ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ನಿಗ್ರಹ ಕಾನೂನಿಗೆ ತಿದ್ದುಪಡಿ ತರಲು ಚಿಂತನೆ

Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವರದಕ್ಷಿಣೆ ನಿಗ್ರಹ ಕಾನೂನು ದುರ್ಬಳಕೆ­ಯಾ­ಗುತ್ತಿ­ರುವುದು ಹೆಚ್ಚುತ್ತಿ­ರುವು­ದರಿಂದ ಕೇಂದ್ರವು ಇದಕ್ಕೆ ಸೂಕ್ತ ತಿದ್ದು­ಪಡಿ ತರಲು ಚಿಂತನೆ ನಡೆಸಿದೆ.

ಸುಳ್ಳು ದೂರು ನೀಡುವವರಿಗೆ ಶಿಕ್ಷೆ ಅಥವಾ ದಂಡ ವಿಧಿಸುವ ಅವಕಾಶ ಉದ್ದೇಶಿತ ಕಾನೂನಿನಲ್ಲಿ ಇರುತ್ತದೆ. ಅಲ್ಲದೇ ವರದಕ್ಷಿಣೆ ಪದದ ಅರ್ಥವನ್ನು ಇನ್ನಷ್ಟು ವಿಸ್ತರಿಸಲಾಗುತ್ತದೆ. ಅಂದರೆ, ಮದುವೆಗೆ ಸಂಬಂಧಿಸಿದಂತೆ ಕೊಡುವ ಸಂಪತ್ತು ಎನ್ನುವ ವ್ಯಾಖ್ಯೆಗೆ ಬದಲಾಗಿ ‘ ಮದುವೆಗೆ ಮೊದಲು, ಮದುವೆಯ ಸಂದರ್ಭ­ದಲ್ಲಿ, ಮದುವೆಯ ನಂತರ ಯಾವುದೇ ಸಮಯದಲ್ಲಿ ನೀಡಲಾ­ಗುವ ಸಂಪತ್ತು’ ಎಂದು ಮರು­ವ್ಯಾಖ್ಯಾನಿಸಲಾಗುತ್ತದೆ.

ವರದಕ್ಷಿಣೆ ನಿರ್ಬಂಧ ಕಾಯ್ದೆ-­ಯನ್ನು ಇನ್ನಷ್ಟು ಬಲಪಡಿಸುವ ದಿಸೆಯಲ್ಲಿಯೂ ಮಹಿಳಾ ಮತ್ತು ಮಕ್ಕಳ ಶ್ರೇಯೋ­ಭಿವೃದ್ಧಿ ಸಚಿವಾಲಯ ಆಲೋಚಿಸುತ್ತಿದೆ. ಕೆಲವೊಂದು ಪ್ರಕರಣಗಳಲ್ಲಿ ಮಹಿಳೆ­ಯರು ವಿವಿಧ ಕಾರಣಕ್ಕಾಗಿ ಗಂಡ ಹಾಗೂ ಅತ್ತೆ ಮನೆಯವರ ವಿರುದ್ಧ ಸುಳ್ಳು ದೂರು ನೀಡಿರುವ ಪ್ರಕರಣಗಳು ಕೂಡ ಸಚಿವಾಲ­ಯದ ಗಮನಕ್ಕೆ ಬಂದಿವೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 498ಎ ಅಡಿಯಲ್ಲಿ ( ವರದಕ್ಷಿಣೆ ಕಿರುಕುಳ) ದೂರು ದಾಖಲಾದ ತಕ್ಷಣವೇ ವ್ಯಕ್ತಿಯನ್ನು ಬಂಧಿಸುವಂತಿಲ್ಲ.   ದೂರಿನ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ತಿದ್ದುಪಡಿ ಕಾನೂನಿನಲ್ಲಿ ಏನಿರುತ್ತದೆ?
ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಉಡುಗೊರೆ­ಗಳ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿ­ಸಬೇಕು. ಇದಕ್ಕೆ ತಪ್ಪಿದಲ್ಲಿ ವಧು–ವರ ಮಾತ್ರವಲ್ಲ, ಅವರ ಪೋಷಕರು ಕೂಡ ಮೂರು ವರ್ಷಗಳ ಜೈಲು ಶಿಕ್ಷೆ ಅನುಭ­ಸಬೇ­ಕಾಗುತ್ತದೆ ಮತ್ತು ಭಾರಿ ದಂಡ ತೆರಬೇಕಾಗುತ್ತದೆ.

ವರದಕ್ಷಿಣೆ ಕಿರುಕುಳಕ್ಕೆ ಒಳಗಾಗುವ ಮಹಿಳೆ ತನ್ನ ಮೇಲೆ ದೌರ್ಜನ್ಯ ನಡೆದ ಸ್ಥಳ ಅಥವಾ ತಾತ್ಕಾಲಿಕ ಅಥವಾ ಖಾಯಂ ನಿವಾಸದಿಂದ ಕೂಡ ದೂರು ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT