ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತು ಪ್ರದರ್ಶನಗಳು ಆರಂಭಗೊಂಡ ಆ ದಿನಗಳು

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನಗರದ ಕಬ್ಬನ್‌ ಉದ್ಯಾನದಲ್ಲಿ ಮೊದಲ ಪ್ರತಿಮೆ ಅನಾವಣಗೊಂಡಿದ್ದು 1866ರಲ್ಲಿ. ಅದು ಕುದುರೆ ಮೇಲೆ ಕುಳಿತ ಮಾರ್ಕ್‌ ಕಬ್ಬನ್‌ ಅವರ ಕಂಚಿನ ಪ್ರತಿಮೆ. ಆ ಕಾಲಕ್ಕೆ ಇನ್ನೂ ಅಠಾರ ಕಚೇರಿ ನಿರ್ಮಾಣವಾಗುತ್ತಿತ್ತು. 1868ರಲ್ಲಿ ಈ ಕಟ್ಟಡ ಸಂಪೂರ್ಣವಾಗಿ ಸಿದ್ಧಗೊಂಡ ನಂತರ ಅಠಾರ ಕಚೇರಿಯ ಮುಖ್ಯದ್ವಾರ ಕಬ್ಬನ್‌ ಉದ್ಯಾನದ ಕಡೆಗಿತ್ತು.

1870ರ ನಂತರ ಕಬ್ಬನ್‌ ಅವರ ಪ್ರತಿಮೆ ಹಾಗೂ ಸುಂದರ ವಾಸ್ತುಶೈಲಿಯ ಅಠಾರ ಕಚೇರಿ ವೀಕ್ಷಿಸಲು ಸ್ಥಳೀಯರು, ದಂಡು ಪ್ರದೇಶದಲ್ಲಿದ್ದ ಯುರೋಪಿಯನ್ನರು ಹಾಗೂ ಸೈನಿಕ ದಳದವರು ಕಬ್ಬನ್‌ ಉದ್ಯಾನಕ್ಕೆ ಬರತೊಡಗಿದ್ದರು.

ಉದ್ಯಾನಕ್ಕೆ ಭೇಟಿ ನೀಡುತ್ತಿದ್ದವರ ಸಂಖ್ಯೆ ಹೆಚ್ಚಾದ ಕಾರಣ ಕಬ್ಬನ್‌ ಪ್ರತಿಮೆ ಮುಂಭಾಗದಲ್ಲಿ ಆಗಾಗ ಸಂಗೀತ ಕಾರ್ಯಕ್ರಮಗಳು ನಡೆಯತೊಡಗಿದವು. ಉದ್ಯಾನದ ಕಡೆ ಇದ್ದ ವಿಶಾಲವಾದ ತಗ್ಗು ಪ್ರದೇಶವು ಜನ ಕುಳಿತು ಸಂಗೀತ ಆಲಿಸಲು ಸೂಕ್ತವಾಗಿತ್ತು. ಹೀಗಾಗಿಯೇ ಸಂಗೀತ ಕಾರ್ಯಕ್ರಮಗಳು ಇದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಇದರಿಂದಾಗಿ ಕ್ರಮೇಣ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯತೊಡಗಿದವು.

1898ರ ನಂತರ ಕಬ್ಬನ್ ಉದ್ಯಾನದಲ್ಲಿ ಡಿಸೆಂಬರ್‌ ಕೊನೆಯ ವಾರದಲ್ಲಿ ಕ್ರಿಸ್‌ಮಸ್‌ ಹಾಗೂ ಜನವರಿ ಮೊದಲ ವಾರ ಹೊಸ ವರ್ಷದ ಆಚರಣೆ ಪ್ರಾರಂಭವಾಗಿತ್ತು. ಆಗ ಅಲ್ಲಿಗೆ ಬರುತ್ತಿದ್ದ ದಂಡು ಪ್ರದೇಶದ ಜನರು ತುಂಬಾ ಆಕರ್ಷಣೀಯವಾಗಿ ವಸ್ತುಗಳ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇದು 1925ರವರೆಗೂ ಮುಂದುವರೆದಿತ್ತು.

ದಕ್ಷಿಣ ಭಾರತದ ಖಾದಿ ಪ್ರದರ್ಶನ
1927ರಲ್ಲಿ ಗಾಂಧೀಜಿ ಖಾದಿ ಪ್ರಚಾರಕ್ಕಾಗಿ ದಕ್ಷಿಣ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದ ವೇಳೆ ಬೆಂಗಳೂರಿಗೂ ಭೇಟಿ ನೀಡಿದ್ದರು. ಆಗ ಗಾಂಧಿ ಅವರ ಸಂಗಡಿಗರು ನಗರದಲ್ಲಿ ಖಾದಿ ವಸ್ತು ಪ್ರದರ್ಶನವನ್ನು ಏರ್ಪಾಟು ಮಾಡಿದ್ದರು. ಜನರ ಸಹಕಾರದೊಂದಿಗೆ ಆಗಿನ ಮೈಸೂರು ಸರ್ಕಾರದವರು ಪ್ರದರ್ಶನದ ವೆಚ್ಚಕ್ಕಾಗಿ ಹಣದ ನೆರವು ನೀಡಿದ್ದರು. ಜುಲೈ 3ರಂದು ದೇಶೀಯ ವಿದ್ಯಾಶಾಲೆಯ ಆವರಣದಲ್ಲಿ ಪ್ರದರ್ಶನ ಆಯೋಜಿಸಲಾಗಿತ್ತು. ಬೆಳಿಗ್ಗೆ ಗಾಂಧೀಜಿ ಅವರನ್ನು ನೋಡಲು ಸಾವಿರಾರು ಜನ ಅಲ್ಲಿ ಸೇರಿದ್ದರು. ಗಾಂಧಿ ಅವರಿಗೆಂದೇ ಎತ್ತರದ ವೇದಿಕೆ ಸಿದ್ಧಗೊಂಡಿತ್ತು. ಜೊತೆಗೆ ಪಂಡಿತ ಮದನಮೋಹನ ಮಾಲವೀಯ, ಮಿರ್ಜಾ ಇಸ್ಮಾಯಿಲ್‌ ಅವರು ಆಗ ಉಪಸ್ಥಿತರಿದ್ದರು. ಎಂಟು ಗಂಟೆಗೆ ಸರಿಯಾಗಿ ಅಲ್ಲಿಗೆ ಬಂದಿದ್ದ ಗಾಂಧೀಜಿ, ರಾಟೆಯ ಮೇಲೆ ಮುಚ್ಚಿದ್ದ ಖಾದಿ ಬಟ್ಟೆಯನ್ನು ತೆಗೆಯುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿ, ಹಿಂದಿ ಭಾಷೆಯಲ್ಲಿ ಕೆಲವು ಮಾತುಗಳನ್ನು ಆಡಿದ್ದರು. ಅದನ್ನು ತಿ.ತಾ.ಶರ್ಮಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದರು.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ನೂಲನ್ನು ತೆಗೆಯುತ್ತಿದ್ದ ಹಳ್ಳಿಗಳಿಂದ ಬಂದಿದ್ದ ಮಹಿಳೆಯರು ಈ ಪ್ರದರ್ಶನದಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು. ವಲ್ಲಭಬಾಯಿ ಪಟೇಲರ ಪುತ್ರಿ ಮಣಿಬೆಹನ್‌ ಈ ವಿಭಾಗದ ನಿರ್ವಹಣೆಯನ್ನು ವಹಿಸಿಕೊಂಡಿದ್ದರು. ಜೊತೆಗೆ ತಾವೂ  ಪ್ರದರ್ಶನದಲ್ಲಿ ನೂಲುವ ಕೈಚಳಕ ತೋರಿಸಿದ್ದರು. ಕಾಶ್ಮೀರ, ಬಿಕನೇರ್‌, ಬಿಹಾರದಿಂದ ಖಾದಿ ಬಟ್ಟೆಗಳು, ಢಾಕಾ ಮಸ್ಲಿನ್‌ ಬಟ್ಟೆ, ನಾನಾ ಫಡ್ನವೀಸನು ಧರಿಸುತ್ತಿದ್ದ ಅಂಗರೇಖಾ, ಮೈಸೂರು ಅರಮನೆಯಿಂದ ಬಂದಿದ್ದ ಸುಮಾರು ಒಂದು ನೂರು ವರ್ಷದ ಹಿಂದೆ ಉಪಯೋಗಿಸುತ್ತಿದ್ದ ನೂಲಿನ ಸೀರೆಗಳು ಪ್ರದರ್ಶಿತಗೊಂಡಿದ್ದವು. ಅಖಿಲ ಭಾರತ ಚರಕ ಸಂಘದ ಯಂತ್ರೋಪಕರಣಗಳು, ಹಳೇ ಚರಕಗಳು ಹಾಗೂ ಇತರೆ ಯಂತ್ರಗಳನ್ನು ಪ್ರದರ್ಶಿಸಿದ್ದರು. ಪ್ರದರ್ಶನವನ್ನು ಕಂಡು ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.   

ಕಾಂಗ್ರೆಸ್‌ ವಸ್ತು ಪ್ರದರ್ಶನ
ಮೈಸೂರು ಕಾಂಗ್ರೆಸ್ಸಿನ ಆರನೇ ಮಹಾಧಿವೇಶನ 1946ನೇ ನವೆಂಬರ್‌ 2ರಂದು ಧರ್ಮಾಂಬುಧಿ ಕೆರೆಯ ಬಯಲಿನಲ್ಲಿ ನಡೆದಿತ್ತು. ಆಗ ಮೈಸೂರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದ ಕೆ.ಸಿ.ರೆಡ್ಡಿ ಅವರು ಅಧಿವೇಶನದ ಅಧ್ಯಕ್ಷರಾಗಿದ್ದರು. ಅಧಿವೇಶನದ ಅಂಗವಾಗಿ  ಅಖಿಲ ಭಾರತ ಖಾದಿ ಗ್ರಾಮೋದ್ಯೋಗದ ಆರನೇ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ಅಧಿವೇಶನ ನಡೆದ ಸ್ಥಳದಲ್ಲೇ ನಡೆದಿತ್ತು. ಅಧಿವೇಶನ ನಡೆದ ಸ್ಥಳಕ್ಕೆ ಸುಭಾಷ್‌ ಚಂದ್ರ ಬೋಸ್‌ ಅವರ ಹೆಸರನ್ನು ಇಟ್ಟಿದ್ದರು. ಈ ಕಾರಣದಿಂದ ಈ ಸ್ಥಳ ಸುಭಾಷ್‌ ನಗರ ಎಂದು ಹೆಸರು ಪಡೆಯಿತು.  

ಆನಂತರ ಪ್ರತಿವರ್ಷ ಕಾಂಗ್ರೆಸ್‌ ಪಕ್ಷದ ಆಶ್ರಯದಲ್ಲಿ ನಡೆಯುತ್ತಿದ್ದ ಈ ಪ್ರದರ್ಶನ ಕಾಂಗ್ರೆಸ್‌ ವಸ್ತು ಪ್ರದರ್ಶನ ಎಂದೇ ಪ್ರಸಿದ್ಧಿ ಪಡೆಯಿತು. 1948ರ ನಂತರ ಬೆಂಗಳೂರು ನಗರ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಪ್ರತಿವರ್ಷ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಇದನ್ನು ಇನ್ನೂ ವ್ಯವಸ್ಥಿತವಾಗಿ ನಡೆಸುವ ಜವಾಬ್ದಾರಿಯನ್ನು 1956ರಲ್ಲಿ ಸರ್ಕಾರ ವಹಿಸಿಕೊಂಡಿತ್ತು. ಈ ಪ್ರದರ್ಶನಗಳಲ್ಲಿ ರಾಜ್ಯದ ಎಲ್ಲ ಇಲಾಖೆಗಳವರು ತಮ್ಮ ತಮ್ಮ ವಿಭಾಗಗಳಲ್ಲಿ ತಮ್ಮ ಕಾರ್ಯ ಪ್ರಗತಿಯ ನೋಟಗಳನ್ನು ಚಿತ್ರಗಳ ಸಮೇತ ಕಲಾವಿನ್ಯಾಸದ ತಾತ್ಕಾಲಿಕ ಕಟ್ಟಡಗಳಲ್ಲಿ ಪ್ರದರ್ಶಿಸುತ್ತಿದ್ದರು. 1960ರಲ್ಲಿ ಅಖಿಲ ಕಾಂಗ್ರೆಸ್‌ ಮಹಾಧಿವೇಶನ ವಿಶೇಷವಾಗಿ ಕಾರ್ನಾಡ ಸದಾಶಿವರಾಯ ನಗರದರಲ್ಲಿ (ಈಗಿನ ಸದಾಶಿವನಗರ) ನಡೆದಿತ್ತು. ಆದರೆ 1961–62ರ ಅಧಿವೇಶನದಲ್ಲಿ ಕಾರಣಾಂತರಗಳಿಂದ ವಸ್ತು ಪ್ರದರ್ಶನ ನಡೆಯಲಿಲ್ಲ.

ಆರಂಭದಿಂದ ವಸ್ತು ಪ್ರದರ್ಶನಗಳ ಆವರಣವನ್ನು ತೆಂಗಿನಗರಿಗಳಿಂದ ನಿರ್ಮಿಸುತ್ತಿದ್ದರು. 1954ರಲ್ಲಿ ಕಬ್ಬನ್‌ ಉದ್ಯಾನದ ಬ್ಯಾಂಡ್‌ಸ್ಟ್ಯಾಂಡ್‌ ಆವರಣದಲ್ಲಿ ಖಾಸಗಿಯಾಗಿ ಮ. ರಾಮಮೂರ್ತಿ ಅವರು ಬಹಳ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಪ್ರದರ್ಶನವು ಬೆಂಕಿಗೆ ಆಹುತಿಯಾಗಿತ್ತು. ಆಗಿನಿಂದ ಪ್ರದರ್ಶನದಲ್ಲಿ ತೆಂಗಿನ ಗರಿಗಳಿಗೆ ಬದಲಾಗಿ ತಗಡುಗಳನ್ನು ಉಪಯೋಗಿಸುವಂತೆ ಸರ್ಕಾರ ಕಾನೂನನ್ನು ಜಾರಿಗೆ ತಂದಿತ್ತು. ಈ ಕಾಂಗ್ರೆಸ್‌ ವಸ್ತು ಪ್ರದರ್ಶನಗಳಿಂದ ಬಂದ ಲಾಭದಿಂದ ಗಾಂಧಿನಗರದಲ್ಲಿ ರೇಸ್‌ಕೋರ್ಸ್‌ ಬಳಿ ಸಿ.ರಂಗಪ್ಪ ಮತ್ತು ಆರ್‌. ಸುಬ್ಬಣ್ಣ ಅವರು ದಾನವಾಗಿ ನೀಡಿದ ಸ್ಥಳದಲ್ಲಿ 1953–54ರಲ್ಲಿ ಕಾಂಗ್ರೆಸ್‌ ಭವನವನ್ನು ನಿರ್ಮಿಸಲಾಯಿತು.  

1932ರ ಮಾರ್ಚ್‌ 14, 15ರಂದು ಮಲ್ಲೇಶ್ವರದ ಸ್ತ್ರೀ ಸಮಾಜ, ಕೆನರಾ ಸ್ತ್ರೀ ಸಮಾಜ ಮತ್ತು ಶೇಷಾದ್ರಿಪುರ ಸ್ತ್ರೀ ಸಮಾಜದವರ ಸಂಯುಕ್ತಾಶ್ರಯದಲ್ಲಿ ಸ್ವದೇಶಿ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನ ವೀಕ್ಷಿಸಲು ಬಂದಿದ್ದ 3 ಸಾವಿರ ಜನರಲ್ಲಿ ಮಹಿಳೆಯರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದರು. 1935ರಲ್ಲಿ ಶಂಕರಪುರದ ಮಹಿಳಾ ಸೇವಾಸಮಾಜದವರು ದೀಪಾವಳಿ ಸಂದರ್ಭದಲ್ಲಿ ಸ್ವದೇಶಿ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದರು. 1961ರಲ್ಲಿ ಒಕ್ಕಲಿಗರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಸ್ತುಪ್ರದರ್ಶನವನ್ನು ಬಿ.ಡಿ.ಜತ್ತಿ ಅವರು ಉದ್ಘಾಟಿಸಿದ್ದರು. 1975ರಿಂದ ಪ್ರದರ್ಶನ ಎಂಬ ಪದಕ್ಕೆ ಮೇಳ ಎಂಬ ಹೊಸ ಶಬ್ದ ಹುಟ್ಟಿಕೊಂಡಿತ್ತು. ಆಗಿನಿಂದ ಮಾಹಿತಿ ತಂತ್ರಜ್ಞಾನ ಮೇಳ, ಪುಸ್ತಕ ಮೇಳ, ಶಿಲಾ ಮೇಳ, ವಿಜ್ಞಾನ ಪ್ರದರ್ಶನ, ಹರ್ಷಕಲಾ ಮೇಳ ಸೇರಿದಂತೆ ನಾನಾ ರೀತಿಯ ಮೇಳಗಳು ನಗರದಲ್ಲಿ ನಡೆಯಲು ಪ್ರಾರಂಭವಾದವು. 1990ರ ನಂತರ ಕಂಟೀರವ ಕ್ರೀಡಾಂಗಣ ಸಿದ್ಧವಾದಾಗ ವ್ಯವಸ್ಥಿತವಾಗಿ ಎಲ್ಲ ಸೌಕರ್ಯಗಳೊಡನೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೇಳಗಳು ನಡೆಯಲಾರಂಭವಾಯಿತು. 

*
ಕಲಾಮಂದಿರದ ಪ್ರದರ್ಶನಗಳು
1919ರಲ್ಲಿ ಅ.ನ.ಸುಬ್ಬರಾಯರು ಮೆಜೆಸ್ಟಿಕ್‌ನಲ್ಲಿ ಪ್ರದರ್ಶನಗಳನ್ನು ಆರಂಭಿಸಿದ್ದರು. ಅಲ್ಲಿ ಮೊದಲ ಬಾರಿಗೆ ಕಲಾ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರದರ್ಶನವನ್ನು 1921ರ ಆಗಸ್ಟ್‌ನಲ್ಲಿ ಆಯೋಜಿಸಲಾಗಿತ್ತು. ಈ ಪ್ರದರ್ಶನವನ್ನು ಕಂಡ ದಿವಾನ್‌ ಮಿರ್ಜಾ ಇಸ್ಮಾಯಿಲ್‌ ಅವರು, ಸರ್ಕಾರದ ಅಧಿಕಾರಿಗಳು ಹಾಗೂ ಇತರರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇದೇ ರೀತಿಯಲ್ಲಿ ಪ್ರದರ್ಶನವನ್ನು ನಡೆಸಬೇಕೆಂದು ಸಲಹೆ ಕೊಟ್ಟು ಪ್ರೋತ್ಸಾಹಿಸಿದ್ದರು. ಕಲಾಮಂದಿರದ ಹತ್ತನೇ ವಾರ್ಷಿಕ ಮಹೋತ್ಸವದ ಅಂಗವಾಗಿ  1927ರಲ್ಲಿ ಒಂದು ವಾರ ರಾಜ್ಯ ಮಟ್ಟದ ಪ್ರದರ್ಶನ ನಡೆದು ಸಾರ್ವಜನಿಕರ ಮೆಚ್ಚುಗೆ ಪಡೆದಿತ್ತು. 1932ರಲ್ಲಿ ಕಲಾಮಂದಿರದಿಂದ ಅಖಿಲ ಭಾರತ ಕಲಾ ಪ್ರದರ್ಶನಕ್ಕೆ ಹೈದರಾಬಾದಿನ ಯುವರಾಣಿ ಚಾಲನೆ ನೀಡಿದ್ದರು. ಮಿರ್ಜಾ ಇಸ್ಮಾಯಿಲ್‌ ಅಧ್ಯಕ್ಷತೆ ವಹಿಸಿದ್ದರು. ಈ ಪ್ರದರ್ಶನಕ್ಕೆ ಕಲಾಮಂದಿರದ ಕಟ್ಟಡ ಸಾಲದೆ, ಸನಿಹದಲ್ಲಿದ್ದ ಶ್ರೀನಿವಾಸ ಮಂದಿರವನ್ನೂ ಬಳಸಿಕೊಳ್ಳಲಾಗಿತ್ತು. ಪ್ರದರ್ಶನದ ಅಂಗವಾಗಿ ಉಪನ್ಯಾಸ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ಸಂಜೆ ವೇಳೆಯಲ್ಲಿ ಆರ್ಯವಿದ್ಯಾಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು.

ದೇಶದ ವಿವಿಧ ಭಾಗಳಿಂದ ಪ್ರಸಿದ್ಧ ಚಿತ್ರಕಲಾವಿದರು ತಮ್ಮ ತಮ್ಮ ಕಲಾಕೃತಿಗಳನ್ನು ಕಳುಹಿಸಿಕೊಟ್ಟಿದ್ದರು. ಪಂಜಾಬ್‌ನ ಪ್ರಸಿದ್ಧ ಕಲಾವಿದ ಅಬ್ದುಲ್‌ ರಹಮಾನ್‌ ಚುಗತಾಯ ಆರು ಭವ್ಯ ಕಲಾಕೃತಿಗಳನ್ನು ಮತ್ತು ರೂಪ್‌ ಹಾಗೂ ಅಷ್‌ಫಾರ್‌ ಅವರು ತಲಾ ಮೂರು ಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಬಂಗಾಲದ ಕಲಾವಿದ ಶ್ರೀದೇವಿಪ್ರಸಾದ ರಾಯ್‌ ಚೌಧರಿ, ನಂದಲಾಲ್‌ ಬೋಸ್‌, ಮೈಸೂರಿನ ಕಲಾವಿದ ವೈ. ಸುಬ್ರಹ್ಮಣ್ಯರಾಜು, ಎಂ. ವೀರಪ್ಪ ಅವರ ಚಿತ್ರಗಳು ಎಲ್ಲರ ಮೆಚ್ಚುಗೆ ಗಳಿಸಿದ್ದವು. ನೇಯ್ಗೆ ವಿಭಾಗದ ವ್ಯವಸ್ಥಿತ  ಪ್ರದರ್ಶನ ಶ್ರೀನಿವಾಸ ಮಂದಿರದಲ್ಲಿ ನಡೆದಿತ್ತು. ಹರಿಗೋವಿಂದದಾಸ್‌ ಪರೇಖ ಅವರು 17ನೇ ಶತಮಾನದಿಂದ 19ನೇ ಶತಮಾನದವರೆಗಿನ ನಾನಾ ಬಗೆಯ ಬಟ್ಟೆಗಳನ್ನು ಮತ್ತು ಢಾಕಾ ಮಸ್ಲಿನ್‌ ಬಟ್ಟೆಗಳನ್ನು ಪ್ರದರ್ಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT