಉದ್ಯಮಿಗಳ ಗುಣಗಾನ, ಯಶಸ್ಸಿನ ಅವಲೋಕನಗಳು ಸಾಗಲಿವೆ. ಆದರೆ ನಮ್ಮ ದೇಶದಲ್ಲಿ ‘ನಾವು’ ಎಲ್ಲಿದ್ದೇವೆ? ಹಿಂದಿರುವುದು ನಿಜವೇ ಆಗಿದ್ದರೆ ಇದಕ್ಕೇನು ಪರಿಹಾರ?  ಎನ್ನುವುದರ ಜೊತೆಗೇ, ‘ಉದ್ಯಮ’ ಎಂಬ ಮಹಾಸಾಗರದಲ್ಲಿ ಈಜಿ ಗೆದ್ದವರು, ಈಜುತ್ತಾ ಹೊರಟವರು, ಮುಳುಗಿ ತೇಲಿ ದಡಸೇರಿದವರ ಯಶೋಗಾಥೆಗಳನ್ನು ಮೆಲುಕು ಹಾಕುವುದು ಈ ದಿನದ ಸಾರ್ಥಕ್ಯ.

ಏಷ್ಯಾ ಪೆಸಿಫಿಕ್‌ ವಲಯದ ಆರ್ಥಿಕ ಸ್ಥಿತಿಯನ್ನು ಬದಲಾಯಿಸಲು ಕಾರಣರಾದ 25 ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಫಾರ್ಚ್ಯೂನ್‌ ನಿಯತಕಾಲಿಕ ಇತ್ತೀಚೆಗೆ ಬಿಡುಗಡೆ ಮಾಡಿದಾಗ ಅದರಲ್ಲಿ ಸ್ಥಾನ ಪಡೆದ ಐಸಿಐಸಿಐ ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚಾರ್‌, ಕಿರಣ್‌ ಮಜುಂದಾರ್‌ ಷಾ, ಚಿತ್ರಾ ರಾಮಕೃಷ್ಣ, ನೈನಾಲಾಲ್‌ ಕಿದ್ವಾಯಿ, ಮಲ್ಲಿಕಾ ಶ್ರೀನಿವಾಸನ್‌ ಸೇರಿದಂತೆ ಭಾರತದ ಎಂಟು ಮಹಿಳೆಯರು ಉದ್ಯಮ ವಲಯಕ್ಕೆ ಮಾದರಿಯಾಗಿ ನಿಂತರು.

ಆದರೆ ಸಾವಿರಾರು ಕೋಟಿ ರೂಪಾಯಿ ವಹಿವಾಟು ಹೊಂದಿರುವ ಬೃಹತ್ ಉದ್ಯಮಿಗಳು ದೇಶದಲ್ಲಿ ಹೆಚ್ಚೆಂದರೆ ಎಂಟರಿಂದ ಹತ್ತು ಜನರು ಇರಬಹುದಷ್ಟೆ. ಕರ್ನಾಟಕದಲ್ಲಿ ಮಹಿಳಾ ಉದ್ಯಮಿ ಎಂದರೆ ಕಿರಣ್ ಮಜುಂದಾರ್ ಷಾ ಒಬ್ಬರ ಹೆಸರೇ ಮತ್ತೆ ಮತ್ತೆ ಕೇಳಿಬರುವುದು. ಆದರೆ ಮಹಿಳಾ ಉದ್ಯಮಿಗಳ ಲೋಕ ಇದಷ್ಟೇ ಅಲ್ಲ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯಾಪಾರ–ವ್ಯವಹಾರದ ಮೂಲಕ ಉದ್ಯಮ ವಲಯದಲ್ಲಿ ಅಂಬೆಗಾಲಿಡುತ್ತಿರುವ ಮಹಿಳೆಯರ ಪಾಲೂ ದೊಡ್ಡದಿದೆ.

‘ಸಾಧನೆ ಇದೆ– ಸಾಧಕ್ಷ್ಯ ಇಲ್ಲ’

ಜಾಗತಿಕ ಮಟ್ಟದಲ್ಲಿ ಇಂದು ಉದ್ಯಮಶೀಲತೆ ತನ್ನದೇ ಆದ ವೇಗ ಪಡೆದು ಕೊಳ್ಳುತ್ತಿದೆ ಎನ್ನುವ ಮಾತು ಸತ್ಯ. ಆದರೆ ಈ ಮಹಾಸಾಗರದಲ್ಲಿ ನಮ್ಮ ದೇಶ, ರಾಜ್ಯ ಎಲ್ಲಿವೆ? ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎನ್ನುವುದೇ ಬೇಸರ. ದೇಶದಲ್ಲಿ ಯಶಸ್ವಿ ಮಹಿಳಾ ಉದ್ಯಮಿಗಳತ್ತ ನೋಟ ಹರಿಸಿದರೆ ಕೇವಲ 8ರಿಂದ 10 ಜನರ ಹೆಸರು ಮಾತ್ರ ಸಿಗುತ್ತವೆ. ಕರ್ನಾಟಕದತ್ತ ತಿರುಗಿ ನೋಡಿದರೆ ನಮ್ಮಲ್ಲೂ ಸಾಕಷ್ಟು ಪ್ರತಿಭೆಗಳು ಸ್ವತಂತ್ರ ಉದ್ದಿಮೆಗಳತ್ತ ಆಕರ್ಷಿತರಾಗುತ್ತಿದ್ದಾರೆ.

ದೇಶದ ಮಹಿಳಾ ಉದ್ಯಮಿಗಳಿಗೆ ‘ಚಳವಳಿಯ ದಾರಿ’ ಮಾಡಿಕೊಟ್ಟಿದ್ದು ಕರ್ನಾಟಕ ಎಂದೇ ಹೇಳಬಹುದು. ದೇಶದಲ್ಲಿಯೇ ನಮ್ಮ ರಾಜ್ಯ ಅತ್ಯಧಿಕ ಮಹಿಳಾ ಉದ್ಯಮಿಗಳನ್ನು ಹೊಂದಿದೆ. ಮಾತ್ರವಲ್ಲ, ವಾಣಿಜ್ಯ ವಹಿವಾಟು ಸಂಸ್ಥೆಗಳಲ್ಲಿ ಮಹಿಳೆಯರ ಮಾಲೀಕತ್ವದಲ್ಲೂ ನಮ್ಮ ರಾಜ್ಯವೇ ಮುಂದಿದೆ. ಆದರೆ ಇದನ್ನೆಲ್ಲ ಹೇಳಿಕೊಳ್ಳಲು ನಮ್ಮ ಬಳಿ ಯಾವುದೇ ಅಂಕಿ–ಅಂಶಗಳಿಲ್ಲ.

ಯಾವ-ಯಾವ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಎಷ್ಟೆಷ್ಟಿದೆ ಎನ್ನುವುದನ್ನು ನಾವು ಗುರುತಿಸಿ, ದಾಖಲಿಸುತ್ತಿಲ್ಲ. ಇದೇ ನಮ್ಮ ಪ್ರಗತಿಯ ಹಾದಿಗೆ ದೊಡ್ಡ ಅಡೆತಡೆಯಾಗಿದೆ. ರಾಜ್ಯದಲ್ಲಿರುವ ಮಹಿಳಾ ಉದ್ಯಮಿಗಳ ಸಂಖ್ಯೆ, ರಾಜ್ಯದ ಆರ್ಥಿಕ ಸ್ಥಿತಿಯಲ್ಲಿ ಅವರ ಪಾಲು ಸೇರಿದಂತೆ ನಿರ್ದಿಷ್ಟ ಅಂಕಿ–ಅಂಶ ನೀಡುವಂತೆ ಕಳೆದ ಎರಡು ದಶಕಗಳಿಂದ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಾಕ್ ಸಮರ ನಡೆದೇ ಇದೆ.

ಸೂಕ್ತ ಅಂಕಿ-ಅಂಶ ಸಿಕ್ಕರೆ ಅವುಗಳ ಆಧಾರದ ಮೇಲೆ ವಿಶೇಷ ಯೋಜನೆಗಳನ್ನು ರೂಪಿಸಲೂ ಅನುಕೂಲವಾಗುತ್ತದೆ. ಆದರೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದ ಅಪೂರ್ಣ ಮಾಹಿತಿಯಷ್ಟೇ ನನ್ನ ಕೈ ಸೇರಿದ್ದು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಮಾತ್ರ ಸುಲಭವಾಗಿ ಕೆಲವೇ ಮಾಹಿತಿ ಒದಗಿಸಲು ಸಾಧ್ಯವಾಗಿದೆ ಅಷ್ಟೆ. ಆದರೆ ಇಲಾಖೆಯಲ್ಲಿ ನೋಂದಣಿ ಆಗಿರುವ ಡೇಟಾ ಮಾತ್ರ ನಮಗಿಲ್ಲಿ ಲಭಿಸುತ್ತದೆ. ಆದರೆ ಹೆಚ್ಚಿನ ನೋಂದಣಿ ವಾಣಿಜ್ಯ ತೆರಿಗೆ ಆಯುಕ್ತರ ಕಚೇರಿ, ಕಾರ್ಮಿಕ ಇಲಾಖೆಯಲ್ಲಿ ಆಗಿರುತ್ತವೆ.
ಡಾ. ಮಧುರಾ ಛತ್ರಪತಿ
ಉದ್ಯಮಿ ಹಾಗೂ ಅಸೆಂಟ್ (ASCENT) ಟ್ರಸ್ಟಿ, madhurac@gmail.com

ಬೆಂಗಳೂರೂ ಅಷ್ಟೇ ಅಲ್ಲದೇ, ಮೈಸೂರು, ಮಂಡ್ಯ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ವಿಜಾಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಮಹಿಳೆಯರು ವ್ಯಾಪಾರ-ವ್ಯಹಹಾರದ ಚುಕ್ಕಾಣಿ ಹಿಡಿದಿ ದ್ದಾರೆ. ಆದರೆ ಹೆಚ್ಚಿನ ಜನ ಅಸಂಘಟಿತ ವಲಯದಲ್ಲೇ ಉಳಿದು ಬಿಟ್ಟಿದ್ದಾರೆ. ಶೇ 50ರಷ್ಟು ಜನ ಸರ್ಕಾರದ ಇಲಾಖೆಗಳಲ್ಲಿ ನೋಂದಣಿ ಮಾಡಿಕೊಂಡಿಲ್ಲ. ನೋಂದಣಿ ಆದವರ ಅಂಕಿ-ಅಂಶವನ್ನು ಆಯಾ ಇಲಾಖೆಗಳೂ ಸಹ ಸೂಕ್ತ ರೀತಿಯಲ್ಲಿ ದಾಖಲಿಸಿಡುತ್ತಿಲ್ಲ.

ದೇಶದ ಮಹಿಳಾ ಉದ್ಯಮಿಗಳಿಗೆ ಬೆಂಗಳೂರು ಅಕ್ಷಯಪಾತ್ರೆ ಇದ್ದಂತೆ. ಏಕೆಂದರೆ ಈ ಕೈಗಾರಿಕೆ, ವಾಣಿಜ್ಯೋದ್ಯಮ ವಲಯದ ಬಹುಪಾಲು ಮಹಿಳೆಯರು ಬೆಂಗಳೂರಿನಲ್ಲೇ ನೆಲೆ ಕಂಡುಕೊಂಡವರು ಎಂಬ ಸಂಗತಿ ಇತ್ತೀಚೆಗೆ ನಡೆದ ಅಧ್ಯಯನವೊಂದರಿಂದ ತಿಳಿದು ಬಂದಿದೆ.

‘ಶಾಲಾ ಕಾಲೇಜು ವ್ಯಾಸಂಗ ಮಾಡು, ಪದವಿ ಪಡೆದುಕೊ, ಕೆಲಸಕ್ಕೆ ಸೇರು, ಸಂಬಳ ಪಡೆದು ಮನೆಗೆ ಹೋಗು’... ಎನ್ನುವ ಪರಿಕಲ್ಪನೆ ಯಿಂದ ಇಂದಿನ ಮಹಿಳೆಯರು ಹೊರಬಂದಿದ್ದಾರೆ. ಶೇ 70ರಷ್ಟು ಮಹಿಳೆಯರಿಗೆ ತಮ್ಮಲ್ಲಿನ ಸೃಜನಶೀಲತೆಯನ್ನು ಮಾರುಕಟ್ಟೆಯ ಅವ ಕಾಶಗಳತ್ತ ಕೊಂಡೊಯ್ಯುವ ತುಡಿತವಿರುತ್ತದೆ. ಶೇ 60ರಷ್ಟು ಮಹಿಳೆಯರಿಗೆ ತಮಗೆ ತಾವೇ ಬಾಸ್ ಆಗುವ ಬಯಕೆ. ಇದಕ್ಕೆ ಪೂರಕವಾದ ಮಹಾ ನಗರಗಳ ವಾತಾವರಣ, ತಾಂತ್ರಿಕ ಸಾಧ್ಯತೆಗಳು, ಆರ್ಥಿಕ ಸೌಲಭ್ಯಗಳಿಂದ ಹೆಚ್ಚಿನ ಜನರು ಉದ್ಯಮಶೀಲತೆಯತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುವುದು ‘Women’s Web’ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಹತ್ತರಲ್ಲಿ ಆರು ಮಹಿಳಾ ಉದ್ಯಮಿಗಳು ಐಟಿ/ಉಡುಪು–ಆಭರಣ/ ಆಹಾರ/ಆರೋಗ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡರೆ, 4 ಮಂದಿ ಫ್ಯಾಷನ್, ಬ್ಯಾಂಕ್, ಪ್ರವಾಸೋದ್ಯ, ಸುದ್ದಿ-ಮನರಂಜನಾ ಮಾಧ್ಯಮ ಸೇರಿದಂತೆ ವೃತ್ತಿಪರ ಸೇವೆಗಳಲ್ಲಿದ್ದಾರೆ ಎನ್ನುವುದನ್ನೂ ಈ ವರದಿ ತಿಳಿಸಿದೆ.  

ಮಹಿಳಾ ಉದ್ಯಮಿಗಳಿಗೆ ಭಾರತದ ಅತ್ಯಂತ ಅನುಕೂಲಕರ ಸ್ಥಳಗಳಲ್ಲಿ ಬೆಂಗಳೂರು ಪ್ರಮುಖ ನಗರ. ನಂತರದ ಸ್ಥಾನದಲ್ಲಿ ಚೆನ್ನೈ, ಮುಂಬೈ, ಹೈದರಬಾದ್, ಪುಣೆ ನಗರಗಳು ನಿಲ್ಲುತ್ತವೆ ಎಂದು ಡೆಲ್ ಜಾಗತಿಕ ಉದಯಮಶೀಲ ಮಹಿಳಾ ಅಧ್ಯಯನ (Dell Women’s Global Entrepreneurship Study) ವರದಿ ಮಾಡಿದೆ. ಮುಂದಿನ 5 ವರ್ಷಗಳಲ್ಲಿ ಮಹಿಳಾ ಉದ್ಯಮಿಗಳ ಒಡೆತನದ  ಪ್ರಮಾಣ ಶೇ 90ರವರೆಗೂ ಬೆಳೆಯುವ ಸಾಧ್ಯತೆ ಇದೆ ಎಂದು ಈ ಅಧ್ಯಯನ ತಿಳಿಸಿದೆ.

1990ರಿಂದ ಈಚೆಗೆ ಸಿದ್ಧ ನೌಕರಿ ಬಿಟ್ಟು ಹೊಸ ಹೊಸ ಕ್ಷೇತ್ರಗಳಲ್ಲಿ ಉದ್ಯಮಿಯಾಗಹೊರಟವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಕಳೆದ 5-6 ವರ್ಷಗಳಿಂದ ಈಚೆಗೆ ಯುವತಿಯರು ಬಹು ಬೇಗ ಉದ್ಯಮಿ ಯಾಗುವ ಕನಸು ಹೊತ್ತು ಬರುತ್ತಿದ್ದಾರೆ. ಶೇ 60ರಷ್ಟು ಮಹಿಳೆಯರು 20ರಿಂದ 30 ವರ್ಷದ ಒಳಗೇ ಉದ್ಯಮ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಕಂಡುಬರು ತ್ತಿದೆ. ಹೆಚ್ಚಿನವರು ಕೇವಲ 1ರಿಂದ 2 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಉದ್ಯಮ ವಲಯಕ್ಕಿಳಿದ ಉದಾ ಹರಣೆಗಳಿವೆ ಎನ್ನುವುದೂ ಇದೇ ಅಧ್ಯಯನದಿಂದ ತಿಳಿದು ಬಂದಿದೆ.

ಸರ್ಕಾರ ಕೂಡ ಹಲವಾರು ನಿಟ್ಟಿನಲ್ಲಿ ಮಹಿಳಾ ಉದ್ಯಮಗಳಿಗೆ ಪೂರಕ ಯೋಜನೆಗಳನ್ನು ರೂಪಿಸು ತ್ತಿದೆ. ಸೂಕ್ತ ತರಬೇತಿ, ಮಾರ್ಗದರ್ಶನ, ಆರ್ಥಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಭಾರತೀಯ ಮಹಿಳಾ ಉದ್ಯಮಿಗಳು ಒಕ್ಕೂಟ (FIWE), ವಿಶ್ವ ಮಹಿಳಾ ಉದ್ಯಮಿಗಳ ಸಂಘ (WAWE), ಮಹಿಳೆಯರ ಭಾರತೀಯ ಟ್ರಸ್ಟ್ (WIT ) ಹಾಗೂ ಅವೇಕ್ (ಕರ್ನಾಟಕ ಮಹಿಳಾ ಉದ್ಯಮಿಗಳ ಒಕ್ಕೂಟ) ?????????? ದಂತಹ ಸಂಘ–ಸಂಸ್ಥೆಗಳ ಪಾಲೂ ಮಹತ್ವದ್ದಾಗಿದೆ. ಆದರೆ ಇದೆಲ್ಲದರ ನಡುವೆಯೂ ಮಹಿಳಾ ಉದ್ಯಮಗಳು ಸಾಕಷ್ಟು ಸಮಸ್ಯೆ–ಸವಾಲುಗಳನ್ನು ಎದುರಿಸುತ್ತಿರುವುದೂ ನಿಜ. ಈ ಕ್ಷೇತ್ರದಲ್ಲಿ ಮಹಿಳೆಗಿರುವ ಮುಖ್ಯ ನಿರ್ಬಂಧವೆಂದರೆ ಆಕೆ ‘ಮಹಿಳೆ’ ಎನ್ನುವುದು. ಭಾರತದಂತಹ ದೇಶದಲ್ಲಿ ಮಹಿಳೆಗಿರುವ ಅನೇಕ ಸವಾಲುಗಳು ಅವಳ ಸಾಧನೆಯ ಹಾದಿಗೆ ತೊಡಕುಂಟು ಮಾಡುತ್ತಿರುವುದು ಸತ್ಯ.

ಅಂತಹವುಗಳೆಂದರೆ..
* ಸಾಂಸ್ಕೃತಿಕ ನಿರ್ಬಂಧ
* ಕುಟುಂಬಿಕ ಹೊಣೆಗಾರಿಕೆ (ಮಕ್ಕಳ ಪಾಲನೆ–ಪೋಷಣೆ)
*ಸುರಕ್ಷತೆ ಮತ್ತು ಚಲನಶೀಲತೆ ಸಮಸ್ಯೆಗಳು
* ವ್ಯವಹಾರ, ಕೆಲಸಗಾರರು ಹಾಗೂ ಗ್ರಾಹಕರನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ನೈಪುಣ್ಯತೆಯ ಕೊರತೆ
* ಉದ್ಯಮ–ವ್ಯವಹಾರದಲ್ಲಿ ಎದುರಾಗುವ ಅಪಾಯ–ಸಮಸ್ಯೆ–ಸವಾಲುಗಳನ್ನು ಸಹಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯದ ಕೊರತೆ
*ಎಲ್ಲದಕ್ಕೂ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಮತ್ತು ನೋಡುವ ಮನೋಭಾವ
* ಕೌಟುಂಬಿಕ ಸಹಕಾರದ ಕೊರತೆ
* ದಿಢೀರ್ ಹಣಕಾಸು ಸವಾಲುಗಳನ್ನು ನಿರ್ವಹಿಸುವ ಸಮಸ್ಯೆ
*ಮಾರುಕಟ್ಟೆಯನ್ನು ವಿಸ್ತಿರಿಸುವಲ್ಲಿ ಸಾಕಷ್ಟು ಅವಕಾಶಗಳು ಸಿಗದ ಸ್ಥಿತಿ

ಕಾಂಚಾಣಕ್ಕಿಲ್ಲಿವೆ ಮಾರ್ಗಗಳು
ಉದ್ಯಮ ಎಂದೊಡನೇ ಮೊದಲು ‘ಹಣ ಎಲ್ಲಿಂದ ಹೊಂದಿಸುವುದು’ ಎಂಬ ಪ್ರಶ್ನೆ ಎದುರಾಗುತ್ತದೆ. ಅದ ರಲ್ಲೂ ಮಹಿಳೆರನ್ನು ನಂಬಿಕೊಂಡು ಹಣ ಹೂಡುವ ಮನಸ್ಥಿತಿ ನಮ್ಮಲ್ಲಿ ವಿರಳ. ಎಷ್ಟೊ  ಮಹಿಳೆಯರಿಗೆ ತಮ್ಮ ಒಡವೆಗಳೇ ಆಧಾರವಾಗುವುದೂ ಉಂಟು. ಅವರ ಹೆಸರಿಗೆ ಸ್ಥಿರ ಆಸ್ತಿಗಳೇನಾದರೂ ಇದಲ್ಲಿ ಅದನ್ನು ಉಪಯೋಗಿಸಿಕೊಳ್ಳುವವರೂ ಉದ್ದಾರೆ. ಇದೆಲ್ಲದರ ಹೊರತಾಗಿ ಹೊರಗಿನಿಂದ ಅವರಿಗೆ ಸಹಾಯ ಲಭಿಸ ಬಹುದಾದ ಕ್ಷೇತ್ರಗಳಿವು.
* ಸರ್ಕಾರಿ ಯೋಜನೆಗಳು
* ರಾಷ್ಟ್ರೀಕೃತ ಬ್ಯಾಂಕುಗಳು
* ಮಹಿಳಾ ಉದ್ಯೋಗ ನಿಧಿ ಯೋಜನೆ
*ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI)
* ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಗಳು (SIDBI)
* ರಾಜ್ಯ ಹಣಕಾಸು ನಿಗಮ
* ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ
* ಜಿಲ್ಲಾ ಕೈಗಾರಿಕೆಗಳ ಕೇಂದ್ರಗಳು
* ಸಮಸ್ಯೆಗಳ ನಡುವೆಯೇ ದಿಟ್ಟ ಹೆಜ್ಜೆಯನ್ನಿಟ್ಟು ಸಾಗುತ್ತಿರುವುದು ಗಮನಾರ್ಹ.

ದೇಶದೆಲ್ಲೆಡೆ ಉದ್ಯಮಶೀಲತೆ ಹೊಸ ಸಂಚಲನ ಮೂಡಿಸುತ್ತಿದೆ. ಜಾಗತಿಕ ಮಟ್ಟದಲ್ಲಿ ಉದ್ಯಮಶೀಲತಾ ಕ್ರಾಂತಿ ನಡೆಯುತ್ತಿದೆ. ಅದರಲ್ಲೂ ಮಹಿಳಾ ಉದ್ಯಮಿ ಗಳಿಗಿದು ಚಿನ್ನದ ಯುಗವೆಂದೇ ಹೇಳಬಹುದು. ಯಾವುದೇ ಪ್ರಕಾರದ ಉದ್ಯಮವನ್ನು ಕಟ್ಟಿ ಬೆಳೆಸಲು ಬೌಗೋಳಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮೃದ್ಧ ಕಾಲವಿದು ಎಂದರೂ ತಪ್ಪಿಲ್ಲ. ಯಾವುದೊ ಕಂಪೆನಿಗೆ ದುಡಿಯುತ್ತಲೇ ಕೂದಲು ಬೆಳ್ಳಿ ಬಣ್ಣಕ್ಕೆ ತಿರುಗಿ, ಕೊನೆಯ ಆಶಾಕಿರಣವಾಗಿ ಕೈ ಸೇರುವ ಗ್ರ್ಯಾಜುಟಿ, ಪಿಎಫ್‌ನೊಂದಿಗೆ ಮನೆಗೆ ಮರಳಿ ವಿಶ್ರಾಂತಿಗೆ ಜಾರುವ ಜಾಯಮಾನ ಈಗಿನ ಮಹಿಳೆ ಯರದ್ದಲ್ಲ.

ತಮಗಾಗಿ, ತಮ್ಮ ಕುಟುಂಬಕ್ಕಾಗಿ, ಸಮಾಜ ಕ್ಕಾಗಿ ದುಡಿಯುವತ್ತ ಹೆಚ್ಚಿನ ಮಹಿಳೆಯರು ಆಸಕ್ತರಾ ಗುತ್ತಿದ್ದಾರೆ. ಕ್ಷೇತ್ರ ಯಾವುದೇ ಇರಲಿ, ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರು ಹೆಚ್ಚು ಸೃಜನಾತ್ಮಕವಾಗಿ ಆಲೋಚಿಸಲು ಮತ್ತು ನವೀನ ಪರಿಹಾರಗಳನ್ನು ಕಂಡುಕೊಳ್ಳಲು ಮುಂದಾಗುತ್ತಿದ್ದಾರೆ. ಅನೇಕ ವ್ಯತ್ಯಯ ಗಳು, ಸವಾಲುಗಳು ಈ ಹೊಸ ಮಾದರಿಯನ್ನು ರಚಿಸಲು ಸಹಕಾರಿಯಾಗಿವೆ. ಹೊಸ ತಂತ್ರಜ್ಞಾನ ಮತ್ತು ಇ–ಜಗತ್ತಿನ ಪರಿಚಯದಿಂದಾಗಿ ಈಗ ಯಾರಾದರೂ ಜಾಗತಿಕ ಉದ್ಯಮದಲ್ಲಿ ಅವಕಾಶ ಹೊಂದಬಹುದು.

ಛಲದ ಮುಂದೆ ಗೆಲ್ಲುವ ಶಕ್ತಿ ಯಾವುದಿದೆ?
ಹುಟ್ಟಿದ್ದು ಬಡ ಕಾರ್ಮಿಕನ ಮಗಳಾಗಿ, ಓದಿದ್ದು ಸರ್ಕಾರಿ ಕನ್ನಡ ಮಾದ್ಯಮ ಶಾಲೆಯಲ್ಲಿ, ಇದೆಲ್ಲಕ್ಕೂ ಮಿಗಿಲಾಗಿ ನಾನು ಮಹಿಳೆ... ಉದ್ಯಮದ ಈ ಹಾದಿ ನನ್ನ ಪಾಲಿಗೆ ಹೇಗಿರಬಹುದು ಎಂಬುದನ್ನು ನೀವೇ ಊಹಿಸಬಹುದು.ಆದರೆ ಸಾಧಿಸುವ ಛಲ ಮನದಲ್ಲಿದ್ದಾಗ ಸವಾಲುಗಳೆಲ್ಲ ಅವಕಾಶಗಳಾಗಿ ನಿಲ್ಲುತ್ತವೆ ಎನ್ನುವುದಕ್ಕೇ ನಾನೇ ಉದಾಹರಣೆ. ತಿರುಕನ ಮಗಳು ತನ್ನದೇ ಆದ ಸಾಮ್ರಾಜ್ಯ ಕಟ್ಟಿಕೊಂಡು ಅದಕ್ಕೆ ರಾಣಿಯಾಗ ಹೊರಟಂತೆ, ಇನ್ನೊಬ್ಬರ ಅಡಿಯಾಳಾಗಿ ದುಡಿಯುವುದು ಸಾಕಿನ್ನು ಅನಿಸಿದಾಗ ಎದ್ದು ನಡೆದದ್ದು ಉದ್ಯಮದತ್ತ. ಇನ್ನು ಮುಂದೆ ದುಡಿಯುವ ವರ್ಗಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ ಎನ್ನುವು ದನ್ನು ಸಣ್ಣ ಅವಲೋಕನದಿಂದ ಅರಿತುಕೊಂಡು ಎಲ್ಲಾ ರೀತಿಯ ಮಾನವ ಸಂಪನ್ಮೂಲ ಒದಗಿಸುವ ಸೇವೆ, ಭಧ್ರತಾ ಸಿಬ್ಬಂದಿ ಮತ್ತು ಹೌಸ್ ಕೀಪಿಂಗ್ ಸಿಬ್ಬಂದಿ ಪೂರೈಸುವ ಕಂಪೆನಿಗೆ ಚಾಲನೆ ನೀಡಿದ್ದು 2011ರಲ್ಲಿ.

ಮೊದಲು ಎದುರಾದ ಸಮಸ್ಯೆ ಎಂದರೆ ಹಣಕಾಸು. ಆಗ ನಮ್ಮ ಕೈಯಲ್ಲಿ ಕವಡೆ ಕಾಸೂ ಇರಲಿಲ್ಲ. ಒಡವೆ ಅಡವಿಟ್ಟು ರೂ50 ಸಾವಿರ ಹೊಂದಿಸಲು ಹೆಣಗಾಡಿದ್ದು ನೆನಪಾದರೆ ಈಗಲೂ ಕಣ್ಣು ಒದ್ದೆಯಾಗುತ್ತದೆ. ಆದರೆ ಅದೇ ವರ್ಷ ಬರೋಬ್ಬರಿ ರೂ47 ಲಕ್ಷ ವಹಿವಾಟು ನಡೆಯಿತಲ್ಲ... ಉಂಡ ನೋವೆಲ್ಲ ಕ್ಷಣದಲ್ಲೇ ಕರಗಿ ಹೋಗಿತ್ತು. ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೂ ದುಡಿದರೂ ಕೈಗೆ ಸೇರುತ್ತಿದ್ದುದು ರೂ12 ಸಾವಿರ. ಮಗನಿಗೊಂದು ಸೈಕಲ್ ಕೊಡಿಸುವ ಆಸೆಯಾದರೂ ಕೈಗೂಡುತ್ತಿರಲಿಲ್ಲ. ಆದರೀಗ ವಾರ್ಷಿಕ ರೂ6 ಕೋಟಿ ವಹಿವಾಟು ನಡೆಸುತ್ತ 600ಕ್ಕೂ ಹೆಚ್ಚು ಜನರಿಗೆ ಅನ್ನ ಹಾಕುತ್ತಿದೆ ನಮ್ಮ ಸಂಸ್ಥೆ. ಅದೇ ನಮಗೆ ಹೆಮ್ಮೆ.

ಇನ್ನೇನು ಎಲ್ಲಾ ಸರಿ ಹೋಯಿತು ಎಂದುಕೊಳ್ಳುವ ಹೊತ್ತಿಗೆ ‘ಬ್ರೇನ್ ಟ್ಯುಮರ್’ ಎನ್ನುವ ಮಾರಿ ಜೀವ ಹಿಂಡಿ ಹಾಕಲಾರಂಭಿಸಿತ್ತು. ಆದರೆ ಛಲವನ್ನು ಗೆಲ್ಲುವ ಶಕ್ತಿ ಯಾವುದಕ್ಕಿದೆ? ಎಂಥದೊ ಸವಾಲುಗಳನ್ನು ಎದುರಿಸಿ ನಿಂತವಳನ್ನು ಇದು ನಡುಗಿಸಲಾರದು... ವೈದ್ಯಕೀಯ ನೆರವಿನೊಂದಿಗೆ ಸಾವನ್ನೇ ಸೋಲಿಸಿ ನಿಂತಿದ್ದೇನೆ. ಅದರ ಪರಿಣಾಮಗಳಿನ್ನೂ ದೇಹದಲ್ಲಿ ಉಳಿದುಕೊಂಡಿವೆ. ಮನಸ್ಸನ್ನು ಕುಗ್ಗಿಸಲು ಅದರಿಂದ ಸಾಧ್ಯವಾಗಿಲ್ಲ.

ಜೊತೆಗೆ ಪತಿ ತಾರಾನಾಥ್ ಸಹ ಹೆಚ್ಚು ಜವಾಬ್ದಾರಿ ಹೊತ್ತು ನನ್ನ ಭಾರ ಇಳಿಸುತ್ತಿದ್ದಾರೆ. ಇನ್ನೂ ದೊಡ್ಡ ದೊಡ್ಡ ಕನಸುಗಳಿವೆ. ಈ ಕಂಪೆನಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು, ಇನ್ನೂ ಸಾವಿರಾರು ಜನರ ಬದುಕಿಗೆ ಆಧಾರವಾಗಬೇಕು... ಇಷ್ಟು ಬೇಗ ನನ್ನ ಪಯಣ ಮುಗಿಯಲಾರದು.
-ಮಮತಾ ಸಿ.ಎಸ್., ಗ್ಲೋಬಲ್ ಮ್ಯಾನೇಜ್ ಮೆಂಟ್www.globalmanagementindia.com, md@globalmanagement.net.in  (99803 11233)

ಯೋಜನೆಗಳಿದ್ದರೆ ಸಾಲದು...
ನಮ್ಮ ರಾಜ್ಯದಲ್ಲಿ ಎರಡು ಪ್ರಕಾರದ ಮಹಿಳಾ ಉದ್ಯಮಿಗಳಿದ್ದಾರೆ. ಗಂಡ-ಮಕ್ಕಳು ಸಂಸಾರದ ಜವಾಬ್ದಾರಿಗಳ ಬಿಡುವಿನ ಸಮಯದಲ್ಲಿ ಹಪ್ಪಳ, ಸಂಡಿಗೆ, ಟೆಲರಿಂಗ್ ಅಥವಾ ಗೃಹಪಯೋಗಿ ವಸ್ತುಗಳಂತಹ ಸಣ್ಣ-ಪುಟ್ಟ ವ್ಯವಹಾರದಲ್ಲಿ ತೊಡಗಿದವರು ಮತ್ತು ಕುಟುಂಬ ಜವಾಬ್ದಾರಿಗಳ ಜೊತೆ-ಜೊತೆಗೇ ಬೄಹತ್ ಉದ್ಯಮದ ಹೊಣೆಯನ್ನೂ ಹೊತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವವರು.

ಈ ಎರಡೂ ವರ್ಗದ ಮಹಿಳೆಯರಿಗೆ ಪ್ರತ್ಯೇಕ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹದ ಗತ್ಯವಿದೆ. ಈ ಉದ್ದೇಶದಿಂದ ಸಾಕಷ್ಟು ಕಾರ್ಯಕ್ರಮಗಳನ್ನು, ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ. ತಾಲ್ಲೂಕು-ಜಿಲ್ಲಾ ಮಟ್ಟದಲ್ಲಿಯೂ ಮಹಿಳೆಯರನ್ನು ಉದ್ಯಮದತ್ತ ಸೆಳೆಯಲು, ಇಲ್ಲಿರುವ ಅವಕಾಶಗಳ ಬಗ್ಗೆ ಜಾಗೄತಿ ಮೂಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಬರೀ ಯೋಜನೆಗಳಿಂದ ಪ್ರಗತಿ ಸಾಧ್ಯವಿಲ್ಲ. ಅವುಗಳ ಸಹಭಾಗಿತ್ವ ಪಡೆದು ಪ್ರಯೋಜನ ಹೊಂದಬೇಕಾದುದು ಮಹಿಳೆಯರ ಕೈಯಲ್ಲಿದೆ. ನಾವು ಹತ್ತಾರು ಹೆಜ್ಜೆ ಮುಂದಿಟ್ಟಿದ್ದೇವೆ. ಅವರೂ ಒಂದೆರಡು ಹೆಜ್ಜೆಯಾದರೂ ಮುಂದೆ ಬರಬೇಕು.
-ಸಂಪತ್ ರಾಮನ್, ಆಧ್ಯಕ್ಷರು, ಎಫ್.ಕೆ.ಸಿ.ಸಿ.ಐ

ನನ್ನದಲ್ಲದ ಜಗತ್ತಿನಲ್ಲಿ ಯಶಸ್ವಿ ಪಯಣ...
ನನ್ನದಲ್ಲದ, ನನಗೆ ತಿಳಿದಿಲ್ಲದ ಕ್ಷೇತ್ರವನ್ನು ಆಯ್ದುಕೊಂಡಿದ್ದಕ್ಕೆ ಬೇರೆಯವರಿಗಿಂತ ತುಸು ಹೆಚ್ಚೇ ಸವಾಲುಗಳು ನನ್ನೆದುರು ಬಂದು ಹೋದವು. ಓದಿದ್ದು ಸಾಪ್ಟ್‌ವೇರ್ ಎಂಜಿನಿಯರಿಂಗ್, ಆದರೆ ಆರಿಸಿಕೊಂಡ ಉದ್ಯಮ ಕೃಷಿ ಯಂತ್ರೋಪಕರಣಗಳ ವಲಯ.
ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ತಯಾರಿಕೆ ಮತ್ತು ಮಾರಾಟ ಎರಡೂ ಕಷ್ಟದ ಕೆಲಸ. ‘ಇದು ಮಹಿಳೆಗೆ ಒಗ್ಗುವ ಕ್ಷೇತ್ರವಂತೂ ಅಲ್ಲ’ ಎಂದು ಭೀತಿಗೊಳಿಸಲು ಯತ್ನಿಸಿದವರೇ ಹೆಚ್ಚು. ಅಡಿಕೆ ಸುಲಿಯುವ ಯಂತ್ರದೊಂದಿಗೆ ಆರಂಭವಾದ ಈ ಪಯಣ ಇಂದು ಹತ್ತಾರು ಬಗೆಯ ಸಾಧನ, ಯಂತ್ರಗಳಿಗೆ ವಿಸ್ತರಿಸಿದೆ.

ಆದರೆ ಈ ದಾರಿಯಲ್ಲಿ ಕಂಡುಂಡ ನೋವು- ನಲಿವುಗಳು ಸಾಕಷ್ಟಿವೆ. ನಾಲ್ಕು ವರ್ಷಗಳ ಹಿಂದೆ ರೂ10 ಲಕ್ಷ ಬಂಡವಾಳ ಹೊಂದಿಸಲೇ ಬಹಳ ಕಷ್ಟಪಟ್ಟೆ. ರೂ10 ಲಕ್ಷ ಸಾಲಕ್ಕೆ ರೂ60 ಲಕ್ಷ ಮೌಲ್ಯದ ಆಸ್ತಿ ಅಡವಿಟ್ಟರೂ ಜಾಮೀನು ಇಲ್ಲದೇ ಸಾಲ ಸಿಗಲಿಲ್ಲ. ಮಹಿಳೆಯರಿಗೆ ಸಾಲ, ಸೌಲಭ್ಯ, ತರಬೇತಿಗಳು ಇವೆ ಎನ್ನುವುದೆಲ್ಲ ದಾಖಲೆಗಷ್ಟೆ. ವಾಸ್ತವ ಏನು ಎನ್ನುವುದು ಪ್ರಯತ್ನಿಸಿದ ಮೇಲೆಯೇ ಗೊತ್ತಾಗುವುದು. ತಾಯಿ- ತಂದೆ ಹಾಗೂ ಪತಿ, ಮಕ್ಕಳ ಸಹಕಾರ ಸಿಗದೇ ಏನೂ ಮಾಡಲು ಆಗುವುದಿಲ್ಲ. ಪತಿ ವಿಜಯ ವಿಠಲ ನನ್ನ ಬೆನ್ನೆಲುಬಾಗಿ ನಿಂತು ಮಾನಸಿಕ ಸ್ಥೈರ್ಯ ತುಂಬದೇ ಇದ್ದಿದ್ದರೆ ಇಂದು ನಾನು ಸ್ವತಂತ್ರ ಉದ್ಯಮಿಯಾಗಿ ಗುರುತಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ.
-ಶೈಲಜಾ ವಿಠಲ, ಧರ್ಮ ಟೆಕ್ನಾಲಜೀಸ್, ತುಮಕೂರು, www.dharmaagrotech.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT