ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಣಾಸಿಗೆ ಪ್ರಧಾನಿ ಪ್ರಥಮ ಭೇಟಿ

Last Updated 7 ನವೆಂಬರ್ 2014, 11:07 IST
ಅಕ್ಷರ ಗಾತ್ರ

ವಾರಣಾಸಿ(ಪಿಟಿಐ): ಪ್ರಧಾನಿ ಆದ ನಂತರ ಪ್ರಥಮ ಬಾರಿಗೆ ತಮ್ಮ ಸ್ವಕ್ಷೇತ್ರ ವಾರಣಾಸಿಗೆ ಶುಕ್ರವಾರ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ರೂ 200 ಕೋಟಿ ಮೊತ್ತದ ನೇಕಾರರ ವ್ಯಾಪಾರ ಸೌಲಭ್ಯ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿ, ಬಡ ಜನರ ಅಭಿವೃದ್ಧಿ ಮತ್ತು ಬದುಕಿನ ಸುಧಾರಣೆ ಮಂತ್ರ ಜಪಿಸಿದರು.

ಮೋದಿ ಅವರು ಕ್ಷೇತ್ರದಲ್ಲಿ ಎರಡು ದಿನ ಪ್ರವಾಸ ಕೈಗೊಂಡಿದ್ದು, ಎಂಟು ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ವ್ಯಾಪಾರ ಸೌಲಭ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸುವ ಪೂರ್ವದಲ್ಲಿ ಕರಕುಶಲ ವಸ್ತು ವರ್ಣಚಿತ್ರ ಕಲಾಕೃತಿಗಳು ಹಾಗೂ ಪ್ರಮುಖ ಆಕರ್ಷಣೀಯ ಕೇಂದ್ರ ಎನಿಸಿದ್ದ ಬನಾರಸ್ ಸೀರೆ ಒಳಗೊಂಡ ವಸ್ತು ಪ್ರದರ್ಶನ ವಿಕ್ಷಿಸಿದರು.

‘ಬನಾರಸ್ ಐತಿಹಾಸಿಕ ನಗರ. ರಾಷ್ಟ್ರದ ಪ್ರತಿಯೊಬ್ಬ ಬಡ ಮಹಿಳೆಯೂ ತಮ್ಮ ಮಕ್ಕಳ ಮದುವೆಗೆ ಬನಾರಸ್ ಸೀರೆಯನ್ನು ಉಡುಗೊರೆಯಾಗಿ ಕೊಡಬೇಕು ಎಂಬ ಕನಸು ಹೊಂದಿರುತ್ತಾರೆಂದು ನಾನು ಭಾವಿಸಿದ್ದೇನೆ’ ಎನ್ನುವ ಮೂಲಕ ಅಲ್ಲಿನ ಸೀರೆಯ ಪ್ರಸಿದ್ಧಿಯನ್ನು ಮೋದಿ ಎತ್ತಿ ಹಿಡಿದರು.

ಮೋದಿ ಬರುತ್ತಾರೆ, ಭಾಷಣ ಮಾಡುತ್ತಾರೆ, ದೊಡ್ಡ ದೊಡ್ಡ ಯೋಜನೆಗಳ ಘೋಷಣೆ ಮಾಡಿ ತೆರಳುತ್ತಾರೆ ಎಂದು ನೀವು ಭಾವಿಸಿರಬಹುದು. ಆದರೆ, ನಾನು ಆಗೆ ಮಾಡುವುದಿಲ್ಲ. ನೀವು ನನ್ನ ಮೇಲೆ ಪ್ರೀತಿ ತೋರಿದ್ದೀರಿ, ನಾನು ನಿಮ್ಮ ಮೇಲೆ ವಿಶ್ವಾಸ ಹಾಗೂ ಪ್ರೀತಿ ಇಟ್ಟು ಸೇವೆ ಮಾಡುತ್ತೇನೆ. ಇಲ್ಲಿಗೆ ಆಗಮಿಸಿರುವುದು ನನ್ನವರ ಬಳಿಗೆ ಬಂದ ಸಂತೋಷವಾಗುತ್ತಿದೆ. ಭಾಷಣ ಮಾಡಿ ಭರವಸೆ ನೀಡಿ ತೆರಳುವ ಬದಲು ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ರಾಷ್ಟ್ರದಲ್ಲಿ ಹೆಚ್ಚು ಉದ್ಯೋಗ ನೀಡಿರುವುದು ಕೃಷಿ ಕೇತ್ರ. ನಂತರದ ಸ್ಥಾನ ಜವಳಿ ಕ್ಷೇತ್ರದ್ದು. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರಿದ್ದಾರೆ. ವಾರಣಾಸಿ ಹೆಸರನ್ನು ಕೇಳದ ವ್ಯಕ್ತಿಯೇ ರಾಷ್ಟ್ರದಲ್ಲಿ ಇಲ್ಲ. ‘ವಾರಣಾಸಿ ಸೀರೆ’ ಮೂಲಕ ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ವಾರಣಾಸಿ ಸೀರೆಗಳು ನೇಕಾರರ ಪರಿಶ್ರಮ, ಕಲಾತ್ಮಕ ಕೆಲಸದಿಂದ ಪ್ರಸಿದ್ಧವಾಗಿವೆ. ಮುಂದೆಯೂ ವಾರಣಾಸಿ ವಿಶ್ವಮಟ್ಟದ ಮಾರುಕಟ್ಟೆಯಲ್ಲಿ ಗಮನ ಸೆಳೆಯುವಂತಾಗಲಿ. ಇದಕ್ಕಾಗಿ ಇಂದಿನ ಬೇಡಿಕೆಗೆ ಅನುಗುಣವಾಗಿ, ಗುಣಮಟ್ಟ, ಹೊಸ ಹೊಸ ವಿನ್ಯಾಸದೊಂದಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುವ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.

ವ್ಯಾಪಾರದಲ್ಲಿ ಮುಂಚೂಣಿಗೆ ಬರಲು ಇ-ವ್ಯಾಪರಕ್ಕೆ ಪೂರಕವಾದ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ಎಲ್ಲರು ಪರಿಶ್ರಮ ವಹಿಸಿ ವ್ಯಾಪಾರ ಸೌಲಭ್ಯ ಕೇಂದ್ರ ಹಾಗೂ ಕರಕುಶಲ ವಸ್ತುಗಳ ಸಂಗ್ರಹ ಕೇಂದ್ರದ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಬೇಕು. ಜತೆಗೆ, ವಿಶ್ವದ ಎಲ್ಲ ರಾಷ್ಟ್ರಗಳ ಪ್ರತಿಯೊಬ್ಬ ಪ್ರಜೆಯೂ ವಾರಣಾಸಿಗೆ ಭೇಟಿ ನೀಡುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಉತ್ತರ ಪ್ರದೇಶ ಗವರ್ನರ್ ರಾಮ್ ನಾಯ್ಕ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉಪಸ್ಥಿತರಿದ್ದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆದರ್ಶ ಗ್ರಾಮ ಯೋಜನೆ ಅಡಿ ವಾರಣಾಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯಪುರ ಗ್ರಾಮವನ್ನು ದತ್ತು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT