ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಒಪ್ಪಂದಕ್ಕೆ ಸಹಿ ಇಲ್ಲ: ಭಾರತ

ಅರುಣ್‌ ಜೇಟ್ಲಿ – ಜಾನ್‌ ಕೆರಿ ಮಾತುಕತೆ
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ವಿಶ್ವ ವಾಣಿಜ್ಯ ಸಂಘಟನೆಯ (ಡಬ್ಲುಟಿಒ) ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಪ್ರತಿಪಾದಿಸು­ತ್ತಿರುವ ‘ಸುಗಮ ವಾಣಿಜ್ಯ ಒಪ್ಪಂದ’ಕ್ಕೆ (ಟಿಎಫ್‌ಎ) ಸಹಿ ಹಾಕುವುದಿಲ್ಲ ಎಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾ­ವಣೆ ಇಲ್ಲ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅಮೆರಿಕಕ್ಕೆ ಸ್ಪಷ್ಟಪಡಿ­ಸಿದ್ದಾರೆ.

ಅತ್ತ ಸ್ವಿಟ್ಜರ್‌ಲೆಂಡ್‌ನ ಜಿನಿವಾದಲ್ಲಿ ‘ಟಿಎಫ್‌ಎ’ ಒಪ್ಪಂದ ಅನುಮೋದಿಸುವ ಸಂಬಂಧ ಬಿರುಸಿನ ಚರ್ಚೆಗಳು ನಡೆ­ದಿವೆ. ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ಈ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತವನ್ನು ಒತ್ತಾ­ಯಿ­ಸುತ್ತಿವೆ. ಭಾರತ ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಜುಲೈ 31 (ಗುರುವಾರ) ಕಡೆಯ ದಿನವಾಗಿತ್ತು.  ಭಾರತಕ್ಕೆ ನೀಡಿರುವ ಗಡುವು ಇನ್ನು ಕೆಲವೇ ಗಂಟೆಗಳಷ್ಟು ಬಾಕಿ ಇರುವಾಗ ಜೇಟ್ಲಿ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಮೇಲಿನ ನಿಲುವನ್ನು ಪುನರುಚ್ಚರಿಸಿದರು.

‘ಟಿಎಫ್‌ಎ’ ಸಂಬಂಧ ಭಾರತ ತಳೆದಿರುವ ನಿಲುವಿನ ಬಗ್ಗೆ ಈಗಾಗಲೇ ಹತಾಶೆ ವ್ಯಕ್ತಪಡಿಸಿರುವ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್‌­ಕರ್‌ ಅವರೂ ಹಾಜ­ರಿದ್ದರು. ‘ಭಾರತವು ಕೊನೆಯ ಕ್ಷಣಗಳಲ್ಲಿ ಕೂಡ ಈ ವಿಷಯಕ್ಕೆ ಸಂಬಂಧಿ­ಸಿ­ದಂತೆ ಸೂಕ್ತ ನಿರ್ಧಾರ ತಳೆಯಬಹುದು‘ ಎಂದು ಪ್ರಿಟ್ಜ್‌ಕರ್‌ ಬುಧವಾರ ಹೇಳಿದ್ದರು.

ಕೋಟ್ಯಂತರ ಬಡಜನರ ಆಹಾರ ಭದ್ರತೆ  ಖಾತ್ರಿಗೊಳಿಸದೆ ಈ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಭಾರತವು ಜಿನಿವಾದಲ್ಲಿನ ಸಭೆಯಲ್ಲಿ ಕಳೆದ ವಾರ ಸ್ಪಷ್ಟವಾಗಿ ಹೇಳಿತ್ತು. ‘ಟಿಎಫ್‌ಎ ವಿಷಯದಲ್ಲಿ ನಮ್ಮ ನಿಲುವಿನಲ್ಲಿ ಯಾವ ಬದಲಾವಣೆಯೂ ಇಲ್ಲ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಪೆನ್ನಿ ಪ್ರಿಟ್ಜ್‌ಕರ್‌ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರಿಗೆ ತಿಳಿಸಿದರು.

ಟಿಎಫ್‌ಎ ಒಪ್ಪಂದಕ್ಕೆ ಸಹಿ ಹಾಕಬೇ­ಕೆಂದರೆ ಅದಕ್ಕೆ ಪರ್ಯಾಯವಾಗಿ ಬೇರೊಂದು ಸಮಾನಾಂತರ ಒಪ್ಪಂದ ಏರ್ಪಡಬೇಕು. ಈ ಹೊಸ ಒಪ್ಪಂದದಡಿ ಸಬ್ಸಿಡಿ ನೀಡುವಿಕೆ ಮತ್ತು ಆಹಾರ ಧಾನ್ಯಗಳ ದಾಸ್ತಾನಿಗೆ ಸಂಬಂಧಿಸಿದಂತೆ  ಡಬ್ಲುಟಿಒ ನಿಯಮಗಳಡಿ ನಿಗದಿಯಾ­ಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ತನಗೆ ನೀಡಬೇಕು ಎಂದು ಭಾರತ ಪಟ್ಟು ಹಿಡಿದಿದೆ. ಟಿಎಫ್ಎ ಸಂಬಂಧದ ಕಗ್ಗಂಟನ್ನು ಬಿಡಿಸುವ ಬಗ್ಗೆ ಭಾರತವಾಗಲೀ ಅಥವಾ ಅಮೆರಿಕವಾಗಲೀ ಸಭೆಯಲ್ಲಿ ಯಾವುದೇ ಸಲಹೆಯನ್ನು ಮುಂದಿ­ಡಲಿಲ್ಲ  ಎಂದೂ ಮೂಲಗಳು ತಿಳಿಸಿವೆ.

ಟಿಎಫ್‌ಎ ಸಂಬಂಧ ಭಾರತ ತಳೆದಿರುವ ನಿಲುವು ‘ಜಾಗತಿಕ ವಾಣಿಜ್ಯ ಉದಾರೀಕರಣ’ ಪ್ರಕ್ರಿಯೆಯನ್ನೇ ಹಳಿ ತಪ್ಪಿಸಿಬಿಡಬಹುದು ಎಂಬುದು ಹಲವು ರಾಜತಾಂತ್ರಿಕರ ಅಭಿಪ್ರಾಯವಾಗಿದೆ. ಅಲ್ಲದೆ, ಕೊನೆಗೂ ಒಪ್ಪದಿದ್ದರೆ ಭಾರತವನ್ನು ಹೊರಗಿಟ್ಟು ಒಪ್ಪಂದ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕೂಡ ಕೆಲವು ಡಬ್ಲುಟಿಒ ಸದಸ್ಯ ರಾಷ್ಟ್ರಗಳು ಅನೌಪಚಾರಿಕ ಚರ್ಚೆ ನಡೆಸಿವೆ ಎಂದೂ ಹೇಳಲಾಗಿದೆ.

‘ರಹಸ್ಯ ನಿಗಾ ಒಪ್ಪಲಾಗದು’
ಭಾರತದ  ರಾಜಕೀಯ ಮುಖಂಡರು ಹಾಗೂ ಇತರರ ಮೇಲೆ ಅಮೆರಿಕದ ಗುಪ್ತಚರ ಸಂಸ್ಥೆ ನಿಗಾ ಇಟ್ಟಿದ್ದು ಸರಿಯಲ್ಲ ಎಂದು ಭಾರತವು ಅಮೆರಿಕಕ್ಕೆ ಖಡಾ­ಖಂಡಿತವಾಗಿ ಹೇಳಿದೆ.

‘ಶಿಕ್ಷೆಯಾಗಲಿ’
ಮುಂಬೈನಲ್ಲಿ 2008ರಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಚುಕೋರರಿಗೆ ಶಿಕ್ಷೆ ನೀಡುವಂತೆ   ಪಾಕಿಸ್ತಾನವನ್ನು ಭಾರತ ಹಾಗೂ ಅಮೆರಿಕ ಆಗ್ರಹಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT