ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಮ ಸಮಿತಿ ತೋರಿದೆ ಹಾದಿ

ಮಹಿಳೆಯರ ಸುರಕ್ಷೆ ಹೇಗೆ?
Last Updated 6 ಮೇ 2016, 20:19 IST
ಅಕ್ಷರ ಗಾತ್ರ

ನಿರ್ಭಯಾ ಘಟನೆಯ ಬಳಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನು ಬಿಗಿಯಾಗಿದ್ದರೂ  ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನನಿತ್ಯ ಸುದ್ದಿಯಾಗುತ್ತಲೇ ಇವೆ. ದುಷ್ಕರ್ಮಿಗಳು ಶಿಕ್ಷೆಯ ಕುಣಿಕೆಯಿಂದ ಪಾರಾಗಲು ಅಧೀರ ಸಂತ್ರಸ್ತೆಯರಷ್ಟೇ ಕಾರಣರಲ್ಲ.

ಲಘು ಸೆಕ್ಷನ್‌ಗಳನ್ನು ಹಾಕಿ ಪ್ರಕರಣದ ತೀವ್ರತೆಯನ್ನೇ ತಗ್ಗಿಸಿಬಿಡಬಹುದಾದ ಪೊಲೀಸರಿಂದ ಹಿಡಿದು, ಸಂತ್ರಸ್ತರನ್ನು ಮಾನಸಿಕವಾಗಿ ಕುಗ್ಗಿಸಿಬಿಡುವ ಸಮಾಜದವರೆಗೆ ನಾನಾ ಹಂತಗಳಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಇಂತಹ ಹದಗೆಟ್ಟ ವ್ಯವಸ್ಥೆಗೆ ಲಗಾಮು ಹಾಕುವುದು ಹೇಗೆ?

ಪತ್ರಿಕೆಗಳಲ್ಲಿನ ಕೆಲವು ಸುದ್ದಿಗಳ ತಲೆ ಬರಹಗಳು ಓದುಗರ ಗಮನ ಸೆಳೆಯುತ್ತವೆ. ಕಳೆದ ಕೆಲವು ದಿನಗಳಲ್ಲಿ ಅಂಥ ಕೆಲವು ತಲೆಬರಹಗಳು ಕಂಡುಬಂದವು. ಎಲ್ಲವೂ ಭಯಾನಕ ಸುದ್ದಿಗಳು. ಕೆಲವು ಇನ್ನೂ ಭಯಾನಕ. ಅವುಗಳಲ್ಲಿದ್ದ ವಿಷಯ ಒಂದೇ: ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ.

ಬೆಂಗಳೂರಿನಲ್ಲಿ ಏಪ್ರಿಲ್‌ 23 ರಂದು ಜನ ಆಕಳಿಸುತ್ತಿದ್ದ ಹೊತ್ತಿನಲ್ಲಿ ಮಣಿಪುರ ಮೂಲದ ಯುವತಿಯೊಬ್ಬಳ ಮೇಲೆ ಅತ್ಯಾಚಾರದ ಯತ್ನ ನಡೆಯಿತು. ಏಪ್ರಿಲ್‌ 28ರಂದು ಕೇರಳದ ಪೆರುಂಬವೂರಿನಲ್ಲಿ 30 ವರ್ಷದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ನಡೆಯಿತು, ಆಕೆಯ ಅಂಗಾಂಗ ಕತ್ತರಿಸಲಾಯಿತು, ಪೈಶಾಚಿಕವಾಗಿ ಕೊಲೆ ಮಾಡಲಾಯಿತು.

ಮಾರ್ಚ್‌ 29ರಂದು ರಾಜಸ್ತಾನದಲ್ಲಿನ ಶಿಕ್ಷಕರ ತರಬೇತಿ ಕೇಂದ್ರದ ನೀರಿನ ತೊಟ್ಟಿಯಲ್ಲಿ 17 ವರ್ಷದ ದಲಿತ ಯುವತಿಯೊಬ್ಬಳ ಮೃತದೇಹ ಸಿಕ್ಕಿತು. ಕೊಲೆಗೂ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ 2014ರ ವರದಿಯನ್ವಯ ದೇಶದಲ್ಲಿ ಪ್ರತಿ ದಿನ 93 ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇದು ವರದಿಯಾಗಿರುವ ಪ್ರಕರಣಗಳ ಸಂಖ್ಯೆ. ಜೀವನ, ಕನಸು, ಆಸೆ, ಅಭಿಲಾಷೆಗಳು ಕೇವಲ ಅಂಕಿ–ಅಂಶಗಳಾಗಿ ಉಳಿದುಬಿಡುತ್ತವೆ.

ಈ ಪ್ರಕರಣಗಳಲ್ಲಿ ಮಾಧ್ಯಮ ವರದಿಗಳ ಅನ್ವಯ, ಪೊಲೀಸರು ತಕ್ಷಣದ ಕ್ರಮ ಕೈಗೊಳ್ಳಲು ಅಥವಾ ಎಫ್‌ಐಆರ್‌ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ . ಇದು ಪೊಲೀಸರ ಸಹಜ ಪ್ರತಿಕ್ರಿಯೆ ಎಂಬಂತೆ ಆಗಿದೆ.

ಈ ವಿಚಾರದಲ್ಲಿ ಇನ್ನಷ್ಟು ಇಣುಕಿದರೆ, ಇದು ಎಫ್‌ಐಆರ್‌ ದಾಖಲಿಸಿಕೊಳ್ಳುವ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುದು ಗೊತ್ತಾಗುತ್ತದೆ. ಪ್ರಕರಣಗಳ ತನಿಖೆ ಯಾವ ರೀತಿ ಆಗುತ್ತದೆ ಎಂಬುದೂ ಇದರಿಂದ ತಿಳಿಯುತ್ತದೆ.

ಪೊಲೀಸರು ಸಮಾಜದ ವರ್ತನೆ ಮತ್ತು ನೈತಿಕ ಪ್ರಜ್ಞೆಯ ಬಿಂಬವೂ ಹೌದು. ಬೆಂಗಳೂರಿನ ಘಟನೆಯಲ್ಲಿ, ದೌರ್ಜನ್ಯಕ್ಕೆ ಒಳಗಾದವಳು ಮಣಿಪುರ ಮೂಲದವಳು ಮತ್ತು ಆಕೆ ತಡರಾತ್ರಿಯಲ್ಲಿ ಹೊರಗಡೆ ಇದ್ದಳು ಎಂಬುದು ತಪ್ಪನ್ನು ಆಕೆಯ ಮೇಲೇ ಹೊರಿಸುವುದಕ್ಕೆ ಅಥವಾ ಆಕೆಯನ್ನು ಪೊಲೀಸರು ನಂಬದಿರುವುದಕ್ಕೆ ಕಾರಣವಾಗಬಾರದು.

ದೌರ್ಜನ್ಯಕ್ಕೆ ಒಳಗಾದವಳು ತಡರಾತ್ರಿಯಲ್ಲಿ ಹೊರಗಡೆ ಇದ್ದಳು, ಆಕೆ ತೊಡಬಾರದ ಬಟ್ಟೆ ತೊಟ್ಟಿದ್ದಳು ಎಂಬ ವಿಷಯಗಳ ಸುತ್ತ ಚರ್ಚೆ ಆರಂಭಿಸಿದರೆ, ಆಕೆಯ ಸ್ವಾತಂತ್ರ್ಯದ ಪ್ರಶ್ನೆ ಹೂತುಹೋಗುತ್ತದೆ. ಆಗ ನೈತಿಕತೆ ಹಾಗೂ ಸಮಾಜದ ಸಾಕ್ಷಿಪ್ರಜ್ಞೆ ಎಂಬುದು ಕಾನೂನಿಗಿಂತ ಮಿಗಿಲಾಗಿ ಕಾಣಲು ಆರಂಭಿಸುತ್ತದೆ.

ಅತ್ಯಾಚಾರ ಪ್ರಕರಣಗಳು ಜನರಿಗೆ ‘ಸಹಜ’ ಅನಿಸಲಾರಂಭಿಸಿವೆ. ನಿರ್ಭಯಾ ಪ್ರಕರಣದಲ್ಲಿ ಇದ್ದಂತಹ ಪೈಶಾಚಿಕತೆ ಈ ಪ್ರಕರಣಗಳಲ್ಲಿ ಇರದಿದ್ದರೆ ಇದೊಂದು ಗಂಭೀರ ವಿಚಾರ ಎಂದು ಹಲವರಿಗೆ ಅನಿಸುವುದೇ ಇಲ್ಲ. ಆದರೆ, ಈ ತರ್ಕ ಕೂಡ ಕೇರಳದ ಜಿಶಾ ಪ್ರಕರಣಕ್ಕೆ ಅನ್ವಯವಾಗದು. ಏಕೆಂದರೆ ದಲಿತ ಮಹಿಳೆಯರನ್ನು ಭೀಕರವಾಗಿ ಹತ್ಯೆ ಮಾಡುವುದು ತೀರಾ ಸಹಜ.

ಸುರೇಖಾ ಮತ್ತು ಪ್ರಿಯಾಂಕಾ ಭೂತ್‌ಮಾಂಗೆ ಎದುರಿಸಿದ ನೋವು ಎಷ್ಟು ಜನರಿಗೆ ತಿಳಿದಿದೆ? ಖೈರ್ಲಾಂಜಿಯ ಮೇಲ್ವರ್ಗದ ಜನ ದಲಿತ ಮಹಿಳೆಯರನ್ನು ಬೆತ್ತಲಾಗಿ ಮೆರವಣಿಗೆ ಮಾಡಿ, ಲೈಂಗಿಕ ದೌರ್ಜನ್ಯ ನಡೆಸಿ ನಂತರ ಅವರನ್ನು ಕೊಂದ ಪ್ರಕರಣ ಎಷ್ಟು ಜನರ ನೆನಪಿನಲ್ಲಿದೆ? ಇವು ದೇಶದ ಸಾಕ್ಷಿಪ್ರಜ್ಞೆಯನ್ನು ಕಲಕುವುದಿಲ್ಲ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಪ್ರಭುತ್ವಗಳು ನೀಡುವ ಪ್ರತಿಕ್ರಿಯೆ ಕೂಡ ಗಮನಾರ್ಹ. ಇಂಥ ಘಟನೆಗಳು ವರದಿಯಾದಾಗ ಪ್ರಭುತ್ವಗಳು ತಕ್ಷಣದ ಪ್ರತಿಕ್ರಿಯೆ ನೀಡುತ್ತವೆ. ತಪ್ಪು ಮಾಡಿದವನಿಗೆ ಮರಣದಂಡನೆ, ಆತನ ಪುರುಷತ್ವ ಹರಣ ಮಾಡುವುದು, ಅಂತಹ ವ್ಯಕ್ತಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವನಾಗಿದ್ದರೂ ಅವನ ಹೆಸರನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಮುಂತಾದ ವಿಚಾರಗಳ ಸುತ್ತ ಚರ್ಚೆ ಗಿರಕಿ ಹೊಡೆಯುತ್ತದೆ.

ಅಲ್ಲದೆ, ಪ್ರಭುತ್ವಗಳು ರಕ್ಷಣೆಯ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರುವ ಮಾತುಗಳನ್ನೂ ಆಡುತ್ತವೆ. ಇವೆಲ್ಲವೂ, ಅತ್ಯಾಚಾರವನ್ನು ನಡತೆ ತಪ್ಪಿದ ಕೆಲವರು ಕಾಮ ವಾಂಛೆಯಿಂದ ನಡೆಸುವ ವೈಯಕ್ತಿಕ ಮಟ್ಟದ ಅಪರಾಧವೆಂಬಂತೆಯೇ ಗ್ರಹಿಸುತ್ತವೆ ಅಥವಾ ಅತ್ಯಾಚಾರವನ್ನು ರೋಗಿಷ್ಟ ಮನಸ್ಥಿತಿಯವರು ನಡೆಸುವ ಕೃತ್ಯವೆಂದು, ಅಸಹಜ ಲೈಂಗಿಕ ಕೃತ್ಯವೆಂದು ಪರಿಭಾವಿಸುತ್ತವೆ.

ಆದರೆ ಪುರುಷ ಪ್ರಧಾನ ವ್ಯವಸ್ಥೆಯ ನೆಲೆಯಲ್ಲಿ, ಸಮಾಜದಲ್ಲಿ ಅಡಕವಾಗಿರುವ ಜಾತಿ ಮತ್ತು ಅಧಿಕಾರ ಸ್ವರೂಪದ ಆಧಾರದಲ್ಲಿ ಅರ್ಥ ಮಾಡಿಕೊಳ್ಳಲು ವಿಫಲವಾಗುತ್ತವೆ. ಲೈಂಗಿಕ ಅಪರಾಧಗಳ ಮೂಲ ಇವೇ ಆಗಿವೆ.

ನ್ಯಾಯಮೂರ್ತಿ ಜೆ.ಎಸ್.ವರ್ಮ ಸಮಿತಿ ನೀಡಿದ ವರದಿ ಇಲ್ಲಿ ಪ್ರಮುಖವಾಗುತ್ತದೆ. ಏಕೆಂದರೆ ಸಮಿತಿಯ ವರದಿಯು, ಹೆಣ್ಣಿನ ಸ್ವಾತಂತ್ರ್ಯ ಕಾಯುವುದನ್ನು ತನ್ನ ಚರ್ಚೆಯ ಕೇಂದ್ರದಲ್ಲಿ ಇರಿಸಿದೆ. ಅತ್ಯಾಚಾರವನ್ನು ಪುರುಷ ಪ್ರಧಾನ, ಅಸಮಾನ ಹಾಗೂ ತಾರತಮ್ಯ ಇರುವ ವ್ಯವಸ್ಥೆಯ ಹಿನ್ನೆಲೆಯಲ್ಲಿ ಗ್ರಹಿಸಿದೆ.

‘ಅತ್ಯಾಚಾರವೆಂಬುದು ಭೀಕರ ಅನಿಸುವುದು ಭಾರತೀಯ ಮಹಿಳೆಯ ಮನಸ್ಸಿನಲ್ಲಿ ಬೇರೂರಿಸಿರುವ ಸಂಗತಿಗಳ ಕಾರಣಕ್ಕಾಗಿ ಅಲ್ಲ. ಅದು ಭೀಕರ ಏಕೆಂದರೆ, ಅಲ್ಲಿ ನಿಮ್ಮ ಹಕ್ಕುಗಳ ಉಲ್ಲಂಘನೆ ಆಗುತ್ತದೆ, ನಿಮ್ಮನ್ನು ಬೆದರಿಸಲಾಗುತ್ತದೆ, ಪರ ಪುರುಷ ನಿಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸುತ್ತಾನೆ.

ನಿಮ್ಮ ಶೀಲ ಕೆಡುತ್ತದೆ ಎಂಬ ಕಾರಣಕ್ಕೆ ಅದು ಭೀಕರ ಅಲ್ಲ. ನಿಮ್ಮ ತಂದೆ ಅಥವಾ ಸಹೋದರನ ಮರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೂ ಅಲ್ಲ’ ಎಂಬ ಅತ್ಯಾಚಾರ ಸಂತ್ರಸ್ತೆಯೊಬ್ಬರ ಮಾತನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂವಿಧಾನದಲ್ಲಿ ಹೇಳಿರುವ ಮಹಿಳೆಯರ ಸ್ವಾತಂತ್ರ್ಯದ ಉಲ್ಲಂಘನೆಯು ದೇವಾಲಯವನ್ನು ಕೊಳ್ಳೆ ಹೊಡೆಯುವುದಕ್ಕೆ ಸಮ. ಸಂವಿಧಾನದ ಉಲ್ಲಂಘನೆಯೂ ಹೌದು. ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ ಎಂದಾದರೆ, ಆಡಳಿತವು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ ಎಂದರ್ಥ. ಮಹಿಳೆಯ ಸ್ವಾತಂತ್ರ್ಯ ಸಂಪೂರ್ಣವಾಗಿ ವ್ಯಕ್ತವಾಗುವುದು ಆಕೆಗೆ ನ್ಯಾಯ ಸಿಕ್ಕಾಗ ಮಾತ್ರ ಎಂದು ವರದಿ ಹೇಳುತ್ತದೆ.

ಕಾಶ್ಮೀರ, ಈಶಾನ್ಯ ರಾಜ್ಯಗಳು, ಛತ್ತೀಸಗಡದಂತಹ ಪ್ರದೇಶಗಳಲ್ಲಿ ನಡೆಯುವ ಅತ್ಯಾಚಾರ ಕೂಡ ರಾಷ್ಟ್ರದ ಸಾಕ್ಷಿಪ್ರಜ್ಞೆಯನ್ನು ಕಲಕುವುದಿಲ್ಲ. ಇಲ್ಲಿ ಅತ್ಯಾಚಾರ ನಡೆದಿದೆ ಎಂಬುದನ್ನೂ ಪ್ರಭುತ್ವ ಒಪ್ಪುವುದಿಲ್ಲ, ಅವುಗಳನ್ನು ತಡೆಯುವುದು ಬೇರೆ ಮಾತು. ಸೇನೆಗೆ ಸೇರಿದವರು 1991ರಲ್ಲಿ ಕಾಶ್ಮೀರದ ಕುನಾನ್ ಪೋಶ್‌ಪುರಾದಲ್ಲಿ 23 ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರ ಪ್ರಕರಣದಲ್ಲಿ, ಮಹಿಳೆಯರಿಗೆ ಇದುವರೆಗೆ ನ್ಯಾಯ ಸಿಕ್ಕಿಲ್ಲ.

ಬಸ್ತಾರ್‌ನಲ್ಲಿ ರಕ್ಷಣಾ ಪಡೆಗಳ ಸಿಬ್ಬಂದಿ ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. 2004ರಲ್ಲಿ ಮಣಿಪುರದ ಇಂಫಾಲದಲ್ಲಿ 40 ಮಹಿಳೆಯರು ಬೆತ್ತಲಾಗಿ ನಿಂತು ‘ಭಾರತೀಯ ಸೇನೆಯವರು ನಮ್ಮ ಮೇಲೆ ಅತ್ಯಾಚಾರ ನಡೆಸಬಹುದು’ ಎಂಬ ಬ್ಯಾನರ್ ಪ್ರದರ್ಶಿಸಿದರು.

ತಂಗ್‌ಜಾಮ್‌ ಮನೋರಮಾ ಎಂಬ ಮಹಿಳೆಯ ಮೇಲೆ ಅರೆಸೇನಾ ಪಡೆಗಳಿಂದ ನಡೆದ ಅತ್ಯಾಚಾರ ಮತ್ತು ಆಕೆಯ ಕೊಲೆಯನ್ನು ಪ್ರತಿಭಟಿಸಿದ ಪರಿ ಹಾಗಿತ್ತು. ಸಶಸ್ತ್ರ ಪಡೆಗಳಿಗೆ ಸೇರಿದವರು ನಡೆಸುವ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿದ ವರ್ಮ ಸಮಿತಿ, ‘ರಕ್ಷಣಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯು, ಸಶಸ್ತ್ರ ಪಡೆಗಳ ಸಿಬ್ಬಂದಿ ನಡೆಸುವ ಅತ್ಯಾಚಾರಕ್ಕೆ ಶಿಕ್ಷೆಯಿಲ್ಲದಂತೆ ಮಾಡಿದೆ’ ಎಂದು ಹೇಳಿದೆ.

ವೈವಾಹಿಕ ಸಂಬಂಧದ ನಡುವೆ ಆಗುವ ಅತ್ಯಾಚಾರಕ್ಕೆ ಶಿಕ್ಷೆ ವಿಧಿಸಲು ಪ್ರಭುತ್ವಗಳು ನಿರಾಕರಿಸುತ್ತಿವೆ. ಇದರ ಪರಿಣಾಮವಾಗಿ ಪತ್ನಿಯ ಮೇಲೆ ಅತ್ಯಾಚಾರ ನಡೆಸಲು ಪತಿಗೆ ಅನುಮತಿ ಸಿಕ್ಕಂತಾಗಿದೆ. ಇಂಥ ಮನಸ್ಥಿತಿಯ ಫಲವಾಗಿ, ಅತ್ಯಾಚಾರ ಆರೋಪಿಗೆ ಜಾಮೀನು ನೀಡಲು ಮದ್ರಾಸ್ ಹೈಕೋರ್ಟ್‌ಗೆ 2015ರಲ್ಲಿ ಸಾಧ್ಯವಾಯಿತು.

ಆರೋಪಿಯು ಮಧ್ಯಸ್ಥಿಕೆ ಮೂಲಕ ಆಕೆಯ ಜೊತೆ ರಾಜಿ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಗಂಡು–ಹೆಣ್ಣಿನ ಸಂಬಂಧವನ್ನು ಪುರುಷ ಪ್ರಧಾನ ಕಣ್ಣಿನಿಂದ ನೋಡಿ ಆದೇಶ ನೀಡುವ ಪ್ರಭುತ್ವ ಮತ್ತು ನ್ಯಾಯಾಂಗ ಇರುವೆಡೆ ಅತ್ಯಾಚಾರಕ್ಕೆ ಅಧಿಕ ಶಿಕ್ಷೆ ನಿಗದಿಯಿಂದ ಹೆಚ್ಚಿನ ಲಾಭ ಇಲ್ಲ.

ಇಲ್ಲಿ ಸಮಸ್ಯೆ ಇರುವುದು ‘ಭಾರತೀಯ ನಾರಿ’ ಎಂಬ ಪರಿಕಲ್ಪನೆಯಲ್ಲಿ. ಗಂಡು– ಹೆಣ್ಣಿನ ನಡುವಿನ ವ್ಯತ್ಯಾಸಗಳ ಬಗ್ಗೆ ಬಾಲ್ಯದಲ್ಲೇ ಕಲಿಸಲಾಗುತ್ತದೆ. ಸತಿ ಸಾವಿತ್ರಿ ಮಾದರಿಯಾಗುತ್ತಾಳೆ. ತಂದೆ ತಾಯಿಯ ಮಾತು ಕೇಳು, ನಂತರ ಮದುವೆಯಾಗಿ ಗಂಡನ ಮಾತು ಕೇಳು, ನಂತರ ಮಗನ ಮಾತು ಕೇಳು ಎಂಬುದನ್ನೇ ಕಲಿಸಲಾಗುತ್ತದೆ. ಕೌಟುಂಬಿಕ ಚೌಕಟ್ಟಿನಲ್ಲಿ ಹೆಣ್ಣಿನ ಸ್ವಾತಂತ್ರ್ಯಕ್ಕೆ ಜಾಗವೇ ಇಲ್ಲ. ಈ ಮಾತಿಗೆ ಮರ್ಯಾದೆಗೇಡು ಹತ್ಯೆಗಳೇ ಸಾಕ್ಷಿ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಜಾತಿ, ಕೋಮುವಾದ ಮತ್ತು ದೇಶದಲ್ಲಿ ಇರುವ ಇತರ ಅಧಿಕಾರ ಸ್ವರೂಪಗಳ ಹಿನ್ನೆಲೆಯಲ್ಲಿ ಕಾಣಬೇಕು. ‘ಸಾಮಾಜಿಕ ಸ್ಥಾನಮಾನದಲ್ಲಿರುವ ಅಸಮಾನತೆ, ಜಾತಿ ಆಧಾರಿತ ಪೂರ್ವಗ್ರಹ ಮತ್ತು ಬಡತನವು ಲಿಂಗ ಆಧಾರಿತ ಪೂರ್ವಗ್ರಹಗಳಿಗೆ ಇನ್ನಷ್ಟು ಇಂಬು ಕೊಡುತ್ತದೆ’ ಎಂದು ನ್ಯಾಯಮೂರ್ತಿ ವರ್ಮ ಸಮಿತಿ ಹೇಳಿದೆ.

ಇಂಥ ವಿಚಾರಗಳನ್ನು ಒಪ್ಪಿಕೊಳ್ಳಲು ನಿರಾಕರಿಸುವುದರಿಂದ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ನೈಜ ಕಾರಣ ಏನು ಎಂಬುದನ್ನು ಕಾಣಲು ನಿರಾಕರಿಸಿದಂತೆ ಆಗುತ್ತದೆ. ಇಂಥ ಸಂದರ್ಭಗಳಲ್ಲಿ, ಅತ್ಯಾಚಾರ ತಡೆಯಲು ಕಠಿಣ ಶಿಕ್ಷೆಯೊಂದೇ ಸಾಕಾಗುವುದಿಲ್ಲ. ಮೊದಲ ಹೆಜ್ಜೆಯಾಗಿ, ಸಮಾಜದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಿರ್ದಿಷ್ಟ ಸಮುದಾಯಗಳ ಮೇಲೆ ಭದ್ರತಾ ಪಡೆಗಳು ನಡೆಸುವ ಅತ್ಯಾಚಾರವನ್ನೂ ಪರಿಗಣಿಸಬೇಕಾಗುತ್ತದೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ ತಡೆಯುವ ವಿಚಾರದಲ್ಲಿ ನ್ಯಾಯಮೂರ್ತಿ ವರ್ಮ ಸಮಿತಿ ತೋರಿದ ದಾರಿ ಪೊಲೀಸ್ ವ್ಯವಸ್ಥೆಯ ಸುಧಾರಣೆ, ಮೂಲಭೂತ ಹಕ್ಕುಗಳನ್ನು ಕಾಯುವಲ್ಲಿ ನ್ಯಾಯಾಂಗ ಮುಂದೆ ಬರಬೇಕಾದ ಅವಶ್ಯಕತೆ, ಲಿಂಗ ಆಧಾರಿತ ಪೂರ್ವಗ್ರಹಗಳನ್ನು ನಿವಾರಿಸಲು ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆ, ವೈವಾಹಿಕ ಚೌಕಟ್ಟಿನಲ್ಲಿ ನಡೆಯುವ ಅತ್ಯಾಚಾರಕ್ಕೆ ಶಿಕ್ಷೆಯಿಂದ ವಿನಾಯಿತಿ ನೀಡಿರುವುದನ್ನು ಹಿಂಪಡೆಯುವುದು ಸೇರಿವೆ.

ಈ ಸಮಿತಿ ತೋರಿರುವ ಮಾರ್ಗದಲ್ಲಿ ನಡೆಯುವ ಜೊತೆಯಲ್ಲೇ ನಾವು ‘ಪುರುಷ ಪ್ರಧಾನ ವ್ಯವಸ್ಥೆಯ ವಿನಾಶ’ದ ಬಗ್ಗೆಯೂ ಮಾತನಾಡಬೇಕಿದೆ. ಸಂವಿಧಾನ ನೀಡಿರುವ ಸ್ವಾತಂತ್ರ್ಯವು ದೇಶದ ಮಹಿಳೆಯರೆಲ್ಲರಿಗೂ ಸಿಗಬೇಕು ಎಂದಾದರೆ ಇದು ತೀರಾ ಅವಶ್ಯಕ.
(ಲೇಖನಕ್ಕೆ ಸಹಕಾರ: ಐಶ್ವರ್ಯಾ ರಾವ್‌, ಕ್ಲಿಫ್ಟನ್‌ ಡಿ ರೊಜಾರಿಯೊ)

*
ಐಪಿಸಿ ವ್ಯಾಪ್ತಿಯಡಿ ಬರುವ ಲೈಂಗಿಕ ಅಪರಾಧ

* ಅತ್ಯಾಚಾರ (ಸೆಕ್ಷನ್‌ 376)
* ಅತ್ಯಾಚಾರ ಯತ್ನ (ಸೆಕ್ಷನ್‌ 376/ 511)
* ಮಹಿಳೆಯ ಮರ್ಯಾದೆಗೆ ಧಕ್ಕೆ ತರುವ ಉದ್ದೇಶದ ದಾಳಿ (ಸೆಕ್ಷನ್‌ 354)
* ಮಹಿಳೆಯ ಗೌರವಕ್ಕೆ ಕುಂದುಂಟು ಮಾಡುವುದು (ಸೆಕ್ಷನ್‌ 509)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT