ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸಾದವರಿಗೆ ಇಲ್ಲಿ ಪಾತ್ರವಿಲ್ಲ

ಪಂಚರಂಗಿ
Last Updated 29 ಜುಲೈ 2014, 19:30 IST
ಅಕ್ಷರ ಗಾತ್ರ

‘ಈಗಿನ ಚಿತ್ರ ನಿರ್ಮಾಪಕರು  ಹಿರಿಯ ಕಲಾವಿದರಿಗೆ ಪಾತ್ರಗಳನ್ನು ಸೃಷ್ಟಿಸುತ್ತಿಲ್ಲ. ಆದ್ದರಿಂದ ನಮ್ಮಂಥವರಿಗೆ ಇಲ್ಲಿಂದ ನಿವೃತ್ತಿ ಹೊಂದದೆ ಬೇರೆ ಆಯ್ಕೆಯೇ ಇಲ್ಲ’ ಎಂದು ಬೇಸರದಿಂದ ಹೇಳಿಕೊಂಡವರು ಬಾಲಿವುಡ್‌ನ ಅನುಭವಿ ನಟ ಓಂಪುರಿ.

ಇಂದಿನ ಸಿನಿಮಾಗಳಲ್ಲಿ ಹಿರಿಯ ಕಲಾವಿದರಿಗೆ ತಕ್ಕ ಪಾತ್ರಗಳು ಸೃಷ್ಟಿಯಾಗುತ್ತಿಲ್ಲ. ಪಾತ್ರಗಳಿದ್ದರೂ ಅದಕ್ಕೆ ತೂಕವಿಲ್ಲ ಎನ್ನುವುದು ಅವರು ಕಂಡುಕೊಂಡಿರುವ ಸತ್ಯ. ಹಾಗೆಯೇ ಪಾಶ್ಚಾತ್ಯ ಸಿನಿಮಾಗಳಿಗೆ ಹೋಲಿಸಿದರೆ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಹಿರಿಯರಿಗೆ ಸಿಗಬೇಕಾದ ಮಾನ್ಯತೆಯೂ ಸಿಗುತ್ತಿಲ್ಲ ಎನ್ನುವುದು ಅವರ ಬೇಸರ.

‘ಪಾಶ್ಚಾತ್ಯ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅಲ್ಲಿನ ಸಿನಿಮಾಗಳಲ್ಲಿ ಹಿರಿಯ ಕಲಾವಿದರಿಗೆಂದೇ ಪಾತ್ರಗಳನ್ನು ಸೃಷ್ಟಿಸಲಾಗುತ್ತದೆ. ಪ್ರೇಮಕಥೆ ಒಳಗೊಂಡಂತೆ ಅವರನ್ನು ಆಧರಿಸಿಯೇ ಸಿನಿಮಾಗಳು ರೂಪಿತಗೊಳ್ಳುತ್ತವೆ. ಹಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಪ್ರವೃತ್ತಿ. ನಮ್ಮಲ್ಲಿ ಹಣಕ್ಕಾಗಿ ಸಿನಿಮಾ ಮಾಡುತ್ತಾರೆ. ಈ ಕಾರಣದಿಂದ ವಯಸ್ಸಾದವರನ್ನು ಮೂಲೆ ಗುಂಪು ಮಾಡುತ್ತಾರೆ’ ಎಂದೂ ದೂರಿದ್ದಾರೆ.

‘ನನಗೆ ಪಾತ್ರಗಳು ಸಿಗದಿದ್ದರೆ ನಿವೃತ್ತನಾಗುತ್ತೇನೆಯೇ ವಿನಾ ನಾನಾಗಿಯೇ ಪಾತ್ರಗಳನ್ನು ಹುಡುಕಿಕೊಂಡು ಹೋಗುವುದಿಲ್ಲ. ಇಲ್ಲವೇ ರಂಗಭೂಮಿಗೆ ತೆರಳುತ್ತೇನೆ’ ಎಂದು ಖಡಾಖಂಡಿತವಾಗಿ ಹೇಳಿಕೊಂಡಿದ್ದಾರೆ.

63 ವರ್ಷ ವಯಸ್ಸಿನ ಓಂಪುರಿ ಅವರು ಅಮೆರಿಕದ ಹಾಸ್ಯ ಚಿತ್ರ ‘ದಿ ಹಂಡ್ರೆಡ್‌ ಫೂಟ್‌ ಜರ್ನಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಯಾವುದೇ ಅವಕಾಶಗಳು ಕೈಯಲ್ಲಿಲ್ಲದ ಬಗ್ಗೆ ಅವರಿಗೆ ಆತಂಕವೂ ಹೆಚ್ಚಾಗಿದೆಯಂತೆ. ಇನ್ನು ಬಾಲಿವುಡ್‌ನ ಮತ್ತೊಂದು ಮುಖದ ಕುರಿತೂ ಅವರು ಮಾತನಾಡಿದರು.

‘ಅಮಿತಾಭ್‌ ಬಚ್ಚನ್‌ ಅವರಿಗೆ ವಯಸ್ಸು 71 ದಾಟಿದರೂ ಕಮರ್ಷಿಯಲ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಈಗಿನ ನಿರ್ದೇಶಕರೂ ತಮ್ಮ ಸಿನಿಮಾ ಯಶಸ್ವಿಯಾಗಬೇಕೆಂದು ಸ್ಟಾರ್‌ಗಳನ್ನೇ ಆರಿಸಿಕೊಳ್ಳುತ್ತಾರೆ. ಅವರಿಗೆಂದೇ ಸಿನಿಮಾಗಳನ್ನೂ ಮಾಡುತ್ತಾರೆ. ನಾನು ದೊಡ್ಡ ಸ್ಟಾರ್ ಅಲ್ಲ, ಹಾಗಾಗಿ ಅವಕಾಶದ ಬಗ್ಗೆಯೂ ಹೇಳುವಂತಿಲ್ಲ’ ಎಂದಿದ್ದಾರೆ. ವಯಸ್ಸು ಆಗುತ್ತಿದ್ದಂತೆ ನಮ್ಮ ದಿನಗಳೂ ಮುಗಿದುಹೋಗುತ್ತವೆ. ಈ ಹಂತ ಜೀವನದ ಭಾಗವೂ ಹೌದು ಎಂದು ತಾತ್ವಿಕವಾಗಿ ಮಾತನಾಡಿದ್ದಾರೆ.

ಬದಲಾಗಿರುವ ಈ ಸಿನಿಮಾ ರಂಗದಲ್ಲಿ ಭರವಸೆಗಳಿನ್ನೂ ಉಳಿದಿವೆ ಎಂದಿರುವ ಅವರು, ‘ಶ್ಯಾಮ್ ಬೆನಗಲ್, ಗೋವಿಂದ ನಿಹಾಲಾನಿ, ಪ್ರಕಾಶ್ ಝಾ ಹೀಗೆ ಕೆಲವು  ನಿರ್ದೇಶಕರು ಹಣದ ದೃಷ್ಟಿಯಿಂದ ಸಿನಿಮಾ ಮಾಡುತ್ತಿಲ್ಲ. ಆದರೆ ಇವರೂ ಸ್ಟಾರ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಜತೆಗೆ ಸಿನಿಮಾದಲ್ಲಿ ಐಟಂ ಸಾಂಗ್‌ಗಳನ್ನು ಸೇರಿಸುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT