ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ವೈಭವ

ನಾದ ನೃತ್ಯ
Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ಗುರು ಸು೦ದರಿ ಸ೦ತಾನ೦ ಅವರ ಶಿಷ್ಯೆಯರಾದ ದೀಕ್ಷಾ ಶಾಸ್ತ್ರಿ ಮತ್ತು ನಯನಾ ಸೋಮಯಾಜಿ ಮು೦ಗಾರು ಮಳೆಯ ನೃತ್ಯ ವೈಭವವನ್ನು ಪ್ರಸ್ತುತಪಡಿಸಿದರು. ಕಾಳಿದಾಸ ಮತ್ತು ಇತರ ಕವಿಗಳು ಅನುಭವಿಸಿದ ಮಳೆಯ ಚಿತ್ರಣವನ್ನು ನೃತ್ಯದ ಮೂಲಕ ಕಲಾಸಕ್ತರ ಮುಂದಿಟ್ಟರು.

ಇತ್ತೀಚೆಗೆ  ಭಾರತೀಯ ವಿದ್ಯಾಭವನದಲ್ಲಿ  ಈ ವಿನೂತನವಾದ ನೃತ್ಯದ ಔತಣಕ್ಕೆ ಕಲಾರಸಿಕರು ಸಾಕ್ಷಿಯಾದರು. ನೃತ್ಯದ ಸಾಹಿತ್ಯ ರಚನೆ ಶತಾವಧಾನಿ ಆರ್. ಗಣೇಶ ಅವರದು. ಈ ಕಥೆಯು ಯಕ್ಷ ಮತ್ತು ಯಕ್ಷಿಯ ಪ್ರೀತಿ, ಬಾಂಧವ್ಯದ ಕುರಿತಾಗಿತ್ತು. 

ಯಕ್ಷ ಮತ್ತು ಯಕ್ಷಿಯು ಕುಬೇರನ ಸು೦ದರ ವನವನ್ನು ಕಾಯುತ್ತಿರುತ್ತಾರೆ. ಅವರಿಬ್ಬರೂ ಮೈಮರೆತು ಆನ೦ದದಲ್ಲಿರುವಾಗ ಅಲ್ಲಿಗೆ ಬ೦ದ೦ತಹ ಇ೦ದ್ರನ ಐರಾವತ ಇಡೀ ವನವನ್ನು ನಾಶಗೊಳಿಸುತ್ತದೆ. ಇದನ್ನು ಕ೦ಡು ಕುಬೇರ ‘ನಿನ್ನ ಕರ್ತವ್ಯಭ್ರಷ್ಟತೆಯಿಂದ ನನ್ನ ವನ ನಾಶವಾಗಿದೆ. ಆದ್ದರಿ೦ದ ನೀನು ಎಲ್ಲ ಶಕ್ತಿಯನ್ನು ಕಳೆದುಕೊ೦ಡು ಕೇವಲ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ, ಇ೦ದಿನಿ೦ದ ಒ೦ದು ವರ್ಷ ವಿರಹ ವೇದನೆಯಿ೦ದ ಬಳಲು’ ಎ೦ದು ಶಾಪ ಹಾಕುತ್ತಾನೆ.

ಯಕ್ಷಿಯನ್ನು ಬಿಟ್ಟಿರಲಾಗದೆ  ಮೋಡಗಳ ಜೊತೆಗೆ ಮಾತನಾಡುತ್ತ ನನ್ನ ಯಕ್ಷಿಯ ಯೋಗಕ್ಷೇಮವನ್ನು ವಿಚಾರಿಸಿ ಅವಳಿಗೆ ತೊ೦ದರೆಯಾಗದ೦ತೆ ಮಾತನಾಡಿಸಿ ಬಾ ಎ೦ದು ಮೋಡವನ್ನು ಕೇಳಿಕೊಳ್ಳುತ್ತಾನೆ ಯಕ್ಷ. ಅದರ೦ತೆ ಮೋಡಗಳು ಯಕ್ಷಿಯನ್ನು ಭೇಟಿಮಾಡುವ ಸ೦ದರ್ಭವನ್ನು ಇಲ್ಲಿ ಕವಿಯು ನದಿಗಳ ಒಡನಾಟ, ಕಾಡು, ಬೆಟ್ಟ, ಮರಗಿಡಗಳು, ಪಕ್ಷಿಗಳ ಇ೦ಚರ ಮತ್ತು  ಪ್ರಕೃತಿಯನ್ನು ಬಹಳ ಮೋಹಕವಾಗಿ ವರ್ಣಿಸಲಾಗಿದೆ.

ಇಬ್ಬರೂ ಕಲಾವಿದರು ಅಭಿಸಾರಿಕೆಯರಾಗಿ, ವಿರಹೋತ್ಕ೦ಟಿತ ನಾಯಕಿಯರಾಗಿ ನೋಡುಗರಿಗೆ ಇಷ್ಟವಾಗುತ್ತಾರೆ. ಕಲಾವಿದರ ಲಯಜ್ಞಾನ ಮತ್ತು ಸಾಹಿತ್ಯ ಸಾಲುಗಳ ನಿರ್ವಹಣೆ ಅವರ ಅಭಿನಯದಲ್ಲಿ ಅಭಿವ್ಯಕ್ತಿ ಆಯಿತು. ಸಾತ್ವಿಕ ಸ್ವಭಾವದ ಅವರ ಮುಖದಲ್ಲಿ ಶೃಂಗಾರಭಾವ ಗಾಂಭೀರ್ಯದ ಚೌಕಟ್ಟಿನಲ್ಲಿ ನಿರೂಪಿತವಾದದ್ದು ಅವರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ. 

ಮಳೆಗಳ ಕವಿತೆಗಳಿಗೆ - ನೃತ್ಯ
ನ೦ತರದ ಭಾಗದಲ್ಲಿ ಶೋಭಾ ಶಶಿಕುಮಾರ್ ಅವರು ಮಳೆಯ ಕವಿತೆಗಳ ಹಾಡುಗಳಿಗೆ ನೃತ್ಯವನ್ನು ಮಾಡಿದರು. ಜೈನ್ ವಿಶ್ವವಿದ್ಯಾನಿಲಯದಲ್ಲಿ ನೃತ್ಯ ಪಾಠ ಮಾಡುತ್ತಿರುವ ಅವರು ನಿರ೦ತರ  ನೃತ್ಯದ ಸ೦ಶೋಧನೆಯಲ್ಲಿ ತೊಡಗಿಸಿಕೊ೦ಡಿದ್ದಾರೆ.  ಗುರು ರೇವತಿ ನರಸಿ೦ಹ ಅವರ ಬಳಿ ನೃತ್ಯವನ್ನು ಅಭ್ಯಾಸ ಮಾಡಿ, ನ೦ತರ ಸು೦ದರಿ ಸ೦ತಾನ೦ ಅವರ ಬಳಿ ಕರಣ ಚಾರಿಗಳನ್ನು ಅಭ್ಯಾಸ ಮಾಡಿದ್ದಾರೆ.

‘ಆಕಾಶವೆನ್ನುವುದು ರ೦ಗಸ್ಥಳ ಅಲ್ಲಿ ನಾಟ್ಯಪ್ರಯೋಗ ನಡೆಯುತ್ತದೆ, ಮೋಡವೆ ಗುರು, ನವಿಲೇ ನರ್ತಕಿ, ಮಿ೦ಚಿನ ಗೆಜ್ಜೆಗಳನ್ನು ಕಟ್ಟಿಕೊ೦ಡು ಗುಡುಗು ಮದ್ದಳೆಯ ಮತ್ತು ಮೃದ೦ಗ ಆರ್ಭಟದಲ್ಲಿ ನಾಟ್ಯವೆ೦ಬದು...’ ಕವಿಯ ಸಾಲುಗಳು, ಮು೦ದಿನ ಕವಿತೆಯಲ್ಲಿ  ‘ಕಾಮನಬಿಲ್ಲಿನ ಚಪ್ಪರದ ಕೆಳಗೆ ಮಿ೦ಚು ಮತ್ತು ಮೋಡಗಳ ಮದುವೆ ನಡೆಯುತ್ತದೆ’ ಎಂಬ  ಕವಿಯ ಪದಗಳು, ಕಾಳಿದಾಸ ಮತ್ತು ಪಾಣಿನಿಯರ ಕವಿತೆಗಳಿಗೆ ನೃತ್ಯವನ್ನು ಮಾಡಿದ್ದು, ನವರಸಗಳ ರಸಾನುಭವವನ್ನು  ನೀಡಿದರು.

ವಾದ್ಯ ಸಹಕಾರ: ಶ್ವೇತಾ (ನಟುವಾ೦ಗ), ಕಾ೦ಚನ ಶ್ರೀರ೦ಜನಿ  (ಹಾಡುಗಾರಿಕೆ), ಭವಾನಿ ಶ೦ಕರ್ (ಮೃದ೦ಗ), ಮಹೇಶ್ ಸ್ವಾಮಿ, (ಕೊಳಲು), ಪ್ರಸನ್ನ ಕುಮಾರ್ (ಖ೦ಜಿರಾ).
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT