ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಯ ವರ್ಗೀಕರಣ ವಾಪಸ್‌ ಇಲ್ಲ: ಬಿಬಿಎಂಪಿ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವಸತಿ ಕಟ್ಟಡಗಳ ಮೇಲಿನ ತೆರಿಗೆಯನ್ನು ಶೇಕಡಾ 20 ಮತ್ತು ವಾಣಿಜ್ಯ ಕಟ್ಟಡಗಳ ಮೇಲಿನ ತೆರಿಗೆಯನ್ನು ಶೇಕಡಾ 25ಕ್ಕೆ ಮಿತಿಗೊಳಿಸಲು ನಿರ್ಧರಿಸಿದೆ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮಾಡಲಾಗಿದ್ದ ವಲಯ ವರ್ಗೀಕರಣವನ್ನು ಹಿಂಪಡೆದಿಲ್ಲ.

ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೇಯರ್ ಬಿ.ಎನ್.ಮಂಜುನಾಥ್ ರೆಡ್ಡಿ, ‘ವಲಯ ಪುನರ್ ವಿಂಗಡಣೆಯಿಂದ ವಸತಿ ಕಟ್ಟಡಗಳ ಮೇಲಿನ ತೆರಿಗೆ ಶೇಕಡಾ 45.15 ಮತ್ತು ವಾಣಿಜ್ಯ ಕಟ್ಟಡಗಳ ಮೇಲಿತ ತೆರಿಗೆ ಶೇಕಡಾ 128.80ರಷ್ಟು ಹೆಚ್ಚಳ ಆಗಿತ್ತು. ಅದರ ಹೆಚ್ಚಳ ಪ್ರಮಾಣವನ್ನು ಸೀಮಿತಗೊಳಿಸಿ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದರು.

‘ಇದರಿಂದಾಗಿ ಸಾರ್ವಜನಿಕರಿಗೆ ಹೊರೆ ಆಗುತ್ತಿತ್ತು. ಹೀಗಾಗಿ ಈ ತೆರಿಗೆಯನ್ನು ಸಂಗ್ರಹಿಸದೆ ವಸತಿ ಕಟ್ಟಡಗಳ ಮೇಲೆ ಶೇ 20 ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ 25ರಷ್ಟು ತೆರಿಗೆಯನ್ನು ಮಾತ್ರ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ತೆರಿಗೆಯನ್ನು ಮಿತಿಗೊಳಿಸಿರುವ ನಿರ್ಧಾರವನ್ನು ಶುಕ್ರವಾರ ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು’ ಎಂದು ತಿಳಿಸಿದರು.

‘ತೆರಿಗೆ ವಲಯಗಳ ವರ್ಗೀಕರಣಹಿಂಪಡೆದಿಲ್ಲ. ಬದಲಿಗೆ ವರ್ಗೀಕರಣದಿಂದ ಆಗುತ್ತಿದ್ದ ಹೊರೆಯನ್ನು ಮಾತ್ರ ಕಡಿಮೆ ಮಾಡಲಾಗಿದೆ’ ಎಂದರು. ‘ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಡಾ.ಎಂ.ಎಸ್‌.ಶಿವಪ್ರಸಾದ್‌ ಅವರು ತೆರಿಗೆ ಹೆಚ್ಚಳ ಮತ್ತ ವಲಯ ವರ್ಗೀಕರಣಕ್ಕೆ 2014ರಲ್ಲಿ ಪ್ರಸ್ತಾವ ಸಲ್ಲಿಸಿದ್ದರು. ಈಗ ಬಿಜೆಪಿಯೇ ಅದನ್ನು ವಿರೋಧಿಸುತ್ತಿರುವುದು ವಿಪರ್ಯಾಸ’ ಎಂದರು.

ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾತನಾಡಿ,  ‘ವಸತಿ ಕಟ್ಟಡಗಳು ಮತ್ತು ವಾಣಿಜ್ಯ ಕಟ್ಟಡಗಳ ಮೇಲೆ ತೆರಿಗೆಯನ್ನು ಮಿತಿಗೊಳಿಸಿರುವ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಅಳವಡಿಸಿಲ್ಲ. ಈ ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರದ ನಂತರ ಈ ಮಾಹಿತಿ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ’ ಎಂದರು.

ಧರಣಿ ಎಚ್ಚರಿಕೆ: ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆರ್.ಅಶೋಕ, ‘ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ಪಾಲಿಕೆ ಹಿಂಪಡೆಯದಿದ್ದರೆ ಶುಕ್ರವಾರದಿಂದ ಕೌನ್ಸಿಲ್ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘‘ಪಾಲಿಕೆಯು ತೆರಿಗೆ ಹೆಚ್ಚಳ ಮಾಡಿರುವ ನಿರ್ಧಾರವನ್ನು ಕೈಬಿಟ್ಟು, ತೆರಿಗೆ ವ್ಯಾಪ್ತಿಯಿಂದ ಹೊರಗಿರುವ 5 ಲಕ್ಷ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಚೆನ್ನೈ ಮಹಾನಗರ ಪಾಲಿಕೆ ಮಾದರಿಯಲ್ಲೇ ಮನರಂಜನೆ ತೆರಿಗೆ ಹಾಗೂ ವೃತ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದರು.

ಮೇ 3ರಂದು ಪ್ರತಿಭಟನೆ: ‘ಪಾಲಿಕೆಯ ಆಡಳಿತ ವೈಫಲ್ಯ ಮತ್ತು ಜನವಿರೋಧಿ ನೀತಿಯನ್ನು ಖಂಡಿಸಿ ಮೇ 3ರಂದು ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಬಿಎಂಪಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ಅವಧಿ ವಿಸ್ತರಣೆ
ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ ನೀಡುವ ಅವಧಿಯನ್ನು ಮೇ ಅಂತ್ಯದವರೆಗೆ ಬಿಬಿಎಂಪಿ ವಿಸ್ತರಿಸಿದೆ.
‘ಈ ಅವಧಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಶೇಕಡಾ 5ರಷ್ಟು ರಿಯಾಯಿತಿ ಸಿಗಲಿದೆ’ ಎಂದು ಬಿಬಿಎಂಪಿ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜ್‌ ಹೇಳಿದರು.

‘ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ರಿಯಾಯಿತಿ ಅವಧಿ ವಿಸ್ತರಣೆ ಮಾಡ ಲಾಗಿದೆ. ಶೀಘ್ರ ಈ ಸಮಸ್ಯೆಗಳನ್ನು ಬಗೆಹರಿಸುತ್ತೇವೆ’ ಎಂದು ತಿಳಿಸಿದರು.   ಬಿಬಿಎಂಪಿ ಈ ಹಿಂದೆ ಏಪ್ರಿಲ್‌ 30ರ ವರೆಗೆ ಮಾತ್ರ ರಿಯಾಯಿತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT