ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನಕ್ಕೆ ದಾರಿಗಳು ಹಲವು

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಎಲ್ಲ ಅನುದಾನವನ್ನೂ ಸರ್ಕಾರಗಳು ಗ್ರಾಮ ಪಂಚಾಯಿತಿಗೇ ನೀಡುತ್ತವೆ. ನಮ್ಮನ್ನು ಅತಂತ್ರಗೊಳಿಸಿವೆ ಎಂದು ಇದೇ ಸಂದರ್ಭ­ದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ­ಗಳು ದೊಡ್ಡ ದನಿಯಲ್ಲಿ ಹೇಳುತ್ತವೆ. ಆದರೆ ಅನೇಕ ಗ್ರಾಮ ಪಂಚಾಯಿತಿಗಳು ಅಗತ್ಯವಾಗಿ ಪಾಳು ಬಿದ್ದಿರುವ ಕೊಳವೆ ಬಾವಿಗಳನ್ನು ಮುಚ್ಚಿಸುವ ಕೆಲಸಕ್ಕೂ ತಾಲೂಕು ಪಂಚಾಯಿತಿಗೆ ಪತ್ರ ಬರೆದು ಹಣಕ್ಕಾಗಿ ಕಾಯುತ್ತಿವೆ. 

ಈಗ ಅನುಪಯುಕ್ತ ಕೊಳವೆಬಾವಿಗಳ ಮರುಪೂರಣಕ್ಕೆ ರಾಜ್ಯ ಸರ್ಕಾರ ತಲಾ ₨ 25 ಸಾವಿರ ನೀಡಲು ಮುಂದಾ­ಗಿರು­ವುದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಲ್ಲಿ ಸಂತೋಷ ತಂದಿರಬಹುದು. ಆದರೆ ತಮ್ಮ ಅಧಿಕಾರದ ಪರಿಮಿತಿಯೊಳಗೆ ವರಮಾನ ಸೃಜಿಸಿ­ಕೊಳ್ಳುವ ವಿಷಯ­ದಲ್ಲಿ ಪಂಚಾಯಿತಿ­ಗಳು ತಮ್ಮ ಸೋಮಾರಿತನವನ್ನು ಬಿಟ್ಟುಕೊಟ್ಟಿಲ್ಲ ಎಂದೇ ಹೇಳಬೇಕಾಗುತ್ತದೆ. ಕೆಲವು ಪಂಚಾಯಿತಿಗಳು ಇದಕ್ಕೆ ವ್ಯತಿರಿಕ್ತವಾಗಿವೆ ಎಂಬುದನ್ನೂ ಮರೆಯುವಂತಿಲ್ಲ.

ಅಂಥದ್ದೊಂದು ಪಂಚಾಯಿತಿಯು ಮುಳ­ಬಾಗಲು ತಾಲ್ಲೂಕಿನಲ್ಲೇ ಇರು­ವುದು ವಿಶೇಷ. ದೇವರಾಯ ಸಮುದ್ರ ಪಂಚಾ­ಯಿತಿಗೆ ಹೊರಗಿನಿಂದ ಯಾರೇ ಬಂದರೂ ನಗುಮುಖದಿಂದ ಸ್ವಾಗತಿ­ಸುವ ಸದಸ್ಯ, ಗಿರಿಜಾ ಮೀಸೆಯ ಚಂಗಲ­ರಾಯಪ್ಪ ಅವರು ನಡೆಸಿದ ವರಮಾನ ಗಳಿಕೆಯ ಪ್ರಯತ್ನದಿಂದ ಪಂಚಾಯಿತಿಗೆ ಹೊಸ ಕಟ್ಟಡವೊಂದನ್ನು ಕಟ್ಟಲು ಸಾಧ್ಯ­ವಾಗಿದ್ದು ಹಲವು ವರ್ಷಗಳ ಹಿಂದಿನ ಮಾತು.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ­ವಾಗು­ತ್ತಿದ್ದ ಕಾಲದಲ್ಲಿ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಂದ ಗುತ್ತಿಗೆದಾರ ಲ್ಯಾಂಕೋ ಸಂಸ್ಥೆಯು ಮಣ್ಣನ್ನು ಲಾರಿ­ಗಟ್ಟಲೆ ಸಾಗಿಸು­ತ್ತಿತ್ತು. ಆದರೆ ಪಂಚಾ­ಯಿತಿಗೆ ಒಂದು ರೂಪಾಯಿ­ಯನ್ನೂ ನೀಡಿರಲಿಲ್ಲ. ಸರಿ, ಚೆಂಗಲರಾಯಪ್ಪ ಪಂಚಾ­ಯತ್ ರಾಜ್‌ ಕಾಯ್ದೆಯ ಪುಸ್ತಕ­ವನ್ನು ಓದಿದರು. ಸ್ಥಳೀಯ ಸಂಪನ್ಮೂಲ­ವನ್ನು ಯಾರೇ ಬಳಸಿ­ದರೂ, ಅಲ್ಲಿನ ಪಂಚಾಯಿತಿಗೆ ನಿಗದಿತ ಶುಲ್ಕ ಪಾವತಿಸಲೇಬೇಕು ಎಂಬ ನಿಯಮ ಕಾಣಿಸಿತು. ಅವರಿಗೆ ಅಷ್ಟೇ ಸಾಕಾಯಿತು. ಸಂಸ್ಥೆಗೆ ತಾಕೀತು ಮಾಡಿದರು. ಸಂಸ್ಥೆ ಇದನ್ನು ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಚೆಂಗಲ­ರಾಯಪ್ಪ ಪಟ್ಟು ಬಿಡಲಿಲ್ಲ. ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾ­ಯತ್ ರಾಜ್‌ ಇಲಾಖೆಯ ಪ್ರಧಾನ ಕಾರ್ಯ­­­ದರ್ಶಿಗಳ­ವರೆಗೂ ದೂರು ಒಯ್ದರು. ಕೊನೆಗೆ ಮಣಿದ ಸಂಸ್ಥೆ ಪಂಚಾ­­ಯಿತಿ ಹೇಳಿದಷ್ಟು ಹಣ ಕೊಡ­ಲೇ­ಬೇಕಾಯಿತು. ಇದು ಪಂಚಾ­ಯಿತಿಯ ಯಶಸ್ಸು.

ಇದೇ ಹೆದ್ದಾರಿಯುದ್ದಕ್ಕೂ ಇರುವ ಇತರೆ ಪಂಚಾಯಿತಿಗಳೇಕೆ ಈ ಕೆಲಸವನ್ನು ಮಾಡಿ ವರಮಾನವನ್ನು ಸೃಜಿಸಿ­ಕೊಳ್ಳ­ಲಿಲ್ಲ?
ಇನ್ನೊಂದು ಉದಾಹರಣೆಯನ್ನು ಗಮನಿಸುವುದು ಅವಶ್ಯ.

ಕೋಲಾರ ತಾಲ್ಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿಯ ಭೂಪಟದಲ್ಲಿ ಇದ್ದರೂ, ಜಗತ್ತಿನ ಪಂಚೇಂದ್ರಿಯಗಳಿಂದ ದೂರವೇ ಇರುವ ಚೆನ್ನಾ­ಪುರ ಹಳ್ಳಿಯ ಸಮೀಪದಲ್ಲೇ ಇರುವ ಪುಟ್ಟ ಬೆಟ್ಟ­ವನ್ನು ಸುತ್ತಮುತ್ತಲಿನ ಹಳ್ಳಿಯ ಜನರೇ ಕಲ್ಲು ಗಣಿ­ಗಾರಿಕೆ­ಗಾಗಿ ಸದ್ದಿಲ್ಲದೇ ಕರಗಿಸಿದ್ದಾರೆ, ಅದಕ್ಕೆ ಗ್ರಾಮ ಪಂಚಾಯಿತಿಯಿಂದ ಇದುವರೆಗೂ ಯಾರೊ­­ಬ್ಬರೂ ಅನು­ಮತಿ ಪಡೆದಿಲ್ಲ. ಶುಲ್ಕ ಪಾವ­ತಿ­ಸಿಲ್ಲ. ಈ ಬೆಟ್ಟದಂಥ ಕಲ್ಲಿನ ಗುಡ್ಡ ಸುಮಾರು 70 ಅಡಿ­ಯಷ್ಟು ಎತ್ತರವಿತ್ತು. ಈಗ ಆ ಜಾಗದಲ್ಲಿ ದೊಡ್ಡ ಹಳ್ಳವಿದೆ. ಗಣಿಗಾರಿಕೆ ಈಗ ಗುಡ್ಡದ ಸುತ್ತಲೂ ವಿಸ್ತರಿಸುತ್ತಿದೆ. ಈ ವಿಷಯದಲ್ಲಿ ಗ್ರಾಮ ಪಂಚಾಯಿತಿ ಇದುವ­ರೆಗೂ ಗಮನ ಹರಿಸಿಲ್ಲ. ದಿನವೂ ಲಕ್ಷಾಂತರ ರೂಪಾಯಿ ಕಲ್ಲಿನ ವ್ಯವಹಾರ ನಡೆಯುತ್ತಿದೆ. ವಿಪ­ರ್ಯಾಸ­ವೆಂದರೆ, ಪಂಚಾಯಿತಿ ಅಧ್ಯಕ್ಷೆಯ ಪತಿಯೇ ಗಣಿಗಾರಿಕೆಯ ನೇತೃತ್ವ ವಹಿಸಿದ್ದಾರೆ ಎಂಬುದು ಗ್ರಾಮಸ್ಥರ ದೂರು.

ನಿಯಮಬದ್ಧವಾಗಿ ಗಣಿಗಾರಿಕೆ ನಡೆಸಲು ಕ್ರಮ ಕೈಗೊಂಡು ಶುಲ್ಕ ವಸೂಲಿ ಮಾಡಿದ್ದರೆ ಇಷ್ಟು ಹೊತ್ತಿಗೆ ಲಕ್ಷಾಂತರ ರೂಪಾಯಿ ವರಮಾನ ಪಂಚಾ­­ಯಿತಿಗೆ ಬರುತ್ತಿತ್ತು. ಆದರೆ ಆ ವರಮಾನ ಪಂಚಾ­ಯಿತಿಗೆ ಬೇಡ­ವಾಯಿತೇ? ಬೆಟ್ಟವನ್ನು ಉಳಿಸಿ­ಕೊ­ಳ್ಳುವ ಜವಾಬ್ದಾರಿಯಾದರೂ ಯಾರದ್ದು?

ಕಟ್ಟಡಗಳ ಮೇಲಿನ ನಿಯಂತ್ರಣ
ಕರ್ನಾಟಕ ಪಂಚಾಯತ್ ರಾಜ್‌ (ಕಟ್ಟಡಗಳ ನಿರ್ಮಾಣದ ಮೇಲೆ ಗ್ರಾಮ ಪಂಚಾ­ಯಿತಿಗಳ ನಿಯಂ­ತ್ರಣ) ನಿಯಮ­ಗಳು 1994ರ ಪ್ರಕಾರ ಪಂಚಾ­ಯಿತಿ ವ್ಯಾಪ್ತಿಯ ಪ್ರದೇಶದಲ್ಲಿ ಕಟ್ಟಡ­ಗಳನ್ನು ನಿರ್ಮಿಸಬೇ­ಕಾದರೆ ಪಂಚಾಯಿತಿಗೆ ನಿರ್ದಿಷ್ಟ ಶುಲ್ಕ­ವನ್ನು ಪಾವತಿಸುವುದು ಕಡ್ಡಾಯ. ಆ ನಂತರ­ವಷ್ಟೇ ಪಂಚಾಯಿತಿ ಅನುಮತಿ ನೀಡಬೇಕು.

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ­ಗಳುದ್ದಕ್ಕೂ ತಲೆ ಎತ್ತುತ್ತಿರುವ ಡಾಬಾಗಳು, ಹೋಟೆಲ್‌, ವಸತಿಗೃಹ­ಗಳು ಸೇರಿದಂತೆ ಕಟ್ಟಡಗಳಿಂದ ಪಂಚಾ­ಯಿತಿ­ಗಳಿಗೆ ಬರುತ್ತಿರುವ ವರಮಾನವೇನು ಎಂಬ ಪ್ರಶ್ನೆಗೂ ಹಲವು ಪಂಚಾಯಿತಿ­ಗಳಲ್ಲಿ ಸ್ಪಷ್ಟ ಉತ್ತರವೂ ದೊರಕದ ಸ್ಥಿತಿ ಇದೆ. ಅಂದರೆ, ಪಂಚಾಯಿತಿಗಳು ವರಮಾನ ಗಳಿಕೆಗಾಗಿ ಇರುವ ಅಧಿಕಾರ­ವನ್ನು ಬಳಸುವಲ್ಲಿ ಸೋಲುತ್ತಿವೆಯೇ?

ತೆರಿಗೆ ಪರಿಷ್ಕರಣೆ
ತೆರಿಗೆ ಪರಿಷ್ಕರಣೆ ಸದ್ಯಕ್ಕೆ ಗ್ರಾಮ ಪಂಚಾಯಿತಿ­ಗಳು ಎದುರಿಸುತ್ತಿರುವ ದೊಡ್ಡ ಸವಾಲು. ಪಕ್ಷ ಮತ್ತು ಬಣ ರಾಜಕಾರಣದ ಅಡ್ಡಪರಿಣಾಮ­ಗಳಿಂದ ಬಳಲುವ ಗ್ರಾಮ ಪಂಚಾಯಿತಿಗಳು ತೆರಿಗೆ ಪರಿಷ್ಕರಣೆ ಎಂದರೆ ಭಯ ಬೀಳುತ್ತವೆ. ಮುಳ­ಬಾಗಲು ತಾಲ್ಲೂಕಿ­ನಲ್ಲೇ ಮಾದರಿ ಪಂಚಾಯಿತಿ ಎನ್ನಿಸಿ­ಕೊಂಡ ಓ ಮಿಟ್ಟೂರು ಪಂಚಾಯಿತಿ­ಯಲ್ಲಿ ಎಲ್ಲ ಸದಸ್ಯರೂ ಪ್ರಯತ್ನಿಸಿದರೂ ತೆರಿಗೆ ಪರಿಷ್ಕರಣೆ ಸಾಧ್ಯವಾಗುತ್ತಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ, ಬಹಳ ವರ್ಷ­ಗಳ ಹಿಂದೆ ನಿಗದಿ ಮಾಡಿರುವ ತೆರಿಗೆಯ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂಬುದು ಈ ಸದಸ್ಯರಿಗೆ ಗೊತ್ತಿದೆ. ಆದರೆ ಅದನ್ನು ಹೆಚ್ಚಿಸುವುದು ಹೇಗೆ? ಎಂಬ ವಿಷಯದಲ್ಲಿ ಇನ್ನೂ ಗೊಂದಲ­ವಿದೆ. ಇದು ಕಾರ್ಯನಿರತ ಪಂಚಾಯಿತಿಯ ಸ್ಥಿತಿ. ಜಿಲ್ಲೆಯ ಉಳಿದ ಬಹುತೇಕ ಪಂಚಾ­ಯಿತಿಗಳು ತೆರಿಗೆ ಪರಿಷ್ಕರಣೆ ಎಂಬು­ದನ್ನು ಮರೆತ ಸ್ಥಿತಿಯಲ್ಲಿವೆ ಎಂಬುದು ಅಬ್ದುಲ್ ನಜೀರ್‌ ಸಾಬ್‌ ಗ್ರಾಮೀಣಾ­ಭಿವೃದ್ಧಿ ಸಂಸ್ಥೆಯ ತರಬೇತುದಾರರಾದ ಎಸ್.­ಎಚ್‌.­ಚೌಡಪ್ಪನವರ ವಿಷಾದ.

ಸರಿಯಾದ ರೀತಿಯಲ್ಲಿ ತೆರಿಗೆ ಪರಿಷ್ಕರಣೆ­ಯೊಂ­ದನ್ನು ಮಾಡಿಬಿಟ್ಟರೆ ಯಾವುದೇ ಪಂಚಾಯಿತಿ­ಯೂ ಯಾರ ಬಳಿಯೂ ಹಣಕ್ಕಾಗಿ ಕೈ ಒಡ್ಡುವ ಪರಿಸ್ಥಿತಿ ಬರುವುದಿಲ್ಲ. ಆದರೆ ಅದು ಪಂಚಾಯಿತಿ­ಗಳಿಗೆ ಅರ್ಥವಾ­ಗುತ್ತಿಲ್ಲ ಎನ್ನುತ್ತಾರೆ ಅವರು. ಬಸ್‌, ಟ್ಯಾಕ್ಸಿ, ಆಟೋ ನಿಲ್ದಾಣಗಳ ಮೇಲೆ ಪಂಚಾ­ಯಿತಿಯು ಶುಲ್ಕ ವಿಧಿಸ­ಬಹುದು. ನಿಲ್ದಾ­ಣಕ್ಕೆ ಬರುವ ಪ್ರತಿ ವಾಹನಗಳಿಂದಲೂ ಶುಲ್ಕ ವಸೂಲು ಮಾಡಬಹುದು. ಸ್ಥಾವರ­ಗಳನ್ನು ಸ್ಥಾಪಿ­ಸುವ ದೂರ ಸಂಪರ್ಕ ಸಂಸ್ಥೆ­ಗಳಿಂದ ವಾರ್ಷಿಕ ಶುಲ್ಕವನ್ನು ವಸೂಲು ಮಾಡ­ಬಹುದು. ಇವು ವರಮಾನ ಗಳಿಕೆಯ ಕೆಲವು ನಿದರ್ಶನಗಳಷ್ಟೇ. ಆದರೆ ಇವೆ­ಲ್ಲವೂ ಕಾಗದದ ಮೇಲಷ್ಟೇ ಉಳಿದಿವೆ. ಹೀಗಾಗಿಯೇ ಪಂಚಾಯಿತಿಗಳು ಬಡವನ ಸ್ಥಿತಿಯಲ್ಲೇ ಇವೆ. ಎಷ್ಟೊಂದು ಬಡ ಸ್ಥಿತಿ ಎಂದರೆ, ಐದು ವರ್ಷದ ಹಿಂದಿನವರೆಗೂ (2009ರ ಮಾರ್ಚ್‌ 31ಕ್ಕೆ), ರಾಜ್ಯದ ಗ್ರಾಮ ಪಂಚಾಯಿತಿಗಳು ಪಾವತಿಸ­ಬೇಕಾ­ಗಿದ್ದ ವಿದ್ಯುತ್ ಬಿಲ್ ಮೊತ್ತ ₨ 1298 ಕೋಟಿ ಇತ್ತು!

73ನೇ ಸಾಂವಿಧಾನಿಕ ತಿದ್ದುಪಡಿಯ ಪ್ರಮುಖ ಆಶಯ ಅಧಿಕಾರ ವಿಕೇಂದ್ರೀಕರಣ. ಇದರ ಅರ್ಥ ಅಭಿವೃದ್ಧಿ ಚಟುವಟಿಕೆಗಳಿಗೆ ಬೇಕಾದ ಸಂಪನ್ಮೂಲ­ಗಳನ್ನು ಪಂಚಾಯಿತಿಗಳು ಸ್ಥಳೀಯ ಆಡಳಿತದ ಮೂಲಕವೇ ಗಳಿಸಿಕೊಳ್ಳಲಿ ಎಂಬುದೂ ಆಗಿದೆ. ಆದರೆ  ಸ್ವಾವ­ಲಂಬಿ­ಗಳಾ­ಗ­ಬೇಕಾಗಿದ್ದ ಪಂಚಾಯಿತಿ­ಗಳು ಮಾತ್ರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನು­ದಾನಗಳಿಗೆ ಕಾಯುತ್ತಾ, ಅವುಗಳು ರೂಪಿಸಿದ ಯೋಜನೆಗಳ ಜಾರಿಯಷ್ಟೇ ತಮ್ಮ ಕೆಲಸ ಎಂಬ ಸೀಮಿತ ವ್ಯಾಖ್ಯೆಯ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಇಷ್ಟಕ್ಕೂ ಪಂಚಾಯಿತಿ­ಗಳಿಗೆ ವರಮಾನ ಗಳಿಕೆ ಎಂಬುದು ವರ್ಜ್ಯವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT