ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಭೇದದ ಕರಿನೆರಳು ಮತ್ತು ಬಿಡುಗಡೆಯ ಬೆಳಕು

Last Updated 3 ಫೆಬ್ರುವರಿ 2016, 19:51 IST
ಅಕ್ಷರ ಗಾತ್ರ

ಒಂದು ಒಳ್ಳೆಯ ಸೃಜನಶೀಲ ಕೃತಿ –ಅದು ಯಾವುದೇ ಪ್ರಕಾರದಲ್ಲಿ ಮೈದಳೆದಿರಲಿ– ದೇಶ, ಭಾಷೆ, ಧರ್ಮ ಅಥವಾ ನಾಗರಿಕ ಸಮಾಜ ನಿರ್ಮಿತ ಇನ್ಯಾವುದೇ ಗಡಿಗಳನ್ನು ಮೀರಿ ಜನರನ್ನು ತಲುಪುವ ಶಕ್ತಿ ಹೊಂದಿರುತ್ತದೆ. ಸಿನಿಮಾ ಕೂಡ ಇದಕ್ಕೆ ಹೊರತಲ್ಲ.

ನಾವೆಂದೂ ಕಂಡರಿಯದ, ಕೇಳರಿಯದ ಜಗತ್ತಿನ ಇನ್ಯಾವುದೋ ಮೂಲೆಯಲ್ಲಿ ಅಲ್ಲಿನ ಸಾಮಾಜಿಕ ಸಂದರ್ಭಕ್ಕೆ ಸ್ಪಂದನೆಯಾಗಿ ಹುಟ್ಟಿಕೊಂಡ ಸಿನಿಮಾವೊಂದು ನಮಗೂ ಯಾಕೆ ಆಪ್ತವೆನಿಸುತ್ತದೆ? ನಮ್ಮದೇ ಭಾಷೆ–ಪ್ರದೇಶಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಎಷ್ಟೋ ಸಿನಿಮಾಗಳಿಗಿಂತ ಹೆಚ್ಚು ಹತ್ತಿರವಾಗಿ ಮನಸ್ಸನ್ನು ಕಾಡುತ್ತದೆ? ಎಂಥ ಖಂಡಾಂತರಗಳನ್ನೂ ಮೀರಿ ಆವರಿಸಿರುವ ಮನುಷ್ಯ ಸಮಾಜದಲ್ಲಿನ ಕೆಲವು ಅನುಭವ ಸಾಮ್ಯತೆಗಳೇ ಇದಕ್ಕೆ ಕಾರಣವಿರಬೇಕು.

ನಮ್ಮ ಅನುಭವ ಜಗತ್ತಿಗೆ ಪೂರ್ತಿ ಬೇರೆಯದೇ ಆದ ಕೃತಿ ನಮ್ಮ ಮೆಚ್ಚುಗೆಗೆ ಕಾರಣವಾಗಬಹುದು. ಆದರೆ ನಮ್ಮದೇ ಅನುಭವ ಸ್ಮೃತಿಗಳನ್ನು ನೆನಪಿಸುವ–ಮರು ಉದ್ದೀಪಿಸುವ ಕೃತಿ ಮಾತ್ರ ನಮ್ಮ ಹೃದಯಕ್ಕೆ ಹತ್ತಿರವಾಗುವುದು. ಮನಸ್ಸಲ್ಲಿ ಕೂತು ಎಡೆಬಿಡದೇ ಕಾಡುವುದು.

ಈ ಎಲ್ಲ ಜಿಜ್ಞಾಸೆಗಳ ಹುಟ್ಟಿದ್ದು ‘ಸೆಕೆಂಡ್‌ ಮದರ್‌’ ಎಂಬ ಸಿನಿಮಾ ನೋಡಿದಾಗ. ಎಂಟನೇ ಬೆಂಗಳೂರು ಅಂತರರಾಷ್ಟ್ರೀಯ  ಸಿನಿಮೋತ್ಸವದಲ್ಲಿ ಮಂಗಳವಾರ ಪ್ರದರ್ಶಿತವಾದ ಈ ಸಿನಿಮಾ ಬ್ರೆಝಿಲ್‌ ದೇಶದ್ದು. ಎನ್ನಾ ಮೈಲಾರ್ಟ್‌ ಎಂಬ ನಿರ್ದೇಶಕಿ ರೂಪಿಸಿರುವ ಈ ಚಿತ್ರದ ಪಾತ್ರಗಳ ಹೆಸರು ಬದಲಿಸಿಕೊಂಡುಬಿಟ್ಟರೆ ‘ಭಾರತೀಯವೇ’ ಆಗಿಬಿಡುವಷ್ಟು ನಮ್ಮ ಜಗತ್ತಿನೊಂದಿಗೆ ಅನುಭವ ಸಾಮ್ಯತೆಯನ್ನು ಹೊಂದಿರುವುದು ವಿಶೇಷ.

ವಾಲ್ ಸಾವೊಪೊಲೊ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಮನೆಗೆಲಸದವಳು. ತನ್ನ ಮಗುವನ್ನು ದೂರ ಪ್ರದೇಶದಲ್ಲಿ ಇಟ್ಟು
ಬೆಳೆಸುತ್ತಿರುವ ಅವಳು, ತಾನು ಕೆಲಸಕ್ಕಿರುವ ಮನೆಯ ಮಗು ಫೆಬಿನೊನನ್ನು ತಾಯಿಗಿಂತ ಹೆಚ್ಚು ಅಕ್ಕರೆಯಿಂದ ಬೆಳೆಸಿದವಳು. ಫೆಬಿನೊ ಕೂಡ ವಾಲ್‌ ಮೇಲೆ ಭಾವನಾತ್ಮಕವಾಗಿ ಅಷ್ಟೇ ಅವಲಂಬಿತನಾದವನು. ಆ ಕುಟುಂಬದ ಐಶಾರಾಮಿ ದಿನಚಕ್ರದ ಚಲನೆಗೆ ಕೀಲಿಣ್ಣೆಯಂತೆ ಬದುಕು ಸವೆಸುತ್ತಿರುವ ಅವಳು, ತಾನು ಮಾತ್ರ ಅದೇ ಮನೆಯ ಗೋದಾಮಿನಂಥ ಅವ್ಯವಸ್ಥಿತ ಕೊಠಡಿಯಲ್ಲಿ ಉಳಿದುಕೊಳ್ಳುವಳು. ತನ್ನ ‘ಇತಿ ಮಿತಿ’ಗಳನ್ನು ಅರಿತು ಅದರೊಳಗೇ ತೃಪ್ತಿಪಟ್ಟುಕೊಳ್ಳುವಳು. ಆ ಮಿತಿಗಳಿಗೆ ಅವಳು ಎಷ್ಟು ಒಗ್ಗಿ ಹೋಗಿದ್ದಾಳೆಂದರೆ ಅದು ಅಸಹಜ ಎಂಬ ಸಂಗತಿ ಅವಳ ಮನಸ್ಸಲ್ಲಿಯೂ ಬಾರದಷ್ಟು.

ದೂರದಲ್ಲಿದ್ದ ಮಗಳು ಸಾವೊಪೊಲೊ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪರೀಕ್ಷೆ ಬರೆಯಲು ಬರುವುದರೊಂದಿಗೆ ಪರಿಸ್ಥಿತಿ ಪೂರ್ತಿ ಬದಲಾಗುತ್ತದೆ. ವಾಲ್‌ ಮಗಳು ಜೆಸ್ಸಿಕಾ ದಿಟ್ಟ ಹುಡುಗಿ. ಅವಳಿಗೆ ಈ ಮನೆಯಲ್ಲಿ ಅಮ್ಮನ ಬದುಕಿನ ಮಿತಿಗಳ ಬಗ್ಗೆ ಅರಿವೂ ಇಲ್ಲ, ಅರಿವಾದ ಮೇಲೆಯೂ ಅದನ್ನು ಮುರಿಯುವಷ್ಟು ದಿಟ್ಟೆ ಅವಳು.  ತನ್ನ ಅಮ್ಮನಿಗೆ ಅಘೋಷಿತವಾಗಿ ನಿರಾಕರಿಸಲಾಗಿದ್ದ ಎಲ್ಲ ಸೌಕರ್ಯಗಳನ್ನೂ ಜೆಸ್ಸಿಕಾ ಹಕ್ಕಿನಿಂದ ಎಂಬಂತೇ ಪಡೆದುಕೊಳ್ಳುತ್ತಾ ಹೋಗುತ್ತಾಳೆ.

ಸೋ ಕಾಲ್ಡ್‌ ಸುಸಂಸ್ಕೃತ ಸಮಾಜದ ನಗುಮುಖದ ಹಿಂದೆ ಅಡಗಿರುವ ಅಮಾನವೀಯ ವರ್ಗತಾರತಮ್ಯವನ್ನು ಬಹುಸೂಕ್ಷ್ಮವಾಗಿ ತೆರೆಯುತ್ತಾ ಹೋಗುತ್ತದೆ ‘ಸೆಕೆಂಡ್‌ ಮದರ್‌’. ಅದೆಷ್ಟೊ ವರ್ಷಗಳಿಂದ ದಿನವೂ ಫೆಬಿನೊ ಈಜುವುದನ್ನು ನೋಡುತ್ತಾ ಖುಷಿಪಡುವ ವಾಲ್‌ ಎಂದಿಗೂ ಆ ಈಜುಕೊಳದಲ್ಲಿ ಇಳಿದಿಲ್ಲ. ಅಡುಗೆಮನೆಯಲ್ಲಿ ಎಲ್ಲರಿಗೂ ಅವರಿಗಿಷ್ಟದ ತಿನಿಸು ಮಾಡಿ ಬಡಿಸುವ ಅವಳು ಎಂದಿಗೂ ಡೈನಿಂಗ್ ಟೇಬಲ್‌ ಮೇಲೆ ಕೂತು ತಿಂಡಿ ತಿಂದಿಲ್ಲ. ದಿನದಿನವೂ ಎದುರಾಗುವ ಈ ಅಸಮಾನತೆಯನ್ನು ಅವಳು ಒಮ್ಮೆಯೂ ಪ್ರಶ್ನಿಸದೇ ಒಪ್ಪಿಕೊಂಡು ಬಿಟ್ಟಿದ್ದಾಳೆ. ‘ನಾನಿರುವಷ್ಟು ದಿನ ಫೆಬಿನೊನನ್ನು ನಗುನಗುತ್ತಾ ಇರುವಂತೇ ನೋಡಿಕೊಳ್ಳಬೇಕು’ ಎಂಬುದಷ್ಟೇ ಅವಳ ಬಹುಮುಖ್ಯ ಆಸೆ. ಆದರೆ ಅವಳ ಮಗಳು ಈ ತಾರತಮ್ಯವನ್ನು ಮುರಿಯುತ್ತಾಳೆ. ಅದಕ್ಕಾಗಿಯೇ ಯಜಮಾನಿಯ ಕೆಂಗಣ್ಣಿಗೂ ಗುರಿಯಾಗುತ್ತಾಳೆ.

ಕುಟುಂಬದೊಳಗೇ ಇರುವ ವರ್ಗಸಂಘರ್ಷದ ವಿವಿಧ ಮುಖಗಳನ್ನು ಅನಾವರಣಗೊಳಿಸುವ ಸಿನಿಮಾ ಇದು. ಇದಕ್ಕೆ ನಿರ್ದೆಶಕಿ ಬಳಸಿಕೊಂಡ ನಿರೂಪಣಾ ತಂತ್ರವೂ ಅಷ್ಟೇ ಮುಖ್ಯವಾದ್ದು. ನೋವಿನ ಕಥೆಯನ್ನು ದಾರುಣವಾಗಿ ಚಿತ್ರಿಸಿ ಪ್ರೇಕ್ಷರನ್ನು ಆ ಕ್ಷಣದಲ್ಲಿ ಭಾವುಕಗೊಳಿಸಿ ಮೈಮರೆಸುವ ರೀತಿಯ ಸಿನಿಮಾ ಅಲ್ಲ ಇದು. ಬದಲಿಗೆ ತುಂಬ ನವಿರಾಗಿ, ತೆಳು ಹಾಸ್ಯದ ಮೂಲಕವೇ ವಾಸ್ತವದ ಕ್ರೌರ್ಯವನ್ನೂ ದಾಟಿಸುವ ನೀರೂಪಣಾ ತಂತ್ರ ಈ ಚಿತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದೆ.

ಸಣ್ಣಗೇ ನಗುತ್ತಲೇ, ಇದನ್ನು ನೋಡಿ ವಿಷಾದ ಹುಟ್ಟುವ ಬದಲಿಗೆ ನಾವು ನಕ್ಕುಬಿಟ್ಟೆವಲ್ಲಾ ಎಂಬ ಪಾಪಪ್ರಜ್ಞೆ ಆವರಿಸುವಂತೇ ಮಾಡುವ ಅನೇಕ ದೃಶ್ಯಿಕೆಗಳು ಈ ಸಿನಿಮಾದಲ್ಲಿದೆ. ಆದ್ದರಿಂದಲೇ ‘ಸೆಕೆಂಡ್‌ ಮದರ್‌’ ಚಿತ್ರಮಂದಿರದಿಂದ ಹೊರಬಂದ ಮೇಲೂ ತುಂಬ ಕಾಲ ನಮ್ಮನ್ನು ಕಾಡುವ ಸತ್ವ ಹೊಂದಿದೆ.

ತಾವು ಬದುಕುತ್ತಿರುವ ವ್ಯವಸ್ಥೆಯಲ್ಲಿನ ವರ್ಗ ತಾರತಮ್ಯವನ್ನು ಒಪ್ಪಿಕೊಂಡು ಬಿಟ್ಟಿರುವ ಶೋಷಕ–ಶೋಷಿತ ಪೀಳಿಗೆ ಮತ್ತು ಅವುಗಳನ್ನು ತಮ್ಮದೇ ಆದ ರೀತಿಯಲ್ಲಿ ಪ್ರಶ್ನಿಸುತ್ತಾ ಮುರಿಯುವ ಹೊಸ ಪೀಳಿಗೆಗಳ ನಡುವಿನ ಸಂಘರ್ಷವನ್ನೂ ಈ ಸಿನಿಮಾ ಕಟ್ಟಿಕೊಡುತ್ತದೆ. ಈ ಬದಲಾವಣೆಯನ್ನು ಗುರ್ತಿಸುವ ಕ್ರಮವೇ ಚಿತ್ರವನ್ನು ಚಲನಶೀಲಗೊಳಿಸಿದ್ದು. ತನ್ನ ತಾಯಿ ಎಂದೂ ಇಳಿಯದ ಈಜುಕೊಳದಲ್ಲಿ ಜೆಸಿಕಾ ಧುಮುಕಿ ಸಂಭ್ರಮಿಸುವ ದೃಶ್ಯದಲ್ಲಿ ಬಳಸಿಕೊಂಡಿರುವ ಸ್ಲೋ ಮೋಷನ್‌ ತಂತ್ರ ಈ ಬದಲಾವಣೆಯನ್ನು ತುಂಬ ಶಕ್ತಿಶಾಲಿಯಾಗಿ ಬಿಂಬಿಸುತ್ತದೆ. ಹಾಗೆಯೇ ಫೆಬಿನೊ ಕೂಡ ನಡುರಾತ್ರಿ ಈಜುಕೊಳದಲ್ಲಿ ಕಾಲು ಇಳಿಬಿಟ್ಟು ಕೂತ ಜೆಸಿಕಾಳೊಂದಿಗೆ ತನ್ನ ಸಿಗರೇಟು ಹಂಚಿಕೊಳ್ಳಬಲ್ಲ.

ವಾಲ್‌ಳ ಮಗಳು ಜೆಸಿಕಾ ಬರೆಯುತ್ತಿರುವ ಪ್ರವೇಶ ಪರೀಕ್ಷೆಯನ್ನೇ ಫೆಬಿನೊ ಕೂಡ ಬರೆಯುತ್ತಾನೆ. ಆದರೆ ಅವನು ಅದರಲ್ಲಿ ಅನುತ್ತೀರ್ಣನಾದರೆ ಜೆಸಿಕಾ ಅರವತ್ತೆಂಟು ಅಂಕ ಪಡೆದುಕೊಂಡು ಉತ್ತೀರ್ಣಳಾಗುತ್ತಾಳೆ. ತನ್ನ ಮಗಳ ಈ ಸಾಧನೆ ವಾಲ್‌ಳಲ್ಲಿ ಒಂದು ಆಂತರಿಕ ಎಚ್ಚರನ್ನೂ ಹುಟ್ಟಸುತ್ತದೆ. ಅದೊಂದು ಬಿಡುಗಡೆ ಅವಳಿಗೆ. ಆ ಬಿಡುಗಡೆಯನ್ನು ಅವಳು ನಡುರಾತ್ರಿ ಈಜುಕೊಳದೊಳಗೆ ನಿಧಾನವಾಗಿ ಇಳಿದು ಓಡಾಡುತ್ತಾ ಮಗಳಿಗೆ ಫೋನ್‌ ಮಾಡಿ ನಾನೀಗ ಈಜುಕೊಳದಲ್ಲಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಸಂಭ್ರಮಿಸುತ್ತಾಳೆ. ವಾಲ್‌ ಒಂದೊಂದೇ ಹೆಜ್ಜೆ ಇಟ್ಟು ಮೆಲ್ಲನೇ ಈಜುಕೊಳದೊಳಕ್ಕೆ ಕಾಲಿಡುವ ದೃಶ್ಯ ನಮ್ಮ ಅನೇಕ ದಲಿತಕಥನಗಳನ್ನು ಒಡಲಲ್ಲಿ ಹುದುಗಿಸಿಕೊಂಡಿರುವಂತೆ ಭಾಸವಾಗುತ್ತದೆ. ಕೊನೆಗೆ ಅವಳು ಈ ದಾಸ್ಯದ ಜೀವನದಿಂದ ಬಿಡುಗಡೆ ಪಡೆದುಕೊಂಡು ತನ್ನ ಮಗಳೊಂದಿಗೆ ಜೀವನ ಕಳೆಯಲು ನಿರ್ಧರಿಸುವಲ್ಲಿ ಸಿನಿಮಾ ಕೊನೆಯಾಗುತ್ತದೆ. ಈ ಆಶಾವಾದ ಪ್ರೇಕ್ಷಕರನ್ನು ಹುಟ್ಟಸುವ ಸಮಾಧಾನವೂ ದೊಡ್ಡದು.

ಎಲ್ಲ ಪಾತ್ರಗಳ ಅದ್ಭುತ ನಟನೆ ಈ ಸಿನಿಮಾದ ಇನ್ನೊಂದು ಶಕ್ತಿ. ವಾಲ್‌ಳ ಸಣ್ಣ ಸಣ್ಣ ಮ್ಯಾನರಿಸಂಗಳು, ಜೆಸಿಕಾಳ ಮುಕ್ತತೆ, ಫೆಬಿನೊ ಮುಗ್ಧತೆ, ಬಾರ್ಬರಾ ಅಸಹನೆ, ಯಜಮಾನನ ಕಾಮನೆ ಎಲ್ಲವೂ ಸಹಜವಾಗಿ ಸೇರಿಕೊಂಡು ತುಂಬ ಗಟ್ಟಿ ಆವರಣವನ್ನು ಕಟ್ಟಿಕೊಟ್ಟಿದೆ.
ವಸ್ತು ವಿಷಯ, ಅದರ ನಿರೂಪಣೆಯ ಶೈಲಿ, ನಟನೆ, ಒಟ್ಟಾರೆ ಸಿನಿಮಾದ ಕಾಳಜಿ. ತಾಂತ್ರಿಕತೆ ಹೀಗೆ ಹಲವು ಕಾರಣಗಳಿಗೆ ಸಾಮಾನ್ಯ ಪ್ರೇಕ್ಷಕರು ಮತ್ತು ಗಂಭೀರ ಸಿನಿಮಾ ವಿದ್ಯಾರ್ಥಿಗಳಿಬ್ಬರೂ ನೋಡಲೇ ಬೇಕಾದ ಸಿನಿಮಾ ಇದು ಎಂದು ನಿಸ್ಸಂಶಯವಾಗಿ ಹೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT