ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯಸ್ಸಾದ ಚರ್ಮಕ್ಕೆ ಅಕ್ಕರೆಯ ಆರೈಕೆ

Last Updated 28 ನವೆಂಬರ್ 2014, 19:30 IST
ಅಕ್ಷರ ಗಾತ್ರ

ವಯಸ್ಸಾದವರ ಚರ್ಮದಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಚರ್ಮ ಒಣಗಿರುವುದು. ಚರ್ಮ ತೆಳುವಾಗುತ್ತಾ ಹೋಗುತ್ತದೆ. ಚರ್ಮವು ತೆಳುವಾದಂತೆಲ್ಲಾ, ಚರ್ಮದ ತೇವ/ಆರ್ದ್ರತೆ ಕಡಿಮೆಯಾಗಿ ಒಣಗುತ್ತದೆ.  ಚರ್ಮವು ಹೆಚ್ಚು ತೆಳುವಾದಂತೆಲ್ಲಾ, ಒಣಗುತ್ತ ಹೋಗುತ್ತದೆ. ಬಟ್ಟೆ, ಆಭರಣಗಳು ತಾಕಿದರೂ ತೆರೆದ ಗಾಯಗಳಾಗುವುದು ಸಹಜ. ಸೂಕ್ಷ್ಮಾಣುಜೀವಿಗಳು ಗಾಯದ ಮೂಲಕ ದೇಹವನ್ನು ಸೇರಿ ಸೋಂಕನ್ನು ಉಂಟುಮಾಡುತ್ತವೆ. ರೋಗನಿರೋಧಕ ಶಕ್ತಿ ಕ್ಷೀಣಿಸುವುದರಿಂದ ಅವರಲ್ಲಿ ಸೋಂಕು ಬಲುಬೇಗ ಅಂಟಿಕೊಳ್ಳುತ್ತದೆ.
ನೈರ್ಮಲ್ಯವೇ ಒಣ ಚರ್ಮದ ಆರೈಕೆಯ ಮೂಲ ತತ್ವವಾಗಿದೆ.

ಶುಚಿಯಾಗಿಡಿ: ಚರ್ಮವನ್ನು ಯಾವಾಗಲೂ ಸ್ವಚ್ಛವಾಗಿರಿಸಿ. ಪ್ರಮುಖವಾಗಿ ಕಾಲು, ಪಾದ, ತೊಡೆಸಂದಿ ಹಾಗೂ ಬಗಲು ಇವು ಶುಚಿಯಾಗಿರಬೇಕು. ಹೆಚ್ಚು ಬೆವರುವವರು ಸಡಿಲವಾದ, ಬೆವರು ಹೀರುವಂತ ಬಟ್ಟೆ ಹಾಕಬೇಕು. ಚರ್ಮವು ಬಹು ಕಾಲದವರೆಗೆ ತೇವವಾಗಿದ್ದರೆ ಫಂಗಸ್ ಸೋಂಕಿಗೆ, ಉರಿಗುಳ್ಳೆ ಆಗುವ ಸಾಧ್ಯತೆ ಇರುತ್ತದೆ.

ಬಿಸಿನೀರಿನ ಸ್ನಾನದಿಂದ ಚರ್ಮವು ಇನ್ನಷ್ಟು ಒಣಗುತ್ತದೆ.  ನಿತ್ಯ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ತೇವಾಂಶ ಕಾಯ್ದುಕೊಳ್ಳಬಹುದು.

ಕೆನೆಯುಕ್ತ ಶುಭ್ರ ಕಾರಕಗಳು (ಮಿಲ್ಕ್‌ ಕ್ಲೆನ್ಸಿಂಗ್‌ಗಳು) ದೇಹಕ್ಕೆ ಸೂಕ್ತವಾಗಿರುತ್ತವೆ. ಆಗಿಂದಾಗ್ಗೆ ಕೇವಲ ಕೆಲವು ಜಾಗಗಳಿಗೆ ಸಾಬೂನು ಹಚ್ಚುವುದು ಅವಶ್ಯಕವಾಗಿದೆ. ಹಾಗೂ ದೇಹದ ಉಳಿದ ಭಾಗಗಳಿಗೆ ಉಗುರು ಬೆಚ್ಚಗಿನ ನೀರಿನಿಂದ ತೊಳೆಯುವುದು ಒಳಿತು. ಸಾಬೂನಿನ ನೊರೆಯಲ್ಲಿ ಸೋಡಿಯಮ್ ಲಾರೆಥ್ ಸಲ್ಫೆಟ್ ಅಂಶವಿರುತ್ತದೆ. ಹೆಚ್ಚು ಬಳಸದೇ ಇರುವುದು ಒಳಿತು.

ತೇವಯುಕ್ತವಾಗಿರಲಿ: ಒಣ ಚರ್ಮವನ್ನು ತೇವಾಂಶ ಕಾಪಿಡಬೇಕು. ಇಲ್ಲದಿದ್ದರೆ ಉಂಟಾಗಬಹುದಾದ ಇತರ ತೊಂದರೆಗಳು, ಉದಾ: ಒಡಕು, ನೋವು, ಅಥವಾ ಕಡಿತ ತಡೆಗಟ್ಟಬಹುದಾಗಿದೆ. ಸ್ನಾನದ ನಂತರ ಕೆನೆ ಅಂಶವುಳ್ಳ ಮಾಯಿಶ್ಚರೈಸರ್‌ ಬಳಸಬೇಕು. ಬಿಸಿಲಿನಲ್ಲಿ ಓಡಾಡುವಾಗ ಸನ್‌ಸ್ಕ್ರೀನ್‌ ಲೋಷನ್‌ ಬಳಸಬೇಕು.

ಕಡಿತವನ್ನು ತಡೆಯಿರಿ: ನಮಗೆ ವಯಸ್ಸಾದಂತೆಲ್ಲಾ, ನಮ್ಮ ದೇಹದಲ್ಲಿ ಎಣ್ಣೆಯಂತ ಪದಾರ್ಥದ ಉತ್ಪಾದನೆ ಕಡಿಮೆಯಾಗುತ್ತದೆ. ಈ ಎಣ್ಣೆಯಂಥ ಪದಾರ್ಥವು ಚರ್ಮವು ಮೃದುವಾಗಿ, ತೇವಯುಕ್ತವಾಗಿರುವಂತೆ ಮಾಡುತ್ತದೆ. ಇದರ ಉತ್ಪಾದನೆ ಕಡಿಮೆಯಾದ ಕಾರಣ ಚರ್ಮವು ಒಣಗಿ, ಕಡಿತ/ ತುರಿಕೆಯುಂಟಾಗುತ್ತದೆ. ಹೀಗೆ ತುರಿಸುವುದು ಮುದುಕರಿಗೆ ಅಪಾಯಕಾರಿ. ಚರ್ಮವು ಸುಲಭವಾಗಿ ಹರಿಯುವಂತಿದ್ದು, ಸೋಂಕಿಗೆ ಕಾರಣವಾಗುತ್ತದೆ.

ತುರಿಕೆಯನ್ನು ಕಡಿಮೆ ಮಾಡಲು ಸ್ನಾನದ ನಂತರ ಸ್ನಾನದ ಎಣ್ಣೆಯನ್ನು ಉಪಯೋಗಿಸಬೇಕು. ಸ್ನಾನದ ಮನೆಯಿಂದ ಹೊರಬರುವ ತನಕ ಕೈ ಮತ್ತು ಕಾಲುಗಳಿಗೆ ಈ ಎಣ್ಣೆಯನ್ನು ಹಚ್ಚಬಾರದು, ಏಕೆಂದರೆ ಇದರಿಂದ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಫಂಗಸ್ ಸೋಂಕನ್ನು ತಡೆಗಟ್ಟಲು ಬೆವರುವ ಜಾಗದಲ್ಲಿ ಪೌಡರನ್ನು ಹಾಕುವುದು ಒಳಿತು. ಇದರಿಂದ ತುರಿಕೆಯನ್ನು ತಡೆಗಟ್ಟಬಹುದು.

ಗಮನ ಹರಿಸಿ: ವೃದ್ಧರ ಚರ್ಮದ ಆರೈಕೆಯಲ್ಲಿ ಪ್ರತಿದಿನ ಚರ್ಮವನ್ನು ಪರೀಕ್ಷಿಸುವುದು, ಚರ್ಮವು ಅರ್ಬುದ ರೋಗ ಅಥವಾ ಇತರೆ ರೋಗಗಳಿಗೆ ತುತ್ತಾಗಿದೆಯೇ ಎಂದು ಪರೀಕ್ಷಿಸುವುದನ್ನು ಒಳಗೊಂಡಿರುತ್ತದೆ. ಯಾವುದೇ ಕಲೆ, ಆಕಾರ, ಬಣ್ಣ ಅಥವಾ ಇತರ ಯಾವುದೇ ಬದಲಾವಣೆ ಗಮನಿಸಬೇಕು. ಚರ್ಮ ಸುಲಿಯುವುದು, ಕೆಂಪಾಗುವುದು, ತುರಿಕೆ, ಒಡಕು, ಅಥವಾ ಅತಿಯಾದ ತುರಿಕೆಯಾಗುವುದು ಇತ್ಯಾದಿಗಳನ್ನು ಗಮನಿಸಿ. ಇಂಥ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. 

ಪಾದ: ವೃದ್ಧರ ಪಾದವು ಅತಿ ಸುಲಭವಾಗಿ ತೊಂದರೆಗೀಡಾಗುತ್ತದೆ. ಒಡಕು, ಗಂಟಾಗುವುದು, ಸಣ್ಣ ಸಣ್ಣ ಗಂಟಾಗುವುದು, ಒಣಗುವುದು, ಫಂಗಸ್ ಸೋಂಕು ತೊಂದರೆಗಳಿಗೀಡಾಗುವುದು ಸಾಮಾನ್ಯ. ವೈದ್ಯರ ಬಳಿ ಆಗಾಗ ಪಾದಗಳನ್ನು ಪರೀಕ್ಷಿಸುವುದರಿಂದ ಅನೇಕ ತೊಂದರೆಗಳನ್ನು ತಡೆಗಟ್ಟಬಹುದಾಗಿದೆ.

ವ್ಯಕ್ತಿಯ ಪಾದದಲ್ಲಿ ಉತ್ತಮ ಸ್ಪರ್ಶ ಜ್ಞಾನವಿಲ್ಲದಿದ್ದರೆ ಅಥವಾ ಸೂಜಿ ಚುಚ್ಚಿದಾಗ ಅರಿವಾಗದಿದ್ದರೆ, ಅವರ ನರಕ್ಕೆ ಹಾನಿಯಾಗಿದೆಯೆಂದು ಅರ್ಥ. ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಲೇಬೇಕು.

ನಿತ್ಯ ಕಾರ್ಯ: ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಪಾದಗಳನ್ನು ಶುಚಿಗೊಳಿಸಿ ಸಂಪೂರ್ಣವಾಗಿ ಬಟ್ಟೆಯಿಂದ ಒರೆಸಿ. ಬೆರಳುಗಳ ಮಧ್ಯೆ ಶುಚಿಮಾಡುವುದನ್ನು ನೆನಪಿಟ್ಟುಕೊಳ್ಳಿ! ಉಗುರುಗಳನ್ನು ನಿಯಮಿತವಾಗಿ ತೆಗೆಯುತ್ತಿರಿ. ಚೂಪಾದ ತುದಿ ಮುಚ್ಚಲು ಕಾಲು ಚೀಲ ಮತ್ತು ಪಾದರಕ್ಷೆಗಳನ್ನು ಉಪಯೋಗಿಸಿ. 

ಪ್ರತಿದಿನ ಕಾಲು ಮತ್ತು ಪಾದಗಳಿಗೆ ವ್ಯಾಯಾಮ ಮಾಡಿಸಿ ರಕ್ತ ಸಂಚಾರವನ್ನು ಹೆಚ್ಚಿಸಿ. ಹಿಮ್ಮಡಿ ತಿರುಗಿಸುವುದು, ಪಾದ ಮತ್ತು ಬೆರಳುಗಳನ್ನು ಬಗ್ಗಿಸುವುದನ್ನು ಒಳಗೊಂಡಿದೆ. ವೃದ್ಧರು ಯಾವಾಗಲೂ ಆರಾಮದಾಯಕ ಬೂಟುಗಳನ್ನು ಮನೆಯ ಒಳಗಡೆಯೂ ಸಹ ಉಪಯೋಗಿಸಬೇಕು. ಇದು ಪಾದ ರಕ್ಷಣೆಗೆ ಸಹಕಾರಿ ಹಾಗೂ ಆರಾಮದಾಯಕವಾಗಿರುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT