ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಸಂಕೀರ್ಣ ಅಭಿರುಚಿ ಉತ್ತರ ದಕ್ಷಿಣ

Last Updated 12 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎಂಬ ಮಾತೀಗ ‘ಮದುವೆಯಾಗಬೇಕಾ? ಹಾಗಿದ್ದರೆ ಸ್ವಂತದ್ದೊಂದು ಮನೆ ಮಾಡಿಕೋ’ ಎಂದು ಬದಲಾಗಿದೆ. 

ಏಕೆಂದರೆ ಸ್ವಂತ ಮನೆ ಇರುವ ವರನನ್ನೇ, ವಧುವಿನ ಅಪ್ಪ ಹುಡುಕಾಡಿದರೆ, ತನಗೊಂದು ಮನೆಯನ್ನು ‘ಕಾಣಿಕೆ’ ಕೊಡುವ ಮಾವನೇ ಸಿಗಲಪ್ಪಾ ಎಂದು ಹುಡುಗ ದೇವರನ್ನು ಬೇಡಿಕೊಳ್ಳುತ್ತಾನೆ; ಕೊನೆ ಪಕ್ಷ ಸ್ವಂತ ಮನೆ ಇರುವ ಮಾವನಾದರೂ ಸಿಗಲಪ್ಪ ಎನ್ನುವುದು ಅವನ ಕೋರಿಕೆ. ಮಾವನ ನಂತರ ಆ ಮನೆ ತನ್ನದಾಗಬಹುದೆಂಬ ಲೆಕ್ಕಾಚಾರ ಅಲ್ಲಿ ನಡೆದಿರುತ್ತದೆ!

ಅದೇನೇ ಇರಲಿ, ‘ಸ್ವಂತ’ದ್ದು ಎಂಬುದು ಅಲ್ಲಿ ಮುಖ್ಯ ಅಷ್ಟೇ.  ಪುಕ್ಕಟೆ ಸಿಕ್ಕರೆ ‘ಸ್ವಂತ’ದ್ದು ಯಾವುದೇ ಆಗಿದ್ದರೂ ಪರವಾಗಿಲ್ಲ. ಆದರೆ ದುಡ್ಡು ಖರ್ಚು ಮಾಡಿ ಮನೆ ಮಾಡಿಕೊಳ್ಳುವಾಗ ಮಾತ್ರ ನೂರೆಂಟು ಯೋಚನೆ, ಯೋಜನೆ ಸುಳಿದಾಡುತ್ತವೆ. ವಾಸಕ್ಕೆ ಅಪಾರ್ಟ್‌ ಮೆಂಟೋ, ಸ್ವತಂತ್ರ ಮನೆಯೋ ಎಂದು ಆಗ  ಕಾಡುವ ಪ್ರಶ್ನೆ.

ಮನೆ, ಇದು ಹಲವರಿಗೆ ವಾಸದ ತಾಣವಾದರೆ, ಕೆಲವರಿಗೆ ಪ್ರತಿಷ್ಠೆಯ ಸಂಕೇತ. ಇನ್ನು ಕೆಲವರಿಗೆ ಇದು ಹೂಡಿಕೆಯ ವಸ್ತು. ಆದ್ದರಿಂದ ‘ನಿಮಗೆ ಎಂಥ ಮನೆ ಇಷ್ಟ?’ ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯುತ್ತಾ ಹೋದರೆ ಒಂದೊಂದು ಭಾಗದವರದ್ದು ಒಂದೊಂದು ಉತ್ತರ, ಆ ಉತ್ತರಕ್ಕೆ ಅವರದ್ದೇ ಆದ ಸಮರ್ಥನೆ!

ಉತ್ತರ ಭಾರತೀಯರ ಮುಂದೆ ಈ ಪ್ರಶ್ನೆ ಇಟ್ಟರೆ ಬಹುತೇಕ ಮಂದಿ ‘ಅಪಾರ್ಟ್ ಮೆಂಟ್‌ ಈಸ್‌ ಬೆಸ್ಟ್’ (ಅಪಾರ್ಟ್ ಮೆಂಟುಗಳೇ ಉತ್ತಮ) ಎಂದರೆ, ದಕ್ಷಿಣ ದಿಕ್ಕಿನವರು ‘ಸ್ವತಂತ್ರ ಮನೆ ನಮಗಿಷ್ಟ’ ಎನ್ನುತ್ತಾರೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗದ ಬೇಟೆಯಾಡುತ್ತ ದಿನನಿತ್ಯ ಬರುವವರು ನೂರಾರು ಮಂದಿ. ಅವರಲ್ಲಿ ಹೆಚ್ಚಿನವರು ಉತ್ತರ ಭಾರತೀಯರು. ಕೈತುಂಬ ಸಂಬಳ, ಉದ್ಯೋಗ ದೊರಕುತ್ತಿದ್ದಂತೆ ಮದುವೆಯ ಯೋಚನೆ... ಇವೆಲ್ಲ ಕಾರಣಗಳಿಂದ ಸ್ವಂತದ್ದೊಂದು ಸೂರಿಗಾಗಿ ಹುಡುಕಾಟ. ಅದಕ್ಕಾಗಿ ಅವರ ಪ್ರಥಮ ಆಯ್ಕೆ ಅಪಾರ್ಟ್‌ಮೆಂಟ್. ಅವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈಗ ಮಹಾನಗರಗಳಲ್ಲಿ ವಿಲಾಸಿ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಹೆಚ್ಚುತ್ತಿವೆ.

ಬೆಂಗಳೂರಿನ ಆಸುಪಾಸಿನಲ್ಲಿ ವರ್ಷಕ್ಕೆ 400ರಿಂದ 500 ಅಪಾರ್ಟ್‌ಮೆಂಟ್ ತಲೆ ಎತ್ತುತ್ತಿವೆ ಎನ್ನುತ್ತದೆ ವರದಿ. ಕಳೆದ ವರ್ಷ 6500ರಷ್ಟಿದ್ದ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಈಗ 8000ಕ್ಕೇರಿದೆ. ಇದರೊಂದಿಗೆ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಖ್ಯೆ ಕೂಡ 10ಲಕ್ಷ ಮುಟ್ಟಿದೆ ಎಂಬ ಅಚ್ಚರಿ ವಿಷಯವೂ ತಿಳಿದುಬಂದಿದೆ. ಈ ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಶೇ 70ರಷ್ಟು ಮಂದಿ ನೆರೆ ರಾಜ್ಯದವರೇ ಎಂಬುದು ಕೂಡ ಕುತೂಹಲವೇ.

ಅಪಾರ್ಟ್‌ಮೆಂಟ್‌ ಮೋಹ
ಸಾಮಾನ್ಯವಾಗಿ ಕಡಿಮೆ ಬಜೆಟ್‌ನವರು, ಸಾಮೂಹಿಕ ಹಾಗೂ ಸುರಕ್ಷತೆಯ ಬದುಕು ಬಯಸುವವರು, ನೀರು, ವಿದ್ಯುತ್ ಮೊದಲಾದವುಗಳನ್ನು  ಸ್ವತಂತ್ರವಾಗಿ ನಿರ್ವಹಿಸುವ ಪ್ರಮೇಯವೇ ಬೇಡ ಎನ್ನುವವರು, ಭದ್ರತೆ ಬಯಸುವವರು ಅಪಾರ್ಟ್‌ಮೆಂಟ್ ವಾಸ ಇಷ್ಟಪಡುತ್ತಾರೆ. ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಸೌಲಭ್ಯ ಪಡೆಯಬಹುದು ಎಂಬ ಲೆಕ್ಕಾಚಾರ ಇಲ್ಲಿ ಪ್ರಥಮ ಆದ್ಯತೆ ಪಡೆಯುತ್ತದೆ.

50ರಿಂದ 60 ಲಕ್ಷದಷ್ಟು ಹಣ ಹೊಂದಿಸಿಕೊಳ್ಳಲು ಅನುಕೂಲ ಇರುವವರೂ ಅಪಾರ್ಟ್‌ಮೆಂಟ್‌ ಮೊರೆ ಹೋಗುತ್ತಾರೆ. ಅಷ್ಟು ಹಣ ನೀಡಿದರೆ ಕ್ರೀಡಾಂಗಣ, ಈಜುಕೊಳ, ಉದ್ಯಾನ, ಭದ್ರತಾ ವ್ಯವಸ್ಥೆ, ವಾಹನ ನಿಲುಗಡೆ  ಎಲ್ಲವೂ ಲಭ್ಯ. ಆದರೆ ನಿವೇಶನಕ್ಕೆ ಒಂದಿಷ್ಟು ಲಕ್ಷ (ಈಗ ಕೋಟಿಯೇ ಬಿಡಿ), ಅದರ ನಿರ್ಮಾಣಕ್ಕೆ ಮತ್ತೊಂದಿಷ್ಟು ಲಕ್ಷ ಕೊಡುವುದು ಯಾಕೆ? ಎನ್ನುವುದು ಇವರ ಪ್ರಶ್ನೆ.

‘ಅಪಾರ್ಟ್‌ಮೆಂಟ್‌ಗಳಿಗೆ ಸ್ವಲ್ಪ ಹೆಚ್ಚಿಗೆ ದುಡ್ಡು ಕೊಟ್ಟರೂ ಪರವಾಗಿಲ್ಲ. ಇಲ್ಲಿ ಸಿಗುವ ಗರಿಷ್ಠ ಭದ್ರತೆ, ಪ್ಲಂಬರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್ ಹಾಗೂ ಗಾರ್ಡನರ್ ಮುಂತಾದ ಪಟಾಪಟ್‌ ಸೇವೆಗಳು  ಸ್ವತಂತ್ರ ಮನೆಯಿದ್ದರೆ ಸಿಗುವುದಿಲ್ಲ. ಈ ಹೊಸ ಊರಿನಲ್ಲಿ ಇವರನ್ನೆಲ್ಲ ಹುಡುಕಿ  ಎಲ್ಲಿ ಅಡ್ಡಾಡುವುದು? ಅದಕ್ಕೆ ಫ್ಲಾಟ್‌ ನನಗಿಷ್ಟ’ ಎನ್ನುತ್ತಾರೆ ಮೇಘಾಲಯದ ಜೆಸ್ಸಿವಿಯಾನಾ ಮಿಲ್ಲಿಯಂಪಾದ್.
‘ಮೊದಲೇ ಬೆಂಗಳೂರು ಹೊಸತು. ಇಲ್ಲಿ ದಿನನಿತ್ಯ ನಡೆಯುತ್ತಿರುವ ಅಪರಾಧದ ಸುದ್ದಿ ಕೇಳಿದರೆ ಬೆಚ್ಚಿಬೀಳುತ್ತೇನೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಬಹಳ ಮನೆ ಇರುವ ಕಾರಣ, ಸುರಕ್ಷತೆ ದೃಷ್ಟಿಯಿಂದ ಸ್ವತಂತ್ರ ಮನೆಗಿಂತ ಇದೇ ಉತ್ತಮ. ಅದಕ್ಕಾಗಿ ನಾನೂ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದೇನೆ’ ಎನ್ನುತ್ತಾರೆ ಅಸ್ಸಾಮಿನ ಅರುಣಾಚಲ ಪ್ರದೇಶದ ಅಬೊ ಅರಂಗಮ್.

‘ಅಪಾರ್ಟ್‌ ಮೆಂಟ್‌ ಆವರಣದಲ್ಲೇ ಆಟದ ಮೈದಾನ ಇರುವುದರಿಂದ ಮಕ್ಕಳಿಗೆ ಒಂಟಿತನ ಕಾಡುವುದಿಲ್ಲ. ಇತರೆ ಮಕ್ಕಳೊಂದಿಗೆ ಆಡಿ ನಲಿದು ಲವಲವಿಕೆಯಿಂದಿರುತ್ತಾರೆ. ನಿವೇಶನ ಖರೀದಿಸಿ ಮನೆ ಕಟ್ಟಬೇಕೆಂದರೆ ಹತ್ತಾರರು ದಾಖಲೆ, ನಕ್ಷೆ ಸಿದ್ಧತೆ, ಅದಕ್ಕೊಂದು ಅನುಮತಿ ಮತ್ತಿತರ ಕಾನೂನು ಪ್ರಕ್ರಿಯೆಗಳೇ ಹೆಚ್ಚು. ಆದರೆ ಅಪಾರ್ಟ್‌ ಮೆಂಟ್‌ ಹಾಗಲ್ಲ. ಕಡಿಮೆ ಸಮಯದಲ್ಲಿ ಮನೆ ಸಿಗುತ್ತದೆ’ ಎನ್ನುವುದು ಅಬೊ ಅವರ ಅನಿಸಿಕೆ.

ಬೆಂಗಳೂರಿನಲ್ಲಿ ನಿವೇಶನಗಳ ಬೆಲೆ ಗಗನಮುಖಿಯಾಗಿರುವ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿ ಕೆಲವು ವರ್ಷಗಳ ನಂತರ ಮಾರಾಟ ಮಾಡಿದರೆ ಭಾರೀ ಲಾಭದಾಯಕ. ಹೀಗಾಗಿ ಇದೊಂದು ಉತ್ತಮ ಉಳಿತಾಯ ಯೋಜನೆ ಎನ್ನುವುದು ಕೂಡ ಉತ್ತರ ಭಾರತೀಯರ ಅಪಾರ್ಟ್‌ಮೆಂಟ್‌ ಮೋಹಕ್ಕೆ ಕಾರಣವಾಗಿದೆ.

ದಕ್ಷಿಣದವರು ಏನಂತಾರೆ...?
ಉತ್ತರ ಭಾರತೀಯರಂತೆ ದಕ್ಷಿಣದವರೂ ಅಪಾರ್ಟ್‌ಮೆಂಟ್‌ ಇಷ್ಟಪಟ್ಟರೂ, ಅವರ ಆದ್ಯತೆ ಇರುವುದು ಸ್ವತಂತ್ರ ಮನೆಗೆ (ಇಂಡಿಪೆಂಡೆಂಟ್‌ ಹೌಸ್‌). ಏಕೆಂದರೆ ಇಲ್ಲಿಯವರಿಗೆ ಹೆಚ್ಚು ಭವಿಷ್ಯದ ಚಿಂತೆ!

ತಾತ್ಕಾಲಿಕವಾಗಿ ಅಪಾರ್ಟ್‌ಮೆಂಟ್‌ಗಳು ಸುಖದ ಸುಪ್ಪತ್ತಿಗೆ ಒದಗಿಸಿದರೂ ಭವಿಷ್ಯದಲ್ಲಿ ಅವು ತೊಂದರೆಗೆ ಸಿಲುಕಿಸಲಿವೆ ಎನ್ನುವುದು ಅವರ ಮಾತು. ಅಪಾರ್ಟ್‌ಮೆಂಟ್‌ನಲ್ಲಿ ಮನೆಯೇನೋ ಸಿಗಬಹುದು. ಆದರೆ ಭೂಮಿ ತಮ್ಮದಾಗಿರುವುದಿಲ್ಲ ಎನ್ನುವುದು ಅವರ ಅಳಲು.
ಸ್ವತಂತ್ರ ಮನೆ  ಕಟ್ಟುವಾಗ ಎಂತಹ ಗುಣಮಟ್ಟದ ಸಾಮಗ್ರಿ ಬಳಸಿರುತ್ತಾರೆ ಎನ್ನುವುದು ತಮಗೆ ತಿಳಿಯುತ್ತದೆ, ಆದರೆ ಫ್ಲಾಟ್‌ಗಳಲ್ಲಿ ಹಾಗಾಗದು. ಹೆಚ್ಚು ಕಡಿಮೆ ಆಗಿ ಮನೆ ಕುಸಿದು ಬಿದ್ದರೆ ಕೊಟ್ಟ ಹಣವೂ ಹೋಯಿತು, ಭೂಮಿಯೂ ಸಿಗುವುದಿಲ್ಲ. ಅದೇ ರೀತಿ ಪ್ರಕೃತಿ ವಿಕೋಪಗಳಿಂದ ಮನೆಗೇನಾದರೂ ಹಾನಿಯಾದರೆ ಸ್ವತಂತ್ರ ಮನೆಯಾದರೆ ಪುನಃ ಮನೆ ಕಟ್ಟಲು ಆಗುತ್ತದೆ, ಆದರೆ ಭೂಮಿಯೇ ಇಲ್ಲದ ಮೇಲೆ ಅಪಾರ್ಟ್‌ಮೆಂಟ್‌ ಕಟ್ಟಿಕೊಂಡು ಏನು ಮಾಡುವುದು? ಎನ್ನುತ್ತಾರೆ ದಕ್ಷಿಣದವರು.

‘ಮಹಾನಗರಗಳ ಹೃದಯ ಭಾಗಗಳಲ್ಲಿರುವ ಶೇ 30ರಷ್ಟು ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿ ನೀರೂ ಇಲ್ಲ. ಅಂತರ್ಜಲವೂ ಲಭ್ಯವಿಲ್ಲದೆ ಟ್ಯಾಂಕರ್ ನೀರನ್ನೇ ಅವಲಂಬಿಸಲಾಗಿದೆ. ಹೀಗಿರುವಾಗ ವರ್ಷಕ್ಕೆ 300 ರಿಂದ 400 ಅಪಾರ್ಟ್‌ಮೆಂಟ್‌ಗಳು ಹೆಚ್ಚುತ್ತಾ ಹೋದರೆ, ನೀರಿನ ಬರ ಇನ್ನೂ ಹೆಚ್ಚಾಗುವ ಕಾರಣದಿಂದಲೇ ಬಹುತೇಕ ಪ್ರಾಜೆಕ್ಟ್‌ಗಳು ಹೊರವಲಯಗಳಲ್ಲಿ ನಿರ್ಮಾಣ ಆಗುತ್ತಿವೆ. ಇದರಿಂದ ಕಚೇರಿ, ಶಾಲೆ ಇತ್ಯಾದಿಗಳು ಇರುವ ಕಡೆ ಅಪಾರ್ಟ್‌ಮೆಂಟ್ ಸಿಗುವುದಿಲ್ಲ. ಸ್ವಲ್ಪ ಹೆಚ್ಚು ಹಣ ಖರ್ಚಾದರೂ ಪರವಾಗಿಲ್ಲ. ಶಾಲೆ, ಕಚೇರಿಗೆ ಬರುವ ವೇಳೆ, ಪೆಟ್ರೋಲ್‌ ಉಳಿಸಲು ಅನುಕೂಲ ಆಗುವ ಕಡೆ ಸ್ವತಂತ್ರ ಮನೆ ಪಡೆದುಕೊಳ್ಳುವುದೇ ಒಳಿತು’ ಎನ್ನುತ್ತಾರೆ ಕೇರಳ ಮೂಲದ ಐಟಿ ಉದ್ಯೋಗಿ ಜಿತೇಶ್‌.

‘ಕೆಲವು ಕಂಪೆನಿಗಳು ತಮ್ಮ ಉನ್ನತ ದರ್ಜೆಯ ಸಿಬ್ಬಂದಿಗಳಿಗೆ ವಿಲ್ಲಾಗಳನ್ನು ಬಾಡಿಗೆಗೆ ನೀಡುವ ಬದಲು ಉನ್ನತ ದರ್ಜೆಯ ವಿಲಾಸಿ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸಲು ಅವಕಾಶ ಮಾಡಿಕೊಡುತ್ತಿವೆ. ಈ ಟ್ರೆಂಡ್‌ ಹೆಚ್ಚಾಗಿರುವ ಕಾರಣ ಅಪಾರ್ಟ್‌ಮೆಂಟ್‌ಗಳ ಬೆಲೆ ಹಾಗೂ ಸ್ವತಂತ್ರ ಮನೆಯ ಬೆಲೆಗೆ ಹೋಲಿಸಿದರೆ ಅಷ್ಟೇನೂ ಬದಲಾವಣೆ ಕಾಣಿಸುವುದಿಲ್ಲ. ಲಕ್ಸುರಿ ಅಪಾರ್ಟ್‌ಮೆಂಟ್‌ ಬದಲು ಅದೇ ಹಣದಲ್ಲಿ ಚಿಕ್ಕ ಸ್ವತಂತ್ರ ಮನೆ ಇದ್ದರೆ ಒಳಿತು’ ಎನ್ನುತ್ತಾರೆ ಬೆಂಗಳೂರಿನ ರಮಾ ರಾವ್‌.

‘ಸ್ವತಂತ್ರ ಮನೆಗೆ ಹೋಲಿಸಿದರೆ ಅಪಾರ್ಟ್‌ಮೆಂಟ್‌ ಕಡಿಮೆ ಬೆಲೆಗೆ ಸಿಗಲಿದೆ ಎಂಬುವುದರಲ್ಲಿ ಸಂದೇಹವಿಲ್ಲ. ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ನೀಡುವ ಸೌಲಭ್ಯಕ್ಕೆ ಅನುಗುಣವಾಗಿ  ನಿರ್ವಹಣಾ ವೆಚ್ಚ (ಮೆಂಟೇನೆನ್ಸ್‌ ಚಾರ್ಜ್) ನೀಡುವುದು ದೊಡ್ಡ ತಲೆನೋವು. ಭದ್ರತೆ, ಉದ್ಯಾನ ಕೆಲಸ, ಕಸ ವಿಲೇವಾರಿ, 24 ಗಂಟೆಯೂ ಕೆಲಸದವರು ಸೇರಿದಂತೆ ಸೌಲಭ್ಯಗಳನ್ನು ಒದಗಿಸಲು ತಿಂಗಳಿಗೆ 2 ಸಾವಿರದಿಂದ 40 ಸಾವಿರ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ವರ್ಷಕ್ಕೆ ನೀಡುವ ಈ ಶುಲ್ಕವನ್ನು ಲೆಕ್ಕಾಚಾರ ಹಾಕಿದರೆ ಇದಕ್ಕಿಂತ ನಮ್ಮದೇ ಎನ್ನಬಹುದಾದ ಸ್ವತಂತ್ರ ಮನೆಯೇ ಒಳಿತು’ ಎನ್ನುತ್ತಾರೆ ಹೈದರಾಬಾದ್‌ ಮೂಲದ ರಾಮಕೃಷ್ಣ ರೆಡ್ಡಿ.

ಇನ್ನು, ಉಳ್ಳವರ ಮಾತು ಬೇರೆ. ಲಕ್ಸುರಿ ವಿಲ್ಲಾಗಳತ್ತ ಅವರ ಹೆಜ್ಜೆ. ‘ದುಡ್ಡು ನನಗೆ ಮುಖ್ಯವಲ್ಲ. ಇರುವ ನಾಲ್ಕು ದಿನ ಐಷಾರಾಮಿ ಜೀವನ ನಡೆಸಬೇಕು. ಈಗ ತಿಂಗಳ ಆದಾಯವನ್ನು ಇದಕ್ಕೆ ತಕ್ಕನಾಗಿ ವೆಚ್ಚ ಮಾಡುತ್ತಿದ್ದೇನೆ’ ಎನ್ನುತ್ತಾರೆ ಆಂಧ್ರಪ್ರದೇಶದ ಕುಪ್ಪಂ ನಿವಾಸಿ ಮಾದೇಶ ರೆಡ್ಡಿ.

ಸ್ವತಂತ್ರ ಮನೆಯೇ ವಾಸಿ
ಸ್ವತಂತ್ರ ಮನೆಯಾದರೆ ಹೆಚ್ಚು ಸ್ಥಳಾವಕಾಶವಿರುತ್ತದೆ. ನಮ್ಮದೇ ಸ್ವಲ್ಪ ಜಾಗವಿದ್ದರೆ ಕೈದೋಟ ಮಾಡಿಕೊಳ್ಳಬಹುದು. ಮಕ್ಕಳಿಗೆ

ಆಟವಾಡಲು ಜಾಗವಿರುತ್ತದೆ. ಫ್ಲಾಟ್‌ನಲ್ಲಿ ಇಂತಹ ಅವಕಾಶ ಕಡಿಮೆ ಎನ್ನಬಹುದು. ಅದೂ ಅಲ್ಲದೇ ಎಲ್ಲಾ ಒಂದಕ್ಕೊಂದು ಅಂಟಿಕೊಂಡಂತೆ ಇರುವುದ ರಿಂದ ಖಾಸಗೀತನವೂ ಸಿಗುವುದಿಲ್ಲ. ಗುರುತು ಪರಿಚಯವಿಲ್ಲದವರು ಇರುತ್ತಾರೆ. ಪಕ್ಕದಮನೆಯವರು ಎಂದು ಎಷ್ಟೇ ಪ್ರೀತಿಯಿಂದ ಮಾತನಾಡಿದರೂ ಭಯವಿದ್ದೇ ಇರುತ್ತದೆ.

ಪ್ರತ್ಯೇಕ ಮನೆಯಲ್ಲಿ ನಮ್ಮದೇ ಆದ ವಿನ್ಯಾಸಕ್ಕೆ ಅವಕಾಶವಿರುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಮನೆ ಕಟ್ಟಲು ಉಪಯೋಗಿಸಬಹುದು. ಫ್ಲ್ಯಾಟ್‌ನಲ್ಲಿ ಇದಕ್ಕೆ ಅವಕಾಶವೆಲ್ಲಿದೆ?
ರಾಘವೇಂದ್ರ ಶೆಟ್ಟಿ, ಉಡುಪಿ

ಅಂಗಳದಲ್ಲಿ ಚಿಕ್ಕ ಉದ್ಯಾನ, ಹೊಸ್ತಿಲಲ್ಲಿ ರಂಗೋಲಿ ಇದ್ದರೇನೇ ಮನೆಗೊಂದು ಅಂದ. ಆದರೆ, ಮಧ್ಯಮ ವರ್ಗದವರ ಬಜೆಟ್‌ನಲ್ಲಿ

ಬರುವ ಅಪಾರ್ಟ್‌ಮೆಂಟ್‌ಗಳಲ್ಲಿ ಇವುಗಳೆಲ್ಲ ಲಭ್ಯ ಇರುವುದು ಕಷ್ಟ. ಎಷ್ಟೋ ಫ್ಲಾಟ್‌ಗಳಲ್ಲಿ ದೇವರ ಮನೆ ಇರುವುದಿಲ್ಲ, ವಾಸ್ತು ಪ್ರಕಾರವೂ ಅವುಗಳನ್ನು ಕಟ್ಟಿಸಿರುವುದಿಲ್ಲ. ಅಷ್ಟೇ ಅಲ್ಲದೇ ನಮ್ಮಿಷ್ಟದ ಬಣ್ಣದ ಪೇಂಟ್‌, ವಿನ್ಯಾಸ ಬೇಕೆಂದರೆ ಇನ್ನೊಂದಿಷ್ಟು ಖರ್ಚು ಮಾಡಬೇಕು. ಮನೆಯಲ್ಲಿ ನೆಂಟರಿಷ್ಟರು ಬಂದರೆ ಅಕ್ಕಪಕ್ಕದವರಿಗೆ ಕಿರಿಕಿರಿ ಯಾಗದಂತೆ ನೋಡಿಕೊಳ್ಳಬೇಕು. ಇಲ್ಲವೇ, ಇರುವುದರಲ್ಲಿಯೇ ಅಡ್ಜಸ್ಟ್ ಮಾಡಿಕೊಳ್ಳಬೇಕು. ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವ ಮನೆಯಲ್ಲಿ ಅಡ್ಜಸ್ಟ್ ಮಾಡಿಕೊಂಡು ಬದುಕುವುದು ಏಕೆ? ಅದಕ್ಕೇ ಸ್ವತಂತ್ರ ಮನೆಯೇ ಬೆಸ್ಟ್.
ಜ್ಯೋತಿ ರಘು, ಬೆಂಗಳೂರು

ಬೆಂಗಳೂರಿನ ಆಗುಹೋಗು ಗಳ ಬಗ್ಗೆ ತಿಳಿದಿರುವುದಿಲ್ಲ. ಇಂಥ ಸ್ಥಳಗಳಿಗೆ ಉದ್ಯೋಗ ಅರಸಿ ಹೋದಾಗ ಸ್ವತಂತ್ರ ಮನೆಯಲ್ಲಿ

ಉಳಿದುಕೊಳ್ಳುವುದು ಕಷ್ಟ. ಆದ ಕಾರಣ, ಸುರಕ್ಷತೆ ದೃಷ್ಟಿಯಿಂದ ಅಪಾರ್ಟ್‌ಮೆಂಟ್‌ಗೇ ಹೆಚ್ಚು ಸೂಕ್ತ. ತುಂಬಾ ಮನೆಗಳು ಇರುವ ಕಾರಣ ಒಂಟಿತನವೂ ಕಾಡುವುದಿಲ್ಲ. ಮಕ್ಕಳನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು ಹೋದರೂ ಅಕ್ಕಪಕ್ಕದವರು ಇದ್ದಾರೆ ಎಂಬ ಧೈರ್ಯ ಇರುತ್ತದೆ. ಸ್ವತಂತ್ರ ಮನೆಯಲ್ಲಿ ಅಕ್ಕ ಪಕ್ಕ ಮನೆಯವರು ಯಾರು ಎಂಬುದೇ ತಿಳಿದಿರುವುದಿಲ್ಲ.
ಬ್ರಿಷ್ಟಿ ಓಷ್ಟಿ- ನೇಪಾಳ

ಸದ್ಯ ಶಿಕ್ಷಣಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಉದ್ಯೋಗವನ್ನೂ ಇಲ್ಲಿಯೇ ಮಾಡುವ ಆಸೆಯಿದೆ. ಆದರೆ ಎಲ್ಲಿ ಉದ್ಯೋಗ

 ಸಿಗುತ್ತದೆಯೋ ಗೊತ್ತಿಲ್ಲ. ಆದ್ದರಿಂದ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದರೆ ಅದನ್ನು ಕೊಂಡುಕೊಳ್ಳುವವರು ಹೆಚ್ಚಿನ ಜನ ಸಿಗುತ್ತಾರೆ. ಬೇರೆ ಊರಿನಿಂದ ಬರುವವರು ಸ್ವತಂತ್ರ ಮನೆಯನ್ನು ಖರೀದಿ ಮಾಡುವುದು ಸ್ವಲ್ಪ ಕಷ್ಟ. ಆದ್ದರಿಂದ ಅಪಾರ್ಟ್‌ಮೆಂಟ್‌ ಖರೀದಿಸುವುದೇ ಸೂಕ್ತ
ಫಾರ್ಮಿನ್, ಅಸ್ಸಾಂ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT