ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯೋದ್ಯಮಕ್ಕೆ ಬೆಂಗಳೂರು ಪ್ರಮುಖ ಕೇಂದ್ರ

‘ಬ್ರಿಟನ್‌–ಭಾರತ ಉದ್ಯಮ ಕೇಂದ್ರ’ಕ್ಕೆ ಬ್ರಿಟನ್‌ ಉಪ ಪ್ರಧಾನಿ ನಿಕ್‌ ಕ್ಲೆಗ್‌ ಚಾಲನೆ
Last Updated 27 ಆಗಸ್ಟ್ 2014, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಿ. ವಾಣಿಜ್ಯೋದ್ಯಮ ನಡೆಸಲು ವಿಶ್ವದ ಪ್ರಮುಖ ಹತ್ತು ಆಯ್ಕೆಯ ನಗರಗಳಲ್ಲಿ ಈ ನಗರಿಯೂ ಒಂದು. ಮಾಹಿತಿ ತಂತ್ರಜ್ಞಾನ ಹಾಗೂ ವೈಮಾನಿಕ ಕ್ಷೇತ್ರದಲ್ಲಿ ಭಾರತದ ಶಕ್ತಿ ಕೇಂದ್ರವಾಗಿದೆ. ಉಭಯ ದೇಶಗಳ ಉದ್ಯಮಿಗಳಿಗೆ ಇದು ಫಲವತ್ತಾದ ನಗರಿ’ ಎಂದು ಬ್ರಿಟನ್‌ ಉಪ ಪ್ರಧಾನಿ ನಿಕ್‌ ಕ್ಲೆಗ್‌ ಬಣ್ಣಿಸಿದರು.

ನಗರದ ಡೇರಿ ವೃತ್ತದ ಬಳಿ ಇರುವ ‘ಬ್ರಿಟನ್‌–ಭಾರತ ಉದ್ಯಮ ಮಂಡಳಿ’ (ಯುಕೆಐಬಿಸಿ) ಬೆಂಗಳೂರು ವ್ಯಾಪಾರ ಕೇಂದ್ರ ಹಾಗೂ ಟೆಕ್‌ ಹಬ್‌ಗೆ ಅವರು ಬುಧವಾರ ಅಧಿಕೃತ ಚಾಲನೆ ನೀಡಿ ಮಾತನಾಡಿದರು.

‘ಬ್ರಿಟನ್‌ ಹಾಗೂ ದಕ್ಷಿಣ ಭಾರತ­ದಲ್ಲಿ ಬಂಡವಾಳ ಹೂಡಿಕೆ ಹಾಗೂ ವ್ಯಾಪಾರ ವಹಿವಾಟು ನಡೆಸಲು ಯುಕೆ­ಐಬಿಸಿಯು ಸಲಹೆ ಹಾಗೂ ಇತರೆ ಸೇವೆಗಳನ್ನು ಒದಗಿಸಲಿದೆ. ಉಭಯ ದೇಶಗಳ ಉದ್ಯಮಿಗಳನ್ನು ಒಟ್ಟುಗೂ­ಡಿಸಲು ಈ ಕೇಂದ್ರ ನೆರವಾಗಲಿದೆ’ ಎಂದರು.
‘ಉಭಯ ದೇಶಗಳ ಮಧ್ಯೆ ಪ್ರತಿ ವರ್ಷ 1600 ಕೋಟಿ ಪೌಂಡ್‌ (ಅಂದಾಜು ₨1.60 ಲಕ್ಷ ಕೋಟಿ) ವಾಣಿಜ್ಯ ವಹಿವಾಟು ನಡೆಯುತ್ತಿದೆ.

ಅದನ್ನು 2200 ಕೋಟಿ ಪೌಂಡ್‌ಗೆ (ಅಂದಾಜು  ₨2.21 ಲಕ್ಷ ಕೋಟಿಗೆ) ಹೆಚ್ಚಿಸಬಹುದಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಉಭಯ ದೇಶಗಳ ಮಧ್ಯೆ ಉತ್ತಮ ಬಾಂಧವ್ಯವಿದೆ. ಅದನ್ನು ಮುಂದುವರಿಸಿ­ಕೊಂಡು ಹೋಗಬೇಕು. ಹಿಂದೆ ಹಲವು ಕಾರಣಗಳಿಂದ ಸ್ಥಗಿತಗೊಂಡಿದ್ದ ವ್ಯಾಪಾರ ವಹಿವಾಟನ್ನು ಪುನಃ ಆರಂಭಿ­ಸಬೇಕು.  ವೈಮಾನಿಕ ಕ್ಷೇತ್ರ, ಮಾಹಿತಿ ತಂತ್ರ­ಜ್ಞಾನ, ಮೂಲಸೌಕರ್ಯ ಕ್ಷೇತ್ರ­ಗಳಲ್ಲಿ ಬಂಡವಾಳ ಹೂಡಲು ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು.

ಯುಕೆಐಬಿಸಿ ಮುಖ್ಯ ಕಾರ್ಯ­ನಿರ್ವಾಹಕ ಅಧಿಕಾರಿ ರಿಚರ್ಡ್‌ ಹೀಲ್ಡ್‌ ಮಾತನಾಡಿ, ‘ಬೆಂಗಳೂರಿನಲ್ಲಿ ಆರಂಭ­ವಾಗಿರುವುದು ಎರಡನೇ ಕೇಂದ್ರ. ದೆಹ­ಲಿ­ಯಲ್ಲೂ ಯುಕೆಐಬಿಸಿ ಕೇಂದ್ರವಿದೆ. ದ್ವಿಪಕ್ಷೀಯ ಬಲವರ್ಧನೆಗೆ ಈ ಕೇಂದ್ರ ನೆರವು ನೀಡಲಿದೆ’ ಎಂದರು.

ಟೆಕ್‌ ಹಬ್‌ನ ನಿರ್ದೇಶಕ ಆ್ಯಂಡ್ರ್ಯೂ ಟಿಬಿಟ್ಸ್‌, ‘ಮೂರು ವರ್ಷಗಳಲ್ಲಿ ತಂತ್ರ­ಜ್ಞಾನ ಕ್ಷೇತ್ರದ ಬೆಂಗಳೂರಿನ ಸಾವಿರ ಸ್ಟಾರ್ಟ್‌ ಅಪ್‌್‌ ಕಂಪೆನಿಗಳನ್ನು ಉತ್ತೇ­ಜಿ­ಸುವ ಹಾಗೂ ಬಲವರ್ಧನೆ­ಗೊಳಿ­ಸುವ ಗುರಿಯನ್ನು ಟೆಕ್‌ ಹಬ್‌ ಹೊಂದಿದೆ’ ಎಂದು ತಿಳಿಸಿದರು.

ಟೆಕ್‌ ಹಬ್‌ ಕೂಡ ಯುಕೆಐಬಿಸಿ ಕಟ್ಟಡದಲ್ಲಿದೆ. ನಿಕ್‌ ಕ್ಲೆಗ್‌ ಇದಕ್ಕೂ ಮೊದಲು ಏರ್‌ಬಸ್‌ ಇಂಡಿಯಾ ಫೆಸಿಲಿಟಿ ಹಾಗೂ ಎಚ್‌ಎ­ಎಲ್‌ಹಾಕ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದ್ದರು. ಮೂರು ದಿನಗಳ ಭಾರತ ಪ್ರವಾಸದಲ್ಲಿರುವ  ಕ್ಲೆಗ್‌ ನಿಯೋಗ­­ದಲ್ಲಿ 40 ಉದ್ಯಮಿಗಳು ಇದ್ದಾರೆ.

ದಾದಾಭಾಯಿ ನವರೋಜಿ ಹೆಸರಲ್ಲಿ ಪ್ರಶಸ್ತಿ
‘ಬ್ರಿಟನ್‌ ಸರ್ಕಾರವು ಭಾರತದ ಉದ್ಯಮಿ ದಾದಾಭಾಯಿ ನವರೋಜಿ ಅವರ ಹೆಸರಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಿದೆ. ವಾಣಿಜ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಂಬಂಧದಲ್ಲಿ ಸುಧಾರಣೆಗೆ ಪ್ರಯತ್ನಿಸುವವರಿಗೆ ಈ ಪ್ರಶಸ್ತಿ ನೀಡಲಾಗುವುದು’ ಎಂದು ಬ್ರಿಟನ್‌ ಉಪ ಪ್ರಧಾನಿ ನಿಕ್‌ ಕ್ಲೆಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT