ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿ ಣೆ ದೂರು: ಕೇಂದ್ರ ಸೂಚನೆ

Last Updated 26 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ ಅನೇಕ ಸಂದರ್ಭಗಳಲ್ಲಿ ದುರ್ಬಳಕೆ­ಯಾಗುತ್ತಿದೆ. ಆದ ಕಾರಣ ಕೌಟುಂಬಿಕ ವಿವಾದದ ಪ್ರಕರಣಗಳಲ್ಲಿ ಐಪಿಸಿ 498 ಎ ಸೆಕ್ಷನ್‌ ಅಡಿ ಮೊಕದ್ದಮೆ ದಾಖಲಿಸುವಾಗ ವಿವೇ­ಚನೆ ಬಳಸಬೇಕು ಎಂದು ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ.

498 ಎ ಸೆಕ್ಷನ್‌ ಅಡಿ (ವರದಕ್ಷಿಣೆ ಕಿರು­ಕುಳ)   ದೂರು ದಾಖಲಾದ ತಕ್ಷಣವೇ ರೂಢಿ ಎಂಬಂತೆ ಆರೋಪಿ­­ಗಳನ್ನು ಬಂಧಿಸಬಾರದು.   ಅಪರಾಧ ಪ್ರಕ್ರಿಯಾ ಸಂಹಿತೆ ೪೧ನೇ ಸೆಕ್ಷನ್‌ ಅನ್ವಯ ( ವಾರಂಟ್‌್ ಇಲ್ಲದೇ ಬಂಧಿಸುವ ಅಧಿ­ಕಾರ) ಬಂಧನ ಅಗತ್ಯವೇ ಎನ್ನುವುದನ್ನು ಖಚಿತಪಡಿಸಿ­ಕೊಂಡ ನಂತರವೇ   ಕ್ರಮ ಕೈಗೊಳ್ಳುವಂತೆ ಪೊಲೀಸ್‌್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ನಿರ್ದೇಶನ ನೀಡಿದೆ.

ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಬಂಧಿಸಿ ಜುಲೈ ೩ರಂದು ಸುಪ್ರೀಂ­ಕೋರ್ಟ್‌್ ನೀಡಿದ್ದ ಆದೇಶವನ್ನು ಉಲ್ಲೇ­ಖಿ­ಸಿ­ರುವ ಸಚಿವಾಲಯ, ‘ಪೊಲೀಸ್‌್ ಅಧಿ­ಕಾರಿಗಳು ಈ ಆದೇಶ ಪಾಲಿಸದಿದ್ದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ; ಈ ಸಂಬಂಧ ಇಲಾಖಾ ವಿಚಾರಣೆಯನ್ನೂ ಎದುರಿಸ­ಬೇಕಾ­ದೀತು’ ಎಂದು  ಎಚ್ಚರಿಕೆ ನೀಡಿದೆ.

ವರದಕ್ಷಿಣೆ ತಡೆ  ಕಾಯ್ದೆ ದುರ್ಬಳಕೆ­ಯಾಗುತ್ತಿ­ರುವು­ದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ­ಕೋರ್ಟ್‌, ‘ಅನೇಕ ಸಂದರ್ಭಗಳಲ್ಲಿ ಮಹಿಳೆಯರು ಇದನ್ನು ತಮ್ಮ ರಕ್ಷಣೆಗೆ ಬದಲಾಗಿ ಬೆದರಿಸುವ ಅಸ್ತ್ರವಾಗಿ ಬಳಸಿಕೊಳ್ಳುತ್ತಿ­ದ್ದಾರೆ. ಆದ್ದರಿಂದ ಇಂಥ ಪ್ರಕರಣಗಳಲ್ಲಿ ಆರೋಪಿಯನ್ನು ಏಕಾಏಕಿ ಬಂಧಿಸದೇ ವಿವೇಚನೆಯಿಂದ ನಡೆದುಕೊಳ್ಳ­ಬೇಕು’ ಎಂದು ಹೇಳಿತ್ತು.

ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಆರೋಪಿಯ ಬಂಧನಕ್ಕೆ ಸಮರ್ಥನೆಯಾಗುವ ಅಂಶಗಳು ಮತ್ತು ಪುರಾವೆಗಳು ಯಾವುವು ಎಂಬುದರ ‘ತಪಾಸಣಾ ಪಟ್ಟಿ’ ತಯಾರಿಸಿ ಅದಕ್ಕೆ ಅನುಗುಣವಾಗಿಯೇ ನಡೆದುಕೊಳ್ಳಲು ಪೊಲೀಸರಿಗೆ ಸೂಚಿಸಬೇಕು.     ಬಂಧಿತನನ್ನು ಹಾಜರು­ಪಡಿಸು­­­ವಾಗ ಪೊಲೀಸರು ನ್ಯಾಯಾ­ಧೀಶರಿಗೆ ಈ ಪಟ್ಟಿ ಸಲ್ಲಿಸಬೇಕು. ಇದನ್ನು ಪರಿಶೀಲಿಸಿ ಮನವರಿಕೆ ಮಾಡಿ­ಕೊಂಡ ನಂತರವಷ್ಟೇ ನ್ಯಾಯಾಧೀಶರು ಆರೋ­ಪಿಯ ಬಂಧನಕ್ಕೆ   ಒಪ್ಪಿಗೆ ಸೂಚಿಸಬೇಕು.

ಒಂದು ವೇಳೆ ಆರೋಪಿ­ಯನ್ನು ಬಂಧಿಸುವ ಅವಶ್ಯಕತೆ ಇಲ್ಲದಿದ್ದರೆ  ಅದರ ಕಾರಣ­ಗಳನ್ನು ನಮೂದಿಸಿ ಪ್ರಕರಣ ದಾಖಲಾದ ಎರಡು ವಾರ­ದೊಳಗೆ  ನ್ಯಾಯಾಧೀಶರಿಗೆ ಮತ್ತು ಜಿಲ್ಲಾ ಪೊಲೀಸ್‌ ಮುಖ್ಯ­ಸ್ಥರಿಗೆ ಸಂಬಂಧಿಸಿದ ಪೊಲೀಸ್‌ ಅಧಿಕಾರಿಯು ಲಿಖಿತ ವರದಿ  ಸಲ್ಲಿಸಬೇಕು’ ಎಂದು ಸಚಿವಾಲಯ  ಸ್ಪಷ್ಟಪಡಿಸಿದೆ.

ಸೂಕ್ತ ಕಾರಣಗಳಿಲ್ಲದೆ ಆರೋ­ಪಿಯ ಬಂಧನವನ್ನು  ದೃಢೀಕರಿಸುವ ನ್ಯಾಯಾಧೀಶರು  ಇಲಾಖಾ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT