ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಗಾವಣೆಗೆ ನಿಯಮಗಳ ಚೌಕಟ್ಟು

ಶಿಫಾರಸು ಪತ್ರಕ್ಕೆ ಬೆಲೆ ಇಲ್ಲ: ಬಿಬಿಎಂಪಿ
Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೌಕರರ ವರ್ಗಾವಣೆಯನ್ನು ಸಚಿವ, ಸಂಸದ, ಶಾಸಕರ ಶಿಫಾರಸು ಆಧರಿಸಿ ಇನ್ನು ಮಾಡುವುದಿಲ್ಲ, ವರ್ಗಾವಣೆಯನ್ನು ನಿಯಮಗಳ ಚೌಕಟ್ಟಿನಲ್ಲೇ ಮಾಡಲಾಗುವುದು ಎಂದು ಪಾಲಿಕೆ ಹೈಕೋರ್ಟ್‌ಗೆ ವಾಗ್ದಾನ ನೀಡಿದೆ. ಶಿಫಾರಸು ಪತ್ರ ಮುಂದಿಟ್ಟು ವರ್ಗಾವಣೆ ಕೋರುವ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿಯೂ ಪಾಲಿಕೆ ತಿಳಿಸಿದೆ.

ಬಿಬಿಎಂಪಿ ನೌಕರರ ಆಂತರಿಕ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಮುಖ್ಯಮಂತ್ರಿ ಅಥವಾ ಯಾವುದೇ ಸಚಿವರಿಗೆ ಇಲ್ಲ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ 2013ರ ಡಿಸೆಂಬರ್‌ನಲ್ಲಿ ನೀಡಿದ್ದ ಒಂದು ಆದೇಶದಲ್ಲಿ ಹೇಳಿತ್ತು. ವರ್ಗಾವಣೆಯನ್ನು ಬೇಕಾಬಿಟ್ಟಿ ಮಾಡುವಂತಿಲ್ಲ, ಅದನ್ನು ನಿಯಮಗಳ ಅನುಸಾರವೇ ಮಾಡಬೇಕು ಎಂದು ಕೋರ್ಟ್‌ ಇತ್ತೀಚೆಗೆ ನೀಡಿರುವ ಇನ್ನೊಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಏನು ಪ್ರಕರಣ?: ಪಾಲಿಕೆಯ ಕಾಟನ್‌ಪೇಟೆ ಉಪ ವಿಭಾಗದಲ್ಲಿ ಕಾಮಗಾರಿ ನಿರೀಕ್ಷಕರಾಗಿ ಕೆಲಸ ಮಾಡುತ್ತಿರುವ ಸೋಮಣ್ಣ ಅವರನ್ನು ಬಿನ್ನಿಪೇಟೆ ವಾರ್ಡ್‌ಗೆ (ವಾರ್ಡ್‌ ಸಂಖ್ಯೆ 121ಕ್ಕೆ) ವರ್ಗಾವಣೆ ಮಾಡಲಾಯಿತು. ಇದು ಮನಸೋ ಇಚ್ಛೆ ಮಾಡಿರುವ ವರ್ಗಾವಣೆ ಎಂದು ದೂರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಈ ಅರ್ಜಿಯ ವಿಚಾರಣೆ ವೇಳೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎ.ಎನ್‌. ವೇಣುಗೋಪಾಲ ಗೌಡ ಅವರು, ‘ಪಾಲಿಕೆಯಲ್ಲಿ ರಾಜಕೀಯ ವ್ಯಕ್ತಿಗಳ ಶಿಫಾರಸು ಆಧರಿಸಿ ವರ್ಗಾವಣೆ ನಡೆಯುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲು ಪ್ರಸ್ತಾವ ಸಿದ್ಧಪಡಿಸಿ ಎಂದು ನ್ಯಾ. ಗೌಡ ಅವರು ಪಾಲಿಕೆಗೆ ಸೂಚಿಸಿದರು.

ಪಾಲಿಕೆ ಹೇಳಿಕೆ: ‘ಅಧಿಕಾರಿಗಳು, ನೌಕರರು ಶಿಸ್ತಿನಿಂದ ಕೆಲಸ ಮಾಡಲು ಸಾಧ್ಯವಾಗುವಂತೆ ಮೇ, ಜೂನ್‌ ತಿಂಗಳಲ್ಲಿ ಮಾತ್ರ ಸಾಮಾನ್ಯ ವರ್ಗಾವಣೆ ನಡೆಸಲಾಗುವುದು. ಒಮ್ಮೆ ವರ್ಗಾವಣೆ ಹೊಂದಿರುವ ಸಿ ಮತ್ತು ಡಿ ವೃಂದದ ನೌಕರರನ್ನು ಇನ್ನು ಮುಂದೆ ಮೂರು ವರ್ಷದ ಅವಧಿಯೊಳಗೆ, ಎ ಮತ್ತು ಬಿ ವೃಂದದ ಅಧಿಕಾರಿಗಳನ್ನು ಎರಡು ವರ್ಷದೊಳಗೆ ಪುನಃ ವರ್ಗಾವಣೆ ಮಾಡುವುದಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮೀನಾರಾಯಣ ಅವರು ಪೀಠಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದರು.

‘ನೌಕರರ ವಿರುದ್ಧ ಬಂದ ದೂರಿನಲ್ಲಿ ಹುರುಳಿದೆ ಎಂದು ಮೇಲ್ನೋಟಕ್ಕೆ ಕಂಡುಬಂದರೆ, ನೌಕರರ ನಿವೃತ್ತಿ, ಬಡ್ತಿ ಮತ್ತು ನಿಧನದಿಂದ ಉಂಟಾಗುವ ಖಾಲಿ ಹುದ್ದೆ ಭರ್ತಿ ಮಾಡುವಾಗ,  ನೌಕರರು ಅದಕ್ಷರು ಎಂದು ಕಂಡುಬಂದಾಗ ಮಾತ್ರ ನಿಗದಿತ ಅವಧಿಗೆ ಮುನ್ನ ವರ್ಗಾವಣೆ ಮಾಡಲಾಗುವುದು. ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಲಕ್ಷ್ಮೀನಾರಾಯಣ ಅವರು ವಿವರಿಸಿದರು.
ಇದನ್ನು ದಾಖಲು ಮಾಡಿಕೊಂಡ ನ್ಯಾಯಮೂರ್ತಿಯವರು, ‘ಇನ್ನು ಮುಂದೆ ಬಿಬಿಎಂಪಿಯಲ್ಲಿ ನಡೆಸುವ ವರ್ಗಾವಣೆಯನ್ನು ಈ ಹೇಳಿಕೆಯ ಅನುಸಾರವೇ ನಡೆಸಬೇಕು’ ಎಂದು ಆದೇಶಿಸಿದ್ದಾರೆ.

ಸಿ.ಎಂ ಸೂಚನೆಗೂ ಇಲ್ಲ  ಕಿಮ್ಮತ್ತು
ಬಿಬಿಎಂಪಿಯ ಆಂತರಿಕ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ನಡೆಸುವ ಅಧಿಕಾರ ಮುಖ್ಯಮಂತ್ರಿಗೂ ಇಲ್ಲ, ಸಂಪುಟದ ಇತರ ಮಂತ್ರಿಗಳಿಗೂ ಇಲ್ಲ ಎಂದು ಹೈಕೋರ್ಟ್‍ 2013ರ ಡಿಸೆಂಬರ್‌ನಲ್ಲಿ ನೀಡಿದ್ದ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಆದರೆ, ಒಂದು ನಗರಾಡಳಿತ ಸಂಸ್ಥೆಯಿಂದ ಇನ್ನೊಂದು ನಗರಾಡಳಿತ ಸಂಸ್ಥೆಗೆ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕಿದೆ ಎಂದು ನ್ಯಾಯಮೂರ್ತಿ ಎಚ್‌.ಜಿ. ರಮೇಶ್‌ ಅವರು ಆದೇಶದಲ್ಲಿ ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರಿಗೆ ನೀಡಿದ ಲಿಖಿತ ಸೂಚನೆ ಆಧರಿಸಿ, ಬಿ.ಟಿ. ಮೋಹನ್‍ ಕೃಷ್ಣ ಅವರನ್ನು ಬಿಬಿಎಂಪಿಯ ದಕ್ಷಿಣ ಭಾಗದ ನಗರ ಯೋಜನೆ ವಿಭಾಗದ ಉಪ ನಿರ್ದೇಶಕ ಸ್ಥಾನದಿಂದ ವರ್ಗ ಮಾಡಲಾಯಿತು. ಇದನ್ನು ಪ್ರಶ್ನಿಸಿ ಮೋಹನ್‌ ಕೃಷ್ಣ ಅವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ಪಾಲಿಕೆ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

‘ರಾಜ್ಯದ ಆಡಳಿತ ಮತ್ತು ಜನರ ಹಿತದೃಷ್ಟಿಯಿಂದ ಇಂಥ ಹಸ್ತಕ್ಷೇಪಗಳನ್ನು ತಡೆಯಬೇಕು. ಮುಖ್ಯಮಂತ್ರಿಯವರ ನಿರ್ದೇಶನ ಅಥವಾ ಯಾವುದೇ ಸಚಿವರ ಸೂಚನೆ ಆಧರಿಸಿ ಬಿಬಿಎಂಪಿಯಲ್ಲಿ ನಡೆದಿರುವ ಆಂತರಿಕ ವರ್ಗಾವಣೆಗಳಿಗೆ ಕಾನೂನಿನ ಮಾನ್ಯತೆ ಇಲ್ಲ’ ಎಂದು ಅವರು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT