ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಾನ ತರುವ ಪ್ರವಾಸೋದ್ಯಮ

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ಕಳೆದ ವಾರ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಮೋಹಿನಿಯಾಟ್ಟಂ, ಕಥಕ್ಕಳಿ, ಕಲರಿ ಪಯಟ್‌ ಕಲೆಗಳು ಪ್ರದರ್ಶನಗೊಂಡವು. ಇದೆಲ್ಲವೂ ಪ್ರವಾಸೋದ್ಯಮ ಉತ್ತೇಜಿಸಲು ಕೇರಳ ಪ್ರವಾಸೋದ್ಯಮ ನಿಗಮವು ‘2015–16ರಲ್ಲಿ ಕೇರಳಕ್ಕೆ ಭೇಟಿ ನೀಡಿ’ ಎಂಬ ಹೊಸ ಯೋಜನೆ ಸಲುವಾಗಿ ಆಯೋಜಿಸಿದ್ದ ಕಾರ್ಯಕ್ರಮ. ಕೇರಳದ ಸೌಂದರ್ಯವನ್ನು ದೃಶ್ಯರೂಪದಲ್ಲಿ ತೋರಿಸುವುದರ ಜತೆಗೆ, ಕಲಾವಿದರು ಕೇರಳದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಿದರು.

ವಿದೇಶಿಗರು ಅಪಾರ ಸಂಖ್ಯೆಯಲ್ಲಿ ಕೇರಳಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಪ್ರವಾಸೋದ್ಯಮದಿಂದ ಬರುವ ವರಮಾನ ಆ ರಾಜ್ಯದ ಜಿಡಿಪಿಯ (ಒಟ್ಟು ರಾಷ್ಟ್ರೀಯ ಉತ್ಪನ್ನದ) ಶೇ 27–28ರಷ್ಟಿದೆ. ಕರ್ನಾಟಕಕ್ಕೆ ವರ್ಷದಲ್ಲಿ ಅಂದಾಜು 50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಲ್ಲಿ ಮೂರು ಲಕ್ಷ ವಿದೇಶಿಗರು. ರಾಜ್ಯದಲ್ಲಿ ಮೈಸೂರಿಗೇ ಪ್ರತಿ ವರ್ಷ 30–35 ಲಕ್ಷ ಭೇಟಿ ಕೊಡುತ್ತಾರೆ. ಇದರಲ್ಲಿ ಒಂದರಿಂದ ಒಂದೂವರೆ ಲಕ್ಷ ವಿದೇಶಿ ಪ್ರವಾಸಿಗರು ಇರುತ್ತಾರೆ. 

ಪ್ರತಿ ವರ್ಷ ಪ್ರವಾಸೋದ್ಯಮದಿಂದಲೇ ₹750– 800 ಕೋಟಿಗಳಷ್ಟು ವಹಿವಾಟು ಮೈಸೂರಿನಲ್ಲಿಯೇ ವಹಿವಾಟು ನಡೆಯುತ್ತದೆ. ಮೈಸೂರು ಪ್ರದೇಶಕ್ಕೆ ಅಂದರೆ, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಿಗೆ ಸಂಬಂಧಿಸಿ ₹1 ಸಾವಿರ ಕೋಟಿ ಹೆಚ್ಚುತ್ತದೆ.  ರಾಜ್ಯದಲ್ಲಿ ಪ್ರವಾಸೋದ್ಯಮದಿಂದ ಪ್ರತಿವರ್ಷ ₹5 ಸಾವಿರ ಕೋಟಿ ವಹಿವಾಟು ನಡೆಯಬಹುದು ಎಂಬ ಅಂದಾಜಿದೆ.

ಪ್ರವಾಸೋದ್ಯಮವನ್ನು ನಂಬಿ ಮೈಸೂರಿನಲ್ಲಿಯೇ 50 ಸಾವಿರ ಕುಟುಂಬಗಳು ಬದುಕುತ್ತಿವೆ. ಇದರಲ್ಲಿ  ಕಡ್ಲೆಕಾಯಿ, ಸೌತೆಕಾಯಿ ಮಾರುವವರಿಂದ ಹಿಡಿದು ಆಟೊ, ಟ್ಯಾಕ್ಸಿ, ಹೋಟೆಲ್ ಮಾಲೀಕರು,  ಮಾಣಿಗಳು, ಮಾರ್ಗದರ್ಶಿಗಳು... ಹೀಗೆ ಅನೇಕ ಕುಟುಂಬಗಳು ಪ್ರವಾಸೋದ್ಯಮವನ್ನು ಅವಲಂಬಿಸಿವೆ. ಏನೇ ಆದರೂ ವಿದೇಶಿ ಪ್ರವಾಸಿಗರು ದೆಹಲಿ, ಆಗ್ರಾ, ರಾಜಸ್ತಾನ, ಕೇರಳಕ್ಕೇ ಹೆಚ್ಚು ಹೋಗುತ್ತಾರೆ. ರಾಜ್ಯದಲ್ಲೂ ಪ್ರವಾಸಿಗರನ್ನು ಸೆಳೆಯುವಂತಹ ಪ್ರಯತ್ನಗಳು ನಿರಂತರ ನಡೆಯುತ್ತವೆ.

ಪ್ರವಾಸಿ ಮಾರ್ಗದರ್ಶಿ
ರಾಜ್ಯದ ವಿವಿಧೆಡೆಯ ಆಯ್ದ 40 ಮಂದಿಗೆ ಪ್ರವಾಸಿ ಮಾರ್ಗದರ್ಶಿ (ಗೈಡ್‌) ತರಬೇತಿಯು ಮೈಸೂರಿನಲ್ಲಿ ನಡೆಯುತ್ತಿದೆ. ಇದು ಮೂರು ತಿಂಗಳವರೆಗೆ ಮುಂದು ವರಿಯಲಿದೆ. ಮೈಸೂರಿನಲ್ಲಿ ಅಲ್ಲದೆ ರಾಜ್ಯದಲ್ಲಿ ಒಟ್ಟು ಐದು ಕಡೆ ತರಬೇತಿ ನಡೆಯುತ್ತಿದೆ. ಆದರೆ, ಚೀನಾದಲ್ಲಿ ಪ್ರವಾಸೋದ್ಯಮ ಕುರಿತು ಮೂರು ವರ್ಷಗಳ ಪದವಿ ಕೋರ್ಸ್‌ ಇದೆ. ಆದರೆ, ನಮ್ಮ ರಾಜ್ಯದಲ್ಲಿ ಮೂರು ತಿಂಗಳ ಅವಧಿಗೆ ಸೀಮಿತವಾದ ತರಬೇತಿ ಇದೆ.

ವಿಶ್ವದ ಎರಡನೇ ದೊಡ್ಡ ಉದ್ಯಮ
ಪ್ರವಾಸೋದ್ಯಮ ಇಂದು ಉದ್ಯೋಗ ಸೃಷ್ಟಿ ಹಾಗೂ ಆದಾಯ ತರುವಲ್ಲಿ ವಿಶ್ವದ ಎರಡನೇ ದೊಡ್ಡ ಉದ್ಯಮವಾಗಿದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (ಯುಎನ್‌ಡಬ್ಲುಟಿಒ)  1975ರಲ್ಲಿ ಅಸ್ತಿತ್ವಕ್ಕೆ ಬಂತು. ಸುಸ್ಥಿರ ಪ್ರವಾಸೋದ್ಯಮ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತದೆ. ಇದರೊಂದಿಗೆ ಲಂಡನ್‌ನಲ್ಲಿ ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಪರಿಷತ್‌ (ಡಬ್ಲುಟಿಟಿಸಿ) 1990ರಲ್ಲಿ ಶುರುವಾಯಿತು.

ಇದನ್ನು 100 ಖಾಸಗಿ ಸಂಸ್ಥೆಗಳು ಸೇರಿಕೊಂಡು ಆರಂಭಿಸಿದವು. ಈ ಸಂಸ್ಥೆಯ ಮಾಹಿತಿ ಪ್ರಕಾರ 2014ರಲ್ಲಿ ಪ್ರವಾಸೋದ್ಯಮದಲ್ಲಿ 7.20 ಲಕ್ಷ ಕೋಟಿ ಡಾಲರ್‌ ( ₹457 ಲಕ್ಷ ಕೋಟಿಗಳಷ್ಟು) ವಹಿವಾಟು ಆಗಿದೆ. ಈ ವ್ಯವಹಾರದಲ್ಲಿ ಬಹುಭಾಗ ಅಮೆರಿಕ ಹಾಗೂ ಯುರೋಪ್‌ಗೆ ಸೀಮಿತವಾಗಿದೆ. ಈ ಎರಡೂ ಖಂಡಗಳಿಗೆ 2014ರಲ್ಲಿ ವಿವಿಧ ದೇಶಗಳ 103 ಕೋಟಿ‌ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಆದರೆ, ಭಾರತಕ್ಕೆ 77 ಲಕ್ಷ ವಿದೇಶಿ ಪ್ರವಾಸಿಗರು ಬಂದಿದ್ದಾರೆ.

ಭಾರತದಲ್ಲಿಯೂ ಪ್ರವಾಸೋದ್ಯಮಕ್ಕೆ ಸೂಕ್ತ ಎನಿಸುವ, ಪ್ರವಾಸಿಗರನ್ನು ಆಕರ್ಷಿಸುವ ತಾಣಗಳು ಹೆಚ್ಚೇ ಇವೆ. ಗಿರಿಪರ್ವತಗಳು, ಪ್ರಾಚ್ಯ ಇಲಾಖೆಗೆ ಸೇರಿದ ಸ್ಮಾರಕಗಳು, ಶಿಲ್ಪಕಲೆ, ವನ್ಯಜೀವಿ, ಸಾಂಸ್ಕೃತಿಕ ಪರಂಪರೆಯಾಗಿ ಸಂಗೀತ, ಜಾನಪದ, ಯೋಗ ವೈವಿಧ್ಯ ಇದೆ. ಆದರೂ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯೇ ಇದೆ. ಭಾರತ ಪ್ರವಾಸ ವೆಚ್ಚ ಹೆಚ್ಚು ಎಂಬ ಕಾರಣವೇ? ಹಾಗೇನಿಲ್ಲ. ನ್ಯೂಯಾರ್ಕ್, ಲಂಡನ್‌ ದೇಶಗಳಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ತಗಲುವ ವೆಚ್ಚದಲ್ಲಿ ಕೇವಲ ಶೇ 20–25ರಷ್ಟು ಹಣ ಇದ್ದರೂ ಸಾಕು ವಿದೇಶಿಗರು ಭಾರತ  ಪ್ರವಾಸ ಕೈಗೊಳ್ಳಬಹುದು.

ಕುತೂಹಲದ ಸಂಗತಿ ಎಂದರೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಿಡಿಪಿಯಲ್ಲಿ ಶೇ 1ರಷ್ಟು ಹಣವನ್ನು ಮಾತ್ರವೇ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವೆಚ್ಚ ಮಾಡುತ್ತಿವೆ. ಆದರೆ, ಚೀನಾದಲ್ಲಿ ಜಿಡಿಪಿಯ ಶೇ 3.8, ಮಲೇಷ್ಯಾ, ಸಿಂಗಪುರದಲ್ಲಿ ಶೇ 5ರಿಂದ 10ರಷ್ಟು ವೆಚ್ಚ ಮಾಡಲಾಗುತ್ತಿದೆ. ಇನ್ನು ಪ್ರವಾಸೋದ್ಯಮದಿಂದ ಭಾರತದಲ್ಲಿ ಜಿಡಿಪಿಯ ಶೇ 6–7ರಷ್ಟು ಆದಾಯ ಬರುತ್ತಿದ್ದರೆ, ಕರ್ನಾಟಕದಲ್ಲೂ ಅಷ್ಟೇ ಪ್ರಮಾಣದ ವರಮಾನವಿದೆ.

ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಪ್ರವಾಸದ ಆಕರ್ಷಣೆಯ ತಾಣಗಳು ಹೆಚ್ಚಿವೆ. ವೆಚ್ಚವೂ ಕಡಿಮೆ. ಆದರೂ ವಿದೇಶಿ ಪ್ರವಾಸಿಗರ ಭೇಟಿ ಕಡಿಮೆ ಇರಲು ಏನು ಕಾರಣ? ‘ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ನೀತಿ 2002ರಲ್ಲಿ ಪ್ರಕಟವಾಗಿದೆ. ಪ್ರವಾಸೋದ್ಯಮವನ್ನು ಕೈಗಾರಿಕೋದ್ಯಮ ಎಂದೂ ಘೋಷಿಸಲಾಗಿದ್ದು, ಅದರಲ್ಲಿ ಪ್ರವಾಸೋದ್ಯಮ ಉತ್ತೆಜನಕ್ಕೆ ಹಲವು ಉತ್ತಮ ಅಂಶಗಳಿವೆ. ಆದರೆ, ವಿಳಂಬ ನೀತಿಯಿಂದಾಗಿ ಪ್ರವಾಸೋದ್ಯಮ ಬೆಳೆಯುತ್ತಿಲ್ಲ. ಜತೆಗೆ ಈ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲ ಪ್ರವಾಸಿಗರನ್ನು ನಮ್ಮ ಅತಿಥಿಗಳೆಂದು ಹೇಳಲಾಗಿದೆ.

‘ಅತಿಥಿ ದೇವೋಭವ’ ಎಂಬ ಉದ್ಘೋಷ ಕೂಡಾ ಇದೆ. ಆದರೆ, ಪ್ರವಾಸಿಗರನ್ನು ಅತಿಥಿಗಳು ಎಂದು ಸತ್ಕರಿಸುತ್ತಿಲ್ಲ. ಸರ್ಕಾರವೂ ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂದಿಸಿದ ಎಲ್ಲರೂ ಪ್ರವಾಸಿಗರನ್ನು ವಂಚಿಸುವುದರಲ್ಲಿ, ಹಣ ಕೀಳುವುದರಲ್ಲಿ ಸಮಭಾಗಿಗಳಾಗಿದ್ದಾರೆ. ಮೈಸೂರಿನ ಅರಮನೆ ಪ್ರವೇಶಿಸಲು ದೇಸಿ ಪ್ರವಾಸಿಗರಿಗೆ ಒಂದು ದರ ಇದ್ದರೆ, ವಿದೇಶಿ ಪ್ರವಾಸಿಗರಿಗೆ ಹೆಚ್ಚಿನ ಶುಲ್ಕವಿದೆ. ವಿದೇಶಿಗರಿಗೆ ಬಸ್‌, ರೈಲು, ವಿಮಾನದಲ್ಲಿ ಪ್ರತ್ಯೇಕ ಶುಲ್ಕವಿಲ್ಲ.

ಪ್ರವಾಸಿ ತಾಣಗಳಲ್ಲೇಕೆ ಹೆಚ್ಚಿನ ಶುಲ್ಕ ಕೊಡಬೇಕು? ಆಟೊ, ಟ್ಯಾಕ್ಸಿ, ಹೋಟೆಲ್‌ ಸೇರಿದಂತೆ ಹಲವೆಡೆ ವಿದೇಶಿ ಪ್ರವಾಸಿಗರನ್ನು ವಂಚಿಸಲಾಗುತ್ತಿದೆ. ವಿದೇಶಿ ಪ್ರವಾಸಿಗರನ್ನು ನೋಡುವ ನಮ್ಮ ದೃಷ್ಟಿ, ಮನೋಭಾವ ಬದಲಾಗಬೇಕು. ಕಿರಿಕಿರಿ ಇಲ್ಲದೆ ಪ್ರವಾಸಿ ತಾಣಗಳಲ್ಲಿ ಪ್ರವೇಶ ಇರಬೇಕು. ಸುಲಿಗೆಕೋರರನ್ನು ದೂರವಿಡಬೇಕು’ ಎನ್ನುವುದು  ಪ್ರವಾಸೋದ್ಯಮ ತಜ್ಞ ಡಾ.ಕೆ.ಎಸ್‌. ನಾಗಪತಿ ಅವರ ಆಗ್ರಹದ ನುಡಿ
*
ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ
ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳು ಐತಿಹಾಸಿಕವಾಗಿ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳು ನೈಸರ್ಗಿಕ ಸಂಪನ್ಮೂಲ, ರಮಣೀಯ ದೃಶ್ಯಗಳು ಹಾಗೂ ದೇವಸ್ಥಾನಗಳಿಗೆ ಪ್ರಸಿದ್ಧವಾಗಿವೆ. ಜತೆಗೆ, ಪರಿಸರ ಪ್ರವಾಸೋದ್ಯಮ ಹಾಗೂ ಕಾವೇರಿ ನದಿ ತೀರದಲ್ಲಿ ಅನೇಕ ದೇವಸ್ಥಾನಗಳು, ಕೋಟೆ, ಅಣೆಕಟ್ಟೆ, ಪಕ್ಷಿಧಾಮ, ಜಲಪಾತ ಮೊದಲಾದ ಆಕರ್ಷಣೆ ತಾಣಗಳಿವೆ.

ಇವುಗಳಿಗೆ ಕಾವೇರಿ ನದಿ ತೀರದ ಪ್ರದೇಶ ಗಳ ಅಭಿವೃದ್ಧಿಗೆ ‘ಕಾವೇರಿ ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ’ ರಚನೆಯಾಯಿತು. ಇದರಲ್ಲಿ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಲ ತಾಣಗಳ ಅಭಿವೃದ್ಧಿಗೂ ಒತ್ತು ಕೊಡಲಾಗಿದೆ.

*
ಹೊಸ ಪ್ರವಾಸಿ ಬಸ್‌
ಮೈಸೂರಿನಿಂದ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಜುಲೈ 11ರಂದು ಮೈಸೂರಿನಿಂದ ನೂತನ ಆರು ಪ್ರವಾಸಿ ಬಸ್ಸುಗಳ ಉದ್ಘಾಟನೆ  ನಡೆಯಿತು.
1. ಒಂದು ದಿನದ ಪ್ರವಾಸ: ಮೈಸೂರು ನಗರ–ಶ್ರೀರಂಗಪಟ್ಟಣ–ಕೆಆರ್‌ಎಸ್‌, ಬೈಲುಕುಪ್ಪೆ–ದುಬಾರೆ–ಭಾಗಮಂಡಲ–ತಲಕಾವೇರಿ–ಮಡಿಕೇರಿ, ನಂಜನಗೂಡು–ಹಿಮವದ್‌ ಗೋಪಾಲಸ್ವಾಮಿ ಬೆಟ್ಟ–ಬಂಡೀಪುರ, ಮೇಲುಕೋಟೆ–ಶ್ರವಣಬೆಳಗೊಳ–ಹಳೇಬೀಡು–ಬೇಲೂರು

2. ಎರಡು ದಿನಗಳ ಪ್ರವಾಸ: ನಂಜನಗೂಡು–ಹಿಮವದ್‌ ಗೋಪಾಲಸ್ವಾಮಿ ಬೆಟ್ಟ–ಬಂಡೀಪುರ– ಶಿವನಸಮುದ್ರ–ತಲಕಾಡು–ಸೋಮನಾಥಪುರ–ಮೇಲುಕೋಟೆ–ಶ್ರೀರಂಗಪಟ್ಟಣ–ಕೆಆರ್‌ಎಸ್–ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ

3. ಮೂರು ದಿನಗಳ ಪ್ರವಾಸ: ತಿರುಪತಿ–ಮಂಗಾಪುರ–ಕಾಳಹಸ್ತಿ

4. ಐದು ದಿನಗಳ ಪ್ರವಾಸ: ಚಿತ್ರದುರ್ಗ–ಹಂಪಿ–ಬಾದಾಮಿ–ಬನಶಂಕರಿ–ಪಟ್ಟದಕಲ್ಲು–ಐಹೊಳೆ–ಕೂಡಲಸಂಗಮ–ವಿಜಯಪುರ–ಹೊರನಾಡು–ಕಳಸ–ಶೃಂಗೇರಿ–ಕೊಲ್ಲೂರು–ಮುರುರ್ಡೇಶ್ವರ–ಉಡುಪಿ–ಮಂಗಳೂರು–ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ

*
ಪ್ರವಾಸಿಗರ ಸೆಳೆಯಲು ವಿವಿಧ ಯತ್ನ

ಪ್ರವಾಸೋದ್ಯಮವನ್ನು ವೃದ್ಧಿಸುವ ಸಲುವಾಗಿ ದೇಶದ ಅಲ್ಲದೆ, ವಿದೇಶಿ ಪ್ರವಾಸಿಗರನ್ನು ಸೆಳೆಯಲು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಐಎಟಿಒ (ಇಂಡಿಯನ್ ಅಸೋಸಿಯೇಷನ್ ಆಫ್‌ ಟೂರ್‌ ಆಪರೇಟರ್ಸ್‌) ಹಾಗೂ ಟಿಜಿಎಫ್‌ಐ (ಟೂರಿಸ್ಟ್‌ ಗೈಡ್ಸ್‌ ಫೆಡರೇಷನ್ ಆಫ್‌ ಇಂಡಿಯಾ) ಸಂಘಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಈ ವರ್ಷ 85 ಲಕ್ಷ ವಿದೇಶಿ ಪ್ರವಾಸಿಗರನ್ನು ಈ ದೇಶದಲ್ಲಿ ಸೆಳೆಯಲು ನಿರ್ಧರಿಸಲಾಗಿದೆ.

ಟಿಜಿಎಫ್‌ಐ ಸಂಘದ 18ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ  ಜೂನ್‌ 13 ಹಾಗೂ 14ರಂದು ನಡೆಯಿತು. ಇದರಲ್ಲಿ ದೇಶದ ಪ್ರವಾಸಿಗರನ್ನು ಸೆಳೆಯುವುದರ ಜತೆಗೆ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಕುರಿತು ಸಮ್ಮೇಳನದಲ್ಲಿ ಹೆಚ್ಚು ಚರ್ಚೆ ನಡೆಯಿತು. 2013ರಲ್ಲಿ 60.45 ಲಕ್ಷ ಹಾಗೂ 2014ರಲ್ಲಿ 70.35 ಲಕ್ಷ ವಿದೇಶಿ ಪ್ರವಾಸಿಗರು ಈ ದೇಶಕ್ಕೆ ಪ್ರವಾಸಕ್ಕೆ ಬಂದಿದ್ದರು. ಕಳೆದ ವರ್ಷಕ್ಕಿಂತ 15 ಲಕ್ಷ ಪ್ರವಾಸಿಗರನ್ನು ಹೆಚ್ಚಿಸುವ ಸಲುವಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಿತು.
*
ಇಲ್ಲಿಗೆ ಭೇಟಿ ನೀಡುವ ವಿದೇಶಿಗರು ಎಲ್ಲರೂ ಶ್ರೀಮಂತರು ಇರುವುದಿಲ್ಲ. ಮುಂದಿನ ಎರಡು ವರ್ಷಗಳಲ್ಲಿ ಬರಲು ಯೋಜಿಸಿ ದುಡ್ಡು ಕೂಡಿಡುತ್ತಾರೆ. ಆದರೆ, ಅವರು ದುಡ್ಡು ಕೊಡಲು ಹಿಂಜರಿಯುವುದಿಲ್ಲ. ಸುಲಿಗೆ ನಿಲ್ಲಬೇಕು. ಜತೆಗೆ, ಸಕಲ ಸೌಲಭ್ಯ ಸಿಗಬೇಕು.
-ಡಾ. ಕೆ.ಎಸ್‌.ನಾಗಪತಿ,
ಪ್ರವಾಸೋದ್ಯಮ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT